ಥ್ರಿಲ್ಲರ್ ಮಂಜು ನಿರ್ದೇಶನದ ‘ಡೆಡ್ಲಿ ಕಿಲ್ಲರ್’ ಸಿನಿಮಾ ಯಶಸ್ವೀ 25 ದಿನಗಳನ್ನು ಪೂರೈಸಿದೆ. ನಟಿ ರಾಗಿಣಿ ದ್ವಿವೇದಿ ಹಾಗೂ ಎ.ವಿ.ಆರ್. ಗ್ರೂಪ್‌ನ ಅರವಿಂದ್ ರೆಡ್ಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರತಂಡಕ್ಕೆ ಸ್ಮರಣಿಕೆಗಳನ್ನು ವಿತರಿಸಿದರು.
ಥ್ರಿಲ್ಲರ್ ಮಂಜು ಅವರ ನಿರ್ದೇಶನದ ಹಾಗೂ ಅಭಯ್‌ವೀರ್, ಲೋಕೇಂದ್ರ ಸೂರ್ಯ ನಟಿಸಿರುವ ‘ಡೆಡ್ಲಿ ಕಿಲ್ಲರ್’ ಚಿತ್ರವೀಗ 25 ದಿನಗಳನ್ನು ಪೂರೈಸಿ ಮುನ್ನಡೆದಿದೆ. ಕಾಡಿನ ಮನೆಯೊಂದರಲ್ಲಿ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ ಈ ಚಿತ್ರವು ತನ್ನ ಗಟ್ಟಿ ಕಂಟೆಂಟ್, ಬಿಗಿಯಾದ ನಿರೂಪಣೆಯಿಂದಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿ ಮುನ್ನಡೆದಿದೆ. ಉತ್ತರ ಕರ್ನಾಟಕದಲ್ಲಿ 17ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ 25 ದಿನಗಳನ್ನು ಪೂರೈಸಿದೆ. ಅಲ್ಲದೆ ಬೆಂಗಳೂರಿನ ಭೂಮಿಕಾ ಥೇಟರಿನಲ್ಲಿ ಈಗಲೂ ಪ್ರದರ್ಶನವಾಗುತ್ತಿದೆ.
ಈ ಸಂದರ್ಭದಲ್ಲಿ ಚಿತ್ರತಂಡ ನಡೆದುಬಂದ ಹಾದಿಯ ಎವಿ ಪ್ರದರ್ಶನ ಹಾಗೂ ಸ್ಮರಣ ಫಲಕ ವಿತರಣಾ ಸಮಾರಂಭ ನೆರವೇರಿತು. ನಟಿ ರಾಗಿಣಿ ದ್ವಿವೇದಿ ಹಾಗೂ ಎ.ವಿ.ಆರ್. ಗ್ರೂಪ್‌ನ ಅರವಿಂದ್ ರೆಡ್ಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರತಂಡಕ್ಕೆ ಸ್ಮರಣಿಕೆಗಳನ್ನು ವಿತರಿಸಿದರು. ಈ ವೇಳೆ ನಿರ್ದೇಶಕ ಥ್ರಿಲ್ಲರ್ ಮಂಜು ಮಾತನಾಡಿ, ‘ಎವಿ ನೋಡಿದಾಗ ಎಮೋಷನ್ ಆದೆ. ಸಿನಿಮಾ ಮಾಡುವಾಗ ಎಷ್ಟೊಂದು ಕಷ್ಟ ಇರುತ್ತೆ ಅನ್ನೋದು ನೆನಪಾಯ್ತು. ಪೋಸ್ಟ್ ಪ್ತೊಡಕ್ಷನ್ ಗೆ ತುಂಬಾ ಟೈಂ ತಗೊಂಡು ಮಾಡಿದ್ದೆವು. ಅದರ ಫಲವಾಗಿ ಔಟ್‌ಪುಟ್ ಇಷ್ಟು ಚೆನ್ನಾಗಿ ಬಂದಿದೆ. ಜನರೂ ಅಷ್ಟೇ ಚೆನ್ನಾಗಿ ಚಿತ್ರವನ್ನು ಸ್ವೀಕರಿಸಿದ್ದಾರೆ. ನಮಗೆ ಉಪೇಂದ್ರ, ಜಗ್ಗೇಶ್, ದೊಡ್ಡಣ್ಣ, ಗಣೇಶ್, ಪ್ರಥಮ್ ಹೀಗೆ ಎಲ್ಲರೂ ಸಪೋರ್ಟ್ ಮಾಡಿದರು. ಒಂದು ಮಟ್ಟಕ್ಕೆ ಹೋಗುತ್ತೆ ಅಂದ್ಕೊಂಡಿದ್ದೆವು, ಇಷ್ಟು ಚೆನ್ನಾಗಿ ಅಂದುಕೊಂಡಿರಲಿಲ್ಲ’ ಎಂದರು.
ನಾಯಕ ಅಭಯ್ ವೀರ್ ಮಾತನಾಡುತ್ತ, ‘ನನ್ನ ಸಿನಿಮಾ ಗೆದ್ದಿದೆ, ಆದರೂ 50% ಮಾತ್ರ ಖುಷಿಯಿದೆ, ಯಾಕಂದ್ರೆ ನಾನು ಫಸ್ಟ್ ಸಿನಿಮಾ ಮಾಡುವಾಗ ಒಬ್ಬ ವ್ಯಕ್ತಿ ನನಗೆ ಅಭಯ್ ಎಂದು ಹೆಸರಿಡ್ತಾರೆ. ಅವರಿಗೆ ನಾನು ಸಕ್ಸಸ್ ಆಗಿ ನಿಮ್ಮತ್ರ ಬರ‍್ತೀನಿ ಅಂದಿದ್ದೆ. ಅವರೀಗ ಸಂಕಷ್ಟದಲ್ಲಿರೋದು ಬೇಸರವಾಗಿದೆ’ ಎನ್ನುತ್ತಾ ತನಗೆ ದಾರಿತೋರಿದ ಗುರು ದರ್ಶನ್ ನೆನೆದು ಭಾವುಕರಾದರು. ’14 ವರ್ಷದಲ್ಲಿ ಎಷ್ಟೋ ಏಳು ಬೀಳುಗಳನ್ನು ನೋಡಿಕೊಂಡು ಬಂದಿದ್ದೇನೆ, ನನ್ನ ನಂಬಿ ದುಡ್ಡು ಹಾಕಿ ಅಣ್ಣನ ಸ್ಥಾನದಲ್ಲಿ ನಿಂತದ್ದು ನಿರ್ಮಾಪಕ ಪ್ರಶಾಂತ್ ಅವರು, ನನಗೇನೂ ಗೊತ್ತಿಲ್ಲ, ನಾನು ಕಲೀಬೇಕು ಅಂದರು. ನನ್ನ ಬಹುತೇಕ ಸಿನಿಮಾಗಳಲ್ಲಿ ಥ್ರಿಲ್ಲರ್ ಮಂಜು ಜತೆಗಿದ್ದಾರೆ. ನಟಿ ರಾಗಿಣಿ ಅವರೂ ಸಹ ಚಿತ್ರದ ಜರ್ನಿಯಲ್ಲಿ ಜತೆ ನಿಂತು ಸಪೋರ್ಟ್ ಮಾಡುತ್ತಿದ್ದಾರೆ. ನನ್ನ ಬೆಂಬಲಿಸಿದ ಎಲ್ಲರಿಗೂ ಕೋಟಿ ಕೋಟಿ ನಮಸ್ಕಾರಗಳು’ ಎಂದು ಕೃತಜ್ಞತೆ ಸಲ್ಲಿಸಿದರು.
ನಟಿ ರಾಗಿಣಿ ಮಾತನಾಡಿ, ‘ಈ ಟೀಮ್ ನೋಡಿದರೆ ತುಂಬಾ ಹೆಮ್ಮೆ ಅನಿಸುತ್ತದೆ. ಯಾಕೆಂದರೆ ಈ ವೇದಿಕೆ ಮೇಲೆ ನಿಂತಿರುವ ಪ್ರತಿಯೊಬ್ಬರೂ ಕಷ್ಟಪಟ್ಟು ಮುಂದೆ ಬಂದವರು. 2006ರಲ್ಲಿ ನಾನು ಕೂಡ ಹೊಸಬಳೆ ಆಗಿದ್ದೆ ಅಭಯ್ ಆರಂಭದಲ್ಲಿ ಯಾರ ಸಪೋರ್ಟ್ ಇಲ್ಲದೆ, ತುಂಬಾ ಪ್ರಯತ್ನಪಟ್ಟು ಮುಂದೆ ಬಂದಿದ್ದಾರೆ. ಸತತ ಪ್ರಯತ್ನ, ನಂಬಿಕೆ ಇದ್ದರೆ ಸಕ್ಸಸ್ ಖಂಡಿತ ಸಿಗುತ್ತೆ’ ಎಂದು ಹೇಳಿದರು.
ನಿರ್ಮಾಪಕ ಪ್ರಶಾಂತ್ ಟಿ.ತಂಬ್ರಳ್ಳಿಮಠ ಮಾತನಾಡುತ್ತ, ‘ನಮ್ಮ ಚಿತ್ರದ ಜರ್ನಿ ಇವತ್ತಿಗೆ ಕಂಪ್ಲೀಟ್ ಆಗುತ್ತದೆ. ಸಿನಿಮಾದ ಕನಸು ನನಸಾಗಿದೆ. ಇನ್ನಷ್ಟು ಸಿನಿಮಾಗಳನ್ನು ಮಾಡಬೇಕೆಂದು ಹೆಜ್ಜೆ ಇಡುತ್ತಿದ್ದೇನೆ. ಅಲ್ಲದೆ ಎ.ವಿ.ಆರ್. ಸಿನಿಮ್ಯಾಕ್ಸ್ ಓಟಿಟಿ ಒಳ್ಳೆಯ ಮೊತ್ತಕ್ಕೆ ನಮ್ಮ ಚಿತ್ರವನ್ನು ಖರೀದಿಸಿದೆ’ ಎಂದು ಹೇಳಿದರು. ಕೀರ್ತಿ ಸಿಲ್ವರ್ ಸ್ಕ್ರೀನ್ ಹಾಗೂ ವೇದಿಕ್ ಕಾಸ್ಮಾಸ್ ಬ್ಯಾನರ್ ಅಡಿ ಪ್ರಶಾಂತ್ ಟಿ.ತಂಬ್ರಳ್ಳಿಮಠ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಥ್ರಿಲ್ಲರ್ ಮಂಜು ನಿರ್ದೇಶನದ ಜತೆಗೆ ವಿಲನ್ ಪಾತ್ರಕ್ಕೂ ಬಣ್ಣ ಹಚ್ಚಿದ್ದಾರೆ. ವೇದಿಕೆಯಲ್ಲಿ ಸಂಗೀತ ನಿರ್ದೇಶಕ ವಿನು ಮನಸು, ಛಾಯಾಗ್ರಾಹಕ ಮಲ್ಲಿಕಾರ್ಜುನ್, ನಟರಾದ ಲೋಕೇಂದ್ರ ಸೂರ್ಯ, ಸುನಿಲ್ ಬಾಲ್ಡರ್, ಪುನೀತ್, ಅಭಿ ಸೇರಿದಂತೆ ಎಲ್ಲರಿಗೂ ಸ್ಮರಣಫಲಕ ವಿತರಿಸಲಾಯಿತು.








