ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಪಂಡಿತ-ಪಾಮರ ಪ್ರೇಮಸೇತುವೆಯ, ಪದದಲೇಕಟ್ಟಿದ ಜಂಗಮ!

ಪೋಸ್ಟ್ ಶೇರ್ ಮಾಡಿ
ಭರತ್‌ ಸ. ಜಗನ್ನಾಥ
ರಂಗನಟ

ಲಾಲಿ, ಜಾಲಿ, ಪೋಲಿ, ತತ್ವ, ನಾಡು, ಭಾಷೆ, ತಾಯಿ, ಭೂಮಿ, ಆಗಸ, ರೈತ, ಹಬ್ಬ, ಹುಟ್ಟು, ಸಾವು, ನೀರು, ಗಾಳಿ, ಸೀರೆ, ನೀರೆ.. ಹೀಗೆ ಯಾವುದೇ ಒಂದು ಪದ ತೆಗೆದುಕೊಂಡರೂ ಅದರ ಮೇಲೆ ಕನಿಷ್ಟ ಹಂಸಲೇಖರ ಹತ್ತು ಹಾಡುಗಳು ಸಿಗುತ್ತವೆ!

‘ಏನಪ್ಪಾ ಯಜ್ಮಾನ, ಕೇಳ್ತೀಯಾ ನಿಜ ನಾ?’ ಎಂದು ಹೇಳಿ ಸಾಲು ಸಾಲು ನಿಜಗಳನ್ನು, ಪರಿಸ್ಥಿತಿಗಳನ್ನು,ನ್ಯಾಯವನ್ನು,ಅನ್ಯಾಯವನ್ನು,ಪ್ರೇಮವನ್ನು, ಕಾಮವನ್ನು, ಪದ-ಪ್ರಾಸ ದ ಅಸ್ತ್ರ ಬಳಸಿ ಸಾರಿದ ದೊರೆ ಇವರು!

‘ಆತ್ರ ಬಿದ್ದು

ಮಂತ್ರ ಓದಿ

ಕರ್ಣನ್ ಹೆತ್ಲು ಕುಂತಿ

ಇದು ಮಾಭಾರ್ತಕ್ಕೆ

ನಾಂದಿಯಾಯ್ತು

ಗುರುವೇ ನೀನೇನಂತಿ?’

ಎಂದು ಜನರ ಬಾಯಲ್ಲಿ ಓಡಾಡುವ ಮಹಾಭಾರತ ಹಾಡಿಸಿದವರು,

‘ಅವಳ್ಯಾವಳೋ ನಕ್ಕು

ವನವಾಸಕ್ಕೊಕ್ಕು

ಕೌರವನ ಮಂಡಿ ಮುರುದ್ಲಂತೆ

ಅವಳ್ಯಾವಳೋ ಅತ್ತು

ಅಪವಾದ ಹೊತ್ತು

ರಾವಣನ ವಂಶ ತೊಳುದ್ಲಂತೆ’

ಹೀಗೆ, ಮಹಾಕಾವ್ಯಗಳನ್ನು ಎರಡೇ ಸಾಲುಗಳಲ್ಲಿ ಹೇಳಿಬಿಡಬಲ್ಲವರು,

‘ಲೋಕದ ಪ್ರೀತಿಯ ಕಾವ್ಯಗಳಲ್ಲಿ

ಕೊನೆಯ ಪುಟ ವಿರಹ

ಬದಲಿಸೈ, ಬದಲಿಸೈ

ಹಳೆಯ ಪರಿಹಾಸ

ಸೃಷ್ಟಿಸೈ, ಪ್ರೀತಿಗೆ

ಸುಖದ ಇತಿಹಾಸ!’

ಎಂದು ಪ್ರೇಮದ ಸಾಲುಗಳನ್ನು ಹರಿಬಿಡಬಲ್ಲವರು,

ಹೆಣ್ಣನ್ನು ನಿಂಬೆ ಹಣ್ಣಿಗೆ ಹೋಲಿಸಿ, ಛೇಡಿಸಲೂ ಗೊತ್ತು,

ಹೆಣ್ಣಿಂದ ಸೃಷ್ಟಿ – ಹೆಣ್ಣಿಂದ ವೃಷ್ಟಿ ಎಂದು ಗೌರವಿಸುವುದೂ ಗೊತ್ತು.

‘ಹೆಣ್ಣು – ಹೊನ್ನು – ಮಣ್ಣೆಲ್ಲಾ ಓಸಿ ಸಿಕ್ರೆ ಜಮಾಯ್ಸು’ ಎಂದ ಪೋಲಿಯೇ

‘ಹೆಣ್ಣು – ಮಣ್ಣೆಲ್ಲಾ ವರ ಸಿಕ್ಕಂಗೆ, ನಮ್ಮ ಪುಣ್ಯ ಇದ್ದಂಗೆ’ ಎಂದ ವೇದಾಂತಿ.

ಇವರು ಪ್ರತೀ ಬಾರಿ ಹೆಣ್ಣನ್ನು ವರ್ಣಿಸಲು ಹೋದಾಗಲೂ ಕಾತುರ.. ಏಕೆಂದರೆ , ಒಮ್ಮೆ ಬಳಸಿದ ಉಪಮೆ ಮತ್ತೊಮ್ಮೆ ಬಳಸದಷ್ಟು ಪದಪುಂಜವನ್ನು ಪೇರಿಸಿಟ್ಟುಕೊಂಡಿರುವ ಮಾಯಾವಿ..

‘ತಿರ್ಪೆಯೆತ್ತಿ ತಿರುಗೋ ತಿರುಕ ನೀನು ರುದ್ರ,

ನಿಂಗೆ ಲೋಕಕಾಯೋ ಕ್ಯಾಮೆ ಯಾಕೋ ಚೋರಭದ್ರ’

ಎಂದು ಬರೆದ ಲೇಖನಿಯೇ,

‘ಮನೆಗೆ ಬಂದು ಹೋದ,

ಪ್ರಥಮ ಲೋಕಪಾದ

ಮುಗಿಯದೇ ಹೋದ ನನ್ನ ಈ ಕರವೇಕೆ’

ಎಂದು ಬರೆಯುತ್ತಾರೆ ಎಂದರೆ, ಎರಡೂ ದಿಕ್ಕುಗಳನ್ನೂ ಕ್ಷಣಮಾತ್ರದಲ್ಲಿ ತಲುಪಬಲ್ಲ ಕವಿಯ ತಾಕತ್ತನ್ನು ಗಮನಿಸಿ!

ಪದ – ತಾಳ ಎಂಬ ಇಬ್ಬರು ಹೆಂಡಿರ ಸಂಸಾರವನ್ನು ಎಲ್ಲಿಯೂ ಜಾರದ ಹಾಗೆ ಸಾಗಿಸಿ, ಅಸಾಧ್ಯವನ್ನು ಸಾಧಿಸಿ, ಇತಿಹಾಸ ಸಾರಿದ ಸಾಹಸಿ.

ಈಗೀಗ ಯುವಕರು ಕೇಳಿ – ಹಾಡಿ – ಕುಣಿದು ಮೆರೆದಾಡುವ ಇಂಗ್ಲೀಷ್ ಹಿಂದಿ ಗೀತೆಗಳ ಶೈಲಿಯನ್ನು ಆಗಲೇ ಪರಿಚಯಿಸಿ, ಪ್ರಯೋಗಿಸಿ, ಕನ್ನಡಿಗರನ್ನು ಆಗಲೇ ಮೆರೆಸಿದ್ದ ಗಾನವಿಜ್ಞಾನಿ.

ಕಲ್ಪನೆಗೆ ಜಾರಿದರೆ,

ಸೂರ್ಯ ಚಂದ್ರರನ್ನು ರಂಭೆಯ ಡಿಸ್ಕೋನಲ್ಲಿ ಕೂರಿಸಿದ ಚತುರ..

ಸರಸಕ್ಕೆ ಹೋದರೆ,

ಕಾಲುಗೆಜ್ಜೆ ಕೂಡ – ಹಾಡು ಹಾಡಿದ ಸಂಗಾತಿ..

‘ನ್ಯಾಯದ್ ಮನೇಗೀಗ್ಲೂ, ಎರಡೆರಡಂತೆ ಬಾಗ್ಲು’

ಎಂದು ವ್ಯವಸ್ಥೆಯನ್ನು ಟೀಕಿಸುವುದಕ್ಕೂ ಜೈ,

ರೌಡಿಗಳ ಹಾಡಿನಲ್ಲಿ

‘ರೂಪಾಯಿ ನೋಟಿಗೆ ಮೊಳದುದ್ದ ಮಲ್ಲಿಗೆ, ಮುಡಿಯಲ್ಲಿ ಇಟ್ಟರೆ ಅದು ಕೋಟಿ ಕೋಟಿಗೆ’

ಎಂದು ಕಟುಸತ್ಯಗಳನ್ನು ಹೇಳಲೂ ಸೈ!

ಇತ್ತೀಚೆಗೆ ಇವರನ್ನು ಕನ್ನಡ ಸಾರಸ್ವತಲೋಕದಲ್ಲಿ ‘ಸಾಹಿತಿ’ ಎಂದು ಪರಿಗಣಿಸಲು ಒಲ್ಲದಿರುವುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಎದ್ದಿತ್ತು.. ಹಲವರ ವಾದ ‘ಬೇಡ’ವೆಂಬುದೇ ಆಗಿತ್ತು.. ಕ್ಷಮಿಸಿ ಸರ್, ರೈತನೋರ್ವ ಉಳುವಾಗ ಅವನ ಬಾಯಲ್ಲಿ ಹರಿದಾಡುವ ನಿಮ್ಮ ಹಾಡುಗಳು, ರೋಗಿಯೊಬ್ಬ ನರಳುವಾಗ ಕೇಳಬಯಸುವ ನಿಮ್ಮ ಹಾಡುಗಳು, ಹಳ್ಳಿಗರ ಕೈಯ್ಯಲ್ಲಿನ ಹಳೇ ಕ್ಯಾಸೆಟ್ ಗಳಿಂದ ಹಿಡಿದು, ಹೊಸ ಹ್ಯಾಂಡ್‌ಸೆಟ್‌ಗಳಲ್ಲಿ ತುಂಬಿ ಹೋಗಿರುವ ನಿಮ್ಮ ಸಾವಿರಾರು ಹಾಡುಗಳು, ಎಷ್ಟೋ ಜನರಿಗೆ ‘ಹಾಡೆಂದರೆ ಇವರದ್ದಷ್ಟೇ’ ಎನ್ನುವ ಮಟ್ಟಿಗೆ ಮೋಡಿ ಮಾಡಿರುವ ನಿಮ್ಮ ಹಾಡುಗಳು, ನೋವಲ್ಲಿ – ನಲಿವಲ್ಲಿ –ಕಾಮದಲ್ಲಿ – ಪ್ರೇಮದಲ್ಲಿ – ದೈವದಲ್ಲಿ – ದೇಶದಲ್ಲಿ – ಸನಿಹದಲ್ಲಿ – ವಿರಹದಲ್ಲಿ – ಟ್ರಾಕ್ಟರ್ ಅಲ್ಲಿ –ಕಾರಿನಲ್ಲಿ – ಕಾಲಿನಲ್ಲಿ – ಡೋಲಿನಲ್ಲಿ ಹೀಗೆ ಎಲ್ಲೆಲ್ಲೂ ತುಂಬಿರುವ ನಿಮ್ಮ ಹಾಡುಗಳನ್ನು ‘ಸಾಹಿತ್ಯ’ವೆನ್ನದೆ, ನಿಮ್ಮನ್ನು ‘ಚಿತ್ರಗೀತೆಗಳ ಸಾಹಿತಿ’ ಎಂದಷ್ಟೇ ಗುರುತಿಸಬೇಕೆಂದು ವಾದ ಮಾಡುವ ದಡ್ಡರನ್ನು ಕ್ಷಮಿಸಿಬಿಡಿ.. ನೀವಾಗಲೇ ಈ ವಿಚಾರದ ಕುರಿತು ನಕ್ಕು ಸುಮ್ಮನಾಗಿರುತ್ತೀರೆಂದು ನನಗೆ ಗೊತ್ತಿದೆ.

ಹಾಗೂ, ಇವರ ಸಾಹಿತ್ಯವನ್ನು ಒಂದೇ ಪ್ರಕಾರಕ್ಕೆ ಬೇಲಿ ಹಾಕುವ ‘ಬುದ್ಧಿವಂತರಿಗೆ’ ಒಂದು ಕಿವಿಮಾತು.. ಯಾವ ಸಾಹಿತ್ಯ ಅತೀ ಸಾಮಾನ್ಯನೊಬ್ಬನ ಮನಮುಟ್ಟಿ ಆತನಲ್ಲೊಂದು ಆಶಾವಾದ ತುಂಬಿ, ಬಾಳಿನ ಅರ್ಥ ಸಾರುತ್ತದೋ ಅದು ನಿಜವಾದ ಸಾಹಿತ್ಯ, ಆತ ನಿಜವಾದ ಸಾಹಿತಿ.. ಎಷ್ಟೋ ಪಂಡಿತರು, ಜೀವನದ ಕುರಿತು ಸಾಮಾನ್ಯ ಜನಕ್ಕೆ ತಲುಪಿಸಲು ಹೆಣಗಾಡಿದ ವಿಚಾರಗಳನ್ನು ಈ ಪುಣ್ಯಾತ್ಮ, ಅಕ್ಷರದ ಗಂಧ ಗಾಳಿ ಅರಿಯದ ಮುಗ್ಧರ ಮನದಲ್ಲೂ, ಎರಡೇ ಸಾಲುಗಳಲ್ಲಿ ಅಚ್ಚೊತ್ತಿ ಬಿಟ್ಟಿದ್ದಾರೆ..ಉದಾಹರಣೆಗೆ, ‘ನಿಂತಾಗ ಬುಗುರಿಯ ಆಟ, ಎಲ್ಲಾರೂ ಒಂದೇ ಓಟ’ ಎಂಬ ಇವರ ಸಾಲನ್ನು ಲಕ್ಷಾಂತರ ಜನ ಗಾದೆಯಂತೆ ಬಳಸುವುದುಂಟು.. ಹಾಗಾಗಿ ಏನಕ್ಕೂ ಪ್ರಯೋಜನವಿಲ್ಲದ ನಿಮ್ಮ ಅಹಂಗಳನ್ನು ಬದಿಗಿಟ್ಟು ಅವರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಿಬಿಡಿ.

ಲಾಲಿ, ಜಾಲಿ, ಪೋಲಿ, ತತ್ವ, ನಾಡು, ಭಾಷೆ, ತಾಯಿ, ಭೂಮಿ, ಆಗಸ, ರೈತ, ಹಬ್ಬ, ಹುಟ್ಟು, ಸಾವು, ನೀರು, ಗಾಳಿ, ಸೀರೆ, ನೀರೆ.. ಹೀಗೆ ಯಾವುದೇ ಒಂದು ಪದ ತೆಗೆದುಕೊಂಡರೂ ಅದರ ಮೇಲೆ ಕನಿಷ್ಟ ಇವರ ಹತ್ತು ಹಾಡುಗಳು ಸಿಗುತ್ತವೆ.. ಹೆಸರೇ ಕೇಳಿರದ ಎಷ್ಟೋ ಸಿನಿಮಾಗಳಲ್ಲಿ, ಇವರ ಅದ್ಭುತ ಸಾಲುಗಳ ಹಾಡುಗಳು ತುಂಬಿವೆ..

ದಿನಕ್ಕೊಂದು ಹೊಸ ಆಲ್ಬಂ ವರ್ಷಪೂರ ಕೇಳಿದರೂ ಇವರ ಹಾಡುಗಳು ಖಾಲಿ ಆಗುವುದಿಲ್ಲ.. ಅಷ್ಟರ ಮಟ್ಟಿಗೆ ಸಂಗೀತ – ಸಾಹಿತ್ಯದಲ್ಲಿ ಕೆಲಸ ಮಾಡಿರುವ, ಸಮಯಕ್ಕೆ ಸವಾಲೊಡ್ಡಿ ಶ್ರಮಿಸಿರುವ, ಕಳಪೆ ಕೆಲಸ ಮಾಡದೆ ಯಶಸ್ವಿಯಾಗಿ ಇಷ್ಟು ಹಾಡುಗಳನ್ನು ನೀಡಿರುವ ಕಲಾವಿದರೆಂದರೆ ಇವರೊಬ್ಬರೇ ಇರಬಹುದು. ನಾನೇನಾದರೂ ಕನ್ನಡ ಮೇಷ್ಟ್ರಾಗಿದ್ದರೆ, ತರಲೆ ಮಾಡುವ ಕಾಲೇಜು ಹುಡುಗರಿಗೆಲ್ಲಾ, ನೂರು ಬಾರಿ ಏನೇನನ್ನೋ ಬರೆಸುವ ಬದಲು, ‘ಇವರ ಹಾಡುಗಳಲ್ಲಿನ ಪ್ರಾಸ ಪದಗಳನ್ನು ಬರೆದು ತನ್ನಿ’ ಎಂದು ಒಂದು ಸುಂದರ ಶಿಕ್ಷೆ ನೀಡುತ್ತಿದ್ದೆ, ಆಗ ಒಂದೆಡೆ ದಾಖಲಾಗೂ ಇರುತ್ತಿತ್ತು, ಅವರ ತರಲೆ – ಉಪಯೋಗವಾಗುವ ಕಡೆ ಕೇಂದ್ರೀಕೃತವೂ ಆಗುತ್ತಿತ್ತು.

ಪದ ಪ್ರಯೋಗಕ್ಕೆ ಬಂದರೆ, ಪ್ರಾಸಗಳ ಅರಸ, ಭಾವನೆಗಳಿಗೆ ಬಂದರೆ, ಸಾಲುಸಾಲಿನಲ್ಲೂ ನವರಸ, ಪ್ರಕಾರಗಳಿಗೆ ಬಂದರೆ, ಸರ್ವಾಂತರ್ಯಾಮಿ, ವರ್ಣನೆಗೆ ಬಂದರೆ, ಉಪಮೆಗಳ ಪ್ರೇಮಿ, ರಾಗಗಳಲ್ಲಿ ಪ್ರಯೋಗ, ಪದ ಜೋಡಣೆ ಸರಾಗ, ನಿಮಿಷಗಳಲ್ಲಿ ಹಾಡು ಬರೆಯೋ ನಿಸ್ಸೀಮ, ಹಾಡುಗಳಲ್ಲಿ ಬಣ್ಣ ಚೆಲ್ಲಿದ ರವಿವರ್ಮ, ಈಗಲೂ ವಿಸ್ಮಯ ಹೆಚ್ಚಿಸುತ್ತಲೇ ಇದೆ ಇವರ ಅಕ್ಷರಲೋಕ, ಏಕಮೇವಾದ್ವಿತೀಯ, ದೇಸಿ ದೊರೆ ‘ಹಂಸಲೇಖ’!

ಈ ಬರಹಗಳನ್ನೂ ಓದಿ