ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕೀರ್ತನೆಕಾರ ‘ಅನ್ನಮಯ್ಯ’ನ ಸಿನಿಮಾಗೆ 24 ವರ್ಷ

ಪೋಸ್ಟ್ ಶೇರ್ ಮಾಡಿ
ಮೋಹನ್‌ ಬಾಬು ಬಿ.ಕೆ.
ಲೇಖಕರು

15ನೇ ಶತಮಾನದ ಕೀರ್ತನೆಕಾರ ಅನ್ನಮಯ್ಯ ಕುರಿತ ತೆಲುಗು ಸಿನಿಮಾ 1997ರ ಮೇ 22ರಂದು ತೆರೆಕಂಡಿತ್ತು. ಭಕ್ತಿಸಂಗೀತ ಮಾದರಿಯ ಅತ್ಯುತ್ತಮ ಸಿನಿಮಾ ಎಂದು ಕರೆಸಿಕೊಂಡ ‘ಅನ್ನಮಯ್ಯ’ ತೆರೆಕಂಡು ಇಂದಿಗೆ 24 ವರ್ಷ. – ಮೋಹನ್‌ ಬಾಬು ಬಿ.ಕೆ. ಅವರ ಲೇಖನ.

‘ಅದಿಗೋ ಅಲ್ಲದಿಗೋ ಶ್ರೀ ಹರಿವಾಸಮು, ಪದೀಹೇನು ಶೇಷುಲ ಪಡಗರಮಯಮು’, ‘ಬ್ರಹ್ಮ ಕಡಿಗಿನ ಪಾದಮು… ಬ್ರಹ್ಮಮು ತಾಕಿನ ಪಾದಮು’, ವಿನ್ನಪಾಲು ವಿನಡಮೇ ವಿಂತ ವಿಂತಲು’, ಕಲಗಂಟಿ,, ಕಲಗಂಟಿ, ಇಪ್ಪುಡಿಟು ಕಲಗಂಟಿ’…

ಇಂತಹ ನೂರಾರು ಕೀರ್ತನೆಗಳನ್ನು ಶ್ರೀ ವೆಂಕಟೇಶ್ವರ ಸ್ವಾಮಿಯ ಕುರಿತು 15ನೇ ಶತಮಾನದಲ್ಲಿ ಹಾಡಿ ಭಗವಂತನ ಸಾಕ್ಷಾತ್ಕಾರ ಮಾಡಿಕೊಂಡ ಪರಮಭಕ್ತ ಶ್ರೀ ಅನ್ನಮಾಚಾರ್ಯರ ಬಗ್ಗೆ ಏನೆಂದು ಹೇಳೋಣ. ತನ್ನ ಲೇಖನಿಯಿಂದ ಅತ್ಯದ್ಭುತ ಕೀರ್ತನೆಗಳನ್ನು ಬರೆದ ಸಂತ ಅನ್ನಯಮ್ಮ. ಇಂದಿಗೂ ಭಕ್ತಾದಿಗಳು ಅವರ ಕೀರ್ತನೆಗಳನ್ನು ಭಜನೆಯ ಮೂಲಕ ಹಾಡುತ್ತಿದ್ದಾರೆ. ಈಗಲೂ ನೀವು ತಿರುಪತಿಗೆ ಹೋದರೆ ಮೆಟ್ಟಿಲು ಹತ್ತುವ ಅಲಿಪಿರಿ ದ್ವಾರದಿಂದ  ಏಳು ಬೆಟ್ಟದ ಮೇಲೆ ತಿರುಮಲೆಯಲ್ಲಿ ನೆಲೆಸಿರುವ ಸ್ವಾಮಿಯ ದೇವಸ್ಥಾನದ ವರೆಗೂ ಸಣ್ಣದಾಗಿ ನಿಮಗೆ ಕೀರ್ತನೆಗಳು ಕೇಳುತ್ತಾ ಇರುತ್ತದೆ, ಅದೇ ಅನ್ನಮಯ್ಯ ಕೀರ್ತನೆಗಳು. ಎಂ.ಎಸ್.ಸುಬ್ಬಲಕ್ಷ್ಮೀ ಯವರ ಸುಪ್ರಭಾತದೊಂದಿಗೆ ಪ್ರಾರಂಭವಾಗುವ ದಿನಚರಿ ಅನ್ನಮಯ್ಯ ಕೀರ್ತನೆಗಳನ್ನು ಪ್ರಸರಿಸುತ್ತಲೇ ಇರುತ್ತದೆ.

ಇಂಥಹ ಭಕ್ತನೊಬ್ಬನ ಕಥೆಯನ್ನು ಜಯಶ್ರೀದೇವಿಯವರ ಮಾನಸ ಪುತ್ರ ಜೆ.ಕೆ.ಭಾರವಿಯವರು ಆಗಿನ ತಿರುಪತಿಯ ಶಾಸಕರು ಹಾಗೂ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ವಿ.ಎಂ.ಸಿಯ ಮಾಲೀಕ ವಿ.ದೊರೆಸ್ವಾಮಿರಾಜುರವರ ಬಳಿ ಇಟ್ಟರು. ಅವರು ಬಹಳವಾಗಿ ಮೆಚ್ಚಿ ಚಿತ್ರ ನಿರ್ದೇಶಿಸುವ ಜವಾಬ್ದಾರಿಯನ್ನು ನಿರ್ದೇಶಕ ಕೆ.ರಾಘವೇಂದ್ರ ರಾವ್ ಅವರಿಗೆ ವಹಿಸಿದರು. ಅವರು ಬಹಳಷ್ಟು ನಾಯಕರನ್ನು ಊಹಿಸಿಕೊಂಡು ಕೊನೆಗೆ ನಾಗಾರ್ಜುನರವರೆ ಈ ಪಾತ್ರ ಮಾಡಬಲ್ಲರು ಎಂಬ ನಿರ್ಧಾರಕ್ಕೆ ಬಂದರು. ಅಲ್ಲಿಯವರೆಗೂ ನಾಗ್ ಕಮರ್ಷಿಯಲ್ ಚಿತ್ರಗಳನ್ನೇ ಮಾಡಿಕೊಂಡು ಬಂದವರು. ಏಕಾಏಕಿ ಈ ಭಕ್ತನ ಪಾತ್ರಕ್ಕೆ ಜೀವ ತುಂಬಬಲ್ಲೆನೆ ಎಂಬ ಆತಂಕ ಅವರಲ್ಲಿತ್ತು. ಇದಕ್ಕಾಗಿ ತಮ್ಮ ತಂದೆಯವರ (ನಟ ಅಕ್ಕಿನೇನಿ ನಾಗೇಶ್ವರರಾವ್‌) ಬಳಿ ಹಲವು ಚರ್ಚೆಗಳು ನಡೆದು ಕೊನೆಗೂ ಒಪ್ಪಿಕೊಂಡರು.

ಅನಂತರ ಚಿತ್ರದಲ್ಲಿ ಬಹುಮುಖ್ಯವಾದ ಇನ್ನೊಂದು ಪಾತ್ರ ವೆಂಕಟೇಶ್ವರ ಸ್ವಾಮಿಯದ್ದು. ಇದಕ್ಕಾಗಿ ಸುಮನ್‌ರನ್ನು ಆಯ್ದುಕೊಂಡರು. ಅವರಿಗೂ ಅಳುಕು ಇತ್ತು. ಈ ಎರಡು ಪಾತ್ರಗಳು ಹೊಂದಿದ ಮೇಲೆ ಇನ್ನುಳಿದ ಪಾತ್ರವರ್ಗ ಸುಲಭವಾಗಿ ನಡೆದುಹೋಯಿತು. ಎಲ್ಲಾ ಮುಗಿಯಿತು ಎಂದು ಕೊಂಡರೆ ಮತ್ತೊಂದು ಸಮಸ್ಯೆ ಕೀರ್ತನೆಗಳನ್ನು ಹಾಡುವುದು ಯಾರು? ಎಂದರೆ ಇರುವುದು ಇನ್ಯಾರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಆದರೆ ಅವರು ಸಹ ಅಂಥ ಮಹಾನ್ ಕೀರ್ತನೆಗಳನ್ನು ಹಾಡುವ ಯೋಗ್ಯತೆ ತನಗಿದೆಯೇ ಎಂದು ಸುಮಾರು ದಿನ ಒಪ್ಪಿರಲಿಲ್ಲ! ಕೊನೆಗೆ ಚಿತ್ರದ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಮತ್ತು ನಿರ್ದೇಶಕ ಕೆ.ಆರ್.ಆರ್ ರವರ ಒತ್ತಾಯಕ್ಕೆ ಮಣಿದು ಒಪ್ಪಿದರು. ನಂತರ ನಡೆದದ್ದು ಇತಿಹಾಸ. ದೊರೈಸ್ವಾಮಿರಾಜುರವರು ಆ ಕ್ಷೇತ್ರದ ಶಾಸಕರಾಗಿದ್ದರಿಂದ ಪ್ರಭಾವ ಬಳಸಿ ತಿರುಮಲದ ಹಲವು ಕಡೆ ಚಿತ್ರೀಕರಣ ಮಾಡಿಬಿಟ್ಟಿದ್ದರು. ಇದನ್ನು ಪ್ರಶ್ನಿಸಿ ಕೋರ್ಟ್‌ಗೆ ಹೋಗಿದ್ದ ಭಕ್ತರೊಬ್ಬರ ಪರ ತೀರ್ಪು ಬಂದಿತ್ತು. ಮತ್ತೆ ಆ ಭಾಗದ ಚಿತ್ರೀಕರಣವನ್ನು ಬೇರೆ ಕಡೆ ಮಾಡಬೇಕಾಗಿ ಬಂತು.

22ನೇ ಮೇ 1997 ರಲ್ಲಿ ಆಂಧ್ರ, ಕರ್ನಾಟಕದಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಚಿತ್ರ ಮೊದಲ ದಿನವೇ ಅದ್ಭುತ ಓಪನಿಂಗ್ಸ್ ಪಡೆದುಕೊಂಡು ಯಶಸ್ವಿ ಪ್ರದರ್ಶನ ಕಾಣಲು ಸಾಧ್ಯ ಮಾಡಿದ್ದು ಇಡೀ ಚಿತ್ರತಂಡವಾದರೂ ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣ ಎಸ್.ಪಿ.ಬಿ ಯವರ ಅದ್ಭುತ ಗಾಯನ. ಅಲ್ಲಿಯವರೆಗೂ ಅನ್ನಮಯ್ಯ ಕೀರ್ತನೆಗಳನ್ನು ಕೇಳದವರು ಸಹ ಮನೆಮನೆಯಲ್ಲೂ ಕೇಳತೊಡಗಿದರು. ಜೊತೆಗೆ ನಾಗಾರ್ಜುನ ಮತ್ತು ಸುಮನ್ ತಮ್ಮ ಅಮೋಘ ಅಭಿನಯ ಮನಸೆಳೆದಿತ್ತು. ಚಿತ್ರಕ್ಕೆ ಸಂಗೀತ ನೀಡಿದ್ದ ಎಂ.ಎಂ.ಕೀರವಾಣಿಯವರ ಕೊಡುಗೆ ಮರೆಯಲಾದೀತೆ?

ಚಿತ್ರ ಅಭೂತಪೂರ್ವ ಯಶಸ್ಸು ಪಡೆದರೂ ನಾಗಾರ್ಜುನ ಅವರಿಗೆ ಎಲ್ಲೋ ಅಳುಕು ಕಾಡುತ್ತಿತ್ತು. ತಮ್ಮ ತಂದೆಯವರಿಗೆ ಸಿನಿಮಾ ತೋರಿಸಿ ಅವರ ಅಭಿಪ್ರಾಯ ಕೇಳಿದರು. ಅದಕ್ಕೆ ನಾಗೇಶ್ವರರಾವು ರವರು, ‘ನನ್ನ ಅಭಿಪ್ರಾಯಕ್ಕಿಂತಾ ಮುಖ್ಯ ನಟ ಡಾ.ರಾಜ್ ಕುಮಾರ್ ರವರು ಸಿನಿಮಾ ನೋಡಿ ಮೆಚ್ಚಿಕೊಂಡರೆ ನೀನು ಗೆದ್ದಂತೆ. ಯಾಕೆಂದರೆ ಇಂಥ ಪಾತ್ರಗಳಲ್ಲಿ ಜೀವಿಸಿ, ಲೀಲಾಜಾಲವಾಗಿ ನಟಿಸಿರುವುದು ಅವರೊಬ್ಬರೇ, ಅವರ ಅಭಿಪ್ರಾಯಕ್ಕಾಗಿ ಕಾಯೋಣ’ ಎಂದು ಹೇಳಿದರು.

ಈ ಚಿತ್ರ ಕರ್ನಾಟಕದಲ್ಲಿ ವಿತರಣೆಯ ಹಕ್ಕು ಪಡೆದವರು ಮಹೇಶ್ವರಿ ಪರಮೇಶ್ವರಿ ಕಂಬೈನ್ಸ್‌ನವರು. ಮುಖ್ಯ ಚಿತ್ರಮಂದಿರ ಪಲ್ಲವಿ. ಒಂದು ದಿನ ರಾಜಕುಮಾರ್‌ ಕುಟುಂಬ ಸಮೇತರಾಗಿ ಪಲ್ಲವಿ ಟಾಕೀಸ್ ನಲ್ಲಿ ಚಿತ್ರ ವೀಕ್ಷಿಸಿದ್ದರು. ಚಿತ್ರ ನೋಡಿದ ಅಣ್ಣಾವ್ರು, ನಾಗಾರ್ಜುನ ರವರ ನಟನೆಯನ್ನಷ್ಟೇ ಅಲ್ಲದೆ ಇಡೀ ಚಿತ್ರತಂಡವನ್ನು ಹಾಡಿ ಹೊಗಳಿದ್ದರು. ಅಲ್ಲಿಗೆ ಚಿತ್ರ ತಂಡ ಹರ್ಷಗೊಂಡಿದ್ದರು. ಚಿತ್ರ ಬೆಂಗಳೂರು ಪಲ್ಲವಿಯಲ್ಲಿ 100 ದಿನಗಳ ಯಶಸ್ವಿ ಪ್ರದರ್ಶನ ಕಂಡಿತ್ತು. ಕೋಲಾರ ಜಿಲ್ಲೆಯ ಹಲವೆಡೆ 50 ದಿನಗಳ ಪ್ರದರ್ಶನ ಕಂಡಿತ್ತು. ಚಿತ್ರ ಆಂಧ್ರ, ಕರ್ನಾಟಕ ಸೇರಿ 42 ಕೇಂದ್ರಗಳಲ್ಲಿ 100 ದಿನಗಳು, 2 ಕಡೆ 25 ವಾರಗಳ ಪ್ರದರ್ಶನ ಕಂಡಿತ್ತು.

ಚಿತ್ರಕ್ಕೆ ಎರಡು ರಾಷ್ಟ್ರಪ್ರಶಸ್ತಿಗಳು (ನಾಗಾರ್ಜುನ ಮತ್ತು ಕೀರವಾಣೀ) ಲಭಿಸಿತ್ತು. ಮೂರು ಫಿಲ್ಮ್‌ಫೇರ್‌ ಪುರಸ್ಕಾರ ಸಂದಿವೆ. ಎಸ್‌ಪಿಬಿ ಗಾಯನ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಎಂಟು ನಂದಿ ಗೌರವಗಳು ಲಭಿಸಿವೆ. ಅಪಾರ ವೆಚ್ಚದಲ್ಲಿ ತಯಾರಾದ ಚಿತ್ರದಲ್ಲಿ ಅದ್ದೂರಿ ತಾರಗಣವಿತ್ತು. ನಾಗಾರ್ಜುನ, ಸುಮನ್, ಮೋಹನ್ ಬಾಬು, ರಮ್ಯಾಕೃಷ್ಣ, ಭಾನುಪ್ರಿಯಾ, ರೋಜಾ, ಕಸ್ತೂರಿ, ಬ್ರಹ್ಮಾನಂದಮ್, ಶ್ರೀಕನ್ಯಾ, ಬಾಲಯ್ಯ, ಕೋಟಾಶ್ರೀನಿವಾಸರಾವ್, ಬಾಬು ಮೋಹನ್, ತನಿಕೆಳ್ಳ ಭರಣಿ ಮತ್ತಿತರರು. ಚಿತ್ರದಲ್ಲಿ ಒಟ್ಟು 20 ಹಾಡುಗಳಿದ್ದು, ಟಿ. ಸೀರಿಸ್ ಕಂಪೆನಿಯವರು  2 ಕ್ಯಾಸೆಟ್ ಗಳು ಕೋಂಬೋ ಪ್ಯಾಕ್ ನಲ್ಲಿ ಬಿಡುಗಡೆ ಮಾಡಿದ್ದರು. ಇದುವರೆಗೂ ಆಂಧ್ರ , ತೆಲಂಗಾಣದಲ್ಲಿ ಅತೀ ಹೆಚ್ಚು ಮಾರಾಟವಾದ ಸಿನಿಮಾ ಆಡಿಯೋ ಕ್ಯಾಸೆಟ್ ಎಂಬ ಹೆಗ್ಗಳಿಕೆ ಇರುವುದು ‘ಅನ್ನಮಯ್ಯ’ ಚಿತ್ರಕ್ಕೆ. ಈ ಚಿತ್ರ ಬಿಡುಗಡೆಯಾಗಿ ಇಂದಿಗೆ 24 ವರ್ಷ.

ಈ ಬರಹಗಳನ್ನೂ ಓದಿ