ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಮಾದಕ ಕಂಠದ ಮೇರುಗಾಯಕಿ ಮಂಜುಳಾ ಗುರುರಾಜ್

ಪೋಸ್ಟ್ ಶೇರ್ ಮಾಡಿ
ಎನ್‌.ಎಸ್‌.
ಶ್ರೀಧರಮೂರ್ತಿ
ಲೇಖಕ

ಕನ್ನಡದಲ್ಲಿ ಪರಭಾಷಾ ಗಾಯಕಿಯರ ಪಾರಮ್ಯ ನಡೆಯುತ್ತಿದ್ದಾಗ ಕನ್ನಡದ ಇಂಪನ್ನು ಮೂಡಿಸಿದ ಹೆಗ್ಗಳಿಕೆ ಮಂಜುಳಾ ಗುರುರಾಜ್‌ ಅವರದ್ದು. ಇಂದು (ಜೂನ್‌ 10) ಅವರಿಗೆ 62ನೇ ಹುಟ್ಟುಹಬ್ಬದ ಸಂಭ್ರಮ. ಲೇಖಕ ಎನ್.ಎಸ್.ಶ್ರೀಧರ ಮೂರ್ತಿ ಅವರು ಮಂಜುಳಾ ಸಾಧನೆಯ ಹಾದಿಗೆ ಅಕ್ಷರ ರೂಪ ನೀಡಿದ್ದಾರೆ.

ಒಂದುಕಾಲದಲ್ಲಿ ಎಲ್.ಆರ್.ಈಶ್ವರಿ ತಮ್ಮ ಮಾದಕ ಕಂಠಕ್ಕೆ ಜನಪ್ರಿಯರಾಗಿದ್ದರು. ಮುಂದೆ ಕನ್ನಡದಲ್ಲಿ ಅಂತಹ ಸೊಗಡನ್ನು ನೀಡಿದಂತಹ ಗಾಯಕಿ ಮಂಜುಳಾ ಗುರುರಾಜ್. ಅವರು ಇಂತಹ ಗಾಯನಕ್ಕೇ ಸೀಮಿತರಾದವರಲ್ಲ. ಅವರ ಕಂಠಸಿರಿಯಲ್ಲಿನ ವೈವಿಧ್ಯತೆ ಅಪರೂಪದ್ದು. ಇನ್ನೊಂದು ರೀತಿಯಲ್ಲಿ ಕನ್ನಡದಲ್ಲಿ ಪರಭಾಷಾ ಗಾಯಕರ ಪಾರಮ್ಯ ನಡೆಯುತ್ತಿದ್ದಾಗ ಕನ್ನಡದ ಇಂಪನ್ನು ಮೂಡಿಸಿದ ಹೆಗ್ಗಳಿಕೆ ಕೂಡ ಅವರದ್ದೇ.

ಮಂಜುಳಾ ಅವರು ಹುಟ್ಟಿದ್ದು ಮೈಸೂರಿನಲ್ಲಿ, ಬೆಳೆದದ್ದು ಬೆಂಗಳೂರಿನಲ್ಲಿ. ಅವರದ್ದು ಸಾಂಸ್ಕೃತಿಕ ಕುಟುಂಬ. ತಾಯಿ ಸೀತಾಲಕ್ಷ್ಮಿ ಹಾಡುತ್ತಿದ್ದರು. ತಂದೆ ರಾಮಣ್ಣ ಮೃದಂಗ ವಾದಕರು. ಮೂರನೇ ವಯಸ್ಸಿನಿಂದಲೇ ಮಂಜುಳಾ ಹಾಡಲು ಆರಂಭಿಸಿದ್ದರು. ಆರನೇ ವಯಸ್ಸಿಗೆ ಆಕಾಶವಾಣಿಯ ‘ಬಾಲಜಗತ್’ಕಾರ್ಯಕ್ರಮದಲ್ಲಿ ತನ್ನ ಪ್ರತಿಭೆಯನ್ನು ಮೆರೆದಿದ್ದರು. ಅವರಿಗೆ ಮನೆಯೇ ಮೊದಲ ಪಾಠಶಾಲೆ. ತಾಯಿ ಸೀತಾಲಕ್ಷ್ಮಿಯವರೇ ಮೊದಲ ಗುರು. ಮುಂದೆ ಎ.ನಾಗರತ್ನ, ಶಕುಂತಲಾ, ವೆಂಕಟರಮಣ, ಕೃಷ್ಣದಾಸ್ ಹೀಗೆ ಹಲವು ಗುರುಗಳ ಬಳಿ ಸಂಗೀತ ಅಭ್ಯಾಸ ಮುಂದುವರೆದಿತ್ತು. ಹೀಗಿದ್ದರೂ ಬಾಲ್ಯದಲ್ಲಿ ಅವರು ಗಾಯಕಿಯಾಗುವ ಕನಸನ್ನುಕಂಡವರಲ್ಲ. ವೈದ್ಯೆಯಾಗಬೇಕು ಇಲ್ಲವೆ ಕ್ರೀಡಾಪಟುವಾಗಬೇಕು ಎನ್ನುವುದು ಅವರಿಗೆ ಇದ್ದ ಕನಸು. ತಾವು ಪದವಿ ಓದಿದ ಬೆಂಗಳೂರು ಮಹಾರಾಣಿ ಕಾಲೇಜಿನಲ್ಲಿ ‘ನೈಟಿಂಗೇಲ್’ ಬಿರುದು ಪಡೆದಿದ್ದರು. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕೂಡ ಸಕ್ರಿಯರು. ಲೇಖಕಿ ಕಮಲಾ ಹಂಪಾನಾ ಅವರ ನೆಚ್ಚಿನ ವಿದ್ಯಾರ್ಥಿನಿ.

ಗಾಯಕಿ ಮಂಜುಳಾ ಗುರುರಾಜ್ ಅವರ ಮೊದಲ ಚಿತ್ರಗೀತೆ ಧ್ವನಿಮುದ್ರಣದ ಸಂದರ್ಭವಿದು (1983, ನವೆಂಬರ್ 1). ಜೋಸೈಮನ್ ನಿರ್ದೇಶನದ ‘ರೌಡಿ ರಾಜ’ ಸಿನಿಮಾದ ‘ನಗುವುದನು ಕಲಿಯುವೆಯಾ’ ಮೊದಲ ಸಿನಿಮಾ ಗೀತೆ.

1970ರ ದಶಕದಲ್ಲಿ ಬೆಂಗಳೂರಿನಲ್ಲಿ ಆರ್ಕೆಸ್ಟ್ರಾಗಳ ಭರಾಟೆ ಹೆಚ್ಚಾಗಿತ್ತು. ಆಗ ಮಂಜುಳಾ ಸೌಂಡ್‌ ಆಫ್ ಮ್ಯೂಸಿಕ್ ತಂಡದಲ್ಲಿ ತಮ್ಮನ್ನು ಗುರುತಿಸಿಕೊಂಡರು. ಟೌನ್‌ಹಾಲ್‌ನಲ್ಲಿ ಅವರು ಹಾಡಿದ ‘ಸತ್ಯಂ ಶಿವಂ ಸುಂದರಂ’ ಟಾಕ್‌ ಆಫ್ ದಿ ಟೌನ್ ಆಗಿ ಬಿಟ್ಟಿತ್ತು. ಹಾಡಿಗೆ ಬೇಡಿಕೆ ಬಂದಿತು, ಕ್ಯಾಸೆಟ್‌ಗಳು ಕೂಡ ಬಂದವು. ವಾದ್ಯಗೋಷ್ಠಿಯಲ್ಲಿ ಗುರುರಾಜ್‌ಅವರೊಂದಿಗೆ ಹಾಡುತ್ತಿದ್ದ ಮಂಜುಳಾರಿಗೆ ಪ್ರೀತಿ ಬೆಳೆಯಲು ಹೆಚ್ಚು ಕಾಲ ಬೇಕಾಗಲಿಲ್ಲ. ಆದರೆ ಇಬ್ಬರ ಮನೆಯಲ್ಲಿಯೂ ಒಪ್ಪಿಗೆ ಸಿಗಲಿಲ್ಲ. ಕೊನೆಗೆ 1979ರಲ್ಲಿ ರಿಜಿಸ್ಟರ್‌ ಆಫೀಸಿನಲ್ಲಿ ಇಬ್ಬರೂ ಮದುವೆಯಾದರು. ಇದರ ನಡುವೆ ಮಂಜುಳಾ ತಮ್ಮ ಬಿಡುವಿರದ ಗಾಯನದ ನಡುವೆ ಕೂಡ ಬೇರೆ ಸಾಧ್ಯತೆಗಳನ್ನೂ ಹುಡುಕಿಕೊಂಡರು. ಆಕಾಶವಾಣಿಯಲ್ಲಿ ವಾರ್ತಾ ವಾಚಕಿಯಾದರು. ಮುಂದೆ ದೂರದರ್ಶನದಲ್ಲಿ ಅದೇ ವೃತ್ತಿಯನ್ನು ಮುಂದುವರೆಸಿದರು. ಸಾಗರ್ ಮತ್ತು ಸಂಗೀತ, ಮಂಜುಳಾ ಮತ್ತು ಗುರುರಾಜ್ ದಂಪತಿಗಳ ಇಬ್ಬರು ಮಕ್ಕಳು. ಇಬ್ಬರೂ ಸಂಗೀತ ಕ್ಷೇತ್ರದಲ್ಲಿಯೇ ತಮ್ಮ ಭವಿಷ್ಯ ಕಂಡುಕೊಂಡಿದ್ದಾರೆ. ಅಳಿಯ ರವಿಶಂಕರ್‌ ಗಾಯಕ ಮತ್ತು ನಟ ಕೂಡ ಹೌದು.

ಜನಪ್ರಿಯ ಸಂಗೀತ ಸಂಯೋಜಕರಾದ ರಾಜನ್‌ – ನಾಗೇಂದ್ರ ಅವರೊಂದಿಗೆ (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

1983, ಮಂಜುಳಾ ಅವರ ವೃತ್ತಿಜೀವನದಲ್ಲಿ ತಿರುವನ್ನು ತಂದಿತು. ಅವರು ಹಾಡಿದ್ದ ‘ಆಪ್‌ಜೈಸೆ ಕೋಹಿ ನಹಿ’ ಹಾಡನ್ನು ಕೇಳಿ ನಿರ್ದೇಶಕ ಜೋಸೈಮನ್ ಹೇಳಿಕಳುಹಿಸಿದರು. ‘ರೌಡಿರಾಜ’ಚಿತ್ರದ ‘ನಗುವುವನು ಕಲಿಯುವೆಯಾ’ ಹಾಡನ್ನು ಹಾಡುವ ಅವಕಾಶ ಸಿಕ್ಕಿತು. ಮುಂದೆ ಒಂದಾದ ಮೇಲೆ ಒಂದು ಹಾಡುಗಳು ದೊರಕಲು ಆರಂಭಿಸಿದವು. ’ಮುಂದೆ ನೀ ಹೋದಾಗ’(ಪ್ರಳಯಾಂತಕ), ಸೂರ್ಯಚಂದ್ರ ಆಕಾಶಕೆ (ನೀ ಬರೆದಕಾದಂಬರಿ), ‘ತಂದೆ ನೀ ನೀಡು ಬಾ’ (ರಾವಣರಾಜ್ಯ) ಮೊದಲಾದ ಹಾಡುಗಳು ಅವರಿಗೆ ಜನಪ್ರಿಯತೆ ತಂದುಕೊಟ್ಟವು. ಆದರೆ ಮಂಜುಳಾ ಗುರುರಾಜ್ ಸೆನ್ಸೇಷನ್ ಎನ್ನಿಸಿಕೊಂಡಿದ್ದು ‘ನಂಜುಂಡಿ ಕಲ್ಯಾಣ’ ಚಿತ್ರದ ‘ಒಳಗೆ ಸೇರಿದರೆಗುಂಡು’ ಗೀತೆಯ ಮೂಲಕ. ಮಾದಕತೆ ಮತ್ತು ಭಾವುಕತೆ ಬೆರೆಸಿದ ಸಿರಿಕಂಠದ ಈ ಹಾಡು ಟ್ರೆಂಡ್ ಸೆಟರ್‌ ಆಗುವುದರ ಜೊತೆಗೆ ಮಾಲಾಶ್ರೀಯವರಿಗೂ ಜನಪ್ರಿಯತೆ ತಂದುಕೊಟ್ಟಿತು. ಈ ಚಿತ್ರದ ಹದಿನಾಲ್ಕು ಲಕ್ಷ ಕ್ಯಾಸೆಟ್‌ಗಳು ಮಾರಾಟವಾಗಿ ಹೊಸ ಇತಿಹಾಸ ರೂಪುಗೊಂಡಿತು. ಈ ಸಾಧನೆಗಾಗಿ ಮಂಜುಳಾ ಗುರುರಾಜ್‌ಅವರಿಗೆ ಚಿನ್ನದ ಡಿಸ್ಕ್ ಅನ್ನು ನೆನಪಿನ ಕಾಣಿಕೆಯಾಗಿ ನೀಡಲಾಗಿತ್ತು.

ಮೇರು ಗಾಯಕರಾದ ಎಸ್‌ಪಿಬಿ ಮತ್ತು ಪಿ.ಬಿ.ಶ್ರೀನಿವಾಸ್ ಅವರೊಂದಿಗೆ

ಇಲ್ಲಿಂದ ಮುಂದೆ ಕನ್ನಡ ಚಿತ್ರರಂಗದಲ್ಲಿ ಮಾಲಾಶ್ರೀ ಯುಗ ಆರಂಭವಾದಂತೆ ಮಂಜುಳಾ ಗುರುರಾಜ್‌ಯುಗ ಕೂಡ ಆರಂಭವಾಯಿತು. ‘ಜಟಕಾ ಕುದರೆ ಹತ್ತಿ’(ಗಜಪತಿ ಗರ್ವಭಂಗ), ಕೂಗೋ ಕೋಳಿಗೆ (ರಾಣಿ ಮಹಾರಾಣಿ), ‘ಪ್ರೀತಿಯಲ್ಲಿಇರೋ ಸುಖ’ (ಅಂಜದ ಗಂಡು), ‘ಬಂದಳೋ ಬಂದಳೋ ಕಾಂಚನ’ (ಎಸ್.ಪಿ.ಸಾಂಗ್ಲಿಯಾನ), ‘ಮುಸ್ಸಂಜೇಲಿ ನಮ್ಮೂರಲ್ಲಿ’ (ರಣರಂಗ), ‘ಮ್ಯಾಲೆ ಕವಕೊಂಡ’ (ಚಿನ್ನಾರಿ ಮುತ್ತಾ), ‘ಮನದಾಸೆ ಹಕ್ಕಿಯಾಗಿ’ (ನಮ್ಮೂರ ಮಂದಾರ ಹೂವೆ) ಹೀಗೆ ಸಾಲು ಸಾಲು ಹಿಟ್ ಗೀತೆಗಳು ಅವರ ಕಂಠಸಿರಿಯಿಂದ ಮೂಡಿಬಂದವು. ‘ಪರಶುರಾಮ’ ಚಿತ್ರದ ‘ತಂದಾನ ತಂದಾನ’ ಗೀತೆಯಿಂದ ರಾಜ್‌ಕುಮಾರ್‌ಅವರ ಜೊತೆ ಹಾಡುವ ಅವಕಾಶ ಪಡೆದ ಮಂಜುಳಾ ಗುರುರಾಜ್‌ ಅವರ ಜೊತೆಗೂಡಿ ‘ಹೃದಯದಲಿ ಇದೇನಿದು’ (ದೇವತಾ ಮನುಷ್ಯ), ‘ಲಕ್ಷ್ಮಿ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ’ (ಜೀವನಚೈತ್ರ), ‘ಆಗುಂಬೆಯ ಪ್ರೇಮಸಂಜೆಯ’ (ಆಕಸ್ಮಿಕ), ‘ನಾವು ಯಾರಿಗೇನು ಕಡಿಮೆ ಇಲ್ಲ’ (ಶಬ್ದವೇಧಿ) ಮೊದಲಾದ ಗೀತೆಗಳಿಂದ ಮಾಧುರ್ಯದ ಭಂಡಾರವನ್ನು ಬೆಳೆಸಿದರು.

ಸಂಗೀತ ಸಂಯೋಜಕ ಚಕ್ರವರ್ತಿ ಅವರೊಂದಿಗೆ

ರಾಜ್‌ಕುಮಾರ್‌ ಅವರು ಮಾತ್ರವಲ್ಲದೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಕೆ.ಜೆ.ಯೇಸುದಾಸ್‌ಅವರ ಜೊತೆಗೆ ಕೂಡ ಅನೇಕ ಹಾಡುಗಳನ್ನು ಹಾಡಿರುವ ಮಂಜುಳಾ ಗುರುರಾಜ್ ಈ ಇಬ್ಬರೂ ಗಾಯಕರ ಮೆಚ್ಚಿಗೆಗೆ ಪಾತ್ರರಾಗಿದ್ದರು. ಇಬ್ಬರೂ ‘ಲಿರಿಕ್ಸ್ ಒಮ್ಮೆ ಓದಿ ಸರಿಯಾಗಿಇದೆಯೇ, ಸಮಾಜಕ್ಕೆತಪ್ಪು ಸಂದೇಶ ಹೋಗಬಾರದು’ ಎಂದು ಕನ್ನಡ ಬಲ್ಲ ಮಂಜುಳಾ ಅವರ ಸಲಹೆ ಪಡೆಯುತ್ತಾ ಇದ್ದರು. ಎಸ್.ಪಿ ‘ಮುದ್ದಿನ ಮಾವ’ ಚಿತ್ರದಲ್ಲಿ ಅಭಿನಯಿಸುವ ಮೊದಲು ‘ನಾನು ಈ ಚಿತ್ರದಲ್ಲಿ ಅಭಿನಯಿಸಬಹುದೆ? ಕನ್ನಡಿಗರು ಒಪ್ಪಿಕೊಳ್ತಾರಾ’ ಎಂದು ಮಂಜುಳಾ ಅವರ ಸಲಹೆ ಕೇಳಿದ್ದರು. ಅವರ ವೃತ್ತಿನಿಷ್ಠೆ ಕೂಡ ದೊಡ್ಡದು. ಗರ್ಭಿಣಿಯಾಗಿದ್ದಾಗ, ಹಸಿ ಬಾಣಂತಿಯಾಗಿದ್ದಾಗ ಕೂಡ ಕೆಲವೊಮ್ಮೆ ಚೆನ್ನೈವರೆಗೆ ಹೋಗಿ ಹಾಡಿದ್ದಾರೆ.

ಹಿಂದಿ ಸಿನಿಮಾ ಸಂಗೀತ ಸಂಯೋಜಕ ನೌಷಾದ್ ಜೊತೆ

ಜನಪ್ರಿಯ ಗಾಯಕಿ ಅಗಿದ್ದಾಗಲೇ ಮಂಜುಳಾ 1982ರಲ್ಲಿ ‘ಅಹುತಿ’ ಚಿತ್ರದ ಮೂಲಕ ಡಬ್ಬಿಂಗ್‌ ಕಲಾವಿದೆಯಾಗಿ ಕೂಡ ತಮ್ಮ ವೃತ್ತಿಯನ್ನು ಆರಂಭಿಸಿದರು. ಅವರ ಡಬ್ಬಿಂಗ್ ಪಯಣದಲ್ಲಿ ‘ಬೆಳದಿಂಗಳ ಬಾಲೆ’ ಒಂದು ಮೈಲಿಗಲ್ಲು. ನಾಯಕಿಯು ತೆರೆಯ ಮೇಲೆ ಕಾಣಿಸದ ಈ ಚಿತ್ರದಲ್ಲಿ ಕಂಠವೇ ನಾಯಕಿಯ ಪಾತ್ರವನ್ನು ನಿರ್ವಹಿಸಬೇಕು. ಈ ಹೊಣೆಯನ್ನು ಮುಂಜುಳಾ ಅದ್ಭುತವಾಗಿ ನಿರ್ವಹಿಸಿದರು. ಅದಕ್ಕಾಗಿ ‘ಶ್ರೇಷ್ಠ ಕಂಠದಾನ ಕಲಾವಿದೆ’ ರಾಜ್ಯ ಪ್ರಶಸ್ತಿ ಕೂಡ ಬಂದಿತು. ಅದು ಅವರ ವೃತ್ತಿಜೀವನದಲ್ಲಿ ಮಾತ್ರವಲ್ಲ ಕನ್ನಡ ಚಿತ್ರರಂಗದ ಪಾಲಿಗೆ ಕೂಡ ಮೈಲಿಗಲ್ಲು ಎನ್ನಿಸಿ ಕೊಂಡಿತು.

ವರನಟ ಡಾ.ರಾಜಕುಮಾರ್ ಅವರೊಂದಿಗೆ ಸಂಗೀತ ಕಾರ್ಯಕ್ರಮವೊಂದರಲ್ಲಿ

ಸಂಗೀತ ಸಂಯೋಜಕಿಯಾಗಿ ಕೂಡ ಹಲವು ಧ್ವನಿಸುರಳಿ ತಂದಿರುವ ಮಂಜುಳಾ ಅವರಿಗೆ ‘ಚಿನ್ನಾರಿ ಮುತ್ತ’ ಚಿತ್ರದ ‘ಮ್ಯಾಲೆ ಕವುಕೊಂಡ’ ಗೀತೆಗೆ ರಾಜ್ಯ ಪ್ರಶಸ್ತಿ ಸಂದಿದೆ. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ದೊರಕಿವೆ. ತಾವು ಮಾತ್ರ ಬೆಳದರೆ ಸಾಲದು, ಇತರರೂ ಬೆಳೆಗಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ‘ಸಾಧನಾ ಸಂಗೀತ ಶಾಲೆ’ ಹುಟ್ಟು ಹಾಕಿದರು. ಮಲ್ಲೇಶ್ವರಂ ಮತ್ತು ಬಸವನಗುಡಿಯಲ್ಲಿ ಶಾಖೆಗಳನ್ನು ಹೊಂದಿರುವ ಈ ಶಾಲೆಗಳಲ್ಲಿ ಗಾಯನ ಮಾತ್ರವಲ್ಲದೆ ವಿವಿಧ ವಾದ್ಯ ಪ್ರಕಾರದ ತರಬೇತಿಯನ್ನೂ ನೀಡಲಾಗುತ್ತಿದ್ದು ಈ ಮೂಲಕ ಹಲವು ಪ್ರತಿಭಾವಂತರು ಬೆಳಕಿಗೆ ಬಂದಿದ್ದಾರೆ. ಸಂಗೀತವನ್ನೇ ಉಸಿರನ್ನಾಗಿಸಿಕೊಂಡಿರುವ ಮಂಜುಳಾ ಸರಿ ಸುಮಾರು 12,000ಕ್ಕೂ ಹೆಚ್ಚು ಚಿತ್ರಗೀತೆ, ಭಕ್ತಿಗೀತೆ, ಭಾವಗೀತೆ, ಜನಪದಗೀತೆ ಮೊದಲಾದವುಗಳನ್ನು ಹಾಡಿದ್ದಾರೆ. ತಾವು ಬೆಳೆಯುತ್ತಾ, ಹಲವು ಪ್ರತಿಭೆಗಳನ್ನೂ ಬೆಳೆಸುತ್ತಾ ಕರ್ನಾಟಕದ ಸಂಗೀತಕ್ಷೇತ್ರಕ್ಕೆ ವರದಾನವಾಗಿದ್ದಾರೆ.

ತಮ್ಮ ನೆಚ್ಚಿನ ಗಾಯಕಿ ಎಸ್‌.ಜಾನಕಿ ಅವರೊಂದಿಗೆ ಮಂಜುಳಾ ಗುರುರಾಜ್‌

ಈ ಬರಹಗಳನ್ನೂ ಓದಿ