ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಯಾವ ಮೋಹನ ಮುರಳಿ ಕರೆಯಿತೋ ತಮಿಳು ತೀರಕೆ ನಿನ್ನನು?

ಪೋಸ್ಟ್ ಶೇರ್ ಮಾಡಿ
ಗಣೇಶ್ ಕಾಸರಗೋಡು, ಹಿರಿಯ ಸಿನಿಮಾ ಪತ್ರಕರ್ತ, ಲೇಖಕ

ಕೋಟೇಶ್ವರದಿಂದ ಬೆಂಗಳೂರಿಗೆ ವಲಸೆ ಬಂದು, ಪುಟ್ಟ ಕ್ಯಾಂಟೀನ್‌ ಇಟ್ಟುಕೊಂಡು ಬದುಕು ನಡೆಸುತ್ತಿದ್ದ ರಾಮಮೂರ್ತಿ ಎಂಬ ಹೆಸರಿನ ಬಡವನ ಮಗನಾ ಈ ಕೋಕಿಲಾ ಮೋಹನ್‌? ಅಪ್ಪನ ಕ್ಯಾಂಟೀನ್‌ನಲ್ಲಿ ಮುಸುರೆ ತೊಳೆದು ಬದುಕು ನಡೆಸಿದ್ದ ಮೋಹನ್ ಬೆಳೆದು ನಿಂತ ಎತ್ತರ ಅಳತೆಗೂ ನಿಲುಕದ್ದು…

ಹಾಗೆ ನೋಡಿದರೆ ಕೋಕಿಲಾ ಮೋಹನ್‌ ಅವರ ವೃತ್ತಿ ಬದುಕು ಆರಂಭವಾದದ್ದೇ ಗಾಂಧಿನಗರದಲ್ಲಿ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು, ಏಕೆಂದರೆ ಇದು ನಿಜ.

ಈಗಲೂ  ಗಾಂಧಿನಗರದ ಹೃದಯ ಭಾಗದಲ್ಲಿರುವ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಈ ಮೋಹನ್ ಕ್ಲರ್ಕ್‌ ಆಗಿದ್ದವರು. ಇದಕ್ಕೂ ಮೊದಲು ಕೋಟೇಶ್ವರದ ರಾಮಮೂರ್ತಿಯವರ ಪುಟ್ಟ ಕ್ಯಾಂಟೀನ್‌ನಲ್ಲಿ ಕೆಲಸಕ್ಕಿದ್ದವರು. ತಪ್ಪು ತಿಳಿಯಬೇಡಿ; ಈ ರಾಮಮೂರ್ತಿ ಬೇರೆ ಯಾರೂ ಅಲ್ಲ; ಕೋಕಿಲಾ ಮೋಹನ್ ಅವರ ತಂದೆ. ತಂದೆ ನಡೆಸುವ ಕ್ಯಾಂಟೀನ್‌ನಲ್ಲಿ ಮಗ ಕೆಲಸಕ್ಕಿದ್ದರೆ ಆತನನ್ನು ಬಾಲ ಕಾರ್ಮಿಕ ಎನ್ನುವಂತಿಲ್ಲ ಅಲ್ಲವೇ? ಹೀಗಾಗಿ ಮೋಹನ್ ಬಾಲ ಕಾರ್ಮಿಕನಲ್ಲ ಎಂದು ಧಾರಾಳವಾಗಿ ಹೇಳಬಹುದು. ಆದರೆ ಕುಟುಂಬದಲ್ಲಿ ಬಡತನವಿತ್ತು. ಅಂದಿನ ದಕ್ಷಿಣ ಕನ್ನಡದ ಕೋಟೇಶ್ವರದಿಂದ ಬೆಂಗಳೂರಿಗೆ ವಲಸೆ ಬಂದ ರಾಮಮೂರ್ತಿಗಳು ಬಡತನದ ಬದುಕು ಕಂಡವರು. ಆದರೆ ಇದರ ನೆರಳೂ ಬೀಳದಂತೆ ಮಗನನ್ನು ಪೋಷಿಸಿದರು…

ವಿಷಯ ಏನಪ್ಪಾ ಅಂದರೆ… ಅಂಥಾ ಬಡತನದ ಬದುಕಿನಿಂದ ಸುಖದ ಸುಪ್ಪತ್ತಿಗೇರಿದ ಕೋಕಿಲಾ ಮೋಹನ್‌ ಅವರ ಜೀವನ ಕೂಡಾ ಚಿತ್ರಕಥೆಯಂತಿದೆ. ಆ ಕಾಲದಲ್ಲಿ ನಾನು ಕಂಡ ಕೋಕಿಲಾ ಮೋಹನ್ ಹೇಗಿದ್ದರು? ಮತ್ತು ಈಗ ಹೇಗಿದ್ದಾರೆ ಎನ್ನುವುದೇ ಈ ‘ಚಿತ್ರಕಥೆ’ಯ  ಆಂತರ್ಯ.

‘ಕೋಕಿಲ’ ಚಿತ್ರದಲ್ಲಿ ಮೋಹನ್, ಕಮಲಹಾಸನ್‌

ಇದು ಆರಂಭವಾಗುವುದು ಗಾಂಧಿನಗರದ ಸಿಂಡಿಕೇಟ್ ಬ್ಯಾಂಕ್‌ನಿಂದ…

ಸುಮಾರು ಇಪ್ಪತ್ತೇಳು ವರ್ಷಗಳ ಹಿಂದಿನ ಮಾತು. ಆಗಲೇ ಕಾಲುಶತಮಾನ ಕಳೆದೇ ಹೋಯಿತಲ್ಲಾ? ಮೋಹನ್ ಎಂಬ ಹೆಸರಿನ ಕೋಟದ ಹುಡುಗ ಗಾಂಧಿನಗರದ ಸಿಂಡಿಕೇಟ್ ಬ್ಯಾಂಕಿನಲ್ಲಿ ನೌಕರಿಯಲ್ಲಿದ್ದ. ನೌಕರಿಯಲ್ಲಿರುವಾಗಲೇ ಬಾಲುಮಹೇಂದ್ರ ನಿರ್ದೇಶಿಸಿದ ‘ಕೋಕಿಲಾ’ ಎಂಬ ಹೆಸರಿನ ಚಿತ್ರದಲ್ಲಿ ಅಭಿನಯಿಸಿದ್ದ. ಈ ಚಿತ್ರದ ನಾಯಕ ಕಮಲಹಾಸನ್‌ನಾದರೂ ಒಂದು ಪುಟ್ಟ ಪಾತ್ರದ ಮೂಲಕ ಕಮಲ್‌ಗಿಂತ ದೊಡ್ಡ ಹೆಸರು ಮಾಡಿದ್ದು ಈ ಮೋಹನನೇ.

ಆಗ ನಾನು ಡಿಗ್ರಿ ಮುಗಿಸಿಕೊಂಡು ಈ ಮಾಯಾನಗರಿಗೆ ಕಾಲಿಟ್ಟ ಹೊಸತು. ಎಲ್ಲವೂ ಹೊಸತಿನಂತೆಯೇ ಕಾಣುವ ಪ್ರಾಯ. ಬರೆಯುವ ಹುಚ್ಚಿತ್ತು. ನಾನು ಏನು ಬರೆದರೂ ಪ್ರಕಟಿಸಲು ನಮ್ಮ ಕರಾವಳಿಯಲ್ಲಿ ಪತ್ರಿಕೆಗಳಿದ್ದುವು. ಬೆಂಗಳೂರಿನಲ್ಲಿ ನೌಕರಿಗಾಗಿ ಓಡಾಡುತ್ತಿದ್ದ ದಿನಗಳಲ್ಲಿ ಈ ಮೋಹನ್‌ನನ್ನು ಭೇಟಿಯಾಗುವ ಸಂದರ್ಭವೊಂದು ಬಂತು. ಬದುಕಿನಲ್ಲಿ ಮೊತ್ತಮೊದಲ ಬಾರಿಗೆ ನಟನೊಬ್ಬನನ್ನು ಖುದ್ದು ಭೇಟಿಯಾಗುವ ವಿಶಿಷ್ಟ ಅನುಭವದೊಂದಿಗೆ ಗಾಂಧಿನಗರದ ಸಿಂಡಿಕೇಟ್‌ ಬ್ಯಾಂಕಿನ ಮೊದಲ ಮಹಡಿ ಹತ್ತಿದೆ. ‘ಮೋಹನ್ ಇದ್ದಾರಾ?’ ಅಂತ ವಿಚಾರಿಸಿದೆ. ಎಲ್ಲರೂ ತಲೆಯಾಡಿಸಿದರು. ಎರಡನೇ ಮಹಡಿಗೆ ಹೋಗಿ ವಿಚಾರಿಸಿದೆ. ಅಲ್ಲೂ ಅದು ರಿಪೀಟ್‌ ಆಯಿತು. ನಿರಾಸೆಯಿಂದ ಹಿಂದಿರುಗುವಾಗ ಮತ್ತೆ ಮೊದಲ ಮಹಡಿಯಲ್ಲಿ ವಿಚಾರಿಸುವ ಮನಸ್ಸಾಯಿತು. ಈ ಸಾರಿ ‘ಕೋಕಿಲಾ ಮೋಹನ್‌’ ಅಂದೆ. ಒಬ್ಬಿಬ್ಬರು ಆತನ ಗುರುತು ಹಿಡಿದರು. ‘ಸಿನಿಮಾದಲ್ಲಿ ಮಾಡ್ತಾರಲ್ಲಾ, ಆ ಮೋಹನ್ನಾ’ ಅಂತ ಪ್ರಶ್ನಿಸಿದರು. ‘ಹೌದೌದು’ ಅಂದೆ. ಅಟೆಂಡರನೊಬ್ಬನ ಕೈಲಿ ಹೇಳಿ ಕಳುಹಿಸಿದರು. ಬಂದನಲ್ಲಾ ಮೋಹನ್‌?

‘ಟಕ್‌ಟಕ್‌ಟಕ್‌’ ಬೂಟಿನ ಸದ್ದಿನೊಂದಿಗೆ ನನ್ನ ಬಳಿ ಬಂದ ಮೋಹನ್ ‘ಕೋಕಿಲಾ’ ಚಿತ್ರದಂಥಾ ಒಂದು ಟಿಪಿಕಲ್‌ ನಗೆ ಬೀರಿದರು. ಅವರ ಜತೆ ಮಾತಾಡುವ ಹಂಬಲ ತಿಳಿಸಿದಾಗ ಗಾಬರಿ ಬಿದ್ದ ಮೋಹನ್‌ ನೇರವಾಗಿ ಜನತಾ ಬಜಾರಿನ ಎದುರಿರುವ ಕಾಮತ್‌ ಕೆಫೆಗೆ ಕರೆದುಕೊಂಡು ಹೋದರು. ಅಲ್ಲಿ ಮಾತುಕತೆ ನಡೆಯಿತು. ಸ್ವತಃ ಕಮಲ್‌ಹಾಸನ್‌ನಂತೆಯೇ ಪೋಸು ಕೊಟ್ಟು ಮಾತಾಡಿದ ಮೋಹನ್‌ ‘ಒಂದು ಫೋಟೋದ ವ್ಯವಸ್ಥೆಯಾಗಬೇಕು’ ಎಂದಾಗ ಮಂಕಾದಂತೆ ಕಂಡಿತು. ಮಾರನೇ ದಿನ ತಂದುಕೊಡುವುದಾಗಿ ಹೇಳಿದರು. ಹೇಳಿದಂತೆ ಮಾರನೇ ದಿನ ತಾವಾಗಿಯೇ ಫೋಟೋಗಳನ್ನು ತಂದುಕೊಟ್ಟರು.

ಇದಾದ ತಿಂಗಳಲ್ಲಿ ಕೋಕಿಲಾ ಮೋಹನ್‌ ಸಂದರ್ಶನ ‘ಉದಯವಾಣಿ’ಯಲ್ಲಿ ಪ್ರಕಟವಾಯಿತು. ಸಂದರ್ಶನದ ಆಯ್ದ ಭಾಗ ಇಲ್ಲಿದೆ:

‘ಹೆಗ್ಗಡೆದೇವನಕೋಟೆ ಮುರಳೀ ಮನೋಹರರಾವ್‌ _ ಭಾಸ್ಕರರಾವ್‌…’ ‘ಕೋಕಿಲಾ’ ನೋಡಿದವರಿಗೆ ಈ ದೀರ್ಘ ಹೆಸರಿನ ವ್ಯಕ್ತಿಯ ಪರಿಚಯವಿರಲೇ ಬೇಕು. ಈತನ ನಿಜನಾಮಧೇಯ ಕೋಟ ರಾಮಮೂರ್ತಿ ಮೋಹನ್‌ (ಕೆ.ಅರ್.ಮೋಹನ್‌). ಅಭಿನಯಿಸಿದ ಮೊದಲ ಚಿತ್ರ ‘ಕೋಕಿಲಾ’. ಸಿಕ್ಕಿದ ಚಿಕ್ಕ ಅವಕಾಶದಲ್ಲೇ ಪ್ರತಿಭೆಯ ಸದುಪಯೋಗ.

ಮೋಹನ್‌ನಿಗೆ ಹಾಡು ಅಂದರೆ ಪ್ರಾಣ. ಪ್ರೈಮರಿಯಿಂದ ಪದವೀ ಶಿಕ್ಷಣದವರೆಗೆ ಹಾಡಿನಲ್ಲಿ ಪ್ರಥಮ ಸ್ಥಾನದ ಹಕ್ಕುದಾರ. ಪ್ರೇಮಗೀತೆ ಅಚ್ಚುಮೆಚ್ಚು. ಸ್ವತಃ ಗೀತೆ ರಚಿಸಿ ಹಾಡುವ ಹುಮ್ಮಸ್ಸು. ಎಚ್‌.ಎಂ.ವಿ.ಯಲ್ಲಿ ಹಾಡಿದ ಅನುಭವವೂ ಇದೆ. ‘ಮೊದಲು ಗಾಯಕ ಆ ಮೇಲೆ ನಟ’ ಇದು ಸ್ವತಃ ಮೋಹನ್‌ ತನ್ನ ಬಗ್ಗೆ ಹೇಳುವ ಮಾತು.

ಹುಟ್ಟಿದ್ದು ದಕ್ಷಿಣ ಕನ್ನಡದ ಕೋಟೇಶ್ವರದಲ್ಲಿ. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಕಾಲೇಜು ಶಿಕ್ಷಣ ನ್ಯಾಷನಲ್ ಕಾಲೇಜಿನಲ್ಲಿ. 1972ರ ಸುಮಾರಿಗೆ ಬಿ.ವಿ.ಕಾರಂತರ ಗರಡಿಯಲ್ಲಿ ಪಳಗುವ ಸದವಕಾಶ. ಅಭಿನಯದ ಗೀಳಿಗೆ ತುಷಾರ ಸಿಂಚನ, ನಾಟಕಕ್ಕಾಗಿ ಅಲ್ಲಿ ಇಲ್ಲಿ ಅಲೆದಾಡುತ್ತಿದ್ದ ಸಂದರ್ಭದಲ್ಲಿ ಒಮ್ಮೆ ಮುಂಬಯಿಯಲ್ಲಿ ಲಂಕೇಶರ ‘ಸಿದ್ಧತೆ’ ನಡೆಯುತ್ತಿದ್ದಾಗ ‘ಕೋಕಿಲಾ’ ತಂಡದ ಗಮನ ಸೆಳದ. ನಾಟಕದ ಒಂದು ದೃಶ್ಯದಲ್ಲಿ ಮೋಹನನ ಒಂದೇ ಒಂದು ನಿಮಿಷದ ಅಭಿನಯ ಕಂಡು ಕೋಕಿಲಾಕ್ಕೆ ಆಹ್ವಾನ ಸಿಕ್ಕಿತು. ಆದ್ದರಿಂದಲೇ ಈ ಅವಿವಾಹಿತ ನಟನಿಗೆ ಅದೃಷ್ಟದಲ್ಲಿ ವಿಪರೀತ ನಂಬಿಕೆ. ‘ನನ್ನನ್ನು ಸಿನಿಮಾ ನಟನನ್ನಾಗಿ ಮಾಡಿದ್ದು ನನ್ನ ಅದೃಷ್ಟ; ಅದಕ್ಕೆ ನಾನು ಚಿರಋಣಿ’ ಮೋಹನ್ ಭಾವುಕನಾಗಿ ಹೇಳುತ್ತಾನೆ.

‘ಕೋಕಿಲಾ’ ನಂತರ ಅವಕಾಶ ಸಿಕ್ಕಿದ್ದು ‘ಗೀಜಗನ ಗೂಡು’ವಿನಲ್ಲಿ. ಆ ಮೇಲೆ ‘ಅಪರಿಚಿತ’. ಮಿಂಚಿ ಮಾಯವಾಗುವ ಪಾತ್ರವಾದರೂ ಅವರ ಜೀವಂತ ಅಭಿವ್ಯಕ್ತಿ ಪ್ರೇಕ್ಷಕರ, ವಿಮರ್ಶಕರ ಗಮನ ಸೆಳೆಯುವಂತಾಯಿತು. ಚಿಕ್ಕ ಪಾತ್ರಕ್ಕೆ ‘ಅಪರಿಚಿತ’ವೇ ಕೊನೆ. ಮುಂಬರುವ ಚಿತ್ರಗಳಲ್ಲಿ ನಾಯಕನಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಪ್ರಮುಖ ಪಾತ್ರಗಳಿಗೆ ಆಯ್ಕೆ. ಇವುಗಳಲ್ಲಿ ಮುಖ್ಯವಾದವುಗಳು ‘ಬಂಗಾರದ ಮನೆ’, ‘ಹರಿದ ಹೊನಲು’, ‘ನಗುವಿನ ಕಡಲಲ್ಲಿ’ ಮತ್ತು ‘ಹೊಸ ಮೇಡಂ’. ಎಲ್ಲಾ ವರ್ಣಚಿತ್ರಗಳು. ಈ ಚಿತ್ರಗಳಲ್ಲಿ ತನ್ನ ಪಾತ್ರ ಹಿಟ್‌ ಆದಲ್ಲಿ ಮುಂದೆ ಸಿನಿಮಾದಲ್ಲಿಯೇ ಮುಂದುವರೆಯುವ ಅದಮ್ಯ ಬಯಕೆ.

ಒಮ್ಮೆ ಸ್ಕೂಟರ್ ಅಪಘಾತವೊಂದರಲ್ಲಿ ಮೋಹನ್ ತೀರಿಕೊಂಡ ಸುದ್ದಿ ಬೆಂಗಳೂರು ತುಂಬಾ ಹರಡಿತ್ತು. ಆ ಕುರಿತು ಕೇಳಿದಾಗ: ‘ಒಂದು ಬಾರಿ ನಾನು ಸತ್ತಿದ್ದೆ! ಆ ಬಗ್ಗೆ ಬೆಂಗಳೂರಿನ ನನ್ನ ಸ್ನೇಹಿತರು ಮನೆಗೆ ಫೋನ್‌ ಮಾಡಿದ್ದೂ ಇದೆ. ತೀರಿ ಹೋದದ್ದು ‘ಮೋಹನ್‌’ ಸರಿ. ಆದರೆ ನಾನಲ್ಲ. ‘ಗೀಜಗನ ಗೂಡು’ವಿನಲ್ಲಿ ನನ್ನ ಜತೆ ನಟಿಸಿದ ನನ್ನ ಗೆಳೆಯ ಕೆ.ಮೋಹನ್‌ನೇ ಆತ. ನನ್ನ ಹೆಸರು ಕೆ.ಆರ್.ಮೋಹನ್‌. ‘ಕೋಕಿಲಾ’ ಬಿಡುಗಡೆಯಾದ ಮೇಲೆ ನನ್ನ ಇನಿಶ್ಯಲು ‘ಕೆ’ ಮಾತ್ರವಾಗಿ ಉಳಿದಿದ್ದರಿಂದ ಈ ಅವಾಂತರಕ್ಕೆ ಕಾರಣವಾಯ್ತು…’ ಎಂದು ವಿವರಿಸುತ್ತಿರುವಾಗ ಗೆಳೆಯನ ಆಕಸ್ಮಿಕ ಮರಣಕ್ಕಾಗಿ ಕಣ್ಣು ಸಂತಾಪಿಸುತ್ತಿತ್ತು.

ಮೋಹನ್‌ನ ನೆಚ್ಚಿನ ಕನ್ನಡ ನಟ ಡಾ.ರಾಜಕುಮಾರ್‌. ಈ ಮಹಾನ್ ನಟನ ಹಾಡುಗಳೆಂದರೂ ಇಷ್ಟ. ಗೆಳೆಯ ಕಮಲಹಾಸನ್‌ ಮತ್ತು ಆತನ ನಟನೆಯೆಂದರೆ ತುಂಬಾ ಮೆಚ್ಚುಗೆ. ಹೆಚ್ಚು ಕಡಿಮೆ ರೂಪದಲ್ಲಿ ಕಮಲಹಾಸನ್‌ನನ್ನು ಹೋಲುವ ಮೋಹನ್‌ನಿಗೆ ಕೋಕಿಲಾದಲ್ಲಿ ‘ದಾಡಿ’ ಇಡಿಸಿದ್ದು ಇಬ್ಬರು ಕಮಲಹಾಸನ್‌ರ ಅಭಾಸ ತಪ್ಪಿಸಲು ‘ಕೋಕಿಲಾ’ದ ತೆಲುಗು ಅವತರಣಿಕೆಯಲ್ಲೂ ಮೋಹನನ ಪಾತ್ರವನ್ನು ಆತನೇ ಮಾಡುತ್ತಾನೆಂದು ಕೆಲವೊಂದು ಪತ್ರಿಕೆಗಳು ಸುದ್ದಿ ಹರಡಿಸಿವೆಯಾದರೂ ತನ್ನನ್ನು ಈ ಬಗ್ಗೆ ಯಾರೂ ಕೇಳಿಕೊಂಡಿಲ್ಲವೆಂದು ಮೋಹನ್‌ ಅಂಬೋಣ. ಒಂದು ವೇಳೆ ಆಹ್ವಾನಿಸಿದರೆ ಯಾವ ಭಾಷೆಯ ಚಿತ್ರದಲ್ಲಾದರೂ ಅಭಿನಯಿಸಲು ಸದಾ ಸಿದ್ಧ.

‘ಸಿಗೋದಾದ್ರೆ ರಾಮಾಚಾರಿಯಂಥಾ ಗಂಡು ಪಾತ್ರ ಸಿಗಬೇಕ್ರೀ…’ ಎಂದು ‘ನಾಗರಹಾವು’ ಚಿತ್ರದಲ್ಲಿನ ಆ ಪಾತ್ರದ ಬಗ್ಗೆ ಹೃದ್ಯ ಪ್ರಶಂಸೆ.
– ಇದು ಕೋಕಿಲಾ ಮೋಹನ್‌ನ ಮೊಟ್ಟಮೊದಲ ಪ್ರಕಟಿತ ಸಂದರ್ಶನ. ಆಗ ನನ್ನ ಬರಹದ ಮೇಲೆ ಮೋಹನ್‌ಗೆ ನಂಬಿಕೆ ಮೂಡಿತು. ತುಂಬಾ ಹತ್ತಿರವಾದ. ಸಂಜೆಯಾದೊಡನೆಯೇ ನಾವು ಪರಸ್ಪರ ಸಂಧಿಸಲು ಶುರುಮಾಡಿದೆವು. ಆಗ ನಾಟಕಗಳಲ್ಲಿ ನಟಿಸುತ್ತಿದ್ದ ಮೋಹನ್‌ ಆಗಾಗ ಸಿನಿಮಾಗಳಲ್ಲಿ ನಟಿಸಲು ಶುರುಮಾಡಿದ್ದ. ಒಂದೆರಡು ಚಿತ್ರಗಳು ಕೈಗೆ ಬಂದುವು. ಪುಟ್ಟ ಪಾತ್ರವಾದರೂ ಗಮನ ಸೆಳೆವ ಪಾತ್ರ. ಮುಂದೊಮ್ಮೆ ಕನ್ನಡದ ಜನಪ್ರಿಯ ನಾಯಕ ನಟನಾಗಲಿದ್ದೇನೆ ಎನ್ನುವ ಹಮ್ಮುಬಿಮ್ಮು ಆಗಲೇ ಈ ಮೋಹನ್‌ನಲ್ಲಿತ್ತು.

ಒಂದು ದಿನ ಇದ್ದಕ್ಕಿದ್ದ ಹಾಗೆಯೇ ಮೋಹನ್ ಸ್ಟೈಲೇ ಬದಲಾಯಿತು. ನಡೆ, ನುಡಿಯಲ್ಲೂ ಬದಲಾದ. ಆಶ್ಚರ್ಯವಾಯಿತು. ಏನೆಂದು ಕೇಳಿದೆ. ವಿಷಯ ತಿಳಿಸಲಿಲ್ಲ. ನೇರವಾಗಿ ‘ತ್ರಿವೇಣಿ’ ಥಿಯೇಟರಿನ ಪಕ್ಕದ ಬಾಟಾ ಷೋರೂಮಿಗೆ ಕರೆದುಕೊಂಡು ಹೋದ. ಅಲ್ಲಿ ಹೈ ಹೀಲ್ಡ್‌ ಷೂ ಪರ್ಚೇಸ್ ಮಾಡುವುದಿತ್ತು. ಅದೂ ಇದೂ ನೋಡಿದ. ಇಷ್ಟವಾಗಲಿಲ್ಲ. ನಾನೊಂದು ಸೆಲೆಕ್ಟ್ ಮಾಡಿಕೊಟ್ಟೆ. ಆತನ ಕಣ್ಣು ಮಿಂಚಿತು. ಹಾಕಿನೋಡಿದ. ಕುಳ್ಳಗಿದ್ದ ಮೋಹನ್ ಸಿನಿಮಾದ ನಾಯಕನ ಹೈಟಿಗೆ ಬಂದಿದ್ದ. ಕಣ್ಣು ಮಿಂಚಿತು. ಆಗ ಆ ಶೂಗಳಿಗೆ ಐನೂರು ರೂಪಾಯಿಗಳ ರೇಟು. ಇದೊಂದು ಸಣ್ಣ ಮೊತ್ತವೆಂಬಂತೆ ಕೌಂಟರಿನಲ್ಲಿ ಬಿಲ್ ಪಾವತಿ ಮಾಡಿ ಪರ್ಚೇಶ್ ಮಾಡಿದ. ಅದೇ ಶೂವನ್ನು ಹಾಕಿಕೊಂಡು ಟಿಪ್‌ಟಾಪಾಗಿ ನಡೆಯುತ್ತ ಬಂದ. ರಸ್ತೆಯಲ್ಲಿ ಅವರಿವರು ತನ್ನನ್ನು ಗಮನಿಸುವರೋ ಎನ್ನುವ ತುಡಿತ ಬೇರೆ. ಆದರೆ ಅವರವರಿಗೆ ಅವರವರದ್ದೇ ಸಮಸ್ಯೆಗಳಿದ್ದುದರಿಂದ ದಾರಿ ಹೋಕರಾರೂ ಈ ಕೋಕಿಲಾ ಮೋಹನ್‌ನನ್ನು ಗಮನಿಸಲಿಲ್ಲ. ಆದರೆ ಒಂದು ಪ್ರಚಂಡ ಉತ್ಸಾಹದಿಂದ ಮೋಹನ್ ನನ್ನನ್ನು ಮತ್ತದೇ ಕಾಮತ್‌ ಹೋಟೆಲ್ಲಿಗೆ ಕರೆದುಕೊಂಡು ಹೋಗಿ ಮಸಾಲೆ ದೋಸೆ, ಗುಲಾಬ್‌ ಜಾಮೂನು ತಿನ್ನಿಸಿದ. ಕಾಫಿ ಕೊಟ್ಟ. ನಂತರ ಗಟ್ಟಿಯಾಗಿ ಕೈಹಿಡಿದು ಹೇಳಿದ : ‘ನನ್ಗೆ ತಮಿಳು ಚಿತ್ರರಂಗದಿಂದ ಕರೆ ಬಂದಿದೆ. ನಾಳೆ ರಾತ್ರಿ ಹೊರಡುತ್ತೇನೆ. ನಿಮ್ಮ ಸಹಕಾರಕ್ಕೆ ಥ್ಯಾಂಕ್ಸ್‌…’

ಹಾಗೆ ಮದರಾಸಿಗೆ ಹೊರಟ ಮೋಹನ್‌ನನ್ನು ಮತ್ತೆ ನೋಡಿದ್ದು ಬೆಂಗಳೂರಿನ ಅರಮನೆ ಆವರಣದಲ್ಲಿ. ಅಷ್ಟರಲ್ಲಿ ಆತ ಅಲ್ಲಿ ದೊಡ್ಡ ಸ್ಟಾರ್ ಆಗಿ ಬೆಳೆದಿದ್ದ. ಆ ಕಾಲದಲ್ಲಿ ರಜನೀಕಾಂತ್‌ಗಿಂತಲೂ ಹೆಚ್ಚು ಸಂಭಾವನೆ ಪಡೆಯುವ ನಟನಾಗಿದ್ದ. ನನಗೆ ಚೆನ್ನಾಗಿ ನೆನಪಿದೆ. ಅದು ಅರಮನೆಯ ಆವರಣ. ಕೋಕಿಲಾ ಮೋಹನ್‌ ‘ಗೋಪುರಂಗಳ್‌ ಸಾಯ್ವದಿಲ್ಲೈ’ ಚಿತ್ರದ ಚಿತ್ರೀಕರಣಕ್ಕಾಗಿ ಅಲ್ಲಿಗೆ ಬಂದಿದ್ದ. ಈಗ ತಮಿಳು ಚಿತ್ರಗಳಲ್ಲಿ ಪೋಷಕನಟರಾಗಿ ಸ್ಟಾರ್‌ವ್ಯಾಲ್ಯೂ ಪಡೆದಿರುವ ಮಣಿವಣ್ಣನ್‌ ಈ ಚಿತ್ರದ ನಿರ್ದೇಶಕರು. ಒಂದು ರೀತಿಯಲ್ಲಿ ಮೋಹನ್ ತಾರಾ ಬದುಕನ್ನು ಎತ್ತಿ ಹಿಡಿದದ್ದೇ ಈ ಮಣಿವಣ್ಣನ್‌. ಎತ್ತರದ ರಾಧಾ ನಾಯಕಿ. ಚಿತ್ರೀಕರಣ ನಡೆದಿರುವಂತೆಯೇ ಮೋಹನ್‌ ನನ್ನನ್ನು ಕಂಡ ತಕ್ಷಣವೇ ಓಡೋಡಿ ಬಂದ. ಬಿಗಿದಪ್ಪಿದ. ಕೈಕುಲುಕಿದ. ಕನ್ನಡದ ಹುಡುಗನೊಬ್ಬ ತಮಿಳು ಚಿತ್ರರಂಗದಲ್ಲಿ ಅತಿ ಎತ್ತರಕ್ಕೆ ಬೆಳೆದಿದ್ದರೂ ಯಾವ ಬಿಂಕ ಬಿಗುಮಾನವಿಲ್ಲದೇ ಮತ್ತೆ ನನ್ನನ್ನು ಗುರುತಿಸಿ, ಆದರಿಸಿದ್ದು ವಿಶೇಷವೆಂದೆನಿಸಿತ್ತು. ಇಡಿಯ ಚಿತ್ರ ತಂಡವೇ ಬೆರಗಾಗಿ ಈ ದೃಶ್ಯವನ್ನು ನೋಡುತ್ತಿತ್ತು.

ಇದಾದ ನಂತರ ಮತ್ತೆ ಕೋಕಿಲಾ ಮೋಹನ್‌ನನ್ನು ಭೇಟಿಯಾದದ್ದು ಮೊನ್ನೆ ನಾನು ಚೆನ್ನೈಗೆ ಹೋಗಿದ್ದಾಗಲೇ. ನಾವು ಪರಸ್ಪರ ಭೇಟಿಯಾದದ್ದು ಚೆನ್ನೈನ ಜಿ.ಆರ್‌.ಟಿ. ಗ್ರಾಂಡ್‌ ಹೋಟೆಲ್‌ನಲ್ಲಿ. ಅದು ತ್ರೀಸ್ಟಾರ್ ಹೋಟೆಲು. ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಬಂದರು ಮೋಹನ್‌. ಬರುವ ದಾರಿಯಲ್ಲಿ ಒಂದು ಪುಟ್ಟ ಆಕ್ಸಿಡೆಂಟ್‌. ಸ್ಕೂಟರ್‌ವೊಂದು ಮೋಹನ್‌ ಕಾರಿಗೆ ಬಡಿಯಿತು. ಸವಾರ ಬಿದ್ದುಬಿಟ್ಟ. ಮಂದಿ ಸೇರಿದರು. ಮೋಹನ್‌ನನ್ನು ತರಾಟೆಗೆ ತೆಗೆದುಕೊಳ್ಳಲೆಂದೇ ಕಾರಿನ ಬಳಿ ಬಂದವರು ಚಿತ್ರನಟ ಮೋಹನ್‌ನನ್ನು ನೋಡುತ್ತಲೇ ಮೆತ್ತಗಾದರು. ಕೈಕುಲುಕಿದರು. ಹೇಗೋ ಆ ಸಂದಿಗ್ಧದಿಮದ ಪಾರಾಗಿ ಬರಬೇಕಾದರೆ ಒಂದು ಗಂಟೆ ತಡವಾಯಿತು.

ಕಾನಿನಿಂದಿಳಿದು ಆ ಹೋಟೆಲಿನ ಒಳ ಬರುತ್ತಿರುವಂತೆಯೇ ಗ್ಲಾಸ್ ಗೇಟಿನ ಬಳಿ ನಿಂತಿದ್ದ ಮೀಸೆ ಸೆಕ್ಯೂರಿಟಿಯಾತ ದೊಡ್ಡದೊಂದು ಸೆಲ್ಯೂಟ್‌ ಹೊಡೆದ. ಆತನಿಗೆ ಮುಗುಳ್ನಗೆಯ ಕೃತಜ್ಞತೆ ಅರ್ಪಿಸುತ್ತಾ ಬಂದ ಮೋಹನ್‌ ನನ್ನನ್ನು ನೋಡುತ್ತಲೇ ಮತ್ತೆ ಗಾಢಾಲಿಂಗನ. ‘ಸದ್ಯ ಅದೇ ಮೋಹನ್‌’ ಎಂದುಕೊಂಡೆ. ಅದೇ ಅವಸರ. ಅದೇ ನಗೆ. ಅದೇ ಜಾಲಿ…

ಕರಿಕಪ್ಪು ಪ್ಯಾಂಟ್‌, ಅಷ್ಟೇ ಕಪ್ಪಿನ ಷರ್ಟ್‌, ತಲೆಗೊಂದು ಕರಿಟೋಪಿ, ಹೆಚ್ಚೆಂದರೆ ತಲೆಗೂದಲು ಉದುರಿರಬಹುದು. ಇದರ ಹೊರತಾಗಿ ಮೋಹನ್ ಕಂಡದ್ದು ಗಾಂಧಿನಗರದ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಭೇಟಿಯಾದ ಅದೇ ಶೈಲಿಯಲ್ಲಿ.

‘ಮೋಹನ್ ಈಗೇನು ಮಾಡುತ್ತಿದ್ದಾರೆ?’ ಮೋಹನ್ ಉತ್ತರಿಸಿದ್ದು ಹೀಗೆ: ‘ಈವರೆಗೆ ಒಟ್ಟು ನೂರಿಪ್ಪತ್ತು ಚಿತ್ರಗಳಲ್ಲಿ ನಟಿಸಿದ್ದೇನೆ. ಒಂದು ತೆಲುಗು, ಒಂದು ಮಲಯಾಳಂ. ನನ್ನಂಥವನಿಗೆ ಇದು ದುಬಾರಿ. ಕನ್ನಡಿಗರು ಕೈಹಿಡಿಯಲಿಲ್ಲ. ತಮಿಳರ ಮುದ್ದಿನ ಕೂಸಾದೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಒಂದು ಕಾಲದಲ್ಲಿ ನಾನು ರಜನಿಕಾಂತ್‌ಗಿಂತಲೂ ಹೆಚ್ಚು ಸಂಭಾವನೆ ಪಡೆಯುವ ನಾಯಕ ನಟನಾಗಿದ್ದೆ. ಒಂದೆರೆಡಲ್ಲ, ಹನ್ನೆರಡು ವರ್ಷಗಳ ಕಾಲ ತಮಿಳು ಚಿತ್ರರಂಗವನ್ನು ಆಳಿದೆ. ಇಲ್ಲಿ ಪ್ರೀತಿ ಕೊಟ್ಟರು. ಗೌರವ ಕೊಟ್ಟರು. ಖ್ಯಾತಿ ಕೊಟ್ಟರು. ದುಡ್ಡು ಕೊಟ್ಟರು. ನನ್ನ ಯೋಗ್ಯತೆಗೆ ಮೀರಿ ಎಲ್ಲವನ್ನೂ ಕೊಟ್ಟರು. ಇಂಥಾದ್ದೊಂದು ಬದುಕನ್ನುನಾನು ನಿರೀಕ್ಷಿಸಿರಲಿಲ್ಲ. ಒಂದೆರಡು ತಮಿಳು ಚಿತ್ರಗಳಲ್ಲಿ ನಟಿಸಿ ಮತ್ತೆ ಬೆಂಗಳೂರಿಗೆ ಹಿಂದಿರುಗುವ ಕನಸಷ್ಟೇ ನನ್ನಲ್ಲಿತ್ತು. ಆದರೇನಾಯಿತು ನೋಡಿ…?

‘ನನ್ನ ಮದುವೆಯ ಕಥೆ ಸ್ವಾರಸ್ಯಕರವಾಗಿದೆ. ಈಗ ನಾನು ಮದುವೆಯಾಗಿರುವ ಗೌರಿ ನನ್ನ ಅಭಿಮಾನಿಯಾಗಿದ್ದಾಕೆ. ಭಾರತೀಯಳಾಗಿದ್ದರೂ ಆಸ್ಟ್ರೇಲಿಯನ್‌ ಸಿಟಿಜನ್‌. ಅಲ್ಲಿ ನನ್ನ ಚಿತ್ರಗಳನ್ನು ನೋಡಿದ ಆಕೆ ಪತ್ರ ಬರೆಯಲು ಆರಂಭಿಸಿದಳು. ಎಲ್ಲಾ ಅಭಿಮಾನಿಗಳಿಗೂ ಉತ್ತರ ಬರೆಯುವಂತೆ ಈಕೆಗೂ ಬರೆದೆ. ಆಕೆ ಮತ್ತೆ ಬರೆದಳು. ನಾನು ಉತ್ತರ ಬರೆದೆ. ಹೀಗೆ ಶುರುವಾದ ಪತ್ರ ವ್ಯವಹಾರ ಆಕೆಯನ್ನು ನೋಡದೆಯೇ ನಾನು ಆಕೆಗೆ ಮರುಳಾಗುವಂತೆ ಮಾಡಿತು. ಒಮ್ಮೆ ಭಾರತಕ್ಕೆ ಆಕೆ ಬಂದಿದ್ದಾಗ ಭೇಟಿಯಾದಳು. ಮದುವೆಯ ನಿರ್ಧಾರವಾಯಿತು. ಮದುವೆಯಾದೆ. ಈಗ ನನ್ನ ಹೆಸರುಳಿಸಲೊಬ್ಬ ಮಗನಿದ್ದಾನೆ. ಆರತಿ ಎತ್ತಲು ಮಗಳಿಲ್ಲ…’ ಎಂದು ತಮ್ಮ ಟಿಪಿಕಲ್ ಶೈಲಿಯಲ್ಲಿ ಹೇಳುತ್ತಾ ಒಮ್ಮೆ ಜೋರಾಗಿ ಸ್ಟುವರ್ಟ್‌ನನ್ನು ಕರೆದು ತಿಂಡಿಗೆ ಆರ್ಡರ್‌ ಮಾಡಿದರು ಮೋಹನ್‌. ಒಬ್ಬಾತ ಕೋಟುಧಾರಿ ಯುವಕ ಆ ಮಬ್ಬುಗತ್ತಲಲ್ಲಿ ಹತ್ತಿರ ಬಂದು ‘ಮ್ಯಾಜಿಕ್‌’ ಅಂದ. ‘ನನ್ನ ಬದುಕೇ ಒಂದು ಮ್ಯಾಜಿಕ್‌’ ಅಂತ ಹೇಳಿ ಆ ಮೆಜಿಷೀಯನನ್ನು ಸಾಗಹಾಕಿದರು ಮೋಹನ್‌.

‘ಹನ್ನೆರಡು ವರ್ಷಗಳ ಕಾಲ ತಮಿಳು ಚಿತ್ರರಂಗದ ಅನಿಭಿಷಿಕ್ತ ದೊರೆಯಾಗಿಯೇ ಮೆರೆದ ನಾನು ಈಗ ಏನು ಮಾಡುತ್ತಿದ್ದೇನೆ ಎನ್ನುವ ಕುತೂಹಲ ನಿಮಗಿರಬಹುದು. ಎಲ್ಲದ್ದಕ್ಕೂ ಒಂದು ರಿಟೈರ್‌ಮೆಂಟಿದೆ. ವಯಸ್ಸು ಎಂದೂ ನಿಂತ ನೀರಲ್ಲ; ಹರಿಯುತ್ತಲೇ ಇರುತ್ತದೆ. ನನ್ನ ಕಾಲ ಮುಗಿಯಿತು ಅಂತ ಇನ್ನೂ ನಾನು ಡಿಸೈಡ್ ಮಾಡಿಲ್ಲ. ಕಾಲ ಮುಗಿಯುವುದಿಲ್ಲ. ಅದು ಮುಗಿಸುತ್ತದೆ. ಅದರ ವಿರುದ್ಧ ಸೆಡ್ಡು ಹೊಡೆದು ನಿಂತೋನು ಗೆಲ್ತಾನೆ. ಹಾಗೆ ಗೆದ್ದವನು ನಾನು. ಸದ್ಯಕ್ಕೆ ಬಣ್ಣ ಹಚ್ಚುವುದನ್ನು ಬಿಟ್ಟಿರಬಹುದು. ಸಂಪಾದನೆಯ ಆ ಕಾಲದಲ್ಲಿ ಒಂದಷ್ಟು ಬೇರೆ ಬೇರೆ ವ್ಯವಹಾರಗಳಲ್ಲಿ ದುಡ್ಡು ಇನ್ವೆಸ್ಟ್ ಮಾಡಿದ್ದೆ. ಈಗ ಉಪಕಾರಕ್ಕೆ ಬರುತ್ತಿದೆ’ ಎಂದು ನಿಲ್ಲಿಸಿದಾಗ ನಾನು ಕೇಳಿದೆ: ‘ನೀವ್ಯಾಕೆ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಬಾರದು?’

ಮೋಹನ್ ನಕ್ಕರು. ಬಲಗಡೆಯ ಒಂದೇ ಒಂದು ಉಬ್ಬಿದ ಹಲ್ಲು ಫಳ್ಳೆಂದಿತು. ಇಪ್ಪತ್ತೈದು ವರ್ಷಗಳ ಹಿಂದೆ ಆಗಿನ ಚೆಲುವೆಯರನ್ನು ಆಕರ್ಷಿಸುತ್ತಿದ್ದುದು ಇದೇ ಹಲ್ಲಲ್ಲವೇ? ಮೋಹನ್ ನಗುವನ್ನು ತಡೆ ಹಿಡಿದು ಕೀಟಲೆಯಿಂದಲೇ ಹೇಳತೊಡಗಿದರು: ‘ಕಿರುತೆರೆಯಲ್ಲಿ ಕಾಣಿಸಿಕೊಳ್ಳುವಷ್ಟು ವಯಸ್ಸಾಗಿದೆಯಾ ನಂಗೆ? ಏನು ಮಹಾ, ನಲವತ್ತಮೂರು ವರ್ಷ ವಯಸ್ಸು ಭಾರಿ ವಯಸ್ಸಾ? ಟಿ.ವಿ. ಧಾರಾವಾಹಿಗಳಲ್ಲಿ ನಟಿಸಲು ಕನಿಷ್ಟವೆಂದರೂ ಅರವತ್ತು ದಾಟಿರಬೇಕು. ರಿಟೈರ್ ಆದ ಮೇಲಿನ ಕೆಲಸವಿದು. ಈಗ ಸದ್ಯಕ್ಕೆ ಬೇರೆ ಬೇರೆ ಯೋಚನೆ ಯೋಜನೆಗಳಿವೆ. ಮುಖ್ಯವಾಗಿ ನಾನು ಮತ್ತೆ ಚಿತ್ರರಂಗದಲ್ಲಿ ಸಕ್ರಿಯನಾಗಬೇಕೆಂಬ ಮನಸ್ಸಿದೆ. ಈಡೇರಿಸಿಕೊಳ್ಳುವ ಸಂಕಲ್ಪವೂ ಇದೆ…’ ಎಂದು ಹೇಳುತ್ತಾ ತಮ್ಮ ಆತ್ಮಸ್ಥೈರ್ಯದ ಹೊಳಹನ್ನು ತೆರೆದಿಟ್ಟರು.

ನಂತರ ತಮ್ಮ ದೈನಂದಿನ ಕೆಲಸ ಕಾರ್ಯಗಳ ಪಟ್ಟಿಯನ್ನು ಹೀಗೆ ಒಪ್ಪಿಸಿದರು: ‘ಮುಂಜಾನೆ 5ಕ್ಕೆ ಎದ್ದೇಳುತ್ತೇನೆ. ಒಂದಷ್ಟು ವಾಕಿಂಗ್‌, ಒಂದಷ್ಟು ಎಕ್ಸರಸೈಜ್‌. ನಂತರ ದೈನಂದಿನ ವಿಧಿ ವಿಧಾನಗಳು, ತಿಂಡಿ, ಬೆಳಿಗ್ಗೆ ಹನ್ನೊಂದಕ್ಕೆ ಹೊರಹೊರಟರೆ ವ್ಯವಹಾರದಲ್ಲಿ ಮಗ್ನ. ಮಧ್ಯಾಹ್ನ ಊಟ. ರೆಸ್ಟ್‌. ಸಂಜೆ ಸ್ನೇಹಿತರ ಭೇಟಿ. ರಾತ್ರಿ 11ರ ತನಕ ಓದು. ನಾನು ಸಾಯಿಭಕ್ತ. ಇದಕ್ಕೂ ಮೊದಲು ಎಚ್‌.ಎನ್‌. ಶಿಷ್ಯನಾಗಿದ್ದೆ. ಆದರೆ ಸಾಯಿಬಾಬಾ ವರ ವಿಸ್ತೃತ ಸಾಮಾಜಿಕ ಸೇವೆಗಳನ್ನು ಮನಗಂಡು ಅವರ ಭಕ್ತನಾಗಿಬಿಟ್ಟೆ. ಹಾಗೆಂದು ಎಚ್‌.ಎನ್‌. ರವರ ಮೇಲಿನ ಗೌರವ ಕಮ್ಮಿಯಾಗಿಲ್ಲ. ರಾತ್ರಿ 11ರ ನಂತರ ಓದುವುದು ಸಾಯಿ ಕೃತಿಗಳನ್ನು. ನಂತರ ನಿದ್ದೆಗೆ ನಾನು ರೆಡಿ. ನನಗೆ ಬೇಕೆಂದಾಗ ನಿದ್ದೆ ಮಾಡುವ ಸ್ವಭಾವವಿದೆ. ಇದು ಆ ಪರಮಾತ್ಮ ಕೊಟ್ಟ ಕೊಡುಗೆಯಲ್ಲದೇ ಮತ್ತಿನ್ನೇನು? ನಾನು ಸುಖವಾಗಿದ್ದೇನೆ ಎನ್ನವುದುಕ್ಕೆ ಇದೂ ಒಂದು ಸಾಕ್ಷಿ…’ ಎಂದು ಹೇಳಿ ಘೊಳ್ಳನೆ ನಕ್ಕರು ಮೋಹನ್‌.  

ಮಾತಿನ ನಡುವೆ ಜಯಲಲಿತಾ ಆಡಳಿತ, ಕಾವೇರಿ ಸಮಸ್ಯೆ, ಎಂ.ಜಿ.ಆರ್‌. ಮಸ್ಸಲ್ಸ್‌ ಕಥೆ, ಉದವುಂ ಕರಂಗಳ್‌ನ ವಿದ್ಯಾಕರ ಸಾಹಸ, ಕಾಂಚನಾ ಅವರ ಅನಾಥಪ್ರಜ್ಞೆ, ಭಾವನಾಳನ್ನು ಕರೆಸಿ ತಮಿಳು ಚಿತ್ರವೊಂದರಲ್ಲಿ ನಟಿಸುವಂತೆ ಮಾಡಿದ್ದು, ಸುಂದರರಾಜ್‌ಗೆ ತಮಿಳು ಸೀರಿಯಲ್‌ನಲ್ಲಿ ಅವಕಾಶ ಮಾಡಿಕೊಟ್ಟದ್ದು, ನ್ಯಾಷನಲ್‌ ಕಾಲೇಜಿನ ಬಳಿಯ ಕಾಕಾನ ಪಾನಿಪೂರಿ, ಎದುರಿಗಿರುವ ರಮೇಶ್‌ಭಟ್‌ರ ಬೇಕರಿ, ಭರಣ ನಿರ್ದೇಶನದ ‘ಶುಭಕಾಲ ಬರುತೈತೆ’ ಚಿತ್ರದ ವಿವರ… ಇತ್ಯಾದಿ ಇತ್ಯಾದಿ ಮಾತುಗಳು ಬಂದವು. ಒಟ್ಟು ಅಖಂಡ ಮೂರು ತಾಸುಗಳ ಮಾತುಕತೆ. ಯಾರಿಗೂ ಬೋರ್ ಆಗಲಿಲ್ಲ. ಹಳೆಯ ಸ್ನೇಹಕ್ಕೆ ಪಾಲೀಶ್‌ ಮಾಡಿ ಬಿಲ್‌ ತೆತ್ತರು ಮೋಹನ್‌. ಸ್ಟುವರ್ಟ್‌ಗೆ ನೂರು ರೂಪಾಯಿಗಳ ಟಿಪ್ಸ್‌! ಹೊರಗಡೆ ಗಾಜಿನ ಗೇಟಿನ ಬಳಿ ನಿಂತು ದೊಡ್ಡ ಸೆಲ್ಯೂಟ್ ಹೊಡೆದ ಮೀಸೆಧಾರಿ ಸೆಕ್ಯೂರಿಟಿಯವನ ಕೈಗೆ ನೂರು ರೂಪಾಯಿಯ ನೋಟನ್ನು ತುರುಕಿಸಿ ಹೊರಟ ಮೋಹನ್‌ ಕತ್ತಲಲ್ಲಿ ಕರಗಿ ಹೋದರು. ಕೋಕಿಲಾ ಮೋಹನ್ ಸುಖವಾಗಿದ್ದಾರೆ ಎನ್ನುವುದಕ್ಕೆ ಇದಕ್ಕಿಂಥಾ ಸಾಕ್ಷಿ ಬೇಕಾ?

(ಗಣೇಶ್ ಕಾಸರಗೋಡು ಅವರ ‘ಗುರಿ ಹೆಗ್ಗುರಿ’ ಕೃತಿಯಿಂದ ಆಯ್ದ ಬರಹ. ‘ಗುರಿ ಹೆಗ್ಗುರಿ’ 2011ರಲ್ಲಿ ಪ್ರಕಟವಾಗಿರುವ ಕೃತಿ. ಲೇಖಕ ಗಣೇಶ್ ಕಾಸರಗೋಡು ಅವರು ನಟನ ವೃತ್ತಿಬದುಕಿನ ಹಾದಿಯನ್ನು ಆಕರ್ಷಕವಾಗಿ ದಾಖಲಿಸಿದ್ದಾರೆ. ಬರಹ ಹಳೆಯದಾದರೂ ತನ್ನ ತಾಜಾತನದಿಂದಾಗಿ ಆಪ್ತವಾಗುತ್ತದೆ.)

ಈ ಬರಹಗಳನ್ನೂ ಓದಿ