ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಶಂಕರ್‌ನಾಗ್ ಫೋನ್‌ ಟೆಕ್ನಿಕ್!

ಪೋಸ್ಟ್ ಶೇರ್ ಮಾಡಿ

(ಬರಹ: ಪ್ರಗತಿ ಅಶ್ವತ್ಥ ನಾರಾಯಣ, ಸ್ಥಿರಚಿತ್ರ ಛಾಯಾಗ್ರಾಹಕರು)


ಶಂಕರ್‌ನಾಗ್‌ ಕನ್ನಡ ಸಿನಿಮಾಗೆ ಪದಾರ್ಪಣೆ ಮಾಡಿದ ‘ಒಂದಾನೊಂದು ಕಾಲದಲ್ಲಿ’ ಚಿತ್ರಕ್ಕೆ ನಾನು ಸ್ಥಿರಚಿತ್ರ ಛಾಯಾಗ್ರಾಹಕನಾಗಿ ಕಾರ್ಯನಿರ್ವಹಿಸಿದ್ದೆ. ಅಂದಿನಿಂದಲೂ ಅವರು ನನಗೆ ಪರಿಚಿತರಾಗಿದ್ದರು. ತೆರೆಯ ಮೇಲಷ್ಟೇ ಅಲ್ಲದೆ ತೆರೆಯ ಹಿಂದೂ ಅವರದ್ದು ಅಪರೂಪ, ಆಕರ್ಷಕ ವ್ಯಕ್ತಿತ್ವ. ಸದಾ ಚಟುವಟಿಕೆಯಲ್ಲಿ ತೊಡಗಿರುತ್ತಿದ್ದರು. ಒಂದೊಂದು ನಿಮಿಷವನ್ನು ಸದುಪಯೋಗ ಪಡಿಸಿಕೊಂಡು ಜೀವಿಸಿದ್ದವರು ಶಂಕರ್ ನಾಗ್.

ಒಮ್ಮೆ ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅವರು ನಟಿಸುತ್ತಿದ್ದ ಚಿತ್ರವೊಂದರ ಶೂಟಿಂಗ್ ನಡೆಯುತ್ತಿತ್ತು. ಬಿಡುವಿನ ವೇಳೆಯಲ್ಲಿ ಶಂಕರ್‌ರವರು ಯಾರಿಗೋ ತುರ್ತು ಫೋನ್‌ ಮಾಡಬೇಕಾಗಿರುತ್ತದೆ. ಆಗ ಈಗಿನಂತೆ ಮೊಬೈಲ್‌ ಸೌಲಭ್ಯವಂತೂ ಇಲ್ಲ. ಲ್ಯಾಂಡ್‌ಲೈನ್‌ ಕಾಲ್‌ಗಳೂ ವಿರಳ. ಪೋನ್ ಕರೆಗಳು ಸಹ ದುಬಾರಿಯಾಗಿದ್ದವು. ಅಂದಿನ ದಿನಗಳಲ್ಲಿ ಚಾಮುಂಡೇಶ್ವರಿ ಸ್ಟುಡಿಯೋ ಶಿಸ್ತು ಪಾಲನೆಯಲ್ಲಿ ಹೆಸರುವಾಸಿಯಾಗಿತ್ತು. ಶೂಟಿಂಗ್ ಪ್ಲೋರ್‌ನ ಹೊರಗೆ ಒಂದು ಪೋನ್ ಇಟ್ಟಿದ್ದರು. ಅದಕ್ಕೆ ಸದಾಕಾಲವೂ ಬೀಗ ಹಾಕಲಾಗಿರುತ್ತಿತ್ತು. ಒಳಬರುವ ಕರೆಯನ್ನು ಮಾತ್ರ ಸ್ವೀಕರಿಸಬಹುದಾಗಿತ್ತು.

ತುರ್ತು ಪೋನ್ ಕರೆಮಾಡಲು ಬಂದ ಶಂಕರ್ ಸ್ಟುಡಿಯೋ ಆಫೀಸ್‌ಗೆ ಹೋಗಿ ಬೀಗದ ಕೈ ತೆಗೆದುಕೊಂಡು ಬರುವಂತೆ ಹುಡುಗನಿಗೆ ಹೇಳಿದರು. “ಸ್ಟುಡಿಯೋದವರು, ತಾವೇ ಬಹಳ ಬುದ್ದಿವಂತರು ಅಂದುಕೊಂಡಿದ್ದಾರೆ. ನಾವು ಅವರನ್ನು ಮೀರುಸುತ್ತೇವೆ. ಈಗ ನೋಡಿ, ಬೀಗ ಹಾಕಿರುವ ಪೋನ್‌ನಿಂದ ಹೇಗೆ ಕಾಲ್‌ ಮಾಡುತ್ತೇನೆ!” ಎಂದು ಹತ್ತಿರವಿದ್ದ ನಮ್ಮನ್ನೆಲ್ಲಾ ಕರೆದರು. ರಿಸೀವರ್ ಕೈಯಲ್ಲಿ ಹಿಡಿದರು. “ಎರಡೂ ಕಡೆ ಬಟನ್ ಮೇಲೆ ಬರುತ್ತವೆ ನೋಡಿ ಅದರ ಮೇಲೆ ಟೆಲಿಗ್ರಾಫ್ ರೀತಿ ನಂಬರ್‌ಗಳನ್ನು ಎರಡು ಅಂದರೆ ಎರಡುಬಾರಿ, ಮೂರು ಅಂದರೆ ಮೂರು ಬಾರಿ ಸರಿಯಾದ timingನಲ್ಲಿ ಒತ್ತಿದರೆ ಪೋನ್ connect ಆಗುತ್ತೆ” ಎಂದು ಟೆಕ್ನಿಕ್ ಹೇಳಿಕೊಟ್ಟರು. ಅವರು ಪೋನ್‌ನಲ್ಲಿ ಮಾತನಾಡಿ ಮುಗಿಸುವ ಹೊತ್ತಿಗೆ ಹುಡುಗ ಬೀಗದ ಕೈ ತರುತ್ತಿದ್ದ. “ಯಾವಾಗಲೂ ಹೀಗೆ ಮಾಡಬೇಡಿ urgent ಇದ್ದರೆ ಮಾತ್ರ ಹೀಗೆ ಮಾಡಿ” ಎಂದು ಶಂಕರ್‌ ಕಿವಿ ಮಾತು ಹೇಳುತ್ತಿದ್ದರು.

‘ಒಂದಾನೊಂದು ಕಾಲದಲ್ಲಿ’ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ನಟ ಶಂಕರ್‌ನಾಗ್‌ ಅವರು ಪ್ರಗತಿ ಅಶ್ವತ್ಥರ ಕ್ಯಾಮರಾಗೆ ಸೆರೆಸಿಕ್ಕಿದ್ದು ಹೀಗೆ…

ಈ ಬರಹಗಳನ್ನೂ ಓದಿ