
ದೇವನಹಳ್ಳಿ
ಅಬ್ಬಾ! ಒಂದು ಚಿತ್ರ ಮನಸ್ಸುಗಳನ್ನು ಈ ಪರಿಯಲ್ಲಿ ಆವರಿಸಿಕೊಂಡರೆ ಇನ್ನು ಆ ಚಿತ್ರ ದಾಖಲೆಗಳನ್ನು ಸೃಷ್ಟಿಸದೆ ಇರುತ್ತದಾ? ಈ ಚಿತ್ರದ ದೊಡ್ಡ ಯಶಸ್ಸಿಗೆ ಯಾರನ್ನು ಹೊಗಳಬೇಕು? ಇದು ಪ್ರಶ್ನೆಯಾಗಿಯೇ ಉಳಿದುಬಿಡುತ್ತದೆ. ಭಾರತೀಯ ಚಿತ್ರರಂಗದ ಗಮನ ಸೆಳೆದ ‘ಮರೋಚರಿತ್ರ’ ತೆಲುಗು ಸಿನಿಮಾ ತೆರೆಕಂಡು ಇಂದಿಗೆ (ಮೇ 19) ನಲವತ್ಮೂರು ವರ್ಷ.
‘ಏನ್ ಚಿತ್ರ ರೀ ಇದು… ಕೊನೆಯಲ್ಲಿ ನಾಯಕ ನಾಯಕಿ ಸತ್ತು ಹೋಗುತ್ತಾರೆ, ಆ ಹೀರೋಯಿನ್ನೋ ನೋಡೋಕೆ ಚೆನ್ನಾಗಿಲ್ಲ, ಕಪ್ಪಗಿದ್ದಾಳೆ, 3 ದಿನ ಆದ್ರೂ ಜನ ಥಿಯೇಟರ್ ಕಡೆ ಬರ್ತಿಲ್ಲ, ಹಾಡುಗಳು ಚೆನ್ನಾಗಿವೆ, ಒಂದು ವಾರ ನೋಡೋಣ” ಇದು 4ನೇ ದಿನದಲ್ಲಿ ಆಂಧ್ರದ ಚಿತ್ರಮಂದಿರಗಳ ಓನರ್ ಹಾಗೂ ವಿತರಕರ ನಡುವಿನ ಸಂಭಾಷಣೆ.
ನಿಜ, ‘ಮರೋ ಚರಿತ್ರ’ ಕಪ್ಪು ಬಿಳುಪು ಸಿನಿಮಾ ಬಿಡುಗಡೆಯಾಗಿ 3 ದಿನ ಕಳೆದಿತ್ತು, ಜನ ಚಿತ್ರಮಂದಿರದ ಕಡೆ ಸುಳಿದಿರಲಿಲ್ಲ. 5ನೇ, 6ನೇ ದಿನ ಕೊಂಚ ಚೇತರಿಕೆ ಕಂಡಿತ್ತು. ಸರಿ ಇನ್ನೊಂದು ವಾರ ನೋಡಿ ಎಂದು ವಿತರಕರ ದುಂಬಾಲು. ಸರಿ ಆಯ್ತು, ಇನ್ನೊಂದು ವಾರ ನೋಡೋಣ ಎಂದು ಮುಂದುವರೆಸಿದರು, ಚಿತ್ರ 2ನೇ ವಾರಕ್ಕೆ ಬಂದಿತ್ತು, ಇಡೀ ಆಂಧ್ರದಾದಾದ್ಯಂತ ಸಣ್ಣದಾಗಿ ಯುವಸಮೂಹ ಚಿತ್ರಮಂದಿರಗಳ ಕಡೆ ಕದಲತೊಡಗಿದರು. ಅಲ್ಲಿಂದ ಶುರುವಾಗಿದ್ದು ನಂತರ ಇಡೀ ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿ, ಸುವರ್ಣಾಕ್ಷರಗಳಿಂದ ಬರೆದಿಡುವಂತಾ ಚರಿತ್ರೆಗಳು ಸೃಷ್ಟಿ ಮಾಡಿದ್ದು ಇದೇ ‘ಮರೋ ಚರಿತ್ರ’ ಎಂಬ ಕಪ್ಪು ಬಿಳುಪು ಚಿತ್ರ. ಅದೇನು ಚಿತ್ರ ಗುರು, ಏನ್ ಹಾಡುಗಳು, ಏನ್ ಸಂಭಾಷಣೆ… ಎಂದು ಸಿನಿಪ್ರೇಮಿಗಳು ಬೆರಗಿನಿಂದ ನೋಡಿದ್ದರು. ಹಾಡುಗಳು ಪ್ರೇಮಿಗಳಿಗೆ ಬಾಯಿಪಾಠವಾಗಿದ್ದವು.

ಆಂಡಾಳ್ ಪ್ರೊಡಕ್ಷನ್ಸ್ ಮೂಲಕ ರಾಮ ಆರಂಗನ್ನಾಲ್ ನಿರ್ಮಿಸಿ, ಕೆ.ಬಾಲಚಂದರ್ ರವರು ನಿರ್ದೇಶಿಸಿದ ಪ್ರೇಮ ಕಾವ್ಯ ‘ಮರೋಚರಿತ್ರ’. 1976ರಲ್ಲಿ ಬಿಡುಗಡೆಯಾಗಿದ್ದ ಕೆ.ಬಾಲ ಚಂದರ್ ರವರ ತೆಲುಗು ಚಿತ್ರ ‘ಅಂತುಲೇನಿ ಕಥಾ’ (ಬೆಂಕಿಯಲ್ಲಿ ಅರಳಿದ ಹೂವು) ಚಿತ್ರದಲ್ಲಿ ಕಮಲ ಹಾಸನ್ ಒಂದು ಚಿಕ್ಕ ಪಾತ್ರ (ಕನ್ನಡದಲ್ಲಿ ಶರತ್ ಬಾಬು ರವರು) ಮಾಡಿದ್ದರು. ಅಂದಿನಿಂದ ಅನೇಕ ತೆಲುಗು ನಿರ್ಮಾಪಕರು ಕಮಲ ಹಾಸನ್ ರವರನ್ನು ಭೇಟಿ ಮಾಡಿ ಕಾಲ್ ಶೀಟ್ ಕೇಳತೊಡಗಿದರು. ಆದರೆ ಕಮಲ್ ತಮ್ಮನ್ನು ತೆಲುಗು ಚಿತ್ರರಂಗಕ್ಕೆ ಪರಿಚಯಿಸಿದ ಗುರು ಕೆ.ಬಾಲಚಂದರ್ ಅವರ ನಿರ್ದೇಶನದಲ್ಲೇ ನಾಯಕನಾಗಿ ತಮ್ಮ ಮೊದಲ ಚಿತ್ರ ಎಂದು ಕುಳಿತುಬಿಟ್ಟರು. ಇದಾದ 2 ವರ್ಷಗಳ ನಂತರ ಕೆ.ಬಿ.ಸಿ ಅವರು ರಾಮನ್ ರವರಿಗೆ ಕಥೆ ಹೇಳಿ, ಚಿತ್ರ ತೆಲುಗಿನಲ್ಲಿ ಮಾತ್ರ ಮಾಡೋಣ, ನಾಯಕ ಕಮಲ ಹಾಸನ್ ಎಂದು ತಿಳಿಸಿದರು. ಸರಿ, ನಾಯಕಿ ಯಾರು?
ಕೆ.ಬಿ.ಸಿ ಅವರಿಗೆ ಈ ಚಿತ್ರದಲ್ಲಿ ಹೊಸಮುಖ ಪರಿಚಯಿಸಬೇಕು, ಹುಡುಗಿ ಇನ್ನೂ ಪಾತ್ರಕ್ಕೆ ಸರಿದೂಗುವಂತೆ ಚಿಕ್ಕವಳಾಗಿರಬೇಕು ಎಂದು ಅಡಿಷನ್‌ಗೆ ಕರೆಕೊಟ್ಟರು. ಸುಮಾರು ಮಂದಿ ಅಡಿಷನ್ ಗೆ ಬಂದು ಹೋದರು, ಹೀಗೆ ಬಂದು ಹೋದವರು 161 ಮಂದಿ, ಆದರೆ ಯಾರೂ ಒಪ್ಪಿಗೆಯಾಗಲಿಲ್ಲ. 162 ನೆಯವರಾಗಿ ಆಯ್ಕೆಯಾಗಿದ್ದು ಆಗಷ್ಟೇ 10ನೇ ತರಗತಿಯಲ್ಲಿ ಓದುತ್ತಿದ್ದ, ಬಟ್ಟಲು ಕಣ್ಗಳ ಅಭಿಲಾಷ ಎಂಬ ಕೃಷ್ಣ ಸುಂದರಿ. ಕೇವಲ ತನ್ನ ಛಾಯಾ ಚಿತ್ರಗಳನ್ನು ಕಳುಹಿಸಿ ಸುಮ್ಮನಾಗಿದ್ದ ಆಕೆಗೆ ತಾನು ಚಿತ್ರಕ್ಕೆ ಆಯ್ಕೆಯಾಗುತ್ತೇನೆ ಎನ್ನುವ ನಿರೀಕ್ಷೆಯೇ ಇರಲಿಲ್ಲ. ಬಾಲಚಂದರ್ ರವರಿಂದ ಕರೆಬಂದಾಗ ಅವಕ್ಕಾಗಿ ಹೋದಳು. ಇನ್ನು ಈಕೆಯನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡ ಬಗ್ಗೆ ಯೂನಿಟ್ ನಲ್ಲಿ ಯಾರಿಗೂ ಇಷ್ಟವಿರಲಿಲ್ಲ, ಆದರೆ ಕೆ.ಬಿ.ಸಿ ಅವರ ಮುಂದೆ ಬಾಯಿಬಿಟ್ಟು ಹೇಳುವ ಹಾಗಿಲ್ಲ. ಆದರೆ ಮುಂದೆ ತಿಳಿಯಿತು ನಿರ್ದೇಶಕರ ಆಯ್ಕೆ ಸೂಪರ್ ಅಂತ. ಏಕೆಂದರೆ ಚಿತ್ರದಲ್ಲಿ ಮೊದಲರ್ಧ ಚೆಲ್ಲು ಚೆಲ್ಲಾಗಿ ವರ್ತಿಸುವ ಹುಡುಗಿ ಸೆಕೆಂಡ್ ಹಾಫ್‌ಗೆ ಗಂಭೀರಳಾಗಿ, ಪೋಷಕರ ವಿರುದ್ಧ ಬಂಡೇಳುವ ಪಾತ್ರದಲ್ಲಿ ಅಕ್ಷರಶಃ ಸಿನಿಮಾವನ್ನೇ ಅಪೋಷನ ಮಾಡಿಕೊಂಡು ಬಿಡುತ್ತಾಳೆ, ಆಕೆ ಬೇರಾರೂ ಅಲ್ಲ ನಾಯಕಿ ‘ಸರಿತಾ’. ಇನ್ನು ಕಮಲ ಹಾಸನ್ ಬಗ್ಗೆ ಹೇಳಲು ಪದಗಳೇ ಸಾಲದು. ಈ ಇಬ್ಬರ ಅಭಿನಯ ನೋಡುತ್ತಿದ್ದರೆ ನಾವೇ ಸಿನಿಮಾದಲ್ಲಿ ಲೀನವಾಗಿಬಿಟ್ಟಿರುವಂತೆ ಭಾಸವಾಗಿ ಪಾತ್ರಗಳೇ ನಾವಾಗಿ ಅನುಭವಿಸುತ್ತೇವೆ.

ಇನ್ನು ದ್ವಿತೀಯಾರ್ಧದಲ್ಲಿ ಬರುವ ಮಾಧವಿಯವರ ಪಾತ್ರವೂ ಸಹ ಚಿತ್ರಕ್ಕೆ ತಿರುವು ಕೊಡುವ ಪಾತ್ರ. ಪ್ರತಿಯೊಂದು ಪಾತ್ರವೂ ಬಹಳ ಆಪ್ತವಾಗಿಬಿಡುತ್ತದೆ. ಒಂದು ಕಡೆ ಪ್ರೀತಿಯನ್ನು ವಿರೋಧಿಸುವ ತಂದೆ ತಾಯಿಗಳನ್ನು ಶಪಿಸುತ್ತಾ ಹೊರಗಡೆ ಬರುವ ಮಂದಿಯಾದರೆ, ಮತ್ತೊಂದೆಡೆ ಪ್ರೇಮಿಗಳ ದುರಂತ ಅಂತ್ಯ ಕಂಡು ಕಣ್ಣೀರು ಹಾಕುತ್ತಾ ಬರುತ್ತಿದ್ದರು, ಇನ್ನು ಕೆಲವರು ಏನೊಂದು ಮಾತನಾಡದೆ, ಚಿತ್ರದ ಅಂತ್ಯದ ಶಾಕ್ ನಿಂದ ಹೊರಬರಲಾಗದೆ ಮೂಕರಾಗಿಬಿಟ್ಟಿದ್ದರು. ಅಬ್ಬಾ… ಒಂದು ಚಿತ್ರ ಮನಸ್ಸುಗಳನ್ನು ಈ ಪರಿಯಲ್ಲಿ ಆವರಿಸಿಕೊಂಡರೆ ಇನ್ನು ಆ ಚಿತ್ರ ದಾಖಲೆಗಳನ್ನು ಉಡೀಸ್ ಮಾಡದೆ ಇರುತ್ತದಾ? ದಾಖಲೆಗಳನ್ನು ಸೃಷ್ಟಿಸದೆ ಇರುತ್ತದಾ?
ಈ ಚಿತ್ರದಲ್ಲಿ ಯಾರನ್ನು ಹೊಗಳಬೇಕು? ಇದು ಪ್ರಶ್ನೆಯಾಗಿಯೇ ಉಳಿದುಬಿಡುತ್ತದೆ. ಕಾರಣ, ಅತ್ಯುತ್ತಮ ನಿರ್ದೇಶನ ಮಾಡಿದ ಕೆ.ಬಾಲಚಂದರ್ ರವರನ್ನೋ, ಅತ್ಯುತ್ತಮ ಸಂಗೀತ ನೀಡಿದ ಎಂ.ಎಸ್.ವಿಶ್ವನಾಥನ್ ರವರನ್ನೋ, ಚಿತ್ರಕ್ಕೆ ಹಾಡುಗಳು ರಚಿಸಿದ ‘ಗುರು’ ಆತ್ರೇಯ ರವರನ್ನೋ, ಅವರು ರಚಿಸಿದ ಹಾಡುಗಳನ್ನು ಅದ್ಭುತವಾಗಿ ಹಾಡಿದ ನಮ್ಮ ನಿಮ್ಮೆಲ್ಲರ ಮಹಾನ್ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರನ್ನೋ, ಅವರ ಜೊತೆಗೂಡಿ ಹಾಡಿದ ಎಸ್. ಜಾನಕಿ ಅಮ್ಮ, ಎಲ್.ಆರ್.ಈಶ್ವರಿಯವರನ್ನೋ, ಮತ್ತು ಒಂದೇ ಒಂದು ಹಾಡು ಹಾಡಿ ರಂಜಿಸಿದ್ದ ಕಮಲ ಹಾಸನ್ ರವರನ್ನೋ, ಈ ಸುಂದರ ಪ್ರೇಮಕಾವ್ಯದಲ್ಲಿ ವಿಶಾಖಪಟ್ಟಣದ ಸಮುದ್ರತೀರವನ್ನು ಸೆರೆಹಿಡಿದ ಛಾಯಾಗ್ರಾಹಕ ಬಿ.ಎಸ್.ಲೋಕನಾಥ್ ರವರನ್ನೋ, ಪ್ರತಿಯೊಂದು ಫ್ರೇಮನ್ನು ಅಚ್ಚುಕಟ್ಟಾಗಿ ಸಂಕಲನ ಮಾಡಿದ ಎನ್.ಆರ್.ಕಿಟ್ಟು ರವರನ್ನೋ, ತೆರೆಯ ಹಿಂದೆ ಕೆಲಸ ಮಾಡಿದವರನ್ನೋ, ಹೀಗೆ ಎಲ್ಲರ ಟೀಮ್ ವರ್ಕ್ ನಿಂದ ಸೃಷ್ಟಿಯಾದ ಅದ್ಭುತ ಚಿತ್ರವನ್ನು ಅಪ್ಪಿ, ಒಪ್ಪಿ, ಮೆಚ್ಚಿ, ಮುದ್ದಾಡಿದ ಪ್ರೇಕ್ಷಕ ವೃಂದವನ್ನೋ. ಯಾರನ್ನು ಹೋಗೋಳೋಣ? ಈ ಎಲ್ಲರ ಸಂಗಮವೇ ಚರಿತ್ರೆ ಸೃಷ್ಟಿಸಿದ ‘ಮರೋ ಚರಿತ್ರ’ ಅಲ್ಲವೇ?

ಕಥೆ ತುಂಬಾ ಸರಳ. ತೆಲುಗು ಹುಡುಗಿಯನ್ನು ಇಷ್ಟಪಡುವ ತಮಿಳು ಹುಡುಗ, ಅವರ ಸಂಪ್ರದಾಯಗಳು ಬೇರೆ ಬೇರೆ ಎಂಬ ಕಾರಣಕ್ಕೆ ಪ್ರೇಮಿಗಳನ್ನು ದೂರಮಾಡಲು ಪ್ರಯತ್ನಿಸುವ ತಂದೆ ತಾಯಿಗಳು. ಮೊದಲಾರ್ಧದಲ್ಲಿ ಇದೊಂದು ರೀತಿ ತಮಾಷೆಯಾಗಿ ಕಾಣುವ ಜಗಳಗಳು ಮಧ್ಯಂತರಕ್ಕೆ ಬರುವಷ್ಟರಲ್ಲಿ ತೀರಾ ಗಂಭೀರವಾಗಿಬಿಡುತ್ತದೆ. ಒಂದು ವರ್ಷ ಇಬ್ಬರೂ ಒಬ್ಬರಿಗೊಬ್ಬರು ನೋಡಬಾರದು, ಮಾತನಾಡಬಾರದು ಹಾಗೆ ನಡೆದುಕೊಂಡರೆ ಮಾತ್ರ ಮದುವೆ ಮಾಡುವುದಾಗಿ ಹೇಳಿ ದೂರ ಮಾಡುತ್ತಾರೆ. ನಡುವೆ ವಿಧಿಯಾಟವೇ ಬೇರೆಯಾಗಿ ಪ್ರೇಮಿಗಳು ಅಂತ್ಯದಲ್ಲಿ ಸಾವಿಗೆ ಶರಣಾಗುತ್ತಾರೆ. ನಾನು ಹೇಳುವುದಕ್ಕಿಂತಾ ನೋಡದೆ ಇರುವವರು ನೋಡಿದರೆ ಕಣ್ಣಾಲಿಗಳು ತುಂಬಿ ಬರುತ್ತದೆ. ಚಿತ್ರ ನೋಡಿರುವವರು ಈಗಾಗಲೇ ಸಿನಿಮಾ ದೊಳಗೆ ಹೋಗಿಬಿಟ್ಟಿರುತ್ತೀರ.
ಈ ಚಿತ್ರ ಅಂಧ್ರದಲ್ಲಿ ಬಿಡುಗಡೆಯಾದ ನಂತರ ತಮಿಳುನಾಡಿನಲ್ಲು ನೇರ ತೆಲುಗಿನಲ್ಲೇ ಬಿಡುಗಡೆಯಾಗಿ ದಾಖಲೆ ಸೃಷ್ಟಿಸಿತು. ಡಬ್ ಆಗದೆ ಇರಲು ಕಾರಣ ಚಿತ್ರದಲ್ಲಿ ಸುಮಾರು ತಮಿಳು ಸಂಭಾಷಣೆಯೇ ಇದ್ದುದು. ಚೆನ್ನೈನ ಸಫೈರ್ ಟಾಕೀಸ್ ನಲ್ಲಿ 596 ದಿನಗಳ ಅಮೋಘ ಪ್ರದರ್ಶನ ಕಂಡರೆ, ಕರ್ನಾಟಕದಲ್ಲಿ ಕಲ್ಪನಾ ಹಾಗೂ ಮುಂದುವರೆದು ಮಿನರ್ವಾ ಟಾಕೀಸ್ ನಲ್ಲಿ 693 ದಿನಗಳ ಪ್ರದರ್ಶನ, ಮೈಸೂರು ಗಾಯತ್ರಿ ಚಿತ್ರಮಂದಿರದಲ್ಲಿ 350 ದಿನಗಳ ಅಮೋಘ ಪ್ರದರ್ಶನ ಕಂಡಿತ್ತು. ಈ ಚಿತ್ರ ಕರ್ನಾಟಕಕ್ಕೆ ವಿತರಣೆಯ ಹಕ್ಕುಗಳು ಪಡೆದದ್ದು ಕೆ.ಆರ್. ಪ್ರಭು ರವರು, 60 ಸಾವಿರಕ್ಕೆ. ಲಾಭದ ಬಗ್ಗೆ ಅವರವರ ವಿವೇಚನೆಗೆ ಬಿಟ್ಟಿದ್ದು. ಯಾಕೆಂದರೆ ಈಗಿನ ಲಕ್ಷಗಳಲ್ಲಿ ಲೆಕ್ಕ ಹಾಕಲು ಆಗೋಲ್ಲ ಬಿಡಿ.
ಇದೇ ಚಿತ್ರವನ್ನು ಮಲಯಾಳಂಗೆ ಡಬ್ ಮಾಡಿ ‘ತಿರಕಾಲ್ ಎಳುದಿಯ ಕವಿದ’ ಎಂದು ಬಿಡುಗಡೆ ಮಾಡಿದ್ರು ಅಲ್ಲಿಯೂ ಸೂಪರ್ ಹಿಟ್ ಆಯ್ತು. ದಕ್ಷಿಣ ಭಾರತದಲ್ಲಿ ಅಪಾರ ಯಶಸ್ಸು ಕಂಡ ಚಿತ್ರವನ್ನು ಕೆ.ಬಿ.ಸಿ ಅವರು ಹಿಂದಿಯಲ್ಲಿ ‘ಏಕ್ ದುಜೇ ಕೆ ಲಿಯೇ’ ಶೀರ್ಷಿಕೆಯಡಿ ಹಿಂದಿಯಲ್ಲಿ ತೆಗೆದರು. ಅಲ್ಲಿಯೂ ಕಮಲ ಹಾಸನ್ ರವರೆ ನಾಯಕರಾದರೆ ಪಂಜಾಬಿ ಬೆಡಗಿ ರತಿ ಅಗ್ನಿಹೋತ್ರಿ ನಾಯಕಿಯಾಗಿ ಮಿಂಚಿದರು. ಅದು ಸಹ ಭಾರತದಾದ್ಯಂತ ಸೂಪರ್ ಹಿಟ್ ಪ್ರದರ್ಶನ ಕಂಡಿತ್ತು. ಈ ಚಿತ್ರದಲ್ಲಿಯೂ ಎಸ್.ಪಿ.ಬಿ ಅವರ ಗಾಯನ ಮನಮುಟ್ಟುವಂತಿತ್ತು. ಇದು ಸಹ ಬೆಂಗಳೂರಿನಲ್ಲಿ ಶತದಿನೋತ್ಸವ ಆಚರಿಸಿತ್ತು.

2013 ಕ್ಕೆ ಭಾರತೀಯ ಚಿತ್ರರಂಗ 100 ವರ್ಷಗಳ ಸಂಭ್ರಮಾಚಾರಣೆಯಲ್ಲಿ CNN IBN ಪಟ್ಟಿ ಮಾಡಿದ ನೂರು ಸ್ಮರಣೀಯ ಚಿತ್ರಗಳಲ್ಲಿ ‘ಮರೋ ಚರಿತ್ರ’ ಮತ್ತು ‘ಏಕ್ ದುಜೇ ಕೆ ಲಿಯೇ’ ಎರಡೂ ಚಿತ್ರಗಳು ಸ್ಥಾನ ಪಡೆದಿದ್ದವು ಎಂದರೆ ಅದ್ಭುತ ಸಾಧನೆಯೇ ಹೌದು. ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು ಒಂದು ರಿಪೀಟ್ ಸಾಂಗ್ ಇದೆ. ಎಲ್ಲಾ ಹಾಡುಗಳೂ ಮಧುರ. ಚಲನಚಿತ್ರಗಳ ಹೆಸರುಗಳನ್ನೇ ಬಳಸಿ ಮಾಡಿರುವ ಹಾಡು ‘ಕಲಸಿ ಉಂಟೇ ಕಲದು ಸುಖಮು’ ಆತ್ರೇಯ ರವರ ರಚನೆಗೆ ಎಸ್.ಪಿ.ಬಿ ಮತ್ತು ಜಾನಕಮ್ಮನವರ ಗಾಯನ ಅವರ ಪ್ರತಿಭೆಗೆ ಸಾಕ್ಷಿ.
ಬೆಳ್ಳಿತೆರೆಯ ಮೇಲೆ ನಮ್ಮನ್ನು ರಂಜಿಸಿದವರು : ಬಾಲು ಆಗಿ ಕಮಲ ಹಾಸನ್, ಸ್ವಪ್ನಾ ಆಗಿ ಸರಿತಾ, ಸಂಧ್ಯಾ ಆಗಿ ಮಾಧವಿ, ಜೆ.ವಿ.ರಾಮಮೂರ್ತಿ, ಕಾಕಿನಾಡ ಶ್ಯಾಮಲಾ, ಪಿ.ಎಲ್.ನಾರಾಯಣ, ಜಯವಿಜಯ, ಎಸ್.ಕೆ.ಮಿಸ್ರೋ ಮತ್ತಿತರರ ಅಭಿನಯವಿತ್ತು. ಲೈಲಾ – ಮಜ್ನು, ರೋಮಿಯೋ – ಜ್ಯುಲಿಯೆಟ್, ದೇವದಾಸ್ – ಪಾರ್ವತಿ, ಸಲೀಂ – ಅನಾರ್ಕಲಿಯಂತೆ ದುರಂತ ಪ್ರೇಮಿಗಳಾಗಿ ಖ್ಯಾತಿ ಪಡೆದಿದ್ದರು ನಮ್ಮ ಬಾಲು – ಸ್ವಪ್ನ. ಮುಂದೆ ಕನ್ನಡದಲ್ಲಿ 2006ರಲ್ಲಿ ಮಯೂರ್ ಪಟೇಲ್ ಅಭಿನಯದಲ್ಲಿ ‘ಲವ್ ಸ್ಟೋರಿ’ ಶೀರ್ಷಿಕೆಯಡಿ ಚಿತ್ರ ರೀಮೇಕಾಯ್ತು. ಒರಿಯಾ ಭಾಷೆಯಲ್ಲೂ ಬಂದಿದೆ. 1979ರಲ್ಲಿ ‘ಮರೋ ಚರಿತ್ರ’ ಚಿತ್ರದ ನಿರ್ದೇಶನಕ್ಕೆ ಕೆ.ಬಿ.ಸಿ ಅವರಿಗೆ ದಕ್ಷಿಣ ಭಾರತದ ಶ್ರೇಷ್ಠ ನಿರ್ದೇಶಕ ಫಿಲ್ಮ್‌ಫೇರ್ ಗೌರವ ಲಭಿಸಿತ್ತು. ಈ ಚಿತ್ರ ಬಿಡುಗಡೆಯಾಗಿ ಇಂದಿಗೆ (19.05.1978- 19.05.2021) 43 ವರ್ಷ.