ಸಿನಿಮಾ ಜೀವನದ ಆರಂಭದಲ್ಲಿ ಮಮ್ತಾಜ್ `ಸ್ಟಂಟ್ ಹಿರೋಯಿನ್’ ಎಂದು ಹೆಸರಾಗಿದ್ದ ನಟಿ. ಭಾರತೀಯ ಚಿತ್ರರಂಗದ ಮೊದಲ ಸೂಪರ್‌ಸ್ಟಾರ್ ರಾಜೇಶ್ ಖನ್ನಾರ ಹಲವು ಚಿತ್ರಗಳ ನಾಯಕಿ. ಹುಟ್ಟಿದ್ದು 1947, ಜುಲೈ 31ರಂದು ಮುಂಬಯಿಯಲ್ಲಿ. ಹಿಂದಿ ಚಿತ್ರರಂಗಕ್ಕೆ ಪರಿಚಯವಾದಾಗ ಆಕೆಗೆ ಕೇವಲ 14 ವರ್ಷ. ಹಿರೋಯಿನ್ ಪಾತ್ರಕ್ಕೆ ತೀರಾ ಚಿಕ್ಕವಳೆಂದು ಮಮ್ತಾಜ್‌ಗೆ ಪುಟ್ಟ ಪಾತ್ರಗಳನ್ನು ಕೊಡುತ್ತಿದ್ದರು. ಚಿತ್ರರಂಗ ಪರಿಚಯಿಸಿಕೊಂಡ ಆಕೆಗೆ ನಾಯಕಿಯಾಗಿ ಬಡ್ತಿ ಹೊಂದಲು ಹೆಚ್ಚು ಸಮಯ ಬೇಕಾಗಲಿಲ್ಲ. ಬಹುಬೇಗ ಚಿಕ್ಕ ಬಜೆಟ್‌ನ ಚಿತ್ರಗಳಿಗೆ ನಾಯಕಿಯಾದರು.
ಮಮ್ತಾಜ್ ಬೆಳ್ಳಿತೆರೆ ಅಭಿಯಾನ ಆರಂಭವಾಗಿದ್ದು 1960ರ ದಶಕದ ಆರಂಭದಲ್ಲಿ. `ಮುಝೆ ಜಾನೇ ದೋ’ನಂಥ ದೊಡ್ಡ ಬಜೆಟ್ ಚಿತ್ರದಲ್ಲಿ ಆಕೆಯ ಪುಟ್ಟ ಪಾತ್ರ ಗಮನ ಸೆಳೆದಿತ್ತು. ನಂತರ ಚಿಕ್ಕ ಬಜೆಟ್‌ನ ಸಾಲು, ಸಾಲು ಚಿತ್ರಗಳಲ್ಲಿ ನಾಯಕಿಯಾದರು. `ಬಾಕ್ಸರ್’, `ಸ್ಯಾಮ್ಸನ್’, `ಟಾರ್ಜಾನ್’, `ಕಿಂಗ್ ಕಾಂಗ್’ ಆ್ಯಕ್ಷನ್ ಚಿತ್ರಗಳಲ್ಲಿ ಮಮ್ತಾಜ್ ನಾಯಕಿಯಾಗಿ ನಟಿಸಿದರು. ಕುಸ್ತಿ ಪಟು ಧಾರಾ ಸಿಂಗ್ ಜೊತೆ ಆಕೆ ಸಾಲಾಗಿ 16 ಚಿತ್ರಗಳಲ್ಲಿ ಕಾಣಿಸಿಕೊಂಡದ್ದು ವಿಶೇಷ. ಇದರಿಂದಾಗಿ ಮಮ್ತಾಜ್ `ಸ್ಟಂಟ್ ಫಿಲ್ಮ್ ಹಿರೋಯಿನ್’ ಎಂದೇ ಹೆಸರಾಗಿದ್ದರು!

`ಮೇರೆ ಸನಂ’ (1965) ಚಿತ್ರದ ನೆಗೆಟಿವ್ ಶೇಡ್‌ನ ಪಾತ್ರ ಮಮ್ತಾಜ್‌ಗೆ ಹೆಸರು ತಂದುಕೊಟ್ಟಿತು. ಅದಾಗಿ ಎರಡೇ ವರ್ಷಕ್ಕೆ ತೆರೆಕಂಡ `ರಾಮ್ ಔರ್ ಶ್ಯಾಮ್’, ಅವರ ಸಿನಿಮಾ ಜೀವನಕ್ಕೆ ದೊಡ್ಡ ತಿರುವು ಕೊಟ್ಟಿತು. ಚಿತ್ರದಲ್ಲಿ ಅವರು ದಿಲೀಪ್‌ಕುಮಾರ್ ಜೋಡಿಯಾಗಿ ನಟಿಸಿದ್ದರು. ಈ ಚಿತ್ರದ ಉತ್ತಮ ಅಭಿನಯಕ್ಕಾಗಿ ಮಮ್ತಾಜ್ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪಾತ್ರಕ್ಕೆ ನಾಮನಿರ್ದೇಶನಗೊಂಡಿದ್ದರು. 60ರ ದಶಕದ ಕೊನೆಯಲ್ಲಿ ಮಮ್ತಾಜ್ `ಸಾವನ್ ಕಿ ಘಟಾ’, `ಯೇ ರಾತ್ ಫಿರ್ ನಾ ಆಯೇಗಿ’, `ಮೇರೆ ಹಮ್‌ದಮ್ ಮೇರೆ ದೋಸ್ತ್’ ಚಿತ್ರಗಳಲ್ಲಿ ಹೆಸರು ಮಾಡಿದರು. ಈ ಚಿತ್ರಗಳಲ್ಲಿ ಅವರದು, ನಟಿ ಶರ್ಮಿಳಾ ಟ್ಯಾಗೂರ್‌ಗೆ ಸರಿಸಮನಾದ ಅಭಿನಯ. ಸತತ ಪರಿಶ್ರಮ ಹಾಗೂ ಶ್ರದ್ಧೆಯಿಂದ ಮಮ್ತಾಜ್ 70ರ ದಶಕದ ಪ್ರಮುಖ ನಾಯಕಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಆಕರ್ಷಕ ವ್ಯಕ್ತಿತ್ವದ ಸುಂದರಿ ನಟಿ ಆಕೆ. 14 ವರ್ಷದ ತಮ್ಮ ಸಿನಿಮಾ ಜೀವನದಲ್ಲಿ ಅವರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ತಾವು ನಟಿಸಿದ ಚಿಕ್ಕ ಪಾತ್ರಕ್ಕೂ ಜೀವ ತುಂಬಿದ್ದರು. `ಖಿಲೋನಾ’ (1970) ಚಿತ್ರದ ಉತ್ತಮ ಅಭಿನಯಕ್ಕಾಗಿ ಮಮ್ತಾಜ್ ಫಿಲ್ಮ್‌ಫೇರ್ ಶ್ರೇಷ್ಠ ನಟಿ ಪುರಸ್ಕಾರಕ್ಕೆ ಭಾಜನರಾದರು. 1997ರಲ್ಲಿ ಫಿಲ್ಮ್‌ಫೇರ್ ಅವರಿಗೆ ಜೀವಮಾನ ಸಾಧನೆ ಪುರಸ್ಕಾರ ನೀಡಿ ಗೌರವಿಸಿತು.

ಅಂದಿನ ಸೂಪರ್‌ಸ್ಟಾರ್ ರಾಜೇಶ್ ಖನ್ನಾ ಜೊತೆ ಮಮ್ತಾಜ್ ಹಲವು ಚಿತ್ರಗಳಲ್ಲಿ ನಟಿಸಿದರು. ರಾಜೇಶ್ ಜೊತೆಗೆ ಅವರು ನಟಿಸಿದ `ದೋ ರಾಸ್ತೇ’, `ಸಚ್ಛಾ ಝೂಟಾ’, `ಆಪ್ ಕಿ ಕಸಮ್’ ಚಿತ್ರಗಳು ಬ್ಲಾಕ್‌ಬಸ್ಟರ್ ಎನಿಸಿಕೊಂಡವು. ಫಿರೋಜ್ ಖಾನ್, ಜಿತೇಂದ್ರ, ಧರ್ಮೇಂದ್ರ, ಸಂಜೀವ್ ಕುಮಾರ್‌ರಂಥ ಜನಪ್ರಿಯ ಹಿರೋಗಳೊಂದಿಗೂ ಮಮ್ತಾಜ್ ನಟಿಸಿದರು. ಮಮ್ತಾಜ್‌ರ `ತೇರೆ ಮೇರೆ ಸಪ್ನೇ’, `ರೂಪ್ ತೇರಾ ಮಸ್ತಾನಾ’, `ಆಪ್ ಕಿ ಕಸಮ್’ ಚಿತ್ರಗಳು ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿವೆ. `ಆಯ್ನಾ’ (1977) ಚಿತ್ರದ ಸೋಲಿನೊಂದಿಗೆ ಮಮ್ತಾಜ್ ಅಭಿನಯದಿಂದ ದೂರವಾದರು. ಮುಂದೆ ಉದ್ಯಮಿ ಮಯೂರ್ ಮಾಧ್ವಾನಿ ಅವರನ್ನು ವರಿಸಿದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ನಟಾಶಾ ಮತ್ತು ತನ್ಯಾ. 12 ವರ್ಷಗಳ ನಂತರ ಬೆಳ್ಳಿತೆರೆಗೆ ಹಿಂತಿರುಗಿದ ಮಮ್ತಾಜ್ `ಆಯ್ನಾ’ ಚಿತ್ರದಲ್ಲಿ ನಟಿಸಿದರು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಗಿದ್ದರಿಂದ ತೆರೆಮರೆಗೆ ಸರಿದರು.
