ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕನ್ನಡ ಚಿತ್ರರಂಗದ ಭೀಷ್ಮ ಆರ್.ನಾಗೇಂದ್ರ ರಾವ್

ಪೋಸ್ಟ್ ಶೇರ್ ಮಾಡಿ
ಎನ್‌.ಎಸ್‌.
ಶ್ರೀಧರಮೂರ್ತಿ
ಲೇಖಕ

ಕನ್ನಡ ಚಿತ್ರರಂಗ ಕಟ್ಟಿದ ಮಹನೀಯರಲ್ಲೊಬ್ಬರು ಆರ್.ನಾಗೇಂದ್ರರಾವ್‌. ರಂಗಭೂಮಿಯ ದಟ್ಟ ಅನುಭವ ಅವರದು. ನಟ, ನಿರ್ದೇಶಕ, ನಿರ್ಮಾಪಕ, ಸಂಗೀತ ಸಂಯೋಜಕ, ಚಿತ್ರಸಾಹಿತಿಯಾಗಿ ಬಹುಮುಖ ಪ್ರತಿಭೆ. ಇಂದು (ಜೂನ್‌ 23) ಆರೆನ್ನಾರ್ ಜನ್ಮದಿನ. – ಲೇಖಕ ಎನ್‌.ಎಸ್‌.ಶ್ರೀಧರಮೂರ್ತಿ ಮೇರು ಚಿತ್ರಕರ್ಮಿಯನ್ನು ಸ್ಮರಿಸಿದ್ದಾರೆ.

ಕನ್ನಡ ಚಿತ್ರರಂಗದ ಭೀಷ್ಮರೆಂದೇ ಹೆಸರಾದ ನಾಗೇಂದ್ರ ರಾಯರು ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ದ ರೂವಾರಿಗಳು. ಅದರಲ್ಲಿ ರಾವಣನ ಪಾತ್ರವನ್ನು ವಹಿಸಿದ್ದ ಅವರು ಸಂಗೀತ ನಿರ್ದೇಶನವನ್ನೂ ಕೂಡ ಮಾಡಿದ್ದರು. ನಾಗೇಂದ್ರ ರಾಯರು ಜನಿಸಿದ್ದು 1896ರ ಜೂನ್ 23ರಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕರೆಯಲ್ಲಿ. ಅವರ ತಂದೆ ರಟ್ಟೇಹಳ್ಳಿ ಕೃಷ್ಣರಾಯರು ಮತ್ತು ತಾಯಿ ತುಳಸಿ ಬಾಯಿ. ಈ ದಂಪತಿಗಳಿಗೆ ರಾಯರು ಎರಡನೇ ಮಗ. ಕೃಷ್ಣರಾಯರು ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. ಕರ್ತವ್ಯದಲ್ಲಿ ನಿಷ್ಠಾವಂತರಾಗಿದ್ದ ಅವರು ಧಾರ್ಮಿಕ ಮನೋಭಾವದವರಾಗಿದ್ದು ಲಲಿತ ಕಲೆಗಳಲ್ಲಿ ನಿಷ್ಣಾತರಾಗಿದ್ದರು. ನಾಗೇಂದ್ರ ರಾಯರು ಜನಿಸಿದ ನಾಲ್ಕು ವರ್ಷಕ್ಕೆ ಎಂದರೆ 1900ರಲ್ಲಿ ಕೃಷ್ಣ ರಾಯರಿಗೆ ಬೆಂಗಳೂರಿಗೆ ವರ್ಗವಾಯಿತು. ಆದರೆ ಬೆಂಗಳೂರಿನ ಹವೆ ಅವರಿಗೆ ಒಗ್ಗಲಿಲ್ಲ. ಪ್ಲೇಗ್ ವ್ಯಾದಿ ಕೂಡ ಆಗ ಎಲ್ಲೆಡೆ ಹರಡಿತ್ತು. ಇದರಿಂದ ಉದ್ಯೋಗಕ್ಕೆ ರಾಜೀನಾಮೆ ನೀಡಿ ಮೈಸೂರಿಗೆ ಬಂದರು. ಅಲ್ಲಿ ಅರಮನೆಯಲ್ಲಿ ಉದ್ಯೋಗ ದೊರಕಿತು. ವಸತಿ ಅನುಕೂಲವೂ ಸಿಕ್ಕು ಮಕ್ಕಳ ವಿದ್ಯಾಭ್ಯಾಸವೂ ಮುಂದುವರೆಯಿತು. ಕೃಷ್ಣರಾಯರ ಗೆಳಯರಾದ ನಾಗೇಶ ರಾಯರ ‘ಚಂದಿರಾನಂದ ನಾಟಕ ಸಭಾ’ದಲ್ಲಿ ಬಾಲ ಪಾತ್ರವನ್ನು ವಹಿಸುವ ಮೂಲಕ ನಾಗೇಂದ್ರ ರಾಯರು ರಂಗ ಪ್ರವೇಶ ಮಾಡಿದರು. ಆಗ ಅವರಿಗೆ ಕೇವಲ ಎಂಟು ವರ್ಷ. ಆಸ್ಥಾನ ವಿದ್ವಾನ್ ಕರಿಗಿರಿ ರಾಯರ ಬಳಿ ಸಂಗೀತ ಶಿಕ್ಷಣವನ್ನು ಪಡೆದರು. ಈ ನಡುವೆ ಬೆಳೆಯುತ್ತಿದ್ದ ಸಂಸಾರದ ವೆಚ್ಚಕ್ಕೆ ಅರಮನೆಯಿಂದ ದೊರಕುತ್ತಿದ್ದ ಸಾಲದು ಎಂದು ಭಾವಿಸಿದ ಕೃಷ್ಣರಾಯರು ಆ ಕೆಲಸವನ್ನು ಬಿಟ್ಟು ತಮ್ಮ ಹಿರಿಯರ ಆಸ್ತಿ ಇದ್ದ ಹೊಳೆನರಸೀಪುರದ ಸಮೀಪದ ತಟ್ಟಕೆರೆಹಳ್ಳಿಯಲ್ಲಿ ನೆಲೆನಿಂತರು.

ನಾಗೇಂದ್ರರಾಯರ ವಿದ್ಯಾಭ್ಯಾಸ ಹೊಳೆನರಸೀಪುರದಲ್ಲಿ ಮುಂದುವರೆದರೂ ನಾಟಕ ಮತ್ತು ಸಂಗೀತದ ಸಂಪರ್ಕ ತಪ್ಪಿ ಹೋಯಿತು. ಸಂಬಂಧಿಕರ ಒಡನಾಟದಲ್ಲಿ ಸುಖವಾಗಿರಬಹುದು ಎನ್ನುವ ಕೃಷ್ಣರಾಯರ ಲೆಕ್ಕಾಚಾರ ತಪ್ಪಾಗಿತ್ತು. ಹಿರಿಯರಿದ್ದ ಅವರ ಪಾಲಿಗೆ ಬಂದಿದ್ದ ಆಸ್ತಿಯನ್ನು ಸಂಬಂಧಿಕರೇ ಕಬಳಿಸಿದ್ದರು. ಅದನ್ನು ಕೇಳಲು ಬಂದರೆಂದು ರಾಯರಿಗೆ ಇನ್ನಿಲ್ಲದ ತೊಂದರೆಗಳನ್ನು ನೀಡಿದರು. ಈ ಚಿಂತೆಯಲ್ಲಿಯೇ ಕೃಷ್ಣ ರಾಯರು 1907ರ ಆಗಸ್ಟ್ 10ರಂದು ನಿಧನರಾದರು. ಆಗ ನಾಗೇಂದ್ರ ರಾಯರಿಗೆ ಕೇವಲ ಹನ್ನೊಂದು ವರ್ಷ. ಕೃಷ್ಣರಾಯರ ಅಕಾಲಿಕ ಮರಣದಿಂದ ಸಂಸಾರ ಕಷ್ಟಕ್ಕೆ ಸಿಲುಕಿತು. ತುಳಸೀ ಬಾಯಿ ಧೈರ್ಯವಂತ ಮಹಿಳೆ. ಪತಿ, ಒಬ್ಬ ಮಗಳು ಮತ್ತು ಮೂರು ಗಂಡು ಮಕ್ಕಳ ಸಾವನ್ನು ಕಂಡಿದ್ದರೂ ಎದೆಗೆಡದೆ ಅವರಿವರ ಮನೆಗೆ ಹುಳಿ ಪುಡಿ, ಸಾರಿನ ಪುಡಿ, ಉಂಡೆ, ಚಕ್ಕುಲಿ, ಕೋಡಬಳೆಗಳನ್ನು ಮಾಡಿಕೊಟ್ಟು ಸಂಸಾರವನ್ನು ಸಾಗಿಸಿದರು. ಹೀಗಿರುವಾಗ ನಾಗೇಂದ್ರ ರಾಯರಿಗೆ ‘ಶ್ರೀ ಮಹಾಲಕ್ಷ್ಮಿ ಪ್ರಸಾದಿತ ಕಂಪನಿ’ಯಲ್ಲಿ ಅವಕಾಶ ದೊರಕಿತು. ಮನೆಯ ಪರಿಸ್ಥಿತಿ ಅರಿತಿದ್ದ ಅವರು ಅದಕ್ಕೆ ಸೇರಿಕೊಂಡರು. ಮುಂದೆ ಲಕ್ಷ್ಮಿ ವಿಲಾಸ ಥಿಯೇಟ್ರಕಲ್ ಕಂಪನಿ ಆಶ್ರಯ ತಾಣವಾಯಿತು. ಇಲ್ಲಿರುವಾಲೇ ಎ.ವಿ.ವರದಾಚಾರ್ ಅವರ ‘ರತ್ನಾವಳಿ ನಾಟಕ ಮಂಡಳಿ’ಯಲ್ಲಿ ಅವಕಾಶ ದೊರಕಿತು.

ವರದಾಚಾರ್ಯರ ಕಂಪನಿಯಲ್ಲಿ ನಾಗೇಂದ್ರ ರಾಯರಿಗೆ ಹೆಸರು ತಂದು ಕೊಟ್ಟಿದ್ದ ‘ಪ್ರಹ್ಲಾದ ಚರಿತೆ’ಯ ಭೂದೇವಿಯ ಪಾತ್ರ. ತಿರುಚನಾಪಳ್ಳಿ ಕ್ಯಾಂಪ್‌ನಲ್ಲಿ ಇದನ್ನು ನೋಡಿದ ಡಾ.ಅನಿಬೆಸೆಂಟ್ ರಾಯರ ಅಭಿನಯವನ್ನು ಮೆಚ್ಚಿ ಚಿನ್ನದ ಪದಕವನ್ನು ನೀಡಿ ಗೌರವಿಸಿದ್ದರು. 1918ರಲ್ಲಿ ನಾಗೇಂದ್ರ ರಾಯರು ಅಕ್ಕ ಕೃಷ್ಣಬಾಯಿಯವರ ಮಗಳು  ರತ್ನಾಬಾಯಿ ಅವರನ್ನು ರಾಯರು ವಿವಾಹವಾದರು. ರತ್ನಬಾಯಿ ಉತ್ತಮ ಗೃಹಿಣಿಯಾಗಿದ್ದುದು ಮಾತ್ರವಲ್ಲದೆ ಪತಿಯ ಪ್ರತಿಭೆಗೂ ಪ್ರೋತ್ಸಾಹಕರಾಗಿದ್ದರು. ನಾಟಕವನ್ನು ಪ್ರತಿ ಮಾಡುವುದು ಸಂಭಾಷಣೆಗಳನ್ನು ತಿದ್ದುವುದು ಇಂತಹ ಕೆಲಸಗಳಲ್ಲಿಯೂ ನೆರವಾಗುತ್ತಿದ್ದರು. 1926ರ ಏಪ್ರಿಲ್ 4ರಂದು ಎ.ವಿ.ವರದಾಚಾರ್ಯರು ನಿಧನರಾದರು. ರತ್ನಾವಳಿ ನಾಟಕ ಸಂಸ್ಥೆ ಈಗ ನಾವಿಕನಿಲ್ಲದ ಹಡಗಿನಂತಾಯಿತು. ನಾಗೇಂದ್ರ ರಾಯರೇ ನೇತೃತ್ವ ವಹಿಸಿದರು. ಕೈಲಾಸಂ ಅವರ ‘ಅಮ್ಮಾವ್ರ ಗಂಡ’ ನಾಟಕವನ್ನು ಪ್ರದರ್ಶಿಸಿ ಹೊಸತನವನ್ನು ತರಲು ಪ್ರಯತ್ನಿಸಿದರು. ಆದರೆ ಅವರಿಗೆ ಸರಿಯಾದ ಬೆಂಬಲ ದೊರಕಲಿಲ್ಲ. ಅನ್ಯ ಮಾರ್ಗವಿಲ್ಲದೆ ಚಾಮುಂಡೇಶ್ವರಿ ಕಂಪನಿಯನ್ನು ಸೇರಿದರು. ಇಲ್ಲಿ ‘ರಾಜಾಶ್ರಯ’ದ ಅರ್ಜುನ ‘ವಸಂತ ಸೇನ’ದ ಶಕಾರನ ಪಾತ್ರ ಅವರಿಗೆ ಹೆಸರನ್ನು ತಂದು ಕೊಟ್ಟವು. ಪ್ರೇಕ್ಷಕರ ಬೇಡಿಕೆಯ ಮೇರೆಗೆ ‘ವೀರ ಅಭಿಮನ್ಯು’ನಾಟಕವನ್ನು ಬರೆದರು. ಇದು ಅವರ ಮೊದಲ ಸಾಹಿತ್ಯಿಕ ರಚನೆ.

ಈಗ ವಾಕ್ಚಿತ್ರ ಯುಗ ಕಾಲಿಟ್ಟಿತ್ತು.  ಅಲ್ಲೇಕೆ ಪ್ರಯತ್ನಿಸ ಬಾರದು ಎಂದು ಪ್ರಯತ್ನಿಸಿದ ರಾಯರು ಮುಂಬೈಗೆ ಹೊರಟರು. ಮಕ್ಕಳ ವಿದ್ಯಾಭ್ಯಾಸದ ಕಾರಣದಿಂದ ಸಂಸಾರವನ್ನು ಮೈಸೂರಿನಲ್ಲಿಯೇ ಬಿಟ್ಟು ಹೋದರು. ಆಗ ರತ್ನಾಬಾಯಿ ಅವರಿಗೆ ಇಪ್ಪತ್ತೆಂಟು ವರ್ಷ. ಆಗಲೇ ನಾಲ್ಕ ಮಕ್ಕಳ ತಾಯಿಯಾಗಿದ್ದರು. ಹದಿನಾರನೇ ವಯಸ್ಸಿಗೆ ಎಸ್.ಎಸ್.ಎಲ್.ಸಿಯನ್ನು ಮೊದಲ ಶ್ರೇಣಿಯಲ್ಲಿ ಮುಗಿಸಿದ್ದರೂ ಸಂಸಾರದ ಹೊಣೆಗಾರಿಕೆಯಿಂದ ವಿದ್ಯಾಭ್ಯಾಸವನ್ನು ಮುಂದುವರಿಸಲು ಆಗಿರಲಿಲ್ಲ. ಈಗ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದಲ್ಲದೆ ಬಿ.ಎಯಲ್ಲಿ ಮೊದಲನೆಯ ರ್ಯಾಂಕ್‌ ಪಡೆದು ಅರ್ಥಶಾಸ್ತ್ರದಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಪಡೆದಿದ್ದಕ್ಕಾಗಿ ಬಂಗಾರದ ಪದಕವನ್ನು ಕೂಡ ಪಡೆದರು.

ಮುಂಬೈಗೆ ತೆರಳುವಾಗ ನಾಗೆಂದ್ರ ರಾಯರಿಗೆ  ಮಿತ್ರರಾದ ಪ್ರೊ.ಕೆ.ವಿ.ಅಯ್ಯರ್ ಅವರು ರಾಜಾ ಸ್ಯಾಂಡೋ ಅವರಿಗೆ ಪತ್ರವನ್ನು ನೀಡಿದ್ದರು. ರಾಜಸ್ಯಾಂಡೋ ಆಗಾಗಲೇ ಚಿತ್ರ ಜಗತ್ತಿನಲ್ಲಿ ಹಲವಾರು ಸಾಹಸಗಳನ್ನು ಮಾಡಿದ್ದರು. ರಾಯರನ್ನು ಕಂಡ ಸ್ಯಾಂಡೋ ಅಭಿನಯ ಮತ್ತು ಗಾಯನಗಳೆರಡಲ್ಲಿಯೂ ಇವರು ಪರಿಣಿತರು ಎಂದು ತಿಳಿದು ಭಾರತದ ಮೊದಲ ವಾಕ್ಚಿತ್ರ ಇಂಪೀರಿಯಲ್ ಕಂಪನಿಗೆ ಸೇರಿಸಿದರು. ಅಲ್ಲಿ ನಿರ್ಮಾಣವಾದ ‘ಪಾರಿಜಾತ ಪುಷ್ಟಹರಣಂ’ ತಮಿಳು ಚಿತ್ರದಲ್ಲಿ ರಾಯರು ನಾರದನ ಪಾತ್ರ ನಿರ್ವಹಿಸಿದರು. ಇದೇ ಸಂಸ್ಥೆ ಮುಂದೆ ತೆಲುಗಿನಲ್ಲಿ ನಿರ್ಮಿಸಿದ ‘ಭಕ್ತ ರಾಮದಾಸ’ ಚಿತ್ರದ ನಾಯಕನ ಪಾತ್ರವೇ ನಾಗೇಂದ್ರ ರಾಯರಿಗೆ ದೊರಕಿತು. ಈ ಚಿತ್ರವೂ ಯಶಸ್ವಿಯಾದಾಗ ಅದೇ ಸಂಸ್ಥೆಯ ಮುಂದಿನ ಚಿತ್ರ ‘ನವೀನ ಸದಾರಮೆ’ಗೂ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಆಗ ಅವರ ಮನಸ್ಸಿನಲ್ಲಿ ಒಂದು ಗೊಂದಲವೆದ್ದಿತು. ತಾವು ವಾಕ್ಚಿತ್ರಗಳಲ್ಲಿ ಅಭಿನಯಿಸುತ್ತಿರುವುದೇನೋ ಸರಿ ಆದರೆ ಅವೆಲ್ಲವೂ ಬೇರೆ ಭಾಷೆಯ ಚಿತ್ರಗಳು. ಕನ್ನಡದಲ್ಲಿಯೂ ಏಕೆ ವಾಕ್ಚಿತ್ರಗಳು ನಿರ್ಮಾಣವಾಗಬಾರದು? ಹೀಗೆ ಯೋಚಿಸಿ ‘ಶ್ಯಮಂತಕ ಮಣಿ’ ಕಥೆಯನ್ನು ಸಿದ್ದಪಡಿಸಿ ತಾವು ಕೆಲಸ ಮಾಡುತ್ತಿದ್ದ ಸಂಸ್ಥೆಯ ಮುಖ್ಯಸ್ಥರಾದ ಅರ್ದೇಶರ್ ಇರಾನಿಯವರಿಗೆ ತೋರಿಸಿದರು. ಅವರು ಕಥೆಯನ್ನು ಮೆಚ್ಚಿದರೂ ಕನ್ನಡದಲ್ಲಿ ತಯಾರಿಸಲು ಒಪ್ಪಲಿಲ್ಲ ‘ಅಲ್ಲಿನ ಮಾರುಕಟ್ಟೆ ಚಿಕ್ಕದು, ಬದಲಾಗಿ ತಮಿಳು ಇಲ್ಲವೆ ತೆಲುಗಿನಲ್ಲಿ ನಿರ್ಮಿಸೋಣ’ ಎಂದರು. ಇದರಿಂದ ನಿರಾಶರಾದ ರಾಯರು ತಮ್ಮ ಉಜ್ವಲ ಭವಿಷ್ಯಕ್ಕೆ ಬೆನ್ನು ಹಾಕಿ ಕನ್ನಡದಲ್ಲಿ ವಾಕ್ಚಿತ್ರ ನಿರ್ಮಿಸುವ ಹಂಬಲ ಹೊತ್ತು ಮೈಸೂರಿಗೆ ಹಿಂದಿರುಗಿದರು. ಹಲವರನ್ನು ಸಂಪರ್ಕಿಸಿದರೂ ಬಂಡವಾಳ ಹೂಡಲು ಸಿದ್ದರಾಗಲಿಲ್ಲ.

ಕೊನೆಗೆ ಸೀತಾರಾಮ ಶೆಟ್ಟರ ಮೂಲಕ ಷಾ ಚಮನ್ ಲಾಲ್ ಡುಂಗಾಜಿಯವರ ಪರಿಚಯವಾಯಿತು. ಅವರು ಹಣ ಹೂಡಲು ಸಿದ್ದರಾದರು. ಹೀಗೆ ಕನ್ನಡದ ಮೊದಲ ವಾಕ್ಚಿತ್ರಕ್ಕೆ ಅಂಕುರಾರ್ಪಣೆಯಾಯಿತು. ‘ಸತಿ ಸುಲೋಚನಾ’ ಚಿತ್ರದ ವಸ್ತುವಾಯಿತು. ಇದರಲ್ಲಿ ನಾಗೇಂದ್ರ ರಾಯರು ಮುಖ್ಯಪಾತ್ರ ವಹಿಸಿದ್ದಲ್ಲದೆ ಸಂಗೀತ ನಿರ್ದೇಶನವನ್ನೂ ಮಾಡಿದರು. 1934ರ ಮಾರ್ಚಿ 3ರಂದು ಬೆಂಗಳೂರಿನ ಪ್ಯಾರಾಮೌಂಟ್ ಚಿತ್ರ ಮಂದಿರದಲ್ಲಿ ಚಿತ್ರ ಬಿಡುಗಡೆಯನ್ನು ಕಂಡು ಯಶ ಪಡೆಯಿತು. ಕನ್ನಡ ಚಿತ್ರ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಯಿತು. ಈ ಚಿತ್ರದ ಮೂಲಕ ನಾಗೇಂದ್ರ ರಾಯರ ವೈಯಕ್ತಿಕ ಬದುಕಿಗೂ ತಿರುವು ಲಭಿಸಿತು. ಈ ಚಿತ್ರದ ಮೂಲಕ ಪರಿಚಿತರಾದ ಕಮಲಾ ಬಾಯಿ ಅವರ ತಾರಾಪತ್ನಿಯಾದರು.

‘ಸತಿ ಸುಲೋಚನಾ’ ನಂತರ ರಾಯರಿಗೆ ತಕ್ಷಣ ಚಿತ್ರಗಳು ದೊರಕಲಿಲ್ಲ ‘ಶ್ರೀ ಸಾಹಿತ್ಯ ಸಾಮ್ರಾಜ್ಯ ಮಂಡಳಿ’ ಎಂಬ ನಾಟಕ ಸಂಸ್ಥೆಯನ್ನು ಗೆಳೆಯರಾದ ಸುಬ್ಬಯ್ಯ ನಾಯ್ಡು ಅವರ ಜೊತೆಗೆ ಕಟ್ಟಿದರು. ಚಿತ್ರರಂಗದ ಅನುಭವದಿಂದ ರಂಗಭೂಮಿಯನ್ನು ಶ್ರೀಮಂತಗೊಳಿಸಲು ಪ್ರಯತ್ನಿಸಿದರು. ರಂಗಭೂಮಿಯಲ್ಲಿ ಬೆಳಕಿನ ವಿನ್ಯಾಸದ ಕುರಿತು ಅನೇಕ ಕೃತಿಗಳನ್ನು ಓದಿದರು. ಲೈಟ್‌ಗಳು, ಸ್ವಿಚ್ಚುಗಳು ಮತ್ತು ಡಿಮ್ಮರ್‌ಗಳನ್ನು ತಾವೇ ತಯಾರು ಮಾಡಿದರು. ಭೂಕೈಲಾಸ, ಸಂಪೂರ್ಣ ರಾಮಾಯಣ, ಎಚ್ಚಮ ನಾಯಕ ಇಲ್ಲಿ ಹೆಸರಾದ ನಾಟಕಗಳು. ಈ ನಡುವೆ ತಮಿಳಿನ ‘ಭಕ್ತಿ’ಚಿತ್ರದಲ್ಲಿ ದೂರ್ವಾಸನ ಪಾತ್ರವನ್ನು ಮಾಡಿದರು. ಇದರಲ್ಲಿ ನಾರದನ ಪಾತ್ರವನ್ನು ಮಾಡಿದ್ದವರು ಬಿ.ಎಸ್.ರಾಜಯ್ಯಂಗಾರ್. ಮೈಸೂರಿನಲ್ಲಿ ಇದ್ದ ನಾಗೇಂದ್ರ ರಾಯರ ಕುಟುಂಬ ಈ ನಡುವೆ ಬೆಂಗಳೂರಿಗೆ ವರ್ಗಾವಣೆಗೊಂಡಿತು. ಇದಕ್ಕೆ ಮುಖ್ಯ ಕಾರಣ ಕೃಷ್ಣಬಾಯಿಯವರು ಪ್ರಾಥಮಿಕ ಶಾಲಾ ಅಧ್ಯಾಪಕಿ ವೃತ್ತಿಯಿಂದ ನಿವೃತ್ತರಾದರು.

ಎ.ವಿ.ಮೇಯಪ್ಪ ಚಟ್ಟಿಯಾರರ ಬೆಂಬಲದಿಂದ ರಾಯರು ಮತ್ತೆ ಚಿತ್ರ ನಿರ್ಮಾಣಕ್ಕೆ ಬಂದರು. ‘ವಸಂತ ಸೇನೆ’ ಹೀಗೆ ನಿರ್ಮಿತವಾದ ಚಿತ್ರ. ಶೂದ್ರಕ ಕವಿಯ ‘ಮೃಚ್ಛಕಟಿಕ’ ನಾಟಕವನ್ನು ಆದರಿಸಿದ್ದ ಚಿತ್ರದಲ್ಲಿ ರಾಯರು ಸ್ವಾತಂತ್ರ್ಯ ಹೋರಾಟದ ಎಳೆಗಳನ್ನೂ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನೂ ತಂದಿದ್ದರು. ಚಿತ್ರದಲ್ಲಿ ಪ್ರಮುಖವಾದ ಶಕಾರನ ಪಾತ್ರವನ್ನು ನಿರ್ವಹಿಸಿದ್ದರು. ‘ವಸಂತ ಸೇನೆ’ ಸಿನಿಮ್ಯಾಟಿಕ್ ಈಡಂ ಅನ್ನು ಕನ್ನಡದಲ್ಲಿ ತಂದ ಮೊದಲ ಚಿತ್ರ. ಹಿನ್ನೆಲೆ ಗಾಯನ ಪದ್ದತಿಯನ್ನು ತಂದ ಚಿತ್ರ ಕೂಡ ಇದೇ. ಚಾರುದತ್ತನಾಗಿ ಸುಬ್ಬಯ್ಯ ನಾಯ್ಡು, ವಸಂತ ಸೇನೆಯಾಗಿ ಲಕ್ಷ್ಮೀಬಾಯಿ, ಮೈತ್ರೇಯನಾಗಿ ಜಿ.ವಿ.ಕೃಷ್ಣಮೂರ್ತಿ, ಮದನಿಕೆಯಾಗಿ ಎಸ್.ಕೆ.ಪದ್ಮಾದೇವಿ ಎಲ್ಲರ ಅಭಿನಯವೂ ಸೊಗಸು. ಪಿ.ಕಾಳಿಂಗ ರಾಯರು ಜೈನ ಸನ್ಯಾಸಿಯ ಪಾತ್ರವನ್ನು ನಿರ್ವಹಿಸಿದ್ದಲ್ಲದೆ ಎರಡು ಸೊಗಸಾದ ಗೀತೆಗಳನ್ನೂ ಹಾಡಿದ್ದರು. ಸುಬ್ಬಯ್ಯ ನಾಯ್ಡು ಮತ್ತು ಲಕ್ಷ್ಮೀಬಾಯಿಯವರು ಹಾಡಿದ ‘ಇದೇ ಮಹಾಸುದಿನ’ ಸೂಪರ್ ಹಿಟ್ ಹಾಡು ಎನ್ನಿಸಿಕೊಂಡಿತು. ಐದು ಭಾಷೆಗಳಲ್ಲಿ ಏಕಕಾಲದಲ್ಲಿ ‘ವಸಂತ ಸೇನೆ’ ನಿರ್ಮಾಣವಾಗಿ ಪೈಪೋಟಿ ಎದುರಾದರೂ ಗೆದ್ದಿದ್ದು ನಾಗೇಂದ್ರ ರಾಯರ ‘ವಸಂತ ಸೇನೆ’ಯೇ.

ರಾಯರು ಮುಂದೆ ನಿರ್ಮಿಸಿದ ಚಿತ್ರ ‘ಹರಿಶ್ಚಂದ್ರ’ ಇದರಲ್ಲಿ ಪ್ರಮುಖವಾದ ವಿಶ್ವಾಮಿತ್ರನ ಪಾತ್ರವನ್ನು ಅವರು ನಿರ್ವಹಿಸಿದ್ದರು. ಹರಿಶ್ಚಂದ್ರನಾಗಿ ಸುಬ್ಬಯ್ಯ ನಾಯ್ಡು, ಚಂದ್ರಮತಿಯಾಗಿ ಲಕ್ಷ್ಮೀಬಾಯಿ, ನಾರದನಾಗಿ ಬಿ.ಎಸ್.ರಾಜಯ್ಯಂಗಾರ್ ಪಾತ್ರಗಳನ್ನು ನಿರ್ವಹಿಸಿದ್ದರು. ಭಾರತೀಯ ಚಿತ್ರರಂಗದಲ್ಲೇ ಮೊದಲು ಇಂಟರ್ ಕಟಿಂಗ್ ಪ್ರಯೋಗ ಈ ಚಿತ್ರದ ಮೂಲಕ ಬಂದಿತು. ಲೋಹಿತಾಶ್ವನನ್ನು ಹಾವು ಕಚ್ಚುವ ದೃಶ್ಯವನ್ನು ಹಾವಿನ ಚಲನೆಯನ್ನು ಪ್ರತ್ಯೇಕವಾಗಿ ಚಿತ್ರೀಕರಿಸಿ ಅದಕ್ಕೆ ಲೋಹಿತಾಶ್ವನ ಅಭಿನಯವನ್ನು ಸೇರಿಸಲಾಯಿತು. ಹರಿಶ್ಚಂದ್ರ 1943ರ ಏಪ್ರಿಲ್ 16ರಂದು ತೆರೆಕಂಡು ಬಿಡುಗಡೆಯಾದೆಲ್ಲೆಲ್ಲಾ ಯಶಸ್ಸನ್ನು ಕಂಡಿತು. ಭಾರತದಲ್ಲೇ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಡಬ್ ಆದ ಮೊದಲ ಚಿತ್ರ ಇದು. ತಮಿಳಿಗೆ ‘ಹರಿಶ್ಚಂದ್ರ’ ಡಬ್ ಆಗಿ ಅಲ್ಲೂ ಕೂಡ ಯಶಸ್ಸನ್ನು ಗಳಿಸಿತು. ಈ ನಡುವೆ ನಾಗೇಂದ್ರ ರಾಯರು ಕೈಲಾಸಂ ಅವರ ಕೀಚಕವನ್ನು ತೆರೆಗೆ ತರುವ ಪ್ರಯತ್ನ ಮಾಡಿದರಾದರೂ ಅದು ಯಶಸ್ಸು ಕಾಣಲಿಲ್ಲ.

1947ರಲ್ಲಿ ಭಾರತ ಸ್ವಾತಂತ್ರ್ಯ ಕಂಡ ನಂತರ ಹಿಂದೂ-ಮುಸ್ಲಿಂ ಗಲಭೆಯಿಂದ ಸಮಸ್ಯೆ ಎದುರಿಸಿತು. ದೇಶದೆಲ್ಲಡೆ ಮತೀಯ ಗಲಭೆಗಳು ನಡೆದವು. ಈ ಸಂದರ್ಭದಲ್ಲಿ ನಾಗೇಂದ್ರ ರಾಯರು ರಾಷ್ಟ್ರೀಯ  ಭಾವೈಕ್ಯತೆಯನ್ನು ಬಿಂಬಿಸುವ ‘ಮಹಾತ್ಮ ಕಬೀರ್’ ಚಿತ್ರವನ್ನು ನಿರ್ಮಿಸಿದರು. ಈ ಹಿಂದಿನ ಚಿತ್ರಗಳನ್ನು ನಾಗೇಂದ್ರ ರಾಯರೇ ನಿರ್ದೇಶಿಸಿದ್ದರೂ ಅವರ ಹೆಸರು ವ್ಯವಹಾರಿಕ ಕಾರಣಗಳಿಂದ ಕಾಣಿಸಿಕೊಂಡಿರಲಿಲ್ಲ. ಅಥವಾ ಜಂಟಿಯಾಗಿ ಕಾಣಿಸಿಕೊಂಡಿತ್ತು. ಈ ಚಿತ್ರದಲ್ಲಿ ಮೊದಲ ಸಲ ಅವರ ಹೆಸರು  ನಿರ್ದೇಶಕರು ಎಂದು ಕಾಣಿಸಿಕೊಂಡಿತು. ಇದರಲ್ಲಿ ರಾಯರು ಪ್ರಮುಖವಾದ ಧರ್ಮದಾಸನ ಪಾತ್ರವನ್ನು ಮಾಡಿದರು. ಇದು ನಾಡಿನೆಲ್ಲೆಡೆ ಯಶಸ್ವಿ ಪ್ರದರ್ಶನವನ್ನು ಕಂಡು ಶತದಿನೋತ್ಸವವನ್ನು ಕಂಡ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಯನ್ನು ಕೂಡ ಪಡೆದುಕೊಂಡಿತು. ಈ ಎಲ್ಲಾ ಸಾಹಸಗಳಲ್ಲಿ ಅವರಿಗೆ ಸುಬ್ಬಯ್ಯ ನಾಯ್ಡು ಬೆಂಬಲವಾಗಿದ್ದರು. ಇಬ್ಬರೂ ಶ್ರೀಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿಯನ್ನೂ ಮುಂದುವರಿಸಿ ಕೊಂಡಿದ್ದರು. ಆದರೆ ಮದರಾಸಿನಲ್ಲಿ ಅಪ್ಪಳಿಸಿದ ಚಂಡ ಮಾರುತದ ಪರಿಣಾಮ ‘ಚಮ್ರಂಬಾಣ’ ಅಣೆಕಟ್ಟು ಬಿರಿದು ಕೋಡಿ ಹರಿಯಿತು. ಇದರಿಂದ ಕಂಪನಿ ಮನೆ ಜಾಲಾವೃತವಾಗಿ ದೊಡ್ಡ ಪ್ರಮಾಣದ ನಷ್ಟ ಉಂಟಾಯಿತು. ಈ ಘಟನೆಯ ನಂತರ ನಾಗೇಂದ್ರ ರಾಯರು ನಾಟಕ ಕಂಪನಿಯನ್ನು ನಿಲ್ಲಿಸಿ ಚಿತ್ರರಂಗದಲ್ಲಿಯೇ ಭವಿಷ್ಯವನ್ನು ಕಂಡುಕೊಳ್ಳಲು ನಿರ್ಧರಿಸಿದರು. ಆದರೆ ಸುಬ್ಬಯ್ಯ ನಾಯ್ಡು ಅವರು ರಂಗಭೂಮಿಯಲ್ಲಿ ಮುಂದುವರಿಯಲು ಬಯಸಿದರು. ಗೆಳೆಯರ ದಾರಿ ಬೇರೆಯಾಯಿತು.

ಪಾಲುದಾರಿಕೆಯಿಂದ ಹೊರಬಂದ ಮೇಲೆ ನಾಗೇಂದ್ರರಾಯರು ತಮ್ಮ ಸ್ವಂತ ಲಾಂಛನ ಆರ್.ಎನ್.ಆರ್.ಪಿಕ್ಚರ್ಸ್ ಆರಂಭಿಸಲು ನಿರ್ಧರಿಸಿದರು.  ಆದರೆ ಅದಕ್ಕೆ ಬಂಡವಾಳ ಅಗತ್ಯವಾಗಿತ್ತು. ಇದಕ್ಕಾಗಿ ಜೆಮಿನಿ ಸ್ಟುಡಿಯೋದ ಎಸ್.ಎಸ್.ವಾಸನ್ ಅವರನ್ನು ಭೇಟಿ ಮಾಡಿದರು. ಅವರು ತಮ್ಮ ‘ಅಪೂರ್ವ ಸಹೋದರ್‌ಗಳ್’ ಎಂಬ ಮೂರು ಭಾಷೆಯಲ್ಲಿ ನಿರ್ಮಾಣವಾಗುತ್ತಿದ್ದ ಚಿತ್ರದಲ್ಲಿ ಮುಖ್ಯವಾದ ಖಳನ ಪಾತ್ರವನ್ನು ವಹಿಸಿದರೆ ಬಂಡವಾಳ ನೀಡುವುದಾಗಿ ಹೇಳಿದರು. ಹೀಗೆ ನಾಗೆಂದ್ರ ರಾಯರು ವಹಿಸಿದ ಖಳ ಮಾರ್ತಾಂಡನ  ಪಾತ್ರ ಎಲ್ಲರ ಮೆಚ್ಚಿಗೆಯನ್ನು ಪಡೆದಿದ್ದು ಮಾತ್ರವಲ್ಲದೆ ಅವರಿಗೆ ಅಖಿಲ ಭಾರತ ಚಲನಚಿತ್ರ ಪತ್ರಕರ್ತರ ಸಂಘ ನೀಡುವ ‘ವರ್ಷದ ಖಳನಟ’ ಗೌರವವನ್ನು ತಂದು ಕೊಟ್ಟಿತು. ಇದರ ನಂತರ ರಾಯರ ಕನಸಿನ ಫಲವಾದ ಆರ್.ಎನ್.ಆರ್.ಪಿಕ್ಚರ್ಸ್ ಮೂಲಕ ‘ಜಾತಕ ಫಲ’ ನಿರ್ಮಾಣವಾಯಿತು. ಹಾಸ್ಯದ ಲೇಪನವನ್ನು ಹೊಂದಿದ್ದ ಇದು ಮಾನವೀಯ ಸಂಬಂಧಗಳ ಸೂಕ್ಷ್ಮಗಳನ್ನು ಹಿಡಿಯುವ ಮಹತ್ವದ ಪ್ರಯತ್ನವಾಗಿತ್ತು. ವಸ್ತು-ವಿನ್ಯಾಸಗಳೆರಡರಲ್ಲಿಯೂ ಹೊಸತನವನ್ನು ಹೊಂದಿದ್ದ ಇದನ್ನು ಕನ್ನಡದ ಮೊದಲ ಹೊಸ ಅಲೆ ಚಿತ್ರವೆಂದೂ ಕರೆಯಬಹುದು.

ಈ ಚಿತ್ರದ ಎಲ್ಲಾ ಹಾಡುಗಳನ್ನೂ ನಾಗೇಂದ್ರ ರಾಯರೇ ಬರೆದಿದ್ದರು.  ಚಿತ್ರ ಯಶಸ್ವಿಯಾದರೂ ವಿತರಕರಿಂದ ಹಣ ಬರುವುದು ತಡವಾಗಿದ್ದರಿಂದ ‘ಮಹಿರಾವಣ’ಎನ್ನುವ ಚಿತ್ರದ ಜವಾಬ್ದಾರಿಯನ್ನು ಹೊತ್ತುಕೊಂಡರು. ಆರ್.ಎನ್.ಆರ್.ಪಿಕ್ಚರ್ಸ್ ಮೂಲಕ ರೂಪುಗೊಂಡ ಮುಂದಿನ ಚಿತ್ರ ‘ಪ್ರೇಮದ ಪುತ್ರಿ’. ಈ ಚಿತ್ರದ ಮೂಲಕ ರಾಯರ ಎರಡನೇ ಮಗ ಕೃಷ್ಣಪ್ರಸಾದ್ ಛಾಯಾಗ್ರಾಹಕರಾಗಿ ಮತ್ತು ಮೂರನೇ ಮಗ ಜಯಗೋಪಾಲ್ ಚಿತ್ರ ಸಾಹಿತಿಯಾಗಿ ಬೆಳ್ಳಿತೆರೆಗೆ ಪಾದಾರ್ಪಣೆಯನ್ನು ಮಾಡಿದರು. 1957ರ ಮಾರ್ಚಿ 27ರಂದು ಬೆಂಗಳೂರಿನ ಸಾಗರ್ ಚಿತ್ರಮಂದಿರದಲ್ಲಿ ‘ಪ್ರೇಮದ ಪುತ್ರಿ’ ಬಿಡುಗಡೆಯಾಗಿ ಅಪಾರ ಯಶಸ್ಸನ್ನು ಪಡೆಯಿತು. ರಾಷ್ಟ್ರಪತಿಗಳ ರಜತ ಪದಕವನ್ನೂ ಪಡೆಯಿತು. ಈ ಚಿತ್ರದ ತಮಿಳು ಆವೃತ್ತಿ ‘ಅನ್ಬೇ ದೈವಂ’ ಮದರಾಸಿನ ‘ಕ್ಯಾಸಿನೋ’ ಚಿತ್ರಮಂದಿರದಲ್ಲಿ ಶತದಿನದ ಗೌರವವನ್ನು ಪಡೆಯಿತು. ಚಿತ್ರ ನಾಗೆಂದ್ರ ರಾಯರಿಗೆ ಅದೃಷ್ಟವನ್ನು ತಂದಿತು. ಆದರೆ ಅವರ ಅದೃಷ್ಟಲಕ್ಷ್ಮಿಯನ್ನು ಕಿತ್ತು ಕೊಂಡಿತು. ಅವರ ಮಡದಿ ರತ್ನಾಬಾಯಿ 1957ರ ಜುಲೈ 23ರಂದು ಸ್ತನಕ್ಯಾನ್ಸರ್‌ನಿಂದ ನಿಧನರಾದರು.

ಡಬ್ಬಿಂಗ್ ಚಳುವಳಿ, ಕಚ್ಚಾಫಿಲಂ ಕೊರತೆಯಂತಹ ಕಾರಣಗಳಿಂದ ರಾಯರು ಹೊಸ ಚಿತ್ರವನ್ನು ಕೂಡಲೇ ಆರಂಭಿಸಲು ಆಗಲಿಲ್ಲ. ‘ಬೆಟ್ಟದ ಕಳ್ಳ’ ಚಿತ್ರದಲ್ಲಿ ಈ ನಡುವೆ ಪೋಲೀಸ್ ಅಧಿಕಾರಿಯ ಪಾತ್ರವನ್ನು ಅವರು ನಿರ್ವಹಿಸಿದರು. ನಂತರ ‘ವಿಜಯ ನಗರದ ವೀರಪುತ್ರ’ ಚಾರಿತ್ರಿಕ ಚಿತ್ರವನ್ನು ವೈಭವೋಪೇತವಾಗಿ ನಿರ್ಮಿಸಲು ಅವರು ಬಯಸಿದ್ದರು. ಇದಕ್ಕೆ ಹಣಕಾಸಿನ ಕೊರತೆ ಉಂಟಾಯಿತು. ಆಗ ರೂಪುಗೊಂಡ ‘ಫಿಲಂ ಫೈನಾನ್ಸ್ ಕಾರ್ಪೋರೇಷನ್’ ಮೂಲಕ ಅರ್ಥಿಕ ನೆರವನ್ನು ಪಡೆದುಕೊಂಡರು. ಭಾರತದಲ್ಲಿಯೇ ಇಂತಹ ನೆರವು ಪಡೆದ ಮೊದಲ ಚಿತ್ರ ‘ವಿಜಯನಗರದ ವೀರಪುತ್ರ’ ಎನ್ನಿಸಿಕೊಂಡಿತು. ಈ ಚಿತ್ರದ ಮೂಲಕ ಅವರ ಕೊನೆಯ ಮಗ ಆರ್.ಎನ್.ಸುದರ್ಶನ್ ನಾಯಕರಾಗಿ ಪಾದಾರ್ಪಣೆ ಮಾಡಿದರು. ವಿಶ್ವನಾಥನ್ – ರಾಮಮೂರ್ತಿಯವರ ಸಂಗೀತ ಸಂಯೋಜನೆಯ ಗೀತೆಗಳು ಜನಪ್ರಿಯವಾದವು. ಮೈಸೂರು ಮಹಾರಾಜರ ಬಳಿ ಇರುವ ಸಿಂಹಾಸನ ವಿಜಯನಗರದ್ದು ಎನ್ನುವ ನಂಬಿಕೆಯನ್ನು ಅವಲಂಭಿಸಿ ಅದರ ಪಡಿಯಚ್ಚಿನಂತಹ ಸಿಂಹಾಸವನ್ನು ಮೆಜೆಸ್ಟಿಕ್ ಸ್ಟುಡಿಯೋದ ಪ್ಲೋರ್‌ನಲ್ಲಿ ನಿರ್ಮಿಸಲಾಗಿತ್ತು. ಅದನ್ನು ನೋಡಲೆಂದೇ ಸಾವಿರಾರು ಜನರು ಬರುತ್ತಿದ್ದರು.  1961ರ ಏಪ್ರಿಲ್ 20ರಂದು ಚಿತ್ರ ಬಿಡುಗಡೆಯಾಗಿ ಬೆಂಗಳೂರು, ಮೈಸೂರು, ದಾವಣಗೆರೆ ಮತ್ತು ಹುಬ್ಬಳ್ಳಿಗಳಲ್ಲಿ ನಾಲ್ಕುವಾರಗಳ ಯಶಸ್ವಿ ಪ್ರದರ್ಶನವನ್ನು ಕಂಡಿತು. ಉಳಿದೆಡೆ ಕೂಡ ಉತ್ತಮ ಬೆಂಬಲವನ್ನು ಪಡೆದುಕೊಂಡಿತು. ಹೀಗಿದ್ದರೂ ನಿರ್ಮಾಣ ವೆಚ್ಚದ ಪ್ರಮಾಣ ಹೆಚ್ಚಾಗಿದ್ದರಿಂದ ಎಫ್.ಎಫ್.ಸಿ ಸಾಲವನ್ನು ತೀರಿಸಲಾಗದೆ ಚಿತ್ರವನ್ನೇ ಅವರಿಗೆ ಒಪ್ಪಿಸಬೇಕಾಯಿತು. ಹೀಗೆ ವೈಭವದ ಅಧ್ಯಾಯ ಕಹಿಯಾಗಿ ಕೊನೆಗೊಂಡಿತು.

ಇದನ್ನು ಸರಿದೂಗಿಸಲು ರಾಯರು ಚಿಕ್ಕ ಬಜೆಟ್‌ನ ಚಿತ್ರವನ್ನು ರೂಪಿಸಿದರು ಅದೇ ‘ಆನಂದ ಭಾಷ್ಟ’. ಜಿ.ಕೆ.ವೆಂಕಟೇಶ್ ಅವರ ಮಹತ್ವ ಸಂಗೀತದ ಹೊಂದಿದ್ದ ಚಿತ್ರ ಗೆಲುವನ್ನು ಸಾಧಿಸಿತು. ಇದರ ನಂತರ ನಾಗೇಂದ್ರ ರಾಯರು ತ್ರಿವೇಣಿಯವರ ಕಾದಂಬರಿಯನ್ನು ಆಧರಿಸಿದ್ದ ‘ಹಣ್ಣೆಲೆ ಚಿಗುರಿದಾಗ’ ಚಿತ್ರವನ್ನು ನಿರ್ಮಿಸಿ – ನಿರ್ದೇಶಿಸಲು ಬಯಸಿದ್ದರು. ಆದರೆ ಸುಂದರಲಾಲ್ ನೆಹತಾ ಅವರ ಸ್ನೇಹಕ್ಕೆ ಕಟ್ಟು ಬಿದ್ದು ಈ ಚಿತ್ರದಲ್ಲಿ ಪಾತ್ರವನ್ನು ಮಾತ್ರ ನಿರ್ವಹಿಸಿದರು. ಎಂ.ಆರ್.ವಿಠಲ್ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರದ ಅಭಿನಯಕ್ಕಾಗಿ ಅವರು ರಾಜ್ಯ ಸರ್ಕಾರದಿಂದ ‘ಶ್ರೇಷ್ಟ ನಟ’ ಗೌರವನ್ನು ಪಡೆದುಕೊಂಡರು. ಇದರ ನಂತರ ಆರ್.ಎನ್.ಆರ್.ಪಿಕ್ಚರ್ಸ್‌ ಕೊನೆಯ ಚಿತ್ರ ‘ಪತಿಯೇ ದೈವ’ ರೂಪುಗೊಂಡಿತು. ನಂತರ ರಾಯರು ಅಭಿನಯದತ್ತ ಹೆಚ್ಚು ಗಮನ ಹರಿಸಿದರು. ವೀನಸ್‌ನ ನ್ಯೂಟೌನ್‌ನಲ್ಲಿ ಚಿತ್ರೀಕರಣಗೊಂಡ ಚಿತ್ರ ಸಾಧಾರಣ ಯಶಸ್ಸನ್ನು ಗಳಿಸಿತು. ಇದೇ ಆರ್.ಎನ್.ಆರ್.ಪಿಕ್ಚರ್ಸ್‌ ಕೊನೆಯ ಚಿತ್ರವಾಯಿತು.

1966ರಿಂದ 1974ರ ನಡುವೆ 32 ಚಿತ್ರಗಳಲ್ಲಿ ಅವರು ಅಭಿನಯಿಸಿದರು. ನಕ್ಕರದೇ ಸ್ವರ್ಗ, ಶ್ರೀಕೃಷ್ಣದೇವರಾಯ, ಕರುಳಿನ ಕರೆ, ಕುಲಗೌರವ, ಸಾಕ್ಷಾತ್ಕಾರ ಇವುಗಳಲ್ಲಿ ಪ್ರಮುಖವಾದವು. ನಾಗೇಂದ್ರ ರಾಯರು ನಿರ್ದೇಶಿಸಿದ ಮುಂದಿನ ಚಿತ್ರ ‘ಪ್ರೇಮಕ್ಕೂ ಪರ್ಮಿಟ್ಟೇ’ ಇದು ಕಲ್ಯಾಣ್ ಕುಮಾರ್ ಮತ್ತು ಕಲ್ಪನಾ ಅವರು ಅಭಿನಯಿಸಿದ್ದ ಲವಲವಿಕೆಯ ಪ್ರೇಮಚಿತ್ರವಾಗಿತ್ತು. ನಂತರ ಅವರು ನಿರ್ದೇಶಿಸಿದ  ‘ನಮ್ಮ ಮಕ್ಕಳು’1969ರ ಆಗಸ್ಟ್ 20ರಂದು ಕೆಂಪೇಗೌಡ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ 34 ವಾರಗಳ ಕಾಲ ಓಡಿ ದಾಖಲೆಯನ್ನು ಸ್ಥಾಪಿಸಿತು. ವಾದಿರಾಜ್ ಚಿತ್ರದ ನಿರ್ಮಾಪಕರು. ಮಕ್ಕಳಿಗೆ ಸಂಸಾರ ನಿರ್ವಹಣೆಯ ಹೊಣೆಗಾರಿಕೆ ಕಲಿಸುವ ವಿಭಿನ್ನ ವಸ್ತು ಚಿತ್ರದ್ದಾಗಿತ್ತು. ‘ನಿಮ್ಮೊಲಮೆ ನಮಗಿರಲಿ ತಂದೆ’ ಜನಪ್ರಿಯವಾಗಿದ್ದೂ ಅಲ್ಲದೆ ಪ್ರಾರ್ಥನಾ ಗೀತೆಯಾಗಿ ಕೂಡ ಹಲವು ವರ್ಷಗಳ ಕಾಲ ಶಾಲೆಗಳಲ್ಲಿ ಕೇಳಿ ಬಂದಿತ್ತು. ಇದು ತಮಿಳಿನಲ್ಲಿ ‘ನಮ್ಮ ಕುಳಂದೈಗಳ್’ ಮತ್ತು ಹಿಂದಿಯಲ್ಲಿ ‘ಘರ್‌ಘರ್‌ಕಿ ಕಹಾನಿ’ ಎಂದು ನಿರ್ಮಾಣವಾಗಿ ಯಶಸ್ಸನ್ನು ಪಡೆದುಕೊಂಡಿತು. ‘ನಾಡಿನ ಭಾಗ್ಯ’ ನಾಗೇಂದ್ರ ರಾಯರು ನಿರ್ದೇಶಿಸಿದ ಕೊನೆಯ ಚಿತ್ರ. ಹಳ್ಳಿಯ ಯುವಕ ಪಟ್ಟಣಕ್ಕೆ ಹೋಗಿ ಕೃಷಿ ಪದವಿ ಪಡೆದು ಹಳ್ಳಿಯಲ್ಲಿ ಜಾಗೃತಿ ಉಂಟು ಮಾಡುವ ವಸ್ತುವನ್ನು ಹೊಂದಿತ್ತು. 

1974ರಲ್ಲಿ ರಾಯರಿಗೆ ‘ಪದ್ಮಶ್ರೀ’ ಗೌರವ ದೊರಕಿತು. ಕನ್ನಡ ಚಿತ್ರರಂಗದಲ್ಲಿ ಇಂತಹ ಮನ್ನಣೆ ಪಡೆದ ಮೊದಲಿಗರು ಎನ್ನುವ ಹೆಗ್ಗಳಿಕೆ ಅವರದ್ದು. ಆದರೆ ಅವರು ಅದನ್ನು ಸ್ವೀಕರಿಸಲು ದೆಹಲಿಗೆ ಹೋಗಲಿಲ್ಲ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಏರ್ಪಟಾಗಿದ್ದ ಭವ್ಯ ಸಮಾರಂಭದಲ್ಲಿ ಅವರಿಗೆ ಅದನ್ನು ನೀಡಲಾಯಿತು. 1973ರಲ್ಲಿ ಅವರು ಆದರ್ಶ ಫಿಲಂ ಇನ್ಸ್ಟ್ಯೂಟ್ ಆರಂಭಿಸಿದರು. ಅದು ಮುಂದೆ ಚಲನಚಿತ್ರ ಕಲಿಕೆಗೆ ಪ್ರಮುಖ ಸಂಸ್ಥೆಯಾಗಿ ಬೆಳೆಯಿತು. ಇಳಿ ವಯಸ್ಸಿನಲ್ಲಿ ಅವರಿಗೆ ಕ್ಯಾನ್ಸರ್ ಕಾಣಿಸಿಕೊಂಡಿತು. 1977ರ ಫೆಬ್ರವರಿ 9ರಂದು ಅವರು ನಿಧನರಾದರು. ಕನ್ನಡ ಚಿತ್ರರಂಗಕ್ಕೆ ಅವರು ಹಾಕಿದ ಬುನಾದಿ ಭವ್ಯ ಭವಿಷ್ಯಕ್ಕೆ ಕಾರಣವಾಯಿತು.

ನಾಗೇಂದ್ರ ರಾಯರ ಮೊದಲ ಮಗ ಗುರುಪ್ರಸಾದ್ ಮಾತ್ರ ಚಿತ್ರರಂಗದಿಂದ ದೂರವಿದ್ದರು. ಎರಡನೇ ಮಗ ಕೃಷ್ಣಪ್ರಸಾದ್ 80ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಹೆಸರು ಮಾಡಿದರು. ಮೂರು ರಾಜ್ಯ ಪ್ರಶಸ್ತಿಗಳನ್ನು ಪಡೆದರು. ಅವರು ನಿರ್ದೇಶಿಸಿದ ‘ನಗುವ ಹೂವು’ ರಾಷ್ಟ್ರಪ್ರಶಸ್ತಿಯನ್ನು ಪಡೆಯಿತು. ಅವರಿಗೆ ಡಾ.ವಿಷ್ಣುವರ್ಧನ್ ಪ್ರಶಸ್ತಿ ಜೀವಮಾನ ಸಾಧನೆಗಾಗಿ ಬಂದಿತ್ತು. ಆರ್.ಎನ್.ಜಯಗೋಪಾಲ್ ಕನ್ನಡದ ಪ್ರಮುಖ ಗೀತರಚನೆಕಾರರು. ಎಂಟು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಮೆಗಾ ಧಾರಾವಾಹಿಗಳ ಯುಗವನ್ನು ಆರಂಭಿಸಿದ ಅವರು 22 ಕಿರುತೆರೆ ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಕಿರಿಯ ಮಗ ಆರ್.ಎನ್.ಸುದರ್ಶನ್ ಕಲಾವಿದರು. ಅವರ ಮಡದಿ ಶೈಲಶ್ರೀ ಕೂಡ ಕಲಾವಿದೆ. ನಾಗೇಂದ್ರ ರಾಯರ ಮೊಮ್ಮಕ್ಕಳ ಪೈಕಿ ರವಿಪ್ರಶಾಂತ್ ಚಲನಚಿತ್ರ ಮತ್ತು ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ರಾಜೀವ ಪ್ರಸಾದ್ ನಿರ್ದೇಶಕರಾಗಿ ಹೆಸರು ಮಾಡಿದರು. ರಾಜೀವ ಪ್ರಸಾದ್ ಅವರ ಮಗ ಋತು ಪರಣ್ ಧಾರಾವಾಹಿಗಳಲ್ಲಿ ಅಭಿನಯಸಿದ್ದಾರೆ. 1996-97ರಲ್ಲಿ ನಾಗೇಂದ್ರ ರಾಯರ ಜನ್ಮಶತಮಾನೋತ್ಸವ ಕಾರ್ಯಕ್ರಮಗಳು ನಡೆದವು. ಟ್ಯಾಂಕ್-ಬಂಡ್ ರಸ್ತೆಗೆ ಅವರ ಹೆಸರನ್ನು ಇಡಲಾಯಿತು. ಆದರೆ ಅದಿನ್ನೂ ಜಾರಿಗೆ ಬಂದಿಲ್ಲ. ನಾಗೇಂದ್ರ ರಾಯರು ಚಿತ್ರರಂಗ ಮತ್ತು ರಂಗಭೂಮಿಗೆ ಸಲ್ಲಿಸಿದ ಅಪಾರ ಸೇವೆಯ ಕುರಿತು ಇನ್ನೂ ಹೆಚ್ಚಿನ ಚರ್ಚೆ ಮತ್ತು ಅಧ್ಯಯನಗಳು ನಡೆಯಬೇಕಾಗಿದೆ. ಅವರ ಸಾಧನೆಯ ಕುರಿತು ಕನ್ನಡಿಗರಲ್ಲಿ ಹಚ್ಚಿನ ಅರಿವನ್ನು ಮೂಡಿಸು ಕೆಲಸ ಕೂಡ ಆಗಬೇಕಾಗಿದೆ.

ಈ ಬರಹಗಳನ್ನೂ ಓದಿ