ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ವಿಶಿಷ್ಟ ದಾಖಲೆಗಳ ‘ಅನುರಾಗ ಅರಳಿತು’ ಚಿತ್ರಕ್ಕೆ 35 ವರ್ಷ

ಪೋಸ್ಟ್ ಶೇರ್ ಮಾಡಿ

(ಬರಹ: ಮೋಹನ್‌ ಬಾಬು ಬಿ.ಕೆ.)

ಭಾರ್ಗವಿ ಆರ್ಟ್ಸ್‌ ಬ್ಯಾನರ್‌ನಡಿ ಎಂ.ಎಸ್. ಪುಟ್ಟಸ್ವಾಮಿ (ಶಿವರಾಜ್ ಕುಮಾರ್) ನಿರ್ಮಾಣದಲ್ಲಿ 1986ರ ಮೇ 21ರಂದು ‘ಅನುರಾಗ ಅರಳಿತು’ ಸಿನಿಮಾ ತೆರೆಕಂಡಿತ್ತು. ಈ ಹೊತ್ತಿಗೆ ಚಿತ್ರ ತೆರೆಕಂಡು ಮೂವತ್ತೈದು ವರ್ಷ. ಲೇಖಕಿ ಎಚ್.ಜಿ.ರಾಧಾದೇವಿ ಅವರ ‘ಅನುರಾಗದ ಅಂತಃಪುರ’ ಕಾದಂಬರಿ ಆಧರಿಸಿದ ಚಿತ್ರದ ನಿರ್ದೇಶಕರು ಎಂ.ಎಸ್‌.ರಾಜಶೇಖರ್‌. ಕರ್ನಾಟಕದಲ್ಲಿ 1986ರಲ್ಲಿ ಬಿಡುಗಡೆಯಾದ ಈ ಚಿತ್ರ ಅದ್ಭುತ ಯಶಸ್ಸು ಕಂಡಿತ್ತು. ಬೆಂಗಳೂರು ಮೆಜಸ್ಟಿಕ್‌ನ ಅಪರ್ಣಾ ಥಿಯೇಟರ್‌ನಲ್ಲಿ 25 ವಾರಗಳು ದಾಟಿದ ಯಶಸ್ವೀ ಪ್ರದರ್ಶನ ಕಂಡಿದ್ದ ಸಿನಿಮಾ  ರಾಜ್ಯದಾದ್ಯಂತ ಮುಖ್ಯ ಜಿಲ್ಲಾ ಕೇಂದ್ರಗಳಲ್ಲಿ 50, 100 ದಿನಗಳ ಜನಜಂಗುಳಿಯ ಪ್ರದರ್ಶನ ಕಂಡಿತ್ತು. ಭದ್ರಾವತಿಯಲ್ಲಿ 52 ವಾರಗಳ ಪ್ರದರ್ಶನ ಕಂಡ ಏಕೈಕ ಚಿತ್ರವಿದು. ಇನ್ನು ಬಿ ಮತ್ತು ಸಿ ಕೇಂದ್ರಗಳಲ್ಲಿ ಕನಿಷ್ಠ ನಾಲ್ಕು ವಾರಗಳಿಗಿಂತ ಕಡಿಮೆ ಯಾವ ಚಿತ್ರಮಂದಿರದಲ್ಲೂ ತೆಗೆಯಲಿಲ್ಲ.

ಚಿತ್ರದಲ್ಲಿ ರಾಜಕುಮಾರ್‌ ಅಭಿನಯದ ಜೊತೆಗೆ ಗುರುತಿಸಬೇಕಾದುದು ಮಾಧವಿಯವರ ಅಭಿನಯ. ಮಾಧವಿಯವರ ಸಿನಿಜೀವನದ ಅತ್ಯುತ್ತಮ ಪಾತ್ರಗಳಲ್ಲಿ ಇದೂ ಒಂದು ಎಂದು ನಿಸ್ಸಂಶಯವಾಗಿ ಹೇಳಬಹುದು. ಚಾಲೆಂಜಿಂಗ್ ಪಾತ್ರವನ್ನು ಅಷ್ಟು ಲೀಲಾಜಾಲವಾಗಿ ಅಭಿನಯಿಸುವುದು ಎಂದರೆ ಸುಲಭದ ಮಾತಂತೂ ಅಲ್ಲ. ತಾಯಿ – ಮಗನ (ಫಂಡರೀಬಾಯಿ – ರಾಜಕುಮಾರ್‌) ಭಾವನಾತ್ಮಕ ಸನ್ನಿವೇಶಗಳು ಪ್ರಭಾವಶಾಲಿಯಾಗಿವೆ. ಇನ್ನುಳಿದಂತೆ ಗೀತಾ, ಅಶ್ವಥ್, ಸದಾಶಿವ ಬ್ರಹ್ಮಾವರ, ಹೊನ್ನವಳ್ಳಿ ಕೃಷ್ಣ, ತೂಗುದೀಪ ಶ್ರೀನಿವಾಸ್, ಪಂಡರಿಬಾಯಿ ಹೀಗೆ ಪ್ರತಿಯೊಬ್ಬರೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಈ ಚಿತ್ರದ ಮುಂದಿನ ದಾಖಲೆಗಳೂ ಅಚ್ಚರಿ ತರುತ್ತವೆ.

ಈ ಚಿತ್ರ ತಮಿಳು ಭಾಷೆಗೆ ರಜನಿಕಾಂತ್ ಅಭಿನಯದಲ್ಲಿ ‘ಮನ್ನನ್ (1992), ತೆಲುಗಿನಲ್ಲಿ ಚಿರಂಜೀವಿ ಅಭಿನಯದಲ್ಲಿ ‘ಘರಾನಾ ಮೊಗುಡು’ (1992), ಹಿಂದಿಯಲ್ಲಿ (ಲಾಡ್ಲಾ – 1994, ಅನಿಲ್‌ ಕಪೂರ್‌, ಬೆಂಗಾಲಿಯಲ್ಲಿ ‘ಜಮಾಯ್ ಬಾಬು ಜಿಂದಾಬಾದ್’ (2001), ಒರಿಯಾದಲ್ಲಿ ‘ಸಿಂಧೂರ ನುಹೆನ್ ಖೇಲಾ ಘರ್’ (2002), ಬಾಂಗ್ಲಾಗೆ ‘ಶಮಿ ಸ್ಟ್ರಿರ್ ಜುಧೋ’ (2002) ಆಯ್ತು. ಬಾಂಗ್ಲಾಗೆ ರೀಮೇಕ್‌ ಆದ ಕನ್ನಡದ ಮೊದಲ ಸಿನಿಮಾ ಕೂಡ ಹೌದು. ಈ ಚಿತ್ರದೊಂದಿಗೆ ಒಬ್ಬ ನಟನ (ಡಾ.ರಾಜಕುಮಾರ್‌) 50 ಚಿತ್ರಗಳು ಇತರೆ ಭಾಷೆಗಳಿಗೆ ರೀಮೇಕ್‌ ಆದ ದಾಖಲೆಯೂ ಸೃಷ್ಟಿಯಾಯ್ತು. ಇದು ಭಾರತೀಯ ಚಿತ್ರರಂಗದ ಸಂದರ್ಭದಲ್ಲೇ ಮೊದಲ ದಾಖಲೆ ಎನ್ನುವುದು ವಿಶೇಷ. 1986ರಲ್ಲಿ ಬಂದ ಚಿತ್ರ 2002 ರವರೆಗೂ ರೀಮೇಕ್ ಆಗಿದ್ದು ಸೋಜಿಗ.

ಅಧ್ಭುತ ದಾಖಲೆಗಳ ಈ ಚಿತ್ರದ ಹಿಂದಿನ ರೂವಾರಿಗಳು : ನಿರ್ದೇಶನ ಎಂ.ಎಸ್.ರಾಜಶೇಖರ್, ನಿರ್ಮಾಪಕ ಎಂ.ಎಸ್. ಪುಟ್ಟಸ್ವಾಮಿ, ಸಂಗೀತ ಉಪೇಂದ್ರ ಕುಮಾರ್ ಸಂಕಲನ ಪಿ. ಭಕ್ತ ವತ್ಸಲಂ, ಛಾಯಾಗ್ರಹಣ ವಿ.ಕೆ. ಕಣ್ಣನ್. ಮುಖ್ಯವಾಗಿ ಚಿ.ಉದಯಶಂಕರ್ ಅವರ ಸಂಭಾಷಣೆ ಹಾಗೂ ಗೀತೆಗಳು ಚಿತ್ರದ ಯಶಸ್ಸಿಗೆ ದೊಡ್ಡ ಕೊಡುಗೆ ನೀಡಿವೆ.

ಈ ಬರಹಗಳನ್ನೂ ಓದಿ