ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಚಿತ್ತಾಪುರದ ಜನ ಮರೆಯದ ‘ಸವೇರಾ ಟಾಕೀಸ್’

ಪೋಸ್ಟ್ ಶೇರ್ ಮಾಡಿ
ಚಂದ್ರು ಬಲ್ಲ

ಚಿತ್ರ ಬದಲಾವಣೆ ಆದಾಗ ಹೊಸ ಚಿತ್ರದ ಪ್ರಚಾರಕ್ಕೆ ಎಲ್ಲರ ಓಣಿಗಳಲ್ಲಿ ಪೋಸ್ಟರ ಹಿಡಿದು ಡಂಗೂರ ಸಾರುವವರನ್ನು ಹಿಂಬಾಲಿಸುವುದು ಚಿಕ್ಕಂದಿನ ಸವಿನೆನಪು. ನಮ್ಮೂರು ಚಿತ್ತಾಪುರದ ಸವೇರಾ ಟಾಕೀಸ್‌ ಇಂತಹ ಹಲವು ನೆನಪುಗಳನ್ನು ಬಿಟ್ಟು ಹೋಗಿದೆ.

ಕಾಲಕ್ಕೆ ತಕ್ಕಂತೆ ನಮ್ಮ ಮನೋರಂಜನೆ ವಿಧಾನ ಬದಲಾಗುತ್ತಾ ಬಂದಿದೆ. ಜೊತೆಗೆ ಹಳೆಯ ನೆನಪುಗಳು ಮಾಸದೆ ನಮ್ಮ ಸ್ಮೃತಿಯಲ್ಲಿ ಸದಾ ಸ್ಥಿರವಾಗಿರುತ್ತವೆ. ನಮ್ಮ ಚಿತ್ತಾಪುರದ ‘ಸವೇರಾ ಟಾಕೀಸ್’ಗೆ ಸುಮಾರು 70 ವರ್ಷಗಳ ಇತಿಹಾಸವಿದೆ. ಅಂದಾಜು 1948 – 49ರಲ್ಲಿ ಆರಂಭಗೊಂಡ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡ ಮೊದಲ ಸಿನಿಮಾ ‘ಶಮಾ’ (ಹಿಂದಿ). ಕೊನೆಯದಾಗಿ 2011ರಲ್ಲಿ ಕನ್ನಡ ಚಿತ್ರ ‘ಕೃಷ್ಣನ್ ಲವ್ ಸ್ಟೋರಿ’ ಚಿತ್ರ ಪ್ರದರ್ಶನಗೊಳಿಸಿ ಬಾಗಿಲು ಮುಚ್ಚಿತು.

ಹಿರಿಯರನ್ನು ಮಾತನಾಡಿಸಿದಾಗ ಮೊದಲು ಟಾಕೀಸ್ ಹೆಸರು ಮುಷರತ್, ಜವಾರ್, ಜೈಹಿಂದ್ ಹೀಗೆ ಬದಲಾಗುತ್ತಾ ಸವೇರಾ ಅಗಿ ಬದಲಾಗಿದೆ. ಊರಿನ ಮಧ್ಯಭಾಗದಲ್ಲಿರುವುದರಿಂದ ಎಲ್ಲರಿಗೂ ಸಮೀಪ. ಚಿತ್ರ ಆರಂಭವಾಗುವ ಮೊದಲು ಸ್ವೀಕರ್‌ನಲ್ಲಿ ಜನಪ್ರಿಯ ಗೀತೆಗಳನ್ನು ಹಾಕುತ್ತಿದ್ದರು. ಅದು ಎಲ್ಲರಿಗೂ ಕೇಳಿಸುತ್ತಿತ್ತು. ಚಿತ್ರದ ಆರಂಭದ ಮೊದಲು ದೇಶದ ಪ್ರಮುಖ ಸುದ್ದಿಗಳ ಪ್ರಸರಣವಿರುತ್ತಿತ್ತು.

ದೇಶಪ್ರೇಮ, ಸಾಂಸಾರಿಕ, ಅಧ್ಯಾತ್ಮಿಕ ಚಿತ್ರಗಳಾದ ಜಗನ್ಮೋಹಿನಿ, ಭಕ್ತಕುಂಬಾರ, ಬಾಲನಾಗಮ್ಮ, ಸತ್ಯಹರಿಶ್ಚಂದ್ರ ಸೇರಿದಂತೆ  ಮುಂತಾದ ಚಿತ್ರಗಳನ್ನು ನೋಡಲು ಸುತ್ತಮುತ್ತಲ ಹಳ್ಳಿಗಳಿಂದ ಎತ್ತಿನಗಾಡಿಯಲ್ಲಿ ಬರುತ್ತಿದ್ದರು. 90 ದಶಕದ ಯಜಮಾನ, ಆಕಸ್ಮಿಕ , ಹಮ್‌ ಆಪ್ಕೆ ಹೈ ಕೌನ್‌ ಚಿತ್ರಗಳು ಇಲ್ಲಿ ದಾಖಲೆ ಪ್ರದರ್ಶನ ಕಂಡಿವೆ. ಮೊದಲು ಬಾಲ್ಕನಿಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಮೀಸಲಿರಿಸಿದ್ದರಿಂದ ಬಹಳಷ್ಟು ಜನರ ಮನಸೂರೆಗೊಳಿಸಿತು. ಸವೇರಾ ಟಾಕೀಸ್‌ನ ವಿಶೇಷವೇನೆಂದರೆ ವಿಶಾಲವಾದ ಪರದೆ ಮತ್ತು ಸೌಂಡ್ ಸಿಸ್ಟಂ. ಹೈದ್ರಾಬಾದ್‌ ಮತ್ತು ಬೆಂಗಳೂರಿನ ಪರಿಣಿತರ ಕೈಚಳಕದಿಂದ ಥಿಯೇಟರ್‌ನ ಸೌಂಡ್ ಸಿಸ್ಟಂ ಚೆನ್ನಾಗಿ ರನ್ ಆಗುತ್ತಿತ್ತು.

ಚಿತ್ರ ಬದಲಾವಣೆ ಆದಾಗ ಹೊಸ ಚಿತ್ರದ ಪ್ರಚಾರಕ್ಕೆ ಎಲ್ಲರ ಓಣಿಗಳಲ್ಲಿ ಪೋಸ್ಟರ ಹಿಡಿದು ಡಂಗೂರ ಸಾರುವವರನ್ನು ಹಿಂಬಾಲಿಸುವುದು ಚಿಕ್ಕಂದಿನ ಸವಿನೆನಪು. ಕ್ರಮೇಣ ವಿಡಿಯೋ ಪ್ರದರ್ಶನ ಶುರುವಾದಾಗ ಅಲ್ಪಹೊಡೆತ. ನಂತರ ಸೆಟಲೈಟ್‌ ಮುಖಾಂತರ ತೀರಾ ಇತ್ತೀಚೆಗೆ ಮೊಬೈಲ್‌ನಲ್ಲೇ ಓಟಿಟಿ ಶುರುವಾಯ್ತು. ನೆಟ್‌ಫ್ಲಿಕ್ಸ್‌, ಅಮೇಜಾನ್‌ ಪ್ರೈಂ ಇನ್ನಿತರೆ ಮಾಧ್ಯಮಗಳಲ್ಲಿ ಸಿನಿಮಾ, ವೆಬ್‌ ಸರಣಿಗಳು ಜನರನ್ನು ಆಕರ್ಷಿಸುತ್ತಿವೆ. ಕ್ರಮೇಣ ಟಾಕೀಸ್ ಗಳು ನೆಲಕಚ್ಚುತ್ತಿವೆ. ಈ ಪಟ್ಟಿಯಲ್ಲಿ ನಮ್ಮ ‘ಸವೇರಾ’ ಕೂಡ ಸೇರಿಕೊಂಡಿತು.

ಈ ಬರಹಗಳನ್ನೂ ಓದಿ