ಕನ್ನಡ ನಾಡಿನ ಚಕ್ರವರ್ತಿ ಮಯೂರಶರ್ಮ ಎಂದರೆ ಕಣ್ಮುಂದೆ ಬರುವುದು ವರನಟ ಡಾ ರಾಜಕುಮಾರ್. ಕನ್ನಡ ಸಿನಿಮಾ ಇತಿಹಾಸದಲ್ಲಿ ‘ಮಯೂರ’ ಮಹತ್ವದ ಚಿತ್ರವಾಗಿ ದಾಖಲಾಯ್ತು. ವೇಣುಗೋಪಾಲ್ ನಿರ್ಮಾಣ, ವಿಜಯ್ ನಿರ್ದೇಶನ, ಜಿ ಕೆ ವೆಂಕಟೇಶ್ ಸಂಗೀತ ಸಂಯೋಜನೆಯ ಸಿನಿಮಾ ತೆರೆಕಂಡು ಇಂದಿಗೆ (ಸೆಪ್ಟೆಂಬರ್ 12) 50 ವರ್ಷ!
1972ರ ದಿನಗಳು. ನಟ ಡಾ ರಾಜ್‌ರ ಮದರಾಸಿನ ಮನೆಯಲ್ಲಿ ಹಲವು ದಿನಗಳ ದಿನಪತ್ರಿಕೆ, ನಿಯತಕಾಲಿಕೆಗಳು ಶೇಖರಣೆಯಾಗಿದ್ದವು. ಮನೆ ಎದುರು ಹಳೇ ಪೇಪರ್ ಸಂಗ್ರಹಿಸುವವನೊಬ್ಬ ಕೂಗುತ್ತಾ ಹೋಗುತ್ತಿದ್ದ. ಪಾರ್ವತಮ್ಮ ರಾಜಕುಮಾರ್ ಆತನನ್ನು ಕರೆದು ಮನೆಯಲ್ಲಿದ್ದ ಹಳೆಯ ಪತ್ರಿಕೆಗಳು, ನಿಯತಕಾಲಿಕೆಗಳನ್ನು ಅವನೆದುರು ಸುರಿದರು. ಈ ಸಂದರ್ಭದಲ್ಲಿ ಅವನಲ್ಲಿದ್ದ ಒಂದು ಪುಸ್ತಕ ಪಾರ್ವತಮ್ಮನವರ ಗಮನಕ್ಕೆ ಬಂದಿತು. ಮದರಾಸಿನಲ್ಲಿ ಕನ್ನಡ ಪುಸ್ತಕವೊಂದನ್ನು ಕಂಡು ಕೂಡಲೇ ಅವರು ಅದನ್ನು ಕೈಗೆತ್ತಿಕೊಂಡರು. ಪುಸ್ತಕದ ಶೀರ್ಷಿಕೆ ‘ಮಯೂರ’! ಪುಸ್ತಕ ಓದುವ ಅಭ್ಯಾಸವಿದ್ದ ಅವರು ಪುಸ್ತಕವನ್ನು ಅವನಲ್ಲಿ ಕೇಳಿ ಪಡೆದರು.
‘ಮಯೂರ’ ಪುಸ್ತಕವನ್ನು ಓದಿದ ಪಾರ್ವತಮ್ಮನವರಿಗೆ ಇದು ಸಿನಿಮಾಗೆ ಹೊಂದುವಂಥ ಕೃತಿ ಎಂದೆನಿಸಿತು. ರಾಜಕುಮಾರ್ ಅವರೊಂದಿಗೆ ಈ ಬಗ್ಗೆ ಚರ್ಚಿಸಿದರು. ಪುಸ್ತಕ ಓದಿದ ರಾಜಕುಮಾರ್ ಅವರೂ ಸಿನಿಮಾ ಮಾಡಲು ಉತ್ಸುಕರಾದರು. ರಾಜ್ ಮನೆಗೆ ಬಂದ ನಿರ್ಮಾಪಕ ವೇಣುಗೋಪಾಲ್ ಚಿತ್ರನಿರ್ಮಾಣಕ್ಕೆ ಮುಂದಾಗುತ್ತಿದ್ದಂತೆ ಸಿನಿಮಾ ಪೂರ್ವ ಚಟುವಟಿಕೆಗಳು ಶುರುವಾದವು. ನಿರ್ದೇಶಕ ವಿಜಯ್ ಅವರ ನೇತೃತ್ವದಲ್ಲಿ ಉತ್ಕೃಷ್ಟ ತಂತ್ರಜ್ಞರು ಹಾಗೂ ಕಲಾವಿದರು ಜೊತೆಯಾದರು. 1973ರ ವಿಜಯದಶಮಿಯಂದು ಮದರಾಸಿನ ಎವಿಎಂ ಸ್ಟುಡಿಯೋದಲ್ಲಿ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿತು. ಮೈಸೂರು ಅರಮನೆಯಲ್ಲಿ ಬಹುತೇಕ ದೃಶ್ಯಗಳನ್ನು ಚಿತ್ರಿಸಲಾಯ್ತು. ಬೆಂಗಳೂರು ಅರಮನೆ, ಶ್ರೀರಂಗಪಟ್ಟಣ, ರಂಗನತಿಟ್ಟು, ನಂದಿಬೆಟ್ಟದಲ್ಲೂ ಈ ಸಿನಿಮಾಗೆ ಚಿತ್ರೀಕರಣ ನಡೆದಿದೆ.
ಅಲ್ಲಿಯವರೆಗೆ ಕನ್ನಡದಲ್ಲಿ ನಿರ್ಮಾಣವಾದ ಸಿನಿಮಾಗಳ ಪೈಕಿ ಅತಿ ಹೆಚ್ಚು ವೆಚ್ಚದ ಚಿತ್ರವಾಗಿ ಇದು ದಾಖಲಾಯ್ತು. ಚಿತ್ರದ ಬಜೆಟ್ 45 ಲಕ್ಷ ರೂಪಾಯಿ ಎನ್ನಲಾಗುತ್ತದೆ. 1975ರ ಸೆಪ್ಟೆಂಬರ್ 12ರಂದು ರಾಜ್ಯದ 34 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಂಡಿತು. ಬೆಂಗಳೂರೊಂದರಲ್ಲೇ ಹತ್ತು ಥಿಯೇಟರ್‌ಗಳಲ್ಲಿ ಸಿನಿಮಾ ತೆರೆಕಂಡದ್ದೂ ಒಂದು ದಾಖಲೆ. ನಿರೀಕ್ಷೆಯಂತೆಯೇ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯ್ತು. ರಾಜ್ಯದ ಏಳು ಕೇಂದ್ರಗಳಲ್ಲಿ ಸಿನಿಮಾ ಶತದಿನೋತ್ಸವ ಆಚರಿಸಿಕೊಂಡಿತು. ಕರ್ನಾಟಕದ ಮೊದಲ ಚಕ್ರವರ್ತಿ ಮಯೂರ ಶರ್ಮನ ಕತೆಯನ್ನು ಕನ್ನಡಿಗರು ಬಹುವಾಗಿ ಮೆಚ್ಚಿಕೊಂಡು ಸಂಭ್ರಮಿಸಿದರು.
(ಮಾಹಿತಿ ಕೃಪೆ : ದೊಡ್ಡಹುಲ್ಲೂರು ರುಕ್ಕೋಜಿ ಅವರ ‘ಡಾ ರಾಜಕಮಾರ್ ಸಮಗ್ರ ಚರಿತ್ರೆ’ ಕೃತಿ)








