ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಮದಕರಿ ನಾಡು ಮತ್ತು ಸಿನಿಮಾ

ಪೋಸ್ಟ್ ಶೇರ್ ಮಾಡಿ
ಶಶಿಧರ ಚಿತ್ರದುರ್ಗ
ಪತ್ರಕರ್ತ

ಪುಟ್ಟಣ್ಣ ನಿರ್ದೇಶನದ ‘ನಾಗರಹಾವು’, ಜಿ.ವಿ.ಅಯ್ಯರ್ ಅವರ ‘ಹಂಸಗೀತೆ’ ಚಿತ್ರಗಳು ದುರ್ಗದ ಆಕರ್ಷಣೆಯನ್ನು ಹೆಚ್ಚಿಸಿದವು. ಆನಂತರ ಸಾಕಷ್ಟು ಸಿನಿಮಾಗಳು ಕೋಟೆಯಲ್ಲಿ ಚಿತ್ರಣಗೊಂಡಿದ್ದು, ಇಲ್ಲಿನ ಸಿನಿಮಾ ಚಟುವಟಿಕೆಗಳಿಗೂ ಇಂಬು ಸಿಕ್ಕಿತು.

 ‘ಹಾವಿನ ದ್ವೇಷ ಹ್ನನೆರೆಡು ವರುಷ..’

‘ಕನ್ನಡ ನಾಡಿನ ವೀರರಮಣಿಯ, ಗಂಡು ಭೂಮಿಯ ವೀರ ನಾರಿಯ..’

ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ಸಿನಿಮಾದ ಈ ಹಾಡುಗಳನ್ನು ಕೇಳಿದಾಗ ಈಗಲೂ ನಮ್ಮ ಮುಂದೆ ದುರ್ಗದ ಕೋಟೆ ಕಣ್ಮುಂದೆ ಬರುತ್ತದೆ. ಸಾಹಿತಿ ತರಾಸು ಸೃಷ್ಟಿಸಿದ ಅಪ್ಪಟ ನೇಟಿವಿಟಿಯ ಪಾತ್ರಗಳದ್ದು ಒಂದು ತೂಕವಾದರೆ, ಈ ಪಾತ್ರಗಳಿಗೆ ಜೀವ ತುಂಬಿ ದುರ್ಗವನ್ನು ಪರಿಣಾಮಕಾರಿಯಾಗಿ ಚಿತ್ರೀಕರಿಸಿದ ಪುಟ್ಟಣ್ಣನವರ ನಿರ್ದೇಶನದ್ದು ಮತ್ತೊಂದು ತೂಕ. ಚಿತ್ರದಲ್ಲಿ ಪುಟ್ಟಣ್ಣ ಕೋಟೆಯನ್ನೂ ಒಂದು ಪಾತ್ರವಾಗಿಸಿದರು. ಅವರ ಕಲ್ಪನೆಗೆ ಪೂರಕವಾದ ಸಂಗೀತ, ಗೀತಸಾಹಿತ್ಯ, ಛಾಯಾಗ್ರಹಣದಿಂದಾಗಿ ‘ನಾಗರಹಾವು’ (1972), ‘ದುರ್ಗದ ಚಿತ್ರ’ವಾಯ್ತು. ಈ ಸಿನಿಮಾ ದುರ್ಗದ ಕೋಟೆ, ಇಲ್ಲಿನ ಇನ್ನಿತರೆ ಪ್ರವಾಸಿ ತಾಣಗಳನ್ನು ಮತ್ತಷ್ಟು ಜನಪ್ರಿಯಗೊಳಿಸಿದ್ದು ಹೌದು. ಚಿತ್ರ ತೆರೆಕಂಡು ಅರ್ಧ ಶತಮಾನವೇ ಆಗುತ್ತಿದೆ. ಕೋಟೆಗೆ ಭೇಟಿ ನೀಡುವ ಕನ್ನಡಿಗರು ಈಗಲೂ ‘ರಾಮಾಚಾರಿ’ ಓಡಾಡಿದ ಜಾಗಗಳನ್ನು ಗುರುತಿಸುತ್ತಾರೆ!

ದುರ್ಗದ ಕಾದಂಬರಿಕಾರರಾದ ತರಾಸು ಮತ್ತು ಬಿ.ಎಲ್‌.ವೇಣು

ತರಾಸು ಅವರ ‘ಹಂಸಗೀತೆ’ ಕೃತಿ ಜಿ.ವಿ.ಅಯ್ಯರ್ ನಿರ್ದೇಶನದಲ್ಲಿ ದುರ್ಗದಲ್ಲಿ ಚಿತ್ರಣಗೊಂಡು 1975ರಲ್ಲಿ ತೆರೆಗೆ ಬಂತು. ಈ ಸಂಗೀತಪ್ರಧಾನ ಸಿನಿಮಾ ದುರ್ಗದ ಕೋಟೆಗೆ ವಿಶಿಷ್ಟ ಸಾಂಸ್ಕೃತಿಕ ಆಯಾಮ ದೊರಕಿಸಿಕೊಟ್ಟಿತು. ವ್ಯಾಪಾರಿ ಚಿತ್ರದ ಚೌಕಟ್ಟಿಲ್ಲದ ‘ಹಂಸಗೀತೆ’ ತನ್ನ ಮಿತಿಯಲ್ಲೇ ಕೋಟೆಯನ್ನು ಬೆಳಗಿಸಿತು. ಈ ಚಿತ್ರದ ನಂತರ ಕೋಟೆಯೊಳಗಿನ ಗೋಪಾಲಸ್ವಾಮಿ ಹೊಂಡದ ಹಿಂಬದಿಯ ಬಂಡೆ ‘ಹಂಸಗೀತೆ ಕಲ್ಲು’ ಎಂದೇ ಕರೆಸಿಕೊಂಡಿತು. ಈ ಎರಡು ಚಿತ್ರಗಳು ದುರ್ಗಕ್ಕೆ ಪ್ರವಾಸಿಗರನ್ನು ಸೆಳೆಯುವುದರ ಜೊತೆಗೆ ಆಯಾ ಚಿತ್ರದ ನಟ-ನಟಿಯರ ವೃತ್ತಿ ಬದುಕಿಗೂ ತಿರುವು ನೀಡಿದವು. ಸ್ಥಳೀಯರ ಸಿನಿಮಾ ಪ್ರೀತಿಗೆ ಇಂಬು ನೀಡಿದ್ದಲ್ಲದೆ ಇಲ್ಲಿನವರು ಚಿತ್ರರಂಗದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರೇರಣೆ ಸಿಕ್ಕಿತು. ಆಗಿನಿಂದ ಇಂದಿನವರೆಗೂ ಜಿಲ್ಲೆಯ ಹಲವರು ನಟನೆ, ನಿರ್ದೇಶನ, ಚಿತ್ರನಿರ್ಮಾಣ, ಹೂಡಿಕೆ, ವಿತರಣೆಯಲ್ಲಿ ಸಕ್ರಿಯರಾಗಿದ್ದಾರೆ.

‘ನಾಗರಹಾವು’ ಚಿತ್ರದಲ್ಲಿ ವಿಷ್ಣುವರ್ಧನ್‌

ದುರ್ಗದ ಮತ್ತೊಬ್ಬರು ಹೆಮ್ಮೆಯ ಸಾಹಿತಿ ಬಿ.ಎಲ್.ವೇಣು ಅವರ ಹೆಸರು ಕೋಟೆಯೊಂದಿಗೆ ಬೆಸೆದುಕೊಂಡಿದೆ. ಹಿರಿಯ ಚಿತ್ರನಿರ್ದೇಶಕ ಟಿ.ಎಸ್.ನಾಗಾಭರಣ ಅವರು ವೇಣು ಅವರ ‘ಕಲ್ಲರಳಿ ಹೂವಾಗಿ’ ಕೃತಿಯನ್ನು ಅದೇ ಶೀರ್ಷಿಕೆಯಡಿ ಸಿನಿಮಾ (2006) ಮಾಡಿದ್ದರು. ಐತಿಹಾಸಿಕ ಕಾಲಘಟ್ಟದ ಹಿನ್ನೆಲೆಯಲ್ಲಿ ಕಾಲ್ಪನಿಕ ಪ್ರೇಮಕತೆಯೊಂದಿಗೆ ಕೋಮು ಸಾಮರಸ್ಯ ಸಾರಿದ್ದ ಮಹತ್ವದ ಪ್ರಯೋಗವಿದು. ಬಹುತೇಕ ಕೋಟೆಯಲ್ಲೇ ಸಿನಿಮಾದ ಚಿತ್ರೀಕರಣ ನಡೆಸಲಾಗಿತ್ತು. ಈ ಹಿಂದೆ ಪುಟ್ಟಣ್ಣನವರ ‘ನಾಗರಹಾವು’ ಚಿತ್ರದಲ್ಲಿ ‘ಜಲೀಲ’ನ ಪಾತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದ್ದ ಅಂಬರೀಶ್ ‘ಕಲ್ಲರಳಿ ಹೂವಾಗಿ’ ಚಿತ್ರದಲ್ಲಿ ಮದಕರಿ ನಾಯಕರ ಪಾತ್ರ ಪೋಷಿಸಿದ್ದು ವಿಶೇಷ. ಈ ಸಿನಿಮಾಗೆ ರಾಷ್ಟ್ರೀಯ ಭಾವೈಕ್ಯತೆ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಸಂದಿದೆ.

ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್‌, ಜಿ.ವಿ.ಅಯ್ಯರ್, ಟಿ.ಎಸ್.ನಾಗಾಭರಣ

ಬಿ.ಎಲ್.ವೇಣು ಅವರ ಕೃತಿಯನ್ನು ಆಧರಿಸಿ ತಯಾರಾದ ‘ಬಿಚ್ಚುಗತ್ತಿ’ ದುರ್ಗದ ನಾಯಕರ ಕುರಿತ ಮತ್ತೊಂದು ದೊಡ್ಡ ಚಿತ್ರ. ದುಬಾರಿ ವೆಚ್ಚ ಮತ್ತು ಗ್ರಾಫಿಕ್ ತಂತ್ರಜ್ಞಾನದೊಂದಿಗೆ ತೆರೆಗೆ ಬಂದ ಚಿತ್ರಕ್ಕೆ ಕೊರೊನಾದಿಂದ ಹಿನ್ನೆಡೆಯಾಗಿದ್ದು ವಿಪರ್ಯಾಸ. ಈ ಮಧ್ಯೆ ವೀರವನಿತೆ ‘ಒನಕೆ ಓಬವ್ವ’ಳ ಚಿತ್ರವೂ ಬಂದುಹೋಯ್ತು. ಈ ಎರಡೂ ಚಿತ್ರಕ್ಕೆ ಸಾಹಿತಿ ವೇಣು ಅವರ ಚಿತ್ರಸಾಹಿತ್ಯವಿತ್ತು. ಇದೀಗ ಅವರು ದರ್ಶನ್ ಅಭಿನಯದ ‘ಗಂಡುಗಲಿ ಮದಕರಿ ನಾಯಕ’ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಸ್ಟಾರ್ ನಟನ ಐತಿಹಾಸಿಕ ಸಿನಿಮಾ ದುಬಾರಿ ಬಜೆಟ್‌ನಲ್ಲಿ ಸಿದ್ಧವಾಗಲಿದೆ. ಹಿರಿಯ ಚಿತ್ರನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ನಿರ್ದೇಶನದ ಸಾರಥ್ಯ ವಹಿಸಿದ್ದಾರೆ. ದೃಶ್ಯವೈಭವದ ಜೊತೆ ವೇಣು ಅವರ ಸತ್ವಯುತ ಸಂಭಾಷಣೆಯಿಂದಾಗಿ ನಾಯಕರ ಇತಿಹಾಸ ತೆರೆಮೇಲೆ ಸಮರ್ಪಕವಾಗಿ ಮೂಡಿಬರಲಿ ಎನ್ನುವುದು ದುರ್ಗದವರ ಆಶಯ.

ಕನ್ನಡದ ಚಿತ್ರರಂಗದ ಖ್ಯಾತ ನಿರ್ದೇಶಕ ಜೋಡಿ ದೊರೈ – ಭಗವಾನ್ ಅವರು ತರಾಸು ಅವರ ಹಲವು ಕೃತಿಗಳನ್ನು ತೆರೆಗೆ ಅಳವಡಿಸಿದ್ದಾರೆ. ತರಾಸು ರಚಿಸಿದ ಪಾತ್ರ, ಸನ್ನಿವೇಶ, ಪ್ರದೇಶಗಳಲ್ಲಿ ದುರ್ಗದ ಪ್ರಸ್ತಾಪವಾಗುತ್ತದೆ. ಸಿನಿಮಾಗಳಲ್ಲಿ ನಿರ್ದೇಶಕರು ಈ ಪ್ರಸ್ತಾವನೆಯನ್ನು ಹಾಗೆಯೇ ಉಳಿಸಿಕೊಂಡಿದ್ದು, ಸಾಧ್ಯವಾದಷ್ಟೂ ನೇಟಿವಿಟಿಗೆ ಬದ್ಧವಾಗಿ ಚಿತ್ರಿಸಿದ್ದಾರೆ. ಕೋಟೆಯಲ್ಲಿ ‘ಹಂಸಗೀತೆ’ ನಿರ್ದೇಶಿಸಿದ ಜಿ.ವಿ.ಅಯ್ಯರ್ ತೊಂಬತ್ತರ ದಶಕದ ಕೊನೆಗೆ ದುರ್ಗದಲ್ಲಿ ಮತ್ತೆ ಚಿತ್ರೀಕರಣ ನಡೆಸಿದ್ದರು. ಅವರ ನಿರ್ದೇಶನದ ಕನ್ನಡ – ಹಿಂದಿ ಕಿರುತೆರೆ ಸರಣಿ ‘ರಾಣಿ ಶಾಂತಲಾ’ ಕೋಟೆ ಹಾಗೂ ಚಂದ್ರವಳ್ಳಿಯಲ್ಲಿ ಚಿತ್ರೀಕರಣಗೊಂಡಿತ್ತು.

‘ಹಂಸಗೀತೆ’ ಚಿತ್ರದಲ್ಲಿ ಅನಂತನಾಗ್‌

ಕಳೆದೆರೆಡು ದಶಕಗಳಲ್ಲಿ ಹಲವಾರು ಚಿತ್ರಗಳ ಹಾಡುಗಳು ಹಾಗೂ ಬಿಡಿ ಸನ್ನಿವೇಶಗಳನ್ನು ಕೋಟೆ ಹಾಗೂ ದುರ್ಗದ ಇನ್ನಿತರೆ ಪ್ರವಾಸಿ ತಾಣಗಳಲ್ಲಿ ಚಿತ್ರಿಸಲಾಗಿದೆ. ಶ್ರೀಗಂಧ, ಹುಡುಗ್ರು, ಅದೃಷ್ಟ, ಬಂಟ, ದೊಡ್ಮನೆ ಹುಡ್ಗ, ಅಜಯ್, ರೋಜ್, ಜ್ಯೋತಿರಾಜ್, ಸೂಜಿದಾರ, ಪಡ್ಡೆಹುಲಿ… ಕೆಲವು ಪ್ರಮುಖ ಸಿನಿಮಾಗಳು. ಸಾಯಿಕುಮಾರ್ ನಟನೆಯ ‘ದುರ್ಗದ ಹುಲಿ’ ವಿಶಿಷ್ಟ ಕತೆಯಿಂದಾಗಿ ಗಮನ ಸೆಳೆಯಿತು. ದೊಡ್ಡ ಯಶಸ್ಸು ಕಂಡ ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರಿಸಿದ್ದು ತುಪ್ಪದ ಕೊಳದ ಮೇಲೆ. ಹೀರೋ ಯಶ್ ಈ ಚಿತ್ರದಲ್ಲಿ ನಟ ವಿಷ್ಣುವರ್ಧನ್ ಅಭಿಮಾನಿಯ ಪಾತ್ರದಲ್ಲಿದ್ದರು. ವಿಷ್ಣು ನಟಿಸಿದ್ದ ‘ರಾಮಾಚಾರಿ’ ಪಾತ್ರವನ್ನು ನೆನಪು ಮಾಡುವ ನಿರ್ದೇಶಕರ ಐಡಿಯಾ ಇಲ್ಲಿ ಕ್ಲಿಕ್ಕಾಯ್ತು. ನಿರ್ದೇಶಕ ಸೂರಿ ತಮ್ಮ ‘ಕೆಂಡಸಂಪಿಗೆ’ಯಲ್ಲಿ ದುರ್ಗವನ್ನು ಆಕರ್ಷಕವಾಗಿ ಸೆರೆಹಿಡಿದು ದುರ್ಗದ ಸಿನಿಪ್ರಿಯರ ಅಪಾರ ಮೆಚ್ಚುಗೆಗೆ ಪಾತ್ರರಾದರು.

‘ಕಲ್ಲರಳಿ ಹೂವಾಗಿ’ ಚಿತ್ರದಲ್ಲಿ ಉಮಾ, ವಿಜಯ ರಾಘವೇಂದ್ರ

ಇದೀಗ ಉತ್ಸಾಹಿ ಯುವಕರು ಆಲ್ಬಂ ಸಾಂಗ್‌ಗಳಲ್ಲಿ ದುರ್ಗದ ಸೌಂದರ್ಯವನ್ನು ಹಿಡಿಯಲು ಯತ್ನಿಸುತ್ತಿದ್ದಾರೆ. ವಿನಾಯಕ್ ನಿರ್ದೇಶನದ ‘ಕೆಎ 16’ ಈ ಪೈಕಿ ಒಂದು ಯಶಸ್ವೀ ಪ್ರಯತ್ನ. ಇತ್ತೀಚಿನ ವರ್ಷಗಳಲ್ಲಿ ದುರ್ಗವೆಂದರೆ ಸಿನಿಮಾ ಮಂದಿಗೂ ವಿಶೇಷ ಪ್ರೀತಿ. ಆಡಿಯೋ ರಿಲೀಸ್, ಸಿನಿಮಾ ಪ್ರೊಮೋಷನ್ ಇವೆಂಟ್ಗಳು ಆಗಿಂದಾಗ್ಗೆ ದುರ್ಗದಲ್ಲಿ ನಡೆಯುತ್ತಲೇ ಇರುತ್ತವೆ. “ಮಧ್ಯಕರ್ನಾಟಕ ದುರ್ಗಕ್ಕೂ, ಸಿನಿಮಾರಂಗಕ್ಕೂ ಬಹು ಹಿಂದಿನ ನಂಟು ಇದೆ. ಐವತ್ತರ ದಶಕದಲ್ಲೇ ಇಲ್ಲಿನವರು ಸಿನಿಮಾಗಳಿಗೆ ಹೂಡಿಕೆ ಮಾಡುತ್ತಾ ಬಂದಿದ್ದಾರೆ. ವ್ಯವಹಾರ – ಚಿತ್ರವಿತರಣೆಯಲ್ಲದೆ ಇಲ್ಲಿಂದ ದೊಡ್ಡ ಸಂಖ್ಯೆಯ ಕಲಾವಿದರು, ತಂತ್ರಜ್ಞರು ಚಿತ್ರರಂಗ ಪ್ರವೇಶಿಸಿದ್ದಾರೆ. ಮೇರು ಸಾಹಿತಿ  ತರಾಸು ಕೃತಿಗಳು ಬೆಳ್ಳಿತೆರೆಯಲ್ಲಿ ದುರ್ಗವನ್ನು ಬೆಳಗಿಸಿದವು. ಈ ಹಾದಿ ನಮಗೂ ಮೇಲ್ಪಂಕ್ತಿಯಾಯ್ತು” ಎನ್ನುತ್ತಾರೆ ಸಾಹಿತಿ ಬಿ.ಎಲ್.ವೇಣು. ಕನ್ನಡನಾಡಿನಲ್ಲಿ ಸಾಹಿತ್ಯ ಮತ್ತು ಸಿನಿಮಾಗೆ ಸೇತುವೆಯಾಗಿರುವ ಬೆರಳೆಣಿಕೆಯ ಬರಹಗಾರರಲ್ಲಿ ವೇಣು ಪ್ರಮುಖರು. ಕತೆ – ಕಾದಂಬರಿಯೊಂದು ಸಿನಿಮಾ ಆಗುವಾಗಿನ ಮಿತಿಗಳು ಅವರಿಗೆ ಗೊತ್ತು. “ಕಾದಂಬರಿ ಓದಿದಾಗ ಸಿಗುವ ತೃಪ್ತಿ, ಆ ಕತೆಯ ಸಿನಿಮಾವನ್ನು ನೋಡಿದಾಗ ಸಿಗದು ಎಂದೇ ಬಹುಪಾಲು ಜನರು ಅಭಿಪ್ರಾಯಪಡುತ್ತಾರೆ. ಸಿನಿಮಾ ಬೇರೆಯದ್ದೇ ಕ್ಯಾನ್ವಾಸ್ ಬೇಡುತ್ತದೆ. ಆಗ ಮಾರ್ಪಾಡು ಸಹಜ. ಕಾದಂಬರಿ ಆಧರಿಸಿ ಸಿನಿಮಾ ಮಾಡಬಹುದೇ ಹೊರತು ಕಾದಂಬರಿಯನ್ನೇ ಸಿನಿಮಾ ಮಾಡುವುದು ಕಷ್ಟ. ಅಂತಹ ಸಾಕಷ್ಟು ಮಿತಿಗಳ ಮಧ್ಯೆಯೂ ನಮ್ಮ ದುರ್ಗ ಪಾತ್ರವಾಗಬಲ್ಲ ಸಾಕಷ್ಟು ಕತೆಗಳು ನಮ್ಮ ಬರಹಗಾರರಲ್ಲಿವೆ” ಎನ್ನುತ್ತಾರೆ ಬಿ.ಎಲ್.ವೇಣು.

‘ನಾಗರವಹಾವು’ ಚಿತ್ರದಲ್ಲಿ ಒನಕೆ ಓಬವ್ವ ಪಾತ್ರದಲ್ಲಿ ಜಯಂತಿ

ಈ ಬರಹಗಳನ್ನೂ ಓದಿ