ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಯಾವ ಜನ್ಮದ ಮೈತ್ರಿ

ಪೋಸ್ಟ್ ಶೇರ್ ಮಾಡಿ
ಎನ್‌.ಎಸ್‌.
ಶ್ರೀಧರಮೂರ್ತಿ
ಲೇಖಕ

ನಮ್ಮಲ್ಲಿ ‘ಖಡ್ಗವಾಗಲಿ ಕಾವ್ಯ’ ಎಂಬ ಘೋಷಣೆ ಮೊಳಗುವ ಎಷ್ಟೋ ವರ್ಷಗಳ ಮೊದಲು ಬಂಡಾಯದ ಸಾಲು ಬರೆದವರು ಗೀತಪ್ರಿಯ – ಕನ್ನಡ ಚಿತ್ರರಂಗ ಕಂಡ ಸದಭಿರುಚಿಯ ನಿರ್ದೇಶಕ, ಚಿತ್ರಸಾಹಿತಿ ಗೀತಪ್ರಿಯ ಅವರನ್ನು ಸ್ಮರಿಸಿದ್ದಾರೆ ಲೇಖಕ ಎನ್‌.ಎಸ್‌.ಶ್ರೀಧರಮೂರ್ತಿ.

ಜೂನ್ 15 ನನ್ನ ಪಾಲಿಗೆ ವಿಶೇಷ ದಿನ. ಇವತ್ತು ಗೀತಪ್ರಿಯ ಅವರ ಜನ್ಮದಿನ. ಮಣ್ಣಿನ ಮಗ, ಹೊಂಬಿಸಿಲು, ಯಾವ ಜನ್ಮದ ಮೈತ್ರಿ, ಬೆಸುಗೆ, ನಾರಿ ಮುನಿದರೆ ಮಾರಿ ಹೀಗೆ ಸದಭಿರುಚಿಯ ಚಿತ್ರಗಳನ್ನು ನೀಡಿದವರು. ನಮ್ಮಲ್ಲಿ ‘ಖಡ್ಗವಾಗಲಿ ಕಾವ್ಯ’ ಎಂಬ ಘೋಷಣೆ ಮೊಳಗುವ ಎಷ್ಟೋ ವರ್ಷಗಳ ಮೊದಲು ‘ಒಬ್ಬನು ತನ್ನಯ ಸಲುವಾಗಿ ಹಲವರ ದೋಚಿ ನಗುವಂಥ  ಒಬ್ಬನಲ್ಲಿ ನಗುತಿರಲು ಕೋಟಿ ಮಂದಿ ಅಳುವ’ ಎನ್ನುವಂತಹ ಬಂಡಾಯದ ಸಾಲುಗಳನ್ನು ಬರೆದವರು. ಜೀವ ವೀಣೆ ನೀಡು ಮಿಡಿತದ, ವೀಣಾ ನಿನಗೇಕೋ ಈ ಕಂಪನದಂತಹ ಪೊಯಟಿಕ್ ಗೀತೆಗಳನ್ನು ಬರೆದಂತೆ.. ನನ್ನೂರಲ್ಲಿ ನಾನೊಬ್ನೇ ಜಾಣದಂತಹ ಕಾಮಿಕ್ ಎಲಿಮೆಂಟ್ ಕೂಡ ತಂದವರು. ಸುಂದರ ಹೂಗಳ ಜೊತೆಯಲ್ಲಿ ನೀ ಮುಳ್ಳುಗಳನ್ನು ಸೇರಿಸುವೆ ಎಂಬ ಅವರ ಸಾಲಂತೆ ಅವರ ಬದುಕು ಕೂಡ ಹೂವು ಮುಳ್ಳಿನ ಬೆಸುಗೆಯೇ.

ನಾನು ಖುದ್ದಾಗಿ ಹುಟ್ಟುಹಬ್ಬದ ಶುಭಾಶಯ ಹೇಳುವವರ ಪಟ್ಟಿ ಚಿಕ್ಕದು. ಗೀತಪ್ರಿಯ ಈ ಪಟ್ಟಿಯಲ್ಲಿ ಮೊದಲ ಹೆಸರು. ಜೂನ್ 15 ಬಂದರೆ ಮೊದಲು ಅವರಿಗೆ ಶುಭಾಶಯ ಹೇಳಿದ ನಂತರವೇ ದಿನ ಮುಂದುವರೆಯಬೇಕು. ಇದು ಹಲವು ವರ್ಷಗಳ ಕಾಲ ನಡೆದು ಬಂದಿತ್ತು. ಒಂದು ವರ್ಷ ಯಾವುದೋ ಒತ್ತಡದಲ್ಲಿ ಮರೆತಿದ್ದೆ. ನೆನಪಾದಾಗ ಗಂಟೆ ಬೆಳಗಿನ ಹನ್ನೊಂದು ದಾಟಿತ್ತು. ಕೂಡಲೇ ಗಡಬಿಡಿಸಿ ಪೋನ್ ಮಾಡಿದರೆ ರಿಸೀವ್ ಮಾಡಿದ ಅವರ ಹೆಂಡತಿ, ‘ಬೆಳಿಗ್ಗೆಯಿಂದ ತಿಂಡಿ ಕೂಡ ತಿನ್ನದೆ ನಿಮ್ಮ ವಿಶಸ್‌ಗೆ ಕಾಯುತ್ತಾ ಕುಳಿತಿದ್ದಾರೆ’ ಎಂದರು. ಆ ಕ್ಷಣ ನಿಜಕ್ಕೂ ಕುಗ್ಗಿ ಹೋದೆ, ಪಶ್ಚಾತ್ತಾಪದಿಂದ ನರಳಿದ್ದೆ.

ಅಲ್ಲಿಂದ ಮುಂದೆ ಪ್ರತಿವರ್ಷ ಜೂನ್ 15 ಅವರ ಮನೆಗೆ ಹೋಗಿ ಶುಭಾಶಯ ಕೋರುವ ಪದ್ಧತಿ ಹುಟ್ಟಿಕೊಂಡಿತು. 2015ರ ಜೂನ್ 15, ಹೀಗೆ ಮನೆಗೆ ಬರುತ್ತೇನೆ ಎಂದು ಪೋನ್ ಮಾಡಿದೆ. ಅವರ ಹೆಂಡತಿ ವಿಶ್ವಾಸದಿಂತ ‘ಊಟಕ್ಕೇ ಬನ್ನಿ’ ಎಂದರು. ಆ ವರ್ಷ ಅವರ ಮಹಾಲಕ್ಷ್ಮಿ ಲೇಔಟ್ ಮನೆ ರಿಪೇರಿಯಾಗುತ್ತಿದ್ದುದರಿಂದ ಕಂಠೀರವ ಸ್ಟುಡಿಯೋ ಬಳಿ ಅಪಾರ್ಟ್‍ಮೆಂಟ್ ಒಂದರಲ್ಲಿ ತಾತ್ಕಾಲಿಕವಾಗಿದ್ದರು. ಮನೆ ಗೊತ್ತಿಲ್ಲದಿದ್ದರೂ ಹುಡುಕಿಕೊಂಡು ಬರುತ್ತೇನೆ ಎಂದು ಬಿಟ್ಟೆ. ಆದರೆ ಕಂಠೀರವ ಸ್ಟುಡಿಯೋ ಸುತ್ತಲೂ ಎಷ್ಟು ಪ್ರದಕ್ಷಿಣೆ ಹಾಕಿದರೂ ಮನೆ ಸಿಕ್ಕುತ್ತಿಲ್ಲ. ಅವರು ಪೋನ್ ಮೇಲೆ ಪೋನ್ ಮಾಡುತ್ತಲೇ ಇದ್ದಾರೆ. ಯಾರನ್ನೂ ಕೇಳಿದರೂ ಮಾಹಿತಿ ಸಿಕ್ಕುತ್ತಿಲ್ಲ. ಆಗ ಜೀ ಟಿವಿಯ ಸೆಂಥಿಲ್ ಸಿಕ್ಕರು. ಅವರು ಅದೇ ಏರಿಯಾದವರು. ಅವರಿಗೆ ತಕ್ಷಣಕ್ಕೆ ಸಿಕ್ಕಲಿಲ್ಲ. ಆದರೆ ಗೀತಪ್ರಿಯ ಅವರ ಮಡದಿ ನೀಡಿದ ಸೂಚನೆಗಳನ್ನು ಪಾಲಿಸಿದ ನಂತರ ಅಂತೂ ಸಿಕ್ಕಿತು.

ಆಗ ಗಂಟೆ ಮೂರನ್ನು ತಲುಪಿತ್ತು. ಹೋಗಿ ನೋಡಿದರೆ ಗಂಡ ಹೆಂಡತಿ ಇಬ್ಬರೂ ಊಟ ಮಾಡದೆ ನನಗಾಗಿ ಕಾಯುತ್ತಾ ಕುಳಿತಿದ್ದಾರೆ. ಮತ್ತೊಮ್ಮೆ ಮನಸ್ಸು ಕುಗ್ಗಿತು. ಒಟ್ಟಿಗೆ ಊಟ. ಆಗ ಅವರ ಮಾತು ಅಸ್ಪಷ್ಟವಾಗಿದ್ದರೂ ನೆನಪುಗಳು ನಿಖರವಾಗಿದ್ದವು. ಹಲವು ಸಮಯ ಜೊತೆಗೆ ಕಳೆದು ಹಿಂದಿರುಗಿದಾಗ ಮನ ಹಿಗ್ಗಿತ್ತು. ದುರಾದೃಷ್ಟ ಗೀತಪ್ರಿಯ ಅವರ ಪಾಲಿಗೆ ಅದೇ ಕೊನೆಯ ಹುಟ್ಟು ಹಬ್ಬವಾಯಿತು. ಮುಂದಿನ ವರ್ಷ ಶುಭ ಕೋರಲು ಅವರೇ ಇರಲಿಲ್ಲ. ಮತ್ತೊಮ್ಮೆ ಜೂನ್ 15 ಬಂದಿದೆ. ಗೀತಪ್ರಿಯ ಅವರಿಲ್ಲ. ಮೊಗದಷ್ಟು ಮುಗಿಯದ ನೆನಪುಗಳನ್ನು ನನ್ನ ಪಾಲಿಗೆ ಬಿಟ್ಟು ಹೋಗಿದ್ದಾರೆ.

ಸಿನಿಮಾವೊಂದರ ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ನಟಿ ಜಯಂತಿ ಅವರೊಂದಿಗೆ ಗೀತಪ್ರಿಯ (ಫೋಟೊ: ಭವಾನಿ ಲಕ್ಷ್ಮೀನಾರಾಯಣ)

ಈ ಬರಹಗಳನ್ನೂ ಓದಿ