ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಸಂಪಿಗೆಯ ಘಮದಂತೆ ಹರಡಿಕೊಳ್ಳುವ ಮೌನ

ಪೋಸ್ಟ್ ಶೇರ್ ಮಾಡಿ

ಬರಹ: ಮಮತಾ ವೆಂಕಟೇಶ್

ಸಿನಿಮಾ: ಈಸ್ ಲವ್ ಎನಫ್‌? ಸರ್ (2018) | ಭಾಷೆ: ಹಿಂದಿ | ನಿರ್ದೇಶಕಿ: ರೊಹೆನಾ ಗೆರಾ | ತಾರಾಗಣ: ತಿಲೋತ್ತಮಾ ಶೊಮೆ, ವಿವೇಕ್ ಗೊಂಬರ್

ಈ ಸಿನಿಮಾ ನೋಡಿ ಕೆಲವು ದಿನಗಳೇ ಆಗಿದ್ದವು. ಆದರೂ ಅದರ ಗುಂಗು ಮಾತ್ರ ಹಾಗೆಯೇ ಉಳಿದಿತ್ತು. ತುಂಬಾ ದಿನಗಳ ನಂತರ ಒಂದೊಳ್ಳೆಯ ಚಿತ್ರ ನೋಡಿದ ಅನುಭವ. ಚಿಟ್ಟು ಹಿಡಿಸುವ ಸಂಗೀತವಾಗಲಿ. ಅನವಶ್ಯಕ ಸಂಭಾಷಣೆಯಾಗಲೀ, ಕಣ್ಣು ಮುಚ್ಚಿಕೊಳ್ಳುವಂತಹ ಫೈಟ್‌ಗಳಾಗಲಿ ಇಲ್ಲದ ಶುದ್ಧ ಕಥಾವಸ್ತು ಆಧಾರಿತ ವಸ್ತುನಿಷ್ಠ ಸಿನಿಮಾ ತುಂಬಾ ಖುಷಿ ಕೊಟ್ಟಿತು. ಹಾಗೆಯೇ ಆಲೋಚನೆಗೆ ಹಚ್ಚಿದ್ದಂತೂ ಸುಳ್ಳಲ್ಲ.

ಮನೆಯೊಡೆಯ ಹಾಗೂ ಕೆಲಸದಾಕೆಯ ಸಂಬಂಧ ಚಿತ್ರದ ಮುಖ್ಯ ಕಥಾವಸ್ತು. ಬೇರೆ ನಿರ್ದೇಶಕರ ಕೈಗೆ ಸಿಕ್ಕಿದ್ದಲ್ಲಿ ಅದೆಷ್ಟು ಅಸಹ್ಯವಾಗುತ್ತಿತ್ತೋ ಗೊತ್ತಿಲ್ಲ! ಅವರಿಬ್ಬರ ನಡುವಿನ ದೈಹಿಕ ಸಂಬಂಧವೇ ಹೈಲೈಟಾಗಿ… ಹಾಡುಗಳು …ರೋಚಕ ಪ್ರಣಯ ಸನ್ನಿವೇಶಗಳಿಂದ ಹತ್ತರಲ್ಲೊಂದಾಗಿ ಬಿಡುವಂತಹ ಕಥೆ ಈ ನಿರ್ದೇಶಕಿಯ ಕೈಯಲ್ಲಿ ತುಂಬಾ ನಾಜೂಕಾಗಿ, ಸಂಬಂಧಗಳ ಹೆಣಿಗೆಯ ಕುಸುರಿ ಕೆಲಸವಾಗಿ ಎಷ್ಟು ಸೊಗಸಾಗಿ ಮೂಡಿಬಂದಿದೆ ಎಂದರೆ ನೋಡಿದ ಸುಮಾರು ದಿನ ಕೂಡ ಇದರ ಪ್ರಭಾವದಿಂದ ಹೊರಬರಲಾಗಲಿಲ್ಲ.

ಎಳೆಹರೆಯದ ವಿಧವೆ ರತ್ನ ಮದುವೆ ರದ್ದಾದಂತಹ ಅಶ್ವಿನ್ ಮನೆಯ ಕೆಲಸಗಾರ್ತಿ. ನೂರಾರು ಕನಸುಗಳನ್ನು ಹೊತ್ತು ಹಳ್ಳಿಯಿಂದ ಬಂದು ಹೊಟ್ಟೆಪಾಡಿಗಾಗಿ ಮನೆ ಕೆಲಸ ಮಾಡುತ್ತಿದ್ದ ರತ್ನ, ಅಶ್ವಿನ್‌ನೊಂದಿಗೆ ಒಂದೇ ಮನೆಯಲ್ಲಿ ಜೊತೆಯಾಗಿ ಕಳೆಯುವ ಸಂದರ್ಭ ಬರುತ್ತದೆ. ರತ್ನಾಳ ಪಾತ್ರ ಕೆಲಸಗಾರ್ತಿಯಾಗಷ್ಟೇ ಸೀಮಿತವಾಗದೆ ತನ್ನ ಸಂಸಾರದ ಭಾರವನ್ನು ತಲೆಯ ಮೇಲೆ ಹೊತ್ತುಕೊಂಡು ಜವಾಬ್ದಾರಿಯುತ ಗೃಹಿಣಿಯ ಹಾಗೆ ಬಿಂಬಿತವಾಗಿದೆ. ತಂಗಿಯ ಓದಿಗಾಗಿ ಕನಸು ಕಟ್ಟಿಕೊಂಡು ಅವಳ ಓದಿಗೂ, ತೀರಿಹೋದ ಗಂಡನ ಮನೆಗೂ ಹಣ ಕಳಿಸುವ ರತ್ನ ಸಹೃದಯಿ. ಸತ್ತಿದ್ದು ಗಂಡನಷ್ಟೇ ಹೊರತು ಅವಳ ಆಸೆ – ಆಕಾಂಕ್ಷೆಗಳಲ್ಲ. ಅಶ್ವಿನ್ ಜೊತೆ ಏಕಾಂಗಿಯಾಗಿ ಇರುವುದರಿಂದ ಸಮಸ್ಯೆಗಳು ಉದ್ಭವವಾಗಬಹುದು ಎಂದು ಅಲ್ಲಿಯ ಕೆಲಸಗಾರರ ಹೇಳಿದಾಗ ಸಹ ಅವಳು ಲೆಕ್ಕಿಸುವುದಿಲ್ಲ. ಅವಳದ್ದು ತಣ್ಣನೆಯ ಪ್ರತಿಕ್ರಿಯೆ. ಮಾತನಾಡುವ ಜನ ಏನಾದರೂ ಅನ್ನುತ್ತಾರೆ ಅದಕ್ಕೆ ಏನು ಮಾಡಲಾಗುವುದಿಲ್ಲ ಎನ್ನುತ್ತಾಳೆ.

ಮದುವೆ ರದ್ದಾಗಿ ಕೆಲಕಾಲ ಮಂಕಾಗಿರುವ ಅಶ್ವಿನ್ ನ್ಯೂಯಾರ್ಕಿನಿಂದ ಹಿಂತಿರುಗಿದ ಬರಹಗಾರ. ಅಂತಹ ವ್ಯಕ್ತಿಗೆ ರತ್ನ ತನ್ನ ಗಂಡ ಕೇವಲ 19ರ ಹದಿಹರೆಯದಲ್ಲಿ ಸತ್ತರೂ ಸಹ ತಾನು ಬದುಕಿನ ಕಡೆಗೆ ಆಸಕ್ತಿ ಕಳೆದುಕೊಳ್ಳಲಿಲ್ಲವೆಂದು, ಬದುಕು ನಿಂತ ನೀರಾಗಬಾರದು ಮುಂದುವರಿಯಬೇಕೆಂದು ಹುರಿದುಂಬಿಸುತ್ತಾಳೆ. ಅಶ್ವಿನ್ ವರ್ಗ ಬೇಧಗಳಿಲ್ಲದ ಸರಳ ವ್ಯಕ್ತಿ. ರತ್ನಳೆಡೆಗೆ ಅವನು ತೋರುವ ಸೌಜನ್ಯತೆಯೇ ಅದಕ್ಕೆ ಸಾಕ್ಷಿ. ಅವಳು ಏನನ್ನಾದರೂ ಕೊಟ್ಟರೆ ಅವನು ಥ್ಯಾಂಕ್ಸ್‌ ಹೇಳದೆ ತೆಗೆದುಕೊಳ್ಳುವುದಿಲ್ಲ.

ವಿದೇಶದಿಂದ ಹಿಂತಿರುಗಿರುವವರಿಗೆ ಈ ವರ್ತನೆ ಸಹಜವೇ ಆದರೂ ಸಹ ಹುಟ್ಟು ಭಾರತೀಯ ಗುಣ ಬದಲಾಗುವುದು ಕಷ್ಟ. ತುಂಬಾ ಜನ ಕೆಲಸದವರನ್ನು ತಮ್ಮ ಗುಲಾಮರಂತೆ ನಡೆಸಿಕೊಳ್ಳುತ್ತಾರೆ. ಆದರೆ ಅಶ್ವಿನ್ ಅದಕ್ಕೆ ಅಪವಾದ. ಕೆಲಸದವಳಾಗಿದ್ದ ರತ್ನ ಕೊಟ್ಟ ಉಡುಗೊರೆಯನ್ನು ಆಫೀಸಿಗೆ ಹಾಕಿಕೊಂಡು ಹೋಗುವುದಾಗಲಿ, ಗೆಳೆಯ – ಗೆಳತಿಯರು ರತ್ನಾಳ ವಿಷಯದಲ್ಲಿ ಅಲಕ್ಷ್ಯವಾಗಿ ಮಾತನಾಡಿದಾಗ ತಿರುಗು ಹೇಳುವುದಾಗಲಿ.. ಈ ಸ್ವಭಾವವನ್ನು ಒತ್ತಿ ಹೇಳುತ್ತದೆ. ರತ್ನಾಳ ಮಹತ್ವಾಕಾಂಕ್ಷೆ ಅಶ್ವಿನ್‌ನನ್ನು ಬೆರಗಾಗಿಸುತ್ತದೆ. ಟೈಲರ್ ಆಗದೆ ಫ್ಯಾಶನ್ ಡಿಸೈನರ್ ಆಗಬೇಕು ಎನ್ನುವ ಅವಳ ಹೆಬ್ಬಯಕೆ ಅವನಿಗೆ ಮೊದಲು ಅಚ್ಚರಿಯೆನಿಸಿದರೂ ಅವನದನ್ನು ಮೆಚ್ಚಿಕೊಳ್ಳುತ್ತಾನೆ. ಅವನೇ ಹೇಳುವಂತೆ ರತ್ನ ಏನನ್ನು ಬೇಕಾದರೂ ಸಾಧಿಸುತ್ತಾಳೆ. ಸಾಧನೆ ಎನ್ನುವುದು ಯಾರಿಗೂ ಸ್ವಂತವಲ್ಲ.

ಹಳ್ಳಿಯ ಕಡೆ ವಿಧವೆಯರ ಅವಸ್ಥೆ ತುಂಬಾ ಅಧ್ವಾನ. ಎಳೆವಯಸ್ಸಿನ ವಿಧವೆಯಾದರೂ ಸಹ ರತ್ನಾಳಿಗೆ ಯಾವುದೇ ವಿನಾಯಿತಿ ಇರುವುದಿಲ್ಲ. ಚಿತ್ರದಲ್ಲಿ ಸ್ವಭಾವತಃ ಮೋಸಗಾತಿ ಅನಿಸುವ ಅಶ್ವಿನ್‌ನ ಭಾವೀ ವಧು ಸಬೀನಾ, ರತ್ನಾಳಿಗೆ ಬುದ್ಧಿ ಹೇಳಿ ಬಳೆಗಳನ್ನು ತೊಡುವಂತೆ ಮಾಡುತ್ತಾಳೆ. ರತ್ನ ಹಳ್ಳಿಗೆ ಹೋಗುವಾಗ ಮಾತ್ರ ಆ ಬಳೆಗಳನ್ನು ತೆಗೆದು ಬ್ಯಾಗಿನಲ್ಲಿ ಹಾಕಿಕೊಳ್ಳುತ್ತಾಳೆ .ಅವಳಲ್ಲಿ ಸುಪ್ತವಾಗಿ ಅಡಗಿರುವ ಆಸೆ – ಆಕಾಂಕ್ಷೆಗಳು ಅವಳು ಬಳೆಗಳನ್ನು ಆಗಾಗ ಸವರುವಾಗ ಕಾಣಸಿಗುತ್ತವೆ. ಗಣೇಶನ ಹಬ್ಬದ ಸಂದರ್ಭದಲ್ಲಿ ತನ್ನ ಅರಿವನ್ನೇ ಮರೆತು ಅವಳು ನರ್ತಿಸುವ ರೀತಿ ವಿಧವೆಯಾದರೂ ಸಹ ಅವಳಲ್ಲಿರುವ ಜೀವನೋತ್ಸಾಹ ಸತ್ತಿಲ್ಲ… ಅವಳೊಬ್ಬ ಚೈತನ್ಯದ ಚಿಲುಮೆ ಎಂದು ತೋರಿಸುತ್ತದೆ.

ಬರಬರುತ್ತಾ ಮೆಲ್ಲನೆ ಅವರಲ್ಲಿ ಉದಯವಾಗುವ ಪರಸ್ಪರ ಪ್ರೀತಿ ಹೂವು ಅರಳುವಂತೆ ಗೋಚರವಾಗುತ್ತದೆ. ನಿಶ್ಚಿತ ವಧು ಸಬೀನಾಳಿಗೆ ಪದೇ ಪದೇ ಕರೆ ಮಾಡುವುದಾಗಲಿ, ಮೆಸೇಜ್ ಮಾಡುವುದಾಗಲಿ ನನ್ನಿಂದಾಗದು. ..ನಾನಂತಹವನಲ್ಲ ಎಂದು ಹೇಳುವ ಅಶ್ವಿನ್ ತಂಗಿಯ ಮದುವೆಗಾಗಿ ಊರಿಗೆ ಹೋಗುವ ರತ್ನಳಿಗೆ ಕರೆ ಮಾಡುವುದಾಗಲಿ, ಕೆಲಸವಿತ್ತೇ ಸರ್ ಎಂದಾಗ ಹಾಗೇನಿಲ್ಲ ಎಂದು ಹೇಳುವಾಗ ಒಲವಿನ ಮಾಯೆಯಲ್ಲಿ ಬಿದ್ದವರಿಗೆ ಬದಲಾವಣೆಗಳು ಸಹಜ ಎನಿಸುತ್ತದೆ. ಊರಿನಿಂದ ಬಂದ ರತ್ನ ಬರುಬರುತ್ತಾ ಪ್ರೀತಿಯ ಜಾಲದಲ್ಲಿ ಬಂಧಿಯಾಗತೊಡಗುತ್ತಾಳೆ. ಇದು ಇವರಿಬ್ಬರಿಗೂ ಅರಿವಾಗುತ್ತಾ ಹೋಗುತ್ತದೆ .ಅಶ್ವಿನ್ ಅವಳ ಕನಸು ನನಸಾಗುವಂತೆ ಟೈಲರ್ ಬಳಿ ತರಬೇತಿಗಾಗಿ ಕಳಿಸುವುದು, ಅವಳಿಗಾಗಿ ಹೊಲಿಗೆ ಮಿಷನ್ ಕಾಣಿಕೆಯಾಗಿ ನೀಡುವುದಾಗಲಿ ಅವಳಲ್ಲಿ ಪುಳಕ ಹುಟ್ಟಿಸುತ್ತದೆ. ಬರಬರುತ್ತಾ ಈ ಆಕರ್ಷಣೆ ದೈಹಿಕವಾಗಿ ತಿರುಗತೊಡಗಿದಾಗ ರತ್ನ ಹೌಹಾರುತ್ತಾಳೆ.

ಈ ಕಣ್ಣಾಮುಚ್ಚಾಲೆ ಅಶ್ವಿನ್ ಗೆಳೆಯನಿಗೂ ಅರಿವಾಗುತ್ತದೆ. ಅವನೇ ತಿಳಿ ಹೇಳುವಂತೆ ಈ ವರ್ಗ ಸಂಘರ್ಷವನ್ನು ಮೀರುವುದು ಅಷ್ಟೊಂದು ಸುಲಭವಲ್ಲ. ಅವರೀರ್ವರ ನಡುವೆ ಆಕಾಶ – ಭೂಮಿಯಷ್ಟು ಅಂತರವಿತ್ತು. ಮಾತ್ರವಲ್ಲದೆ ಈ ಜನ ಅವಳನ್ನು ಅಶ್ವಿನ್ ಪತ್ನಿಯಾಗಿ ಬದುಕಲು ಬಿಡುತ್ತಿರಲಿಲ್ಲ. ಈ ಸತ್ಯ ರತ್ನಳಿಗೂ ತಿಳಿದಿತ್ತು. ಹಾಗಾಗಿ ಅವಳು ಅಶ್ವಿನ್‌ಗೆ ಅವನ ರಖ್‌ವಾಲಿಯಾಗಿ ಬದುಕಲು ಇಷ್ಟವಿಲ್ಲ ಎಂದು ಹೇಳುತ್ತಾಳೆ.

ಆದರೆ ಅಶ್ವಿನ್ ಅಷ್ಟು ನೀಚ ಸ್ವಭಾವದವನಲ್ಲ. ಅವಳನ್ನು ಪತ್ನಿಯಾಗಿಸಿಕೊಳ್ಳುವ ಆಕಾಂಕ್ಷೆ ಹೊಂದಿರುತ್ತಾನೆ. ತನ್ನನ್ನು ಸರ್ ಎಂದು ಕರೆಯದೆ, ಹೆಸರಿಡಿದು ಕರೆಯಲು ಆಗ್ರಹಿಸುತ್ತಾನೆ. ಅಶ್ವಿನ್ ತನ್ನನ್ನು ಬೇರೆಯವರು ಏನೆಂದು ಕೊಳ್ಳುತ್ತಾರೆ ಎಂಬುದರ ಬಗ್ಗೆ ಯಾವುದೇ ಯೋಚನೆ ಇಲ್ಲ ಎಂದಾಗ, ಅವಳು ದಿಟ್ಟವಾಗಿ ನಿಮಗೆ ಯೋಚನೆ ಇಲ್ಲದಿರಬಹುದು ಆದರೆ ತಾನು ಯೋಚನೆ ಮಾಡಬೇಕಾಗುತ್ತದೆ ಎಂದು ಹೇಳುತ್ತಾಳೆ. ಅಷ್ಟು ದಿನ ಬೇರೆಯವರ ಬಗ್ಗೆ ಯೋಚನೆ ಮಾಡದೆ ಅವನೊಟ್ಟಿಗೆ ಇದ್ದವಳು ಅಶ್ವಿನ್ ಮದುವೆಯಾಗಲು ಒತ್ತಾಯಿಸುವಾಗ ಆ ಮನೆಯಲ್ಲಿ ನಿಲ್ಲುವುದಿಲ್ಲ. ಮನೆ ಬಿಟ್ಟು ಹೋಗುವ ಅವಳು ಸ್ವಾಭಿಮಾನಿಯಾಗಿ ಅವನ ಎಲ್ಲ ಸಹಾಯವನ್ನು ನಿರಾಕರಿಸಿದರೂ, ಸಹ ಅವನು ಅವಳ ಮಹತ್ವಕಾಂಕ್ಷೆ ಈಡೇರಲು ಅವನ ಕೈಲಾಗುವ ಎಲ್ಲ ಸಹಾಯಗಳನ್ನು ಮಾಡುತ್ತಾನೆ. ಆದರೆ ಇಲ್ಲಿ ಇರಲಾಗದೆ ನ್ಯೂಯಾರ್ಕಿಗೆ ಹೊರಟುಹೋಗುತ್ತಾನೆ.

ರತ್ನಾಳ ಆಸೆ ಕಡೆಗೂ ಈಡೇರುತ್ತದೆಯೇ? ಅಶ್ವಿನ್ ಅವಳನ್ನು ಮದುವೆಯಾಗುತ್ತಾನೆಯೇ ಎಂದು ತಿಳಿಯಲು ಚಲನಚಿತ್ರವನ್ನೇ ನೋಡಬೇಕು. ಚಿತ್ರದಲ್ಲಿ ಅವರಿಬ್ಬರ ನಡುವೆ ಸಂಪಿಗೆಯ ಘಮದಂತೆ ಹರಡಿಕೊಳ್ಳುವ ಮೌನ ಸಹ ಆಪ್ಯಾಯಮಾನವೆನಿಸುತ್ತದೆ. ರತ್ನಾಳ ಕಡೆಗಿನ ಒಲವನ್ನು ತನ್ನ ಕಣ್ಣಲ್ಲೇ ಧಾರೆ ಎರೆಯುವಂತಹ ಮಿತಭಾಷಿ ಅಶ್ವಿನ್ ಕೂಡಾ ಇಷ್ಟವಾಗುತ್ತಾನೆ. ‘ಮಾನ್ಸೂನ್ ವೆಡ್ಡಿಂಗ್’ ಹಾಗೂ ‘ಕಿಸ್ಸಾ’ದಲ್ಲಿ ನಟಿ ತಿಲೋತ್ತಮ ಶೋಮೆಯ ದೈತ್ಯ ಪ್ರತಿಭೆಯನ್ನು ಕಂಡಿದ್ದೆ. ಆದರೆ ಈ ಚಲನಚಿತ್ರವಿಡೀ ಅವಳೇ ಆವರಿಸಿಕೊಂಡುಬಿಟ್ಟಿದ್ದಾಳೆ. ಅವಳ ನಟನೆಯಾಗಲಿ, ಬಾಡಿ ಲಾಂಗ್ವೇಜ್ ಆಗಲಿ, ವೇಷಭೂಷಣವಾಗಲಿ ಎಲ್ಲೂ ಚಿತ್ರದ ಚೌಕಟ್ಟಿನಿಂದ ಹೊರ ಹೋಗಿಲ್ಲ. ಅವಳು ವ್ಯಕ್ತಪಡಿಸುವ ಭಾವಗಳು ಎಷ್ಟು ಸಮರ್ಥವಾಗಿವೆ ಎಂದರೆ ನಾವು ಅಲ್ಲಿಯೇ ಇದ್ದು ಇದನ್ನು ಕಣ್ಣಾರೆ ಕಾಣುವಂತೆ ಭಾಸವಾಗುತ್ತದೆ. ಅವಳ ಮುಂದೆ ವಿವೇಕ್ ಪೆಚ್ಚು ಎನಿಸುತ್ತದೆ. ಹಳ್ಳಿಯ ಯುವತಿಯಾಗಿ ಪರ್ಫೆಕ್ಟ್ ಎನ್ನುವಂತಹ ಅಭಿನಯ. ಕಣ್ಣಿನಲ್ಲಿ ತನ್ನೆಲ್ಲ ಭಾವನೆಗಳನ್ನು ಹೊರಹಾಕುವ ಅವಳ ನಟನೆ ನಟನೆಯಂತೂ ಅಲ್ಲ. ತಾನೇತಾನಾಗಿ ರತ್ನಾಳ ಪಾತ್ರವನ್ನು ಆವಾಹಿಸಿ ಬಿಟ್ಟಿದ್ದಾಳೆ. ತುಂಬಾ ದಿನಗಳ ನಂತರ ತುಂಬಾ ಇಷ್ಟಪಟ್ಟ ಚಿತ್ರವಿದು.

ಈ ಬರಹಗಳನ್ನೂ ಓದಿ