ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಆನಂದ್ – 35!

ಪೋಸ್ಟ್ ಶೇರ್ ಮಾಡಿ
ಮಲ್ಲಿಕಾರ್ಜುನ ಮೇಟಿ
ಸಿನಿಮಾ ಬರಹಗಾರ

ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶನದ ‘ಆನಂದ್‌’ ತೆರೆಕಂಡು ಇಂದಿಗೆ (ಜೂನ್‌ 19) ಮೂವತ್ತೈದು ವರ್ಷ! ಶಿವರಾಜಕುಮಾರ್ – ಸುಧಾರಾಣಿ ಅವರ ಲವಲವಿಕೆಯ ನಟನೆ, ಇಂಪಾದ ಸಂಗೀತ, ತಾಜಾತನ ಮತ್ತು ಅಚ್ಚುಕಟ್ಟಾದ ನಿರೂಪಣೆಯಿಂದ ಗೆದ್ದ ಸಿನಿಮಾ.

ಚಿತ್ರ ಕಾಲೇಜು ಯುವಕರ ನಡುವಣ ಸ್ಪರ್ಧೆ, ದ್ವೇಷ, ಪ್ರೇಮ ಇವುಗಳಿಂದ ಆರಂಭವಾಗುತ್ತದೆ. ಕಾಲೇಜಿನ ಒಂದು ತಂಡಕ್ಕೆ ಆನಂದ್ ನಾಯಕ, ಇನ್ನೊಂದು ತಂಡಕ್ಕೆ ಶ್ರೀಕಾಂತ್. ಆಟಪಾಠಗಳಲ್ಲಿ ಆನಂದ್ ಮುಂದೆ. ಸಹಜವಾಗಿಯೇ ಶ್ರೀಕಾತ್ ಮತ್ತು ಅವನ ತಂಡಕ್ಕೆ ಆನಂದ್ ಮತ್ತು ಅವನ ತಂಡದವರ ಮೇಲೆ ಅಸೂಯೆ, ದ್ವೇಷ. ಈ ನಾಯಕರಿಬ್ಬರೂ ಒಬ್ಬಳೇ ಹುಡುಗಿಯನ್ನು ಪ್ರೇಮಿಸಿದಾಗ, ಈ ದ್ವೇಷ ಉತ್ಕಟವಾಗುತ್ತದೆ. ನಾಯಕಿಯೂ ಆನಂದ್‌ನತ್ತ ಆಕರ್ಷಿತಳಾದಾಗ, ದ್ವೇಷ ಮಿತಿ ಮೀರುತ್ತದೆ. ಸೇಡಿಗೆ ತಿರುಗುತ್ತದೆ.

ಆನಂದ್ ಒಬ್ಬ ನರ್ಸ್ ಮಗ. ಅದೇ ಊರಿನ ಆಗರ್ಭ ಶ್ರೀಮಂತ ರಾಜಾ ಚಂದ್ರಶೇಖರಯ್ಯ. ತನ್ನ ಯೌವ್ವನದಲ್ಲಿ ಪ್ರೇಮಿಸಿ ವಂಚಿಸಿದ ಹೆಣ್ಣೇ ಈ ನರ್ಸ್. ತನ್ನ ತಂದೆ ಯಾರೆಂದು ತಿಳಿದ ಮೇಲೆ ಆನಂದ್‌ನ ಒಳತೋಟಿ ಹೆಚ್ಚುತ್ತದೆ. ತನ್ನನ್ನು ದ್ವೇಷಿಸುವ ಚಂದ್ರಶೇಖರಯ್ಯನೇ ಇವನು ತನ್ನ ಮಗ ಎಂದು ಒಪ್ಪಿಕೊಳ್ಳುವಂತೆ ಮಾಡುತ್ತೇನೆ ಎಂದು ಆನಂದ್ ಪಣ ತೊಡುತ್ತಾನೆ. ಸಾಧಿಸಿ ಗೆಲ್ಲುತ್ತಾನೆ.

‘ಆನಂದ್’ ಚಿತ್ರದ ‘ನೀಲ ಮೇಘ’ ಹಾಡಿನ ಚಿತ್ರೀಕರಣದೊಂದಿಗೆ ಶೂಟಿಂಗ್ ಪೂರ್ಣಗೊಂಡ ಸಂದರ್ಭದ ಫೋಟೊ

ಕಥೆಯಲ್ಲಿ ಹೊಸತನವಿಲ್ಲದಿದ್ದರೂ, ನಿರ್ದೇಶಕ ಸಿಂಗೀತಂ ಶ್ರೀನಿವಾಸರವರು ಅಚ್ಚುಕಟ್ಟಾಗಿ, ಎಲ್ಲೂ ಬೋರ್ ಹೊಡೆಸದಂತೆ ನಿರೂಪಿಸಿದ್ದಾರೆ. ಚಿತ್ರದಲ್ಲಿ ಲವಲವಿಕೆ ಎದ್ದು ಕಾಣುತ್ತದೆ. ಸಂಕಲನಕಾರ ಭಕ್ತವತ್ಸಲಂರವರು ನಿರ್ದೇಶಕರಿಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಚಿತ್ರದ ಮೊದಲರ್ಧವಂತೂ ಯುವಕರ ಪುಟಿಯುವ ಉತ್ಸಾಹದಿಂದ ತುಂಬಿ ಹೋಗಿದೆ. ಶಿವರಾಜಕುಮಾರ್ ‘ಆನಂದ್’ ಆಗಿ ಚಿತ್ರದುದ್ದಕ್ಕೂ ಗಮನ ಸೆಳೆಯುತ್ತಾರೆ. ಆಧುನಿಕ ನೃತ್ಯದ ದೃಶ್ಯಗಳಲ್ಲಿ, ಹೊಡೆದಾಟದ ಸನ್ನಿವೇಶಗಳಲ್ಲಿ, ಪೊಲೀಸರು ಬೆನ್ನಟ್ಟಿದಾಗ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಸೊಗಸಾಗಿ, ಚುರುಕಾಗಿ ನಟಿಸಿದ್ದಾರೆ. ಹಾಗೆಯೇ ಮಾನಸಿಕ ತುಮುಲ ಅಭಿವ್ಯಕ್ತಪಡಿಸುವಲ್ಲಿಯೂ ಅಷ್ಟೇ ಸಮರ್ಥವಾಗಿ ಅಭಿನಯಿಸಿದ್ದಾರೆ. ಸಂಭಾಷಣೆ ಉಚ್ಛಾರಣೆಯಲ್ಲಿ ಕೊಂಚ ಸುಧಾರಿಸಬೇಕು ಎಂದು ಪ್ರೇಕ್ಷಕರು ಮಾತನಾಡಿಕೊಂಡರೂ, ಮೊದಲ ಚಿತ್ರವೆಂದು ವಿನಾಯಿತಿ ನೀಡಿದ್ದರು!

ಅಬ್ಬರ, ಕೂಗಾಟಗಳಿಲ್ಲದ ಸಂಯಮದ ಖಳನಾಯಕನ ಪಾತ್ರವನ್ನು ಗುರುದತ್ ಚೆನ್ನಾಗಿಯೇ ನಿಭಾಯಿಸಿದ್ದಾರೆ. ತಂಗಿಯಾಗಿ ನಯನ ಗಮನ ಸೆಳೆಯುತ್ತಾರೆ. ನಾಯಕಿಯಾಗಿ ಸುಧಾರಾಣಿ ಅಭಿನಯ ಆಕರ್ಷಕ. ಭಾವನೆಗಳು ಮುಖದಲ್ಲಿ ಸಹಜವಾಗಿ ಅರಳುತ್ತದೆ. ಪುಟ್ಟ ಪೋರಿ ಈ ಸುಧಾರಾಣಿ ಮುದುಕಿ ಗೆಟಪ್‌ನಲ್ಲಿಯೂ ಚೆನ್ನಾಗಿ ಅಭಿನಯಿಸಿದ್ದರು. ಚಿಕ್ಕ ಪಾತ್ರವನ್ನು ತಾರಾ ಚೊಕ್ಕವಾಗಿ ನಿರ್ವಹಿಸಿದ್ದಾರೆ. ಚಿತ್ರದ ಸ್ತುತ್ಯಾರ್ಹ ಅಂಶಗಳು ಗೌರಿಶಂಕರ್ ಅವರ ಛಾಯಾಗ್ರಹಣ, ಶಂಕರ್ – ಗಣೇಶ ಅವರ ಸಂಗೀತ. ಚಿತ್ರದಲ್ಲಿ ಲೋಪದೋಷವಿಲ್ಲವೆಂದಲ್ಲ. ಆದರೆ ಅವು ತೀರಾ ಗೌಣ. ಯಾಕೆಂದರೆ ಯುವ ತಂಡದ ಮೊದಲ ಚಿತ್ರವಲ್ಲವೇ? ಹಿರಿಯರ ಪಾತ್ರವನ್ನು ರಾಜೇಶ್, ಜಯಂತಿ, ಚಿ. ಉದಯಶಂಕರ್, ಶುಭಾ, ಗೋ.ರಾ. ಭೀಮರಾವ್ ಅಚ್ವುಕಟ್ಟಾಗಿ ನಿರ್ವಹಿಸಿದ್ದಾರೆ. ಅಸಭ್ಯವೆನಿಸುವ ದೃಶ್ಯಗಳು, ಅಶ್ಲೀಲ ಸಂಭಾಷಣೆಗಳು, ಹಿಂಸೆಯನ್ನೇ ವೈಭವೀಕರಿಸುವ ಚಿತ್ರಗಳೇ ಬರುತ್ತಿದ್ದ ಕಾಲದಲ್ಲಿ ಇಂತಹ ಪರಿಶುದ್ಧ ಚಿತ್ರ ಬಂದಿದ್ದು ಸ್ವಾಗತಾರ್ಹವಾಗಿತ್ತು. ಮನೆಮಂದಿಯೆಲ್ಲಾ ಒಟ್ಟಾಗಿ ಕುಳಿತು ನೋಡುವಂತಹ ಚಿತ್ರವಾಗಿ ‘ಆನಂದ್‌’ ದೊಡ್ಡ ಗೆಲುವು ದಾಖಲಿಸಿತು. ಆಗ ‘ಟುವ್ವಿ ಟುವ್ವಿ’ ಹಾಡಿನ ಹುಡುಗನಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದ ಶಿವರಾಜಕುಮಾರ್ ಇಂದಿಗೂ ಬೇಡಿಕೆಯ ನಾಯಕನಟ. ಸುಧಾರಾಣಿ ಕೂಡ ಅಪರೂಪದ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ‘ಆನಂದ್‌’ ಸಿನಿಮಾದಲ್ಲಿನ ತಾಜಾತನ, ಹುರುಪು ಇಬ್ಬರಲ್ಲೂ ಕಾಣಿಸುತ್ತದೆ!

ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯ್ತು. ಬೆಂಗಳೂರು ಮೆಜಸ್ಟಿಕ್‌ನ ‘ಮೇನಕಾ’ ಚಿತ್ರಮಂದಿರದಲ್ಲಿ 27 ವಾರ, ಅಲ್ಲಿಂದ ‘ಕೆಂಪೇಗೌಡ’ ಥಿಯೇಟರ್‌ನಲ್ಲಿ ಮುಂದುವರೆದು ಒಟ್ಟು 38 ವಾರ ಪ್ರದರ್ಶನ ಕಂಡಿತು. ರಾಜ್ಯದ ಹನ್ನೊಂದು ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿಕೊಂಡಿತು. ಅತ್ಯುತ್ತಮ ಪೋಷಕ ನಟಿ (ಜಯಂತಿ) ಮತ್ತ ಉತ್ತಮ ಚಿತ್ರಕಥೆಗೆ ‘ಆನಂದ್‌’ಗೆ ರಾಜ್ಯಪ್ರಶಸ್ತಿ ಸಂದಿವೆ.
(ಪೂರಕ ಮಾಹಿತಿ ಕೃಪೆ: ಮೋಹನ್ ಬಾಬು ಬಿ.ಕೆ.)

(‘ಆನಂದ್‌’ ಚಿತ್ರ ಯೂಟ್ಯೂಬ್‌ನಲ್ಲಿದೆ, ಆಸಕ್ತರು ವೀಕ್ಷಿಸಿ)

ಈ ಬರಹಗಳನ್ನೂ ಓದಿ