ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ದಾಖಲೆಗಳ ಹೀರೋ ಕೃಷ್ಣ

ಪೋಸ್ಟ್ ಶೇರ್ ಮಾಡಿ
ಮೋಹನ್ ಬಾಬು ಬಿ.ಕೆ.
ಲೇಖಕ

ತೆಲುಗು ನಟ ಕೃಷ್ಣ ಅವರ ಹೆಸರಿನಲ್ಲಿ ಹಲವು ದಾಖಲೆಗಳಿವೆ. ನಟ, ನಿರ್ಮಾಪಕ, ವಿತರಕರಾಗಿ ಚಿತ್ರೋದ್ಯಮದಲ್ಲಿ ತೊಡಗಿಸಿಕೊಂಡ ಅವರು ಇಂದು (ಮೇ 31) 78ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. – ಕೃಷ್ಣ ಅವರ ಸಿನಿಮಾ – ಸಾಧನೆ ಕುರಿತ ಮೋಹನ್ ಬಾಬು ಬರಹ.

ಸೂಪರ್ ಸ್ಟಾರ್, ನಟಶೇಖರ ಘಟ್ಟಮನೆನಿ ಕೃಷ್ಣ ತಮ್ಮದೇ ಆದ ವಿಶಿಷ್ಟ ಮ್ಯಾನರಿಸಂನಿಂದಾಗಿ ತೆಲುಗು ಚಿತ್ರರಂಗದಲ್ಲಿ ಹಲವಾರು ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ. ಹಲವು ಪ್ರಥಮಗಳಿಗೆ ನಾಂದಿ ಹಾಡಿರುವ, 350 ಚಿತ್ರಗಳಲ್ಲಿ ನಟಿಸಿರುವ ನಟ. 30 ಮೇ 1943 ಬುರ್ರೆಪಾಲೆಂನಲ್ಲಿ ಜನಿಸಿದರು. ರಂಗಭೂಮಿಯಲ್ಲಿದ್ದವರು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದವರು, 1965ರಲ್ಲಿ ‘ತೇನೆ ಮನಸುಲು’ ತೆಲುಗು ಚಿತ್ರದಿಂದ ಪೂರ್ಣಪ್ರಮಾಣದ ನಾಯಕನಟನಾದರು. ನಟ, ನಿರ್ಮಾಪಕ, ನಿರ್ದೇಶಕ, ವಿತರಕ, ಪ್ರದರ್ಶಕ, ವಾಣಿಜ್ಯೋದ್ಯಮಿ ಮತ್ತು ರಾಜಕಾರಣಿಯಾಗಿ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸು ಗಳಿಸಿದರು. ಪದ್ಮಾಲಯ ಸ್ಟುಡಿಯೋಸ್ ನಿರ್ಮಿಸಿದರು. ಇವರ ಶ್ರೀಮತಿಯವರು ಇಂದಿರಾದೇವಿ ಮತ್ತು ವಿಜಯ ನಿರ್ಮಲರವರು. ರಮೇಶ್ ಬಾಬು, ಮಹೇಶ್ ಬಾಬು, ಪದ್ಮಾವತಿ, ಮಂಜುಳಾ, ಪ್ರಿಯದರ್ಶಿನಿ ಇವರ ಮಕ್ಕಳು. ಇವರ ಸೋದರರಾದ ಹನುಮಂತರಾವು ಮತ್ತು ಆದಿಶೇಷಗಿರಿ ರಾವು ಸಹ ನಿರ್ಮಾಪಕರೆ.

ತೆಲುಗು ಚಿತ್ರರಂಗದಲ್ಲಿ ಹಲವು ಪ್ರಥಮಗಳಿಗೆ ಇವರು ಸಾಕ್ಷಿಯಾದರು. ತೆಲುಗಿನ ಮೊದಲ ಜೇಮ್ಸಬಾಂಡ್ ಚಿತ್ರ ಹಾಗೂ ಕೌಬಾಯ್ ಚಿತ್ರದ ನಾಯಕರು ಕೃಷ್ಣ. ತೆಲುಗಿನ ಮೊದಲ ಈಸ್ಟ್ ಮನ್ ಕಲರ್ ಚಿತ್ರ ಇವರ ‘ಈನಾಡು’. ತೆಲುಗಿನ ಮೊದಲ ಸಿನಿಮಾಸ್ಕೊಪ್ ಚಿತ್ರ ಇವರ 200 ನೇ ಚಿತ್ರ ‘ಅಲ್ಲೂರಿ ಸೀತಾರಾಮರಾಜು. ತೆಲುಗಿನ ಮೊದಲ 70 ಎಂಎಂ ಚಿತ್ರ ಇವರ ‘ಸಿಂಹಾಸನಂ’ ಎಂಬ ಅದ್ದೂರಿ ಚಿತ್ರ. ಮೊದಲ ಡಿ.ಟಿ.ಎಸ್ ಚಿತ್ರ ಇವರ 300 ನೇ ಚಿತ್ರ ‘ತೆಲುಗುವೀರ ಲೇವರಾ’. ಅತಿ ಹೆಚ್ಚು ಮಲ್ಟಿಸ್ಟಾರ್ ಸಿನಿಮಾ ಮಾಡಿರುವ ನಾಯಕ. ಅತಿಹೆಚ್ಚು ತ್ರಿಪಾತ್ರಗಳಲ್ಲಿ (7), ಅತಿಹೆಚ್ಚು ದ್ವಿಪಾತ್ರಗಳಲ್ಲಿ (25) ನಟಿಸಿರುವ ಏಕೈಕ ನಾಯಕ. ಅಂದಿನ ಕಾಲದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟ, ಒಂದೇ ವರ್ಷದಲ್ಲಿ 18 ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದ ನಟ ಕೃಷ್ಣ. ತೆಲುಗಿನಲ್ಲಿ ಒಬ್ಬಳೇ ನಾಯಕಿಯೊಂದಿಗೆ ಅತಿಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಟ. ವಿಜಯನಿರ್ಮಲರೊಂದಿಗೆ 48 ಚಿತ್ರಗಳಲ್ಲಿ, ಜಯಪ್ರದಾರೊಂದಿಗೆ 47 ಚಿತ್ರಗಳಲ್ಲಿ ನಟಿಸಿದ್ದಾರೆ. ಮೂರನೆಯವರಾಗಿ ಶ್ರೀದೇವಿ ಜೊತೆ 25ಕ್ಕೂ ಹೆಚ್ಚು ಚಿತ್ರಗಳಲ್ಲಿ.ನಟಿಸಿದ್ದಾರೆ.

ತಾರಾ ಪುತ್ರ ಮಹೇಶ್ ಬಾಬು ಅವರೊಂದಿಗೆ

100ಕ್ಕೂ ಹೆಚ್ಚು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ತೇನೆಮನಸುಲು,ಸಾಕ್ಷಿ, ಮೋಸಗಾಳ್ಳಕು ಮೋಸಗಾಡು, ಪಂಡಂಟಿ ಕಾಪುರಂ, ಗೂಢಾಚಾರಿ 117, ಏಜೆಂಟ್ ಗೋಪಿ, ಜಗತ್ ಕಿಲಾಡಿಲು, ಕುರುಕ್ಷೇತ್ರಂ, ಈನಾಡು, ದೇವುಡು ಚೇಸಿನ ಮನುಷುಲು, ಅಲ್ಲೂರಿ ಸೀತಾರಾಮರಾಜು, ಅಗ್ನಿ ಪರ್ವತಂ, ಕೊಡುಕು ದಿದ್ದಿನ ಕಾಪುರಂ ಹೀಗೆ ಪಟ್ಟಿ ಬೆಳಯುತ್ತಾ ಹೋಗುತ್ತದೆ. ಹಿಂದಿಯಲ್ಲಿ ಜಿತೇಂದ್ರ ಅವರಿಗೆ ಹಲವು ಚಿತ್ರಗಳನ್ನು, ಕನ್ನಡದಲ್ಲಿ ಅಂಬರೀಷ್ ರವರ ‘ಅಮರಜ್ಯೋತಿ’ ಚಿತ್ರ ನಿರ್ಮಿಸಿದ್ದಾರೆ. ಅಣ್ಣಾವರೊಂದಿಗೆ ಅರ್ಧ ತೆಗೆದ ‘ಲವ ಕುಶ, ಚಿತ್ರ, ವಿತರಣೆಯ ವಿಚಾರದಲ್ಲಿ ನಿಂತುಹೋಯಿತು. ಇವರ ‘ಸಾಕ್ಷಿ’ ಚಿತ್ರ ತಾಷ್ಕೆಂಟ್ ಚಿತ್ರೋತ್ಸವಕ್ಕೆ ಹೋದರೆ, ‘ಪಂಡಂಟಿ ಕಾಪುರಂ’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿತು. ಹಲವಾರು ನಂದಿ ಪ್ರಶಸ್ತಿ, ಫಿಲ್ಮ್‌ಫೇಏರ್‌ ಪ್ರಶಸ್ತಿಗಳು ಇವರ ಮುಡಿಗೇರಿವೆ. ಕೇಂದ್ರ ಸರಕಾರ ಇವರಿಗೆ ‘ಪದ್ಮಭೂಷಣ’ ಪ್ರಶಸ್ತಿ ನೀಡಿ ಗೌರವಿಸಿದೆ. ಆಂಧ್ರ ಯೂನಿವರ್ಸಿಟಿ ‘ಡಾಕ್ಟರೇಟ್’ ಪ್ರಶಸ್ತಿ ನೀಡಿ ಗೌರವಿಸಿದೆ. ಇಂದು 78ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಕೃಷ್ಣ ಅವರಿಗೆ ಶುಭಾಶಯ.

ಈ ಬರಹಗಳನ್ನೂ ಓದಿ