ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

‘ಉಮಂಡು ಘಮಂಡು…’ ಮತ್ತು ಎಸ್‌ಪಿಬಿ

ಪೋಸ್ಟ್ ಶೇರ್ ಮಾಡಿ

ಭಾರತೀಯ ಸಿನಿಮಾ ಕಂಡ ಹೆಮ್ಮೆಯ ಗಾಯಕ ಎಸ್‌ಪಿಬಿ ಅಗಲಿ ಇಂದಿಗೆ (ಸೆಪ್ಟೆಂಬರ್‌ 25) ಒಂದು ವರ್ಷ. ಇಂದು ಅವರ ಕುರಿತ ‘ಸ್ವರ ಸಾಮ್ರಾಟ ಎಸ್‌.ಪಿ.ಬಾಲಸುಬ್ರಹ್ಮಣ್ಯಂ’ ಕೃತಿ ಲೋಕಾರ್ಪಣೆಗೊಳ್ಳುತ್ತಿದೆ. ಹಿರಿಯ ಪತ್ರಕರ್ತ ವಿ.ಹನುಮಂತಪ್ಪ ಪುಸ್ತಕ ರಚಿಸಿದ್ದಾರೆ. ಈ ಕೃತಿಯಲ್ಲಿನ ಒಂದು ಆಯ್ದ ಟಿಪ್ಪಣಿ ಇಲ್ಲಿದೆ.

ತೆಲುಗು ಸೇರಿದಂತೆ ಹಿಂದಿ, ತಮಿಳು ಭಾಷೆಗಳಲ್ಲಿನ ಸಿನಿಮಾ ಹಾಡುಗಳಿಗೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದ ಎಸ್ಪಿಬಿಯವರಿಗೆ ಆ ಎಲ್ಲಾ ಭಾಷೆಗಳಿಗಿಂತ ಹೆಚ್ಚು ಸಂಖ್ಯೆಯ ಹಾಡುಗಳನ್ನು ಹಾಡಿರುವ ಕನ್ನಡ ಭಾಷೆಯ ಹಾಡಿಗಾಗಿ ರಾಷ್ಟ್ರಪ್ರಶಸ್ತಿ ದೊರಕದಿರುವ ಬಗ್ಗೆ ಕೊರಗು ಕಾಡುತ್ತಿದ್ದ ಸಂಬಂಧ ಅವರು ಕನ್ನಡ ಸಂಗೀತ ನಿರ್ದೇಶಕರೊಂದಿಗೆ ಪ್ರಸ್ತಾಪಿಸಿದ್ದರಂತೆ. ರಂಗಭೂಮಿ ಹಿನ್ನೆಲೆಯ ಪ್ರಸಿದ್ಧ ಚಿಂದೋಡಿ ಮನೆತನದವರು ಖ್ಯಾತ ರಂಗನಟಿ, ನಿರ್ದೇಶಕಿ ಚಿಂದೋಡಿ ಲೀಲಾ ಅವರ ಸಾರಥ್ಯದಲ್ಲಿ `ಗಾನಯೋಗಿ ಪಂಚಾಕ್ಷರಿ ಗವಾಯಿ’ ಹೆಸರಿನ ಸಿನಿಮಾ ನಿರ್ಮಾಣಕ್ಕೆ ಮುಂದಾದರು. ಅನುಭವಿ ರಂಗತಜ್ಞರಾದ ಚಿಂದೋಡಿ ಬಂಗಾರೇಶ್‌ರದೇ ಆ ಸಿನಿಮಾಕ್ಕೆ ನಿರ್ದೇಶನವಿತ್ತು. ಸಂಗೀತ ನಿರ್ದೇಶನದ ಹೊಣೆಯನ್ನು ಹಂಸಲೇಖರಿಗೆ ವಹಿಸಲಾಗಿತ್ತು.

ಆ ಸಿನಿಮಾದ ಹಲವಾರು ಹಾಡುಗಳಿಗೆ ಧ್ವನಿ ನೀಡಿರುವ ಎಸ್‌ಪಿಬಿಯವರಿಗೆ ಒಂದು ಶಾಸ್ತ್ರೀಯ ಸಂಗೀತ ಹಿನ್ನೆಲೆಯ ಹಾಡಿಗೆ ಕಂಠದಾನ ಮಾಡಬೇಕೆಂಬ ಹೆಬ್ಬಯಕೆಯನ್ನು ನಿರ್ದೇಶಕ ಬಂಗಾರೇಶ್ ವ್ಯಕ್ತಪಡಿಸಿದರು. ಅದು ಸ್ವತಃ ಪಂಚಾಕ್ಷರಿ ಗವಾಯಿಗಳವರೇ ತಮ್ಮ ಜೀವಿತ ಕಾಲದ ಕೊನೆಯಲ್ಲಿ ಹಾಡಿದ ಹಿಂದೂಸ್ತಾನಿ ಶಾಸ್ತ್ರೀಯ ರಾಗದ ಹಿನ್ನೆಲೆಯಿಂದ ಕೂಡಿದ್ದಂತಹ “ಉಮಂಡು ಘಮಂಡು” ಪಲ್ಲವಿಯ ಹಾಡನ್ನು ಸಿನಿಮಾಕ್ಕೆ ಅಳವಡಿಸಲಾಗಿತ್ತು. ಮೊದಲಿಗೆ ಈ ಬಗ್ಗೆ ಎಸ್‌ಪಿಬಿಯವರಲ್ಲಿ ಪ್ರಸ್ತಾಪಿಸಿದಾಗ ಶಾಸ್ತ್ರೀಯ ಸಂಗೀತದ ತಾಲೀಮು ಇಲ್ಲದ ತಮಗೆ ಇದು ಕಷ್ಟ ಎಂಬ ಅಪಸ್ವರದ ಅನಿಸಿಕೆ ವ್ಯಕ್ತವಾಗಿತ್ತು. ಆದರೆ ಬಂಗಾರೇಶ್‌ಗೆ ಬಾಲು ಅವರೇ ಹಾಡಬೇಕೆಂಬ ಅಭಿಮಾನದ ನಿರ್ಧಾರವಿತ್ತು. ಒಂದು ಕಡೆ ಎಸ್‌ಪಿಬಿಯವರು, ಮತ್ತೊಂದೆಡೆ ಹಂಸಲೇಖ ಅವರು ಕೂಡ ತುಂಬಾ ಬ್ಯುಸಿ ಇದ್ದ ಕಾಲಾವಧಿ ಅದಾಗಿತ್ತು. ಈ ಹಂತದಲ್ಲಿ ಕೆಲವು ತಿಂಗಳುಗಳೇ ಉರುಳಿದವು. ಈ ಹಂತದಲ್ಲಿ ಇಬ್ಬರೂ ಹೆಚ್ಚು ಪ್ರಯತ್ನವನ್ನು ಮುಂದುವರೆಸಿ ಬಾಲು ಅವರನ್ನು ಒಪ್ಪಿಸಲು ಯಶಸ್ವಿಯಾದ್ದರಿಂದ ಕೊನೆಗೆ ಬಾಲು ಅವರ ಅಂಗೀಕಾರ ದೊರೆಯಿತು.

‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಚಿತ್ರದ ನಿರ್ದೇಶಕ ಚಿಂದೋಡಿ ಬಂಗಾರೇಶ್‌, ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ, ಸಂಗೀತ ಸಂಯೋಜಕ ಹಂಸಲೇಖ

ಬೆಂಗಳೂರಿನ ಸಂಕೇತ್ ಸ್ಟುಡಿಯೋದಲ್ಲಿ ರಿರೇಕಾರ್ಡಿಂಗ್‌ಗೆ ಮುಹೂರ್ತ ಕೂಡಿಬಂತು. ಬಾಲು ಅವರು ತಮ್ಮ ಇಷ್ಟದ ದೇವರನ್ನು ಸ್ಮರಿಸಿಕೊಂಡು ಹಾಡಿನ ತಾಲೀಮಿಗೆ ಶ್ರೀಕಾರ ಹಾಡಿದಾಗ ಬೆಳಗಿನ 11.30 ಗಂಟೆ. ಸಂಜೆ 4.30ರ ಹೊತ್ತಿಗೆ ಕಂಠದಾನದ ಸೆಳೆತದಿಂದ ಮುಕ್ತರಾಗಿ ಅವರು ಹೊರಬಂದರು. ಅದನ್ನು ಆಲಿಸಿದ ಹಂಸಲೇಖ, ಬಂಗಾರೇಶ್‌ರಿಗೆ ಅತ್ಯಂತ ಖುಷಿ ಆಗಿತ್ತು. ಅದು ಪ್ರಶಸ್ತಿ ಪಡೆಯುವ ಎಲ್ಲಾ ಸಾಧ್ಯತೆಗಳ ಬಗ್ಗೆ ಅವರು ಅಂದೇ ಆಲೋಚಿಸಿದ್ದರು. ಆನಂತರ ಈ ಹಾಡನ್ನು ಕೇಳಿದ ಪ್ರಸಿದ್ಧ ಗಾಯಕ ಪಿ.ಬಿ.ಶ್ರೀನಿವಾಸ್ ಕೂಡ ಬಾಲು ಅವರ ಪ್ರತಿಭೆಗೆ ಜೋಹಾರ್ ಹೇಳಿದ್ದರು. ಅದು ಅವರಿಗಷ್ಟೇ ಸಾಧ್ಯವಾಗಿರುವ ಮಹತ್ವದ ಪ್ರಯತ್ನ ಎಂಬ ಉದ್ಗಾರವನ್ನು ವ್ಯಕ್ತಪಡಿಸಿದ್ದರು. ಸಿನಿಮಾ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರ ನಿರೀಕ್ಷೆ ಸುಳ್ಳಾಗಲಿಲ್ಲ. ಸಿನಿಮಾ ಕೂಡ ಜನಪ್ರಿಯವಾಗಿ ಪ್ರೇಕ್ಷಕರು ಮತ್ತು ಗಣ್ಯರ ಮುಕ್ತ ಪ್ರಶಂಸೆಯನ್ನು ಪಡೆಯಿತು. ವರನಟ ಡಾ. ರಾಜಕುಮಾರ್ ಕೂಡ ಈ ಸಿನಿಮಾದ ಬಗ್ಗೆ ತಮ್ಮ ಮೆಚ್ಚುಗೆಯ ಮಾತುಗಳನ್ನು ಬಹಿರಂಗವಾಗಿ ಹಂಚಿಕೊಂಡರು.

`ಪಂಚಾಕ್ಷರಿ ಗವಾಯಿ’ ಸಿನಿಮಾದಲ್ಲಿನ ‘ಉಮಂಡು ಘಮಂಡು…’ ಹಾಡಿಗೆ ಎಸ್ಪಿ ಬಾಲಸುಬ್ರಹ್ಮಣ್ಯಂರವರು (1995ರಲ್ಲಿ) ರಾಷ್ಟ್ರಪ್ರಶಸ್ತಿಯನ್ನು ಪಡೆಯಲು ಸಾಧ್ಯವಾಯಿತು. ಆ ಪ್ರಶಸ್ತಿಯನ್ನು ಸ್ವೀಕರಿಸಲು ಬಾಲು ಅವರೊಂದಿಗೆ ಹಂಸಲೇಖರವರು ಕೂಡ ಜೊತೆಗೂಡಿ ದೆಹಲಿಗೆ ಹೋಗಿದ್ದರು. ಈ ಪ್ರಶಸ್ತಿಯನ್ನು ಸ್ವೀಕರಿಸುವ ಸಂದರ್ಭಕ್ಕೆ ಬಾಲು ಅವರ ತಮ್ಮ ಮೆಚ್ಚಿನ ಗಾಯಕ ಮಹಮ್ಮದ್ ರಫಿಯವರ ಪೋಷಾಕಿನಂತೆಯೇ ಉಡುಪನ್ನು ಧರಿಸಿಕೊಂಡು ಹೋಗಿದ್ದುದು ಕೂಡ ಗಮನಾರ್ಹ ಸಂಗತಿಯಾಗಿದೆ. ಎಸ್ಪಿಬಿಯವರಿಗೆ ಕನ್ನಡದ ಹಾಡೊಂದು ರಾಷ್ಟ್ರಪ್ರಶಸ್ತಿಯನ್ನು ತಂದುಕೊಟ್ಟ ಹೆಗ್ಗಳಿಕೆಗೆ ದಾವಣಗೆರೆಯವರ ಸಾರಥ್ಯದ ಸಿನಿಮಾವೇ ಕಾರಣವಾದುದು ದಾವಣಗೆರೆಯವರೆಲ್ಲಾ ಹೆಮ್ಮೆ ಪಡುವಂತಹ ಸಂಗತಿಯಾಗಿ ದಾಖಲಾಗುವಂತಾಯಿತು. ಇದು ತಮ್ಮ ಕಲಾ ಬದುಕಿನ ಅತ್ಯಂತ ಮಹತ್ವದ ಸಂದರ್ಭ ಎಂಬುದಾಗಿ ನಟ, ನಿರ್ದೇಶಕ ಚಿಂದೋಡಿ ಬಂಗಾರೇಶ್ ಅಭಿಮಾನದಿಂದ ನೆನಪಿಸಿಕೊಳ್ಳುತ್ತಾರೆ.

ಈ ಬರಹಗಳನ್ನೂ ಓದಿ