ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

‘ಮೃತ್ಯುದೇವತೆ’ ಸಿನಿಮಾದ ‘ನಮ್ಮಾವ ಮಾದೇವ’ ಹಾಡು ಬಿಡುಗಡೆ

ಪೋಸ್ಟ್ ಶೇರ್ ಮಾಡಿ
'ಮೃತ್ಯುದೇವತೆ' ಸಿನಿಮಾದ 'ನಮ್ಮಾವ ಮಾದೇವ' ಹಾಡು ಬಿಡುಗಡೆ

ನವೀನ್‌ ಮಹಾದೇವ್‌ ನಿರ್ದೇಶನದ ‘ಮೃತ್ಯುದೇವತೆ’ ಸಿನಿಮಾದ ‘ನಮ್ಮಾವ ಮಾದೇವ’ ಹಾಡು ಬಿಡುಗಡೆಯಾಗಿದೆ. ಚಿತ್ರವನ್ನು ನವೀನ್‍ ಮಹದೇವ್‍ ಅವರ ಪತ್ನಿ ಸರಸ್ವತಿ, ವರ್ಷಿತಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ಹಿರಿಯನಟಿ ವಿನಯಾ ಪ್ರಸಾದ್ ಅಭಿನಯಿಸಿದ್ದಾರೆ.

ಈಗಿನ ಸಮಾಜದಲ್ಲಿ ಮಹಿಳೆ ಯಾವ ರೀತಿ ಟ್ರ್ಯಾಪ್ ಅಗಿ ವಂಚಕರ ಜಾಲದಲ್ಲಿ ಸಿಲುಕಿಕೊಳ್ಳುತ್ತಾಳೆ, ನಂತರ ಅದರಿಂದ ಹೊರಬರಲು ಹೇಗೆ ಪ್ರಯತ್ನಿಸುತ್ತಾಳೆ, ಅಂಥವರಿಗೆ ಶಿಕ್ಷಿಸಲು ಯಾವ ಅವತಾರ ಎತ್ತುತ್ತಾಳೆ ಎಂದು ‘ಮೃತ್ಯುದೇವತೆ’ ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದಾರೆ ನಿರ್ದೇಶಕ ನವೀನ್ ಮಹಾದೇವ್. ಟ್ರ್ಯಾಪ್ʼಗೆ ಒಳಗಾದ ಮೂವರು ಹೆಣ್ಣು ಮಕ್ಕಳ ಕಥೆಯಿದು. ಮಹಿಳಾ ಪ್ರಧಾನ ಕಥಾಹಂದರ ಇಟ್ಟುಕೊಂಡು ನವೀನ್ ಮಹಾದೇವ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶಿಸಿದ್ದಾರೆ. ಜತೆಗೆ ನಟನೆ ಕೂಡ ಮಾಡಿದ್ದಾರೆ.

ಈ ಚಿತ್ರದ ‘ನಮ್ಮಾವ ಮಾದೇವ’ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು. ಹಿಮಶ್ರೀ, ನವೀನ್ ಮಹದೇವ್ ಅಭಿನಯದ ಈ ಹಾಡಿಗೆ ನಿರ್ದೇಶಕರೇ ಸಾಹಿತ್ಯ ರಚಿಸಿದ್ದಾರೆ. ಈ ವೇಳೆ ಮಾತನಾಡಿದ ನವೀನ್ ಮಹದೇವ್, ‘ಈ ಹಿಂದೆ ಚಿತ್ರದ ರಿಲೀಸ್ ಡೇಟನ್ನು ಅನೌನ್ಸ್ ಮಾಡಿದ್ದೆವು. ಸಣ್ಣ ಏರುಪೇರಾದ್ದರಿಂದ ತಡವಾಯಿತು. ಮೊದಲ ಹಾಡಿಗೆ ಎಲ್ಲಾ ಕಡೆಯಿಂದ ತುಂಬಾ ಪ್ರಶಂಸೆ ಬಂತು. ಹೆಣ್ಣು, ಹೆಣ್ತನದ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರ ಎಂದು ಮೆಚ್ಚಿಕೊಂಡರು. ಮೊದಲು ಈ ಹಾಡನ್ನು ಬಳಸಿಕೊಂಡಿರಲಿಲ್ಲ‌. ಹಿಮಶ್ರೀ ಅವರ ಒತ್ತಾಯದಿಂದ ಮಾಡಬೇಕಾಯಿತು. ಟ್ರೈಲರ್ ತುಂಬಾ ಚೆನ್ನಾಗಿ ಬಂದಿದೆ. ಟ್ರೈಲರ್, ಹಾಡುಗಳನ್ನು ಎಷ್ಟು ಚೆನ್ನಾಗಿ ಪ್ರೆಸೆಂಟ್ ಮಾಡುತ್ತೇವೋ ಅದರ ಮೇಲೆ ಸಿನಿಮಾದ ರಿಜಲ್ಟ್ ಇರುತ್ತದೆ. ಒಂದೊಳ್ಳೆ ಸಿನಿಮಾ ಅಂದರೆ ಜನ ಏನು ಬಯಸುತ್ತಾರೋ ಅದನ್ನು ಟ್ರೈಲರ್ ಮೂಲಕ ಹೇಳಿದ್ದೇನೆ. ಟ್ರೈಲರ್ ಕಟ್ ಮಾಡಲು 30 ದಿನ ತಗೊಂಡಿದ್ದೆ’ ಎಂದರು.

ಸಹನಿರ್ದೇಶಕ ದೇವು ಮಾತನಾಡಿ, ‘ಚಿತ್ರದಲ್ಲಿ ಕೋಳಿ ಕೊಯ್ಯುವ ಸೀನ್ ಇದೆ. ಅದಕ್ಕೆ ಸೆನ್ಸಾರ್ʼನವರು ಅನಿಮಲ್ ಬೋರ್ಡ್ ಅನುಮತಿ ತಗೋಬೇಕು ಎಂದರು. ಹಾಗಾಗಿ ಚಿತ್ರ ತಡವಾಗುತ್ತಿದೆ. ಎಂ.ಪಿ. ಫಿಲಂಸ್ ಮುನೀಂದ್ರ ಅವರು ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ’ ಎಂದರು. ನಾಯಕಿ ಸಾರಿಕಾ ರಾವ್ ಮಾತನಾಡಿ, ‘ತುಂಬಾ ಇಷ್ಟಪಟ್ಟು ಮಾಡಿರುವ ಸಿನಿಮಾ. ಎಲ್ಲರೂ ಅವರವರ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.ಈ ಸಿನಿಮಾ ಕೇವಲ ಮನೋರಂಜನೆಗಾಗಿ ಅಲ್ಲ, ಬದಲಾವಣೆ ಆಗಬೇಕು. ಎಷ್ಟೋ ಜನರಿಗೆ ಪ್ರೇರಣೆಯಾಗುತ್ತದೆ. ಹೆಣ್ಣುಮಕ್ಕಳ ಜತೆ ತಂದೆ, ತಾಯಿ ಬಂದು ಸಿನಿಮಾ ನೋಡಬೇಕು. ಹೆಣ್ಣಿನ ಸಹನೆಯ ಕಟ್ಟಿ ಒಡೆದಾಗ ಏನಾಗುತ್ತದೆ ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ. ಆರತಿ ಎಂಬ ಸ್ವಿಗ್ಗಿ ಡಿಲವರಿ ಹುಡುಗಿ ಪಾತ್ರ ನನ್ನದು. ತುಂಬಾ ಶೇಡ್ಸ್ ಇದೆ’ ಎಂದು ಹೇಳಿದರು.

ಮತ್ತೊಬ್ಬ ನಾಯಕಿ ಹಿಮಶ್ರೀ ಮಾತನಾಡಿ, ‘ಇವತ್ತು ನನ್ನ ಸಾಂಗ್ ರಿಲೀಸಾಗಿದೆ. ನಾನಿಲ್ಲಿ ಮಲೆನಾಡಿನ ಹಳ್ಳಿಯ ಮುಗ್ಧ ಹುಡುಗಿ ಸೌಮ್ಯ ಎಂಬ ಪಾತ್ರ ಮಾಡಿದ್ದೇನೆ. ಸಡನ್ ಆಗಿ ಪರಿಚಯ ಆಗುವ ವ್ಯಕ್ತಿಗಳನ್ನು ತಕ್ಷಣಕ್ಕೆ ನಂಬಬಾರದು ಎಂದು ಚಿತ್ರದಲ್ಲಿ ತೋರಿಸಿದ್ದಾರೆ. ನವೀನ್ ಅವರು ಸಿನಿಮಾ ಬಗ್ಗೆ ತುಂಬಾ ತಿಳ್ಕೊಂಡಿದ್ದಾರೆ’ ಎಂದು ಹೇಳಿದರು. ‘ಅಣ್ಣಯ್ಯ’ ಖ್ಯಾತಿಯ ಮಾಹೀನ್ ಮಾತನಾಡಿ, ‘ಇದು ಮಹಿಳಾ ಪ್ರಧಾನ ಚಿತ್ರವಾದರೂ ಪುರುಷರೂ ಬಂದು ನೋಡಬೇಕು. ಹಣವಿದೆ ಎಂದು ಮೆರೆಯುವ ಶ್ರೀಮಂತ ಹುಡುಗನ ಪಾತ್ರ ನನ್ನದು. ಕೆಟ್ಟದಾರಿ ಹಿಡಿದರೆ ಏನಾಗುತ್ತೆ ಎಂದು ಚಿತ್ರದಲ್ಲಿ ತೋರಿಸಿದ್ದಾರೆ’ ಎಂದರು. ನಟ ಪವನ್ ಶೆಟ್ಟಿ, ಸೂರ್ಯ ಚಿತ್ರದ ಬಗ್ಗೆ ಮಾತನಾಡಿದರು.

ಮೃತ್ಯುದೇವತೆ ಚಿತ್ರವನ್ನು ನವೀನ್‍ ಮಹದೇವ್‍ ಅವರ ಪತ್ನಿ ಸರಸ್ವತಿ, ವರ್ಷಿತಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ಹಿರಿಯನಟಿ ವಿನಯಾ ಪ್ರಸಾದ್ ಅಭಿನಯಿಸಿದ್ದಾರೆ. ಅನಿರುದ್ಧ್‌ ಛಾಯಾಗ್ರಹಣ, ಶಿವಪ್ರಸಾದ್ ಅವರ ಸಂಗೀತ ನಿರ್ದೇಶನ, ರಘು ಅವರ ನೃತ್ಯ ನಿರ್ದೇಶನ, ಅಲ್ಟಿಮೇಟ್‍ ಶಿವು ಹಾಗೂ ಚಿಟ್ಟ ಜಾಧವ್‍ ಅವರ ಸಾಹಸ ನಿರ್ದೇಶನ ಮತ್ತು ಮಂಜು ವಿಕ್ರಂ ಅವರ ಸಂಕಲನ, ಗಣೇಶ್ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ.

ಈ ಬರಹಗಳನ್ನೂ ಓದಿ