ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಮಧುರ ಮಂಜುಳ ಗಾನದ ಕೋಗಿಲೆ: ಬಿ.ಕೆ.ಸುಮಿತ್ರ

ಪೋಸ್ಟ್ ಶೇರ್ ಮಾಡಿ
ಎನ್‌.ಎಸ್.
ಶ್ರೀಧರಮೂರ್ತಿ
ಲೇಖಕ

‘ಮಧುರ ಮಧುರವೀ ಮಂಜುಳ ಗಾನ’ ‘ಸತಿ ಸುಕನ್ಯ’ಚಿತ್ರದ ಎಂದೂ ಮರೆಯದ ಮಧುರಗೀತೆ. ಈ ಹಾಡನ್ನು ಹಾಡಿ ರಸಿಕರ ಹೃದಯದಲ್ಲಿ ನೆಲೆ ಮಾಡಿ ನಿಂತಿರುವ ಮಲೆನಾಡ ಕೋಗಿಲೆ ಬಿ.ಕೆ. ಸುಮಿತ್ರ ಅರ್ಥಾತ್ ನಮ್ಮೆಲ್ಲರ ನೆಚ್ಚಿನ ಅಮ್ಮನಿಗೆ ಇಂದು ಎಂಬತ್ತನೇ ವರ್ಷ ತುಂಬಿತು.

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೋಕಿನ ಬಿಳಲು ಕೊಪ್ಪಎನ್ನುವ ಕುಗ್ರಾಮದಲ್ಲಿ 1941ರ ಏಪ್ರಿಲ್ 27ರಂದು ಜನಿಸಿದ ಸುಮಿತ್ರ ಇಂದು ಗಾಯನ ಕ್ಷೇತ್ರದಲ್ಲಿ ದೊಡ್ಡ ಆಲದ ಮರದಂತೆ ಬೆಳೆದಿದ್ದಾರೆ. ಬಿ.ಕೆ.ಸುಮಿತ್ರಾ ಅವರ ತಂದೆ ಪಟೇಲ್‌ ಕೃಷ್ಣಯ್ಯನವರು ತಬಲ ನುಡಿಸುತ್ತಿದ್ದರು. ಅವರ ಸೋದರತ್ತೆ ಕಾವೇರಮ್ಮ ಸಂಪ್ರದಾಯದ ಹಾಡುಗಳನ್ನು ಚೆನ್ನಾಗಿ ಹೇಳುತ್ತಿದ್ದರು. ಇದರಿಂದ ಬಾಲ್ಯದಿಂದಲೇ ಸುಮಿತ್ರ ಅವರಿಗೆ ಸಂಗೀತದ ಕಡೆ ಅಭಿರುಚಿ ಬೆಳೆಯಲು ಸಾಧ್ಯವಾಯಿತು. ಅವರ ತಂದೆ ಪ್ರಗತಿಪರರು ಆ ಕಾಲದಲ್ಲಿಯೇ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಮಹತ್ವಕೊಟ್ಟರು. ಶಿವಮೊಗ್ಗದಲ್ಲಿ ಮನೆ ಮಾಡಿ ಮಕ್ಕಳನ್ನು ಓದಿಸಿದರು. ಇಲ್ಲಿಯೇಅವರು ಪಂಢರಿಬಾಯಿ ಅವರ ಅಣ್ಣ ಎಂ.ಪ್ರಭಾಕರ್‍ ಅವರಿಂದ ಸಂಗೀತವನ್ನುಕಲಿತರು.

ಪಂಢರೀಬಾಯಿಯವರೇ ಒಮ್ಮೆ ಸುಮಿತ್ರಾ ಅವರನ್ನು ಮದ್ರಾಸ್ ನೋಡಲು ಕರೆದುಕೊಂಡು ಹೋದರು. ಆಗ ಟಿ.ವಿ.ಸಿಂಗ್ ಠಾಕೂರ್‍ ಅವರ ‘ಕವಲೆರಡು ಕುಲವೊಂದು’ಚಿತ್ರದ ಧ್ವನಿಮುದ್ರಣ ನಡೆಯುತ್ತಿತ್ತು. ಪಂಢರಿ ಬಾಯಿಯವರು ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್‍ ಅವರ ಬಳಿ ‘ಇವಳು ನನ್ನ ಅಣ್ಣನ ಶಿಷ್ಯೆ, ಚೆನ್ನಾಗಿ ಹಾಡುತ್ತಾಳೆ’ಎಂದು ಶಿಫಾರಸ್ಸು ಮಾಡಿದರು. ಪರಿಣಾಮ ಟಿ.ಎ.ಮೋತಿಯವರ ಜೊತೆ ಯುಗಳ ಗೀತೆ ಹಾಡುವ ಅವಕಾಶ ಸಿಕ್ಕಿತು. ಚಿತ್ರರಂಗದಲ್ಲಿ ಆಗ ಪರಭಾಷಾ ಗಾಯಕಿಯರದೇ ಅಧಿಪತ್ಯ. ಅವರ ನಡುವೆ ಸುಮಿತ್ರ ಕನ್ನಡದ ಬಾವುಟವನ್ನು ಹಾರಿಸಿದರು. ಓಡಿ ಬಾ ಓಡೋಡಿ, ಗಾಂಧಿ ತಾತನ, ಮಧುರ ಮಧುರವೀ, ಸಂಪಿಗೆ ಮರದ ಹಸಿರೆಲೆ ನಡುವೆ, ವೀಣಾ ನಿನಗೇಕೋ ಈ ಕಂಪನ, ನಿನ್ನೊಲುಮೆ ನಮಗಿರಲಿ ತಂದೆ, ಅ ಆ ಇ ಈ ಕನ್ನಡದ ಅಕ್ಷರ ಮಾಲೆ ಮೊದಲಾದ ಗೀತೆಗಳು ಅಪಾರ ಜನಪ್ರಿಯತೆಯನ್ನು ಪಡೆದವು. ಕುನ್ನಕ್ಕುಡಿ ಅವರ ಸಂಗೀತ ನಿರ್ದೇಶನದಲ್ಲಿ ‘ಆಮೆಕ್ಕನ್ನ ವೀಟ್ಟುಕ್ಕು ಪೋರಕುಟ್ಟಿ’ತಮಿಳು ಗೀತೆ ಸಾಕಷ್ಟು ಜನಪ್ರಿಯವಾಯಿತು. ಕುನ್ನಕುಡಿ ಬಿ.ಕೆ.ಸುಮಿತ್ರಾ ಅವರನ್ನು ಕಂಡಾಗಲೆಲ್ಲಾ ‘ಆಮಕ್ಕನ್ನ’ಎಂದೇ ಕರೆಯುತ್ತಿದ್ದರು.

1966ರಲ್ಲಿ ಬಿ.ಕೆ.ಸುಮಿತ್ರಾ ಮದ್ರಾಸಿನಲ್ಲಿ ತಮ್ಮದೇ ವಾದ್ಯಗೋಷ್ಟಿಯನ್ನು ಆರಂಭಿಸಿದರು. ಇಳಯ ರಾಜ, ಗಂಗೈ ಅಮರನ್, ಸಂಗೀತರಾಜ ಎಲ್ಲರೂ ಅವರ ತಂಡದಲ್ಲಿ ಸದಸ್ಯರಾಗಿದ್ದರು. ಬೆಂಗಳೂರಿಗೆ ಬಂದಾಗ ಹಾಡಲು ಪುರುಷ ಗಾಯಕರ ಅಗತ್ಯ ಬೀಳುತ್ತಿತ್ತು. ಆಗ ರಿಸರ್ವ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ಎಂ.ಎಸ್.ಸುಧಾಕರ ಅವರ ಪರಿಚಯವಾಯಿತು. ಗಾಯನವೇ ಜೀವನ ಎನ್ನುತ್ತಿದ್ದ ಸುಮಿತ್ರ ಮದುವೆ ಬೇಡ ಎಂದೇ ತೀರ್ಮಾನಿಸಿದ್ದರು. ತಂಗಿಯರ ಮದುವೆಯನ್ನು ಕೂಡ ಮಾಡಿಬಿಟ್ಟರು. ಸುಮಿತ್ರಾ ಅವರ ತಂಗಿಯ ಗಂಡ ಸಹ್ಯಾದ್ರಿಯವರ ಮೂಲಕ ವಿವಾಹದ ಪ್ರಸ್ತಾಪ ಬಂದಿತು. ಸುಮಿತ್ರ ಅವರಿಗೂ ಹಾಡಿಗೆ ಜೊತೆ ನೀಡುವ ಪತಿ ಎಂ.ಎಸ್.ಸುಧಾಕರ ಒಪ್ಪಿಗೆ ಎನ್ನಿಸಿತು. ಹೀಗೆ ದಾಂಪತ್ಯವೇ ಬೇಡ ಎನ್ನುತ್ತಿದ್ದವರಿಗೆ 1972ರಲ್ಲಿ ವಿವಾಹವಾಯಿತು.

ವಿವಾಹವಾಗಿ ಮಕ್ಕಳು ಬೆಳೆಯುತ್ತಿದ್ದಾಗಲೂ ಸುಮಿತ್ರ ಬಹು ಬೇಡಿಕೆಯ ಗಾಯಕಿ. ಒಂದು ಕಡೆ ಹಿನ್ನೆಲೆ ಗಾಯನ, ಇನ್ನೊಂದು ಕಡೆ ವಾದ್ಯಗೋಷ್ಠಿಯನ್ನು ಕಟ್ಟಿಕೊಂಡು ನಾಡಿನಾದ್ಯಂತ ಕಾರ್ಯಕ್ರಮಗಳನ್ನು ನೀಡುವುದು ಹೀಗೆ ಸದಾ ಓಡಾಟದಲ್ಲಿಯೇ ಇರುತ್ತಿದ್ದರು. ಸುಮಿತ್ರ ಅವರ ಅತ್ತೆ ಭಾರತಮ್ಮ ಮೊಮ್ಮಕ್ಕಳ ಜವಾಬ್ದಾರಿಯನ್ನು ಹೊತ್ತುಕೊಂಡು ಸಂಗೀತದ ಕಡೆ ಗಮನ ಕೇಂದ್ರೀಕರಿಸಲು ನೆರವಾದರು. ಸೌಮ್ಯ ಹುಟ್ಟಿದ್ದು 1979ರ ಏಪ್ರಿಲ್ 18ರಂದು, ಸುನಿಲ್ ಹುಟ್ಟಿದ್ದು 1980ರ ಸೆಪ್ಟಂಬರ್ ನಾಲ್ಕರಂದು. ಸೌಮ್ಯಅಮ್ಮನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಳು. ಅಮ್ಮನ ಜೊತೆ ಇರಬೇಕು ಎನ್ನುವ ಆಸೆಗೆ ಏಳನೇ ವಯಸ್ಸಿಗೇ ಸಂಗೀತ ಕಲಿಯಲು ಆರಂಭಿಸಿದಳು. ಸುಮಿತ್ರ ತಮ್ಮ ಬಿಡುವಿಲ್ಲದ ಕಾರ್ಯಕ್ರಮದ ನಡುವೆ ಕೂಡ ಮಗಳಿಗೆ ಸಂಗೀತ ಕಲಿಸುತ್ತಿದ್ದರು. ಕ್ರಮೇಣ ಕಾರ್ಯಕ್ರಮಗಳಲ್ಲಿಯೂ ಸೌಮ್ಯಅವರ ಜೊತೆ ಹಾಡಲು ಆರಂಭಿಸಿದಳು. ಮಕ್ಕಳು ಹಾಡಿದ ಹಾಡುಗಳ ಕ್ಯಾಸೆಟ್‌ ಕೂಡ ಬಂದು ಜನಪ್ರಿಯವಾಯಿತು. ಸೌಮ್ಯಾರಿಗಿಂತಲೂ ಅಮ್ಮನ ಜೊತೆ ಇರಬೇಕು ಎಂದು ರಚ್ಚು ಹಿಡಿಯುತ್ತಿದ್ದವನು ಸುನಿಲ್. ಐದನೇ ವರ್ಷಕ್ಕೆ ಬರುವವರೆಗೂ ಕಾರ್ಯಕ್ರಮಗಳಿಗೆ ಅವನನ್ನುಕರೆದುಕೊಂಡೇ ಸುಮಿತ್ರ ಹೋಗುತ್ತಿದ್ದರು.

ಗಾಯಕ ಎಸ್‌ಪಿಬಿ ಜೊತೆ

ಹಂಪಿಯಲ್ಲಿ ರಾಜ್‍ಕುಮಾರ್‍ ಅವರ ಜೊತೆಗಿನ ಕಾರ್ಯಕ್ರಮಕ್ಕೆ ಎರಡು ವರ್ಷದ ಸುನಿಲ್‍ನನ್ನು ಸುಮಿತ್ರ ಕರೆದುಕೊಂಡೇ ಬಂದಿದ್ದರು. ರಾಜ್‍ಕುಮಾರ್‍ ಅವರಿಗೆ ಈ ಮಗುವಿನ ಬಗ್ಗೆ ಬಹಳ ಆಸ್ಥೆ. ಸುಮಿತ್ರ ಆಗ ಬಹಳ ತೆಳ್ಳಗಿದ್ದರು. ಅದಕ್ಕೆ ‘ಪಾರ್ವತಿ ನೀನೇ ಎತ್ತಿಕೊಳ್ಳೆ ಸುಮಿತ್ರ ಎತ್ತಿಕೊಂಡರೆ ಪಾಪ ಆ ಮಗುವಿಗೆ ಮೂಳೆಗಳೇ ಚುಚ್ಚುತ್ತವೆ’ ಎಂದು ತಮಾಷೆ ಮಾಡುತ್ತಿದ್ದರು. ಅಂದಿನಿಂದಲೂ ರಾಜ್‌ ಕುಟುಂಬದ ಜೊತೆ ಸುನಿಲ್‍ಗೆ ವಿಶೇಷ ಅನುಬಂಧ. ಎಷ್ಟೋ ಹಿರಿಯ ಗಾಯಕರ ಜೊತೆ ಕೂಡ ಆತ್ಮೀಯತೆ ಬೆಳೆದಿದ್ದು ಅಮ್ಮನಿಂದ ಎನ್ನುತ್ತಾರೆ ಸುನಿಲ್. ಅಮ್ಮನ ಸೆರಗು ಹಿಡಿದು ಸುತ್ತುತ್ತಿದ್ದ ಈ ಚೂಟಿಯಾದ ಹುಡುಗನಿಗೆ ಚಿತ್ರರಂಗದಲ್ಲಿಯೂ ಅವಕಾಶಗಳು ಸಿಕ್ಕವು. ಕೆಂಡದ ಮಳೆ, ಏಳು ಸುತ್ತಿನಕೋಟೆ, ಸ್ವರ್ಣ ಸಂಸಾರ ಸೇರಿದಂತೆ ಹಲವು ಚಿತ್ರಗಳಲ್ಲಿ ಸುನಿಲ್ ಬಾಲನಟನಾಗಿ ಅಭಿನಯಿಸಿದ. ಆಗೆಲ್ಲಾ ಸುಮಿತ್ರ ಮಗನನ್ನು ಬಿಡದೆ ಜೊತೆಯಲ್ಲಿರುತ್ತಿದ್ದರು. ಮಗನಿಗಾಗಿ ಅವರು ಎಷ್ಟೋ ಕಾರ್ಯಕ್ರಮಗಳನ್ನು ಬಿಟ್ಟಿದ್ದಿದೆ.

ಕಾಲೇಜು ದಿನಗಳಲ್ಲಿ ಗೆಳತಿಯ ಜೊತೆ

ಸುಮಿತ್ರಾ ಅವರು ಚಿತ್ರಗೀತೆಗಳಿಗಿಂತಲೂ ಹೆಚ್ಚು ಜನಪ್ರಿಯರಾಗಿರುವುದು ಭಕ್ತಿಗೀತೆ ಮತ್ತು ಜನಪದ ಗೀತೆಗಳಿಗೆ. ಕಂಗಳ ಮುಂದೆ ಕಂಗೊಳಿಸುತಿದೆ, ವರವಕೊಡೆ ಚಾಮುಂಡಿ, ಇಂದು ಶುಕ್ರವಾರ, ನೋಡು ನೋಡು ಕಣ್ಣಾರೆ ನಿಂತಿಹಳು, ನ್ಯಾಯ ನೀತಿ ಮೂರ್ತಿವೆತ್ತ, ನಂಬಿದೆ ನಿನ್ನ ನಾಗಾಭರಣ, ಉಡುಪಿಯಿದು ಉಡುಪಿಯಿದು ಮೊದಲಾದ ಭಕ್ತಿಗೀತೆಗಳು ಮತ್ತು ನಿಂಬೀಯಾ ಬನಾದ ಮ್ಯಾಗಳ, ಘಲ್ಲುಘಲ್ಲೆನುತ, ಮಾಯದಂಥ ಮಳೆ ಬಂತಮ್ಮ, ನವ್ವಾಲೆ ಬಂತಮ್ಮ ನವ್ವಾಲೆ, ಮುಂಜಾನೆದ್ದು ಕುಂಬಾರಣ್ಣ, ಯಾವ ದೇಶದ ಗಂಡು ಇವನು ಮೊದಲಾದ ಜನಪದ ಗೀತೆಗಳನ್ನು ಕೇಳದವರೇ ಕರ್ನಾಟಕದಲ್ಲಿ ಯಾರೂ ಇಲ್ಲವೆಂದೇ ಹೇಳ ಬೇಕು.

ಪತಿ ಸುಧಾಕರ್‌, ಪುತ್ರಿ ಸೌಮ್ಯ ಅವರೊಂದಿಗೆ

ಬಿ.ಕೆ.ಸುಮಿತ್ರ ಭಾವಗೀತೆಗಳ ಕ್ಷೇತ್ರದಲ್ಲಿ ಕೂಡ ತಮ್ಮ ಹೆಜ್ಜೆಗುರುತನ್ನು ಮೂಡಿಸಿದವರು. ಬೃಂದಾವನಕೆ ಹಾಲನು ಮಾರಲು, ಇನ್ನೂ ಏಕೆ ಬರಲಿಲ್ಲ ಹುಬ್ಬಳ್ಳಿಯಾವ, ಶಕ್ತಿಯ ಕೊಡು ಹೇ ಪ್ರಭು, ಸಾಗು ಜೀವನವೆ ಬಾಗಿ ನಿಲ್ಲದೆ, ಒಡಲೆಂಬ ಗುಡಿಯೊಳಗೆ ಒಡೆಯ ನನ್ನವನಿಹನು, ಮುಗಿಲ ಮುಸುಕಿದ ಮೋಡ ಮೊದಲಾದ ಅವರು ಹಾಡಿದ ಭಾವಗೀತೆಗಳೂ ಕೂಡ ಭಾವತುಂಬಿ ಬಂದಿವೆ. ಚಿತ್ರಗೀತೆ, ಭಕ್ತಿಗೀತೆ, ಭಾವಗೀತೆ, ಜನಪದಗೀತೆ ಹೀಗೆ ನಾಲ್ಕೂ ಕ್ಷೇತ್ರದಲ್ಲಿಯೂ ಸಮಾನ ಜನಪ್ರಿಯತೆ ಪಡೆದ ಅಪರೂಪದ ಹೆಗ್ಗಳಿಕೆ ಸುಮಿತ್ರಾ ಅವರದ್ದು.

ಗಾಯಕಿ ಎಲ್‌.ಅರ್‌.ಈಶ್ವರಿ ಅವರೊಂದಿಗೆ

ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಸಂಚರಿಸಿ ಐದುನೂರಕ್ಕೂ ಹೆಚ್ಚು ಸುಗಮ ಸಂಗೀತ ಶಿಬಿರಗಳನ್ನು ಸಂಘಟಿಸಿ ನಾಡಿನ ಮೂಲೆ ಮೂಲೆಯಲ್ಲಿರುವ ಪ್ರತಿಭೆಗಳನ್ನು ಬೆಳಕಿಗೆ ತಂದ ಹೆಗ್ಗಳಿಕೆ ಸುಮಿತ್ರಾ ಅವರದು. 1992, 1997 ಮತ್ತು 2002ರಲ್ಲಿ ಅಮೆರಿಕಾ ಪ್ರವಾಸ ಮಾಡಿ ಅಲ್ಲಿಯ ಕನ್ನಡ ಕೂಟಗಳ ಅಶ್ರಯದಲ್ಲಿ ಹಲವಾರು ಸುಗಮ ಸಂಗೀತ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿದ್ದಾರೆ. ಜೊತೆಗೆ ತರಬೇತಿ ಶಿಬಿರಗಳನ್ನೂ ನಡೆಸಿ ಕೊಟ್ಟಿದ್ದಾರೆ. 1990ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ,  2003ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, 2008ರಲ್ಲಿ ನಡೆದ ಸುಗಮ ಸಂಗೀತ ಪರಿಷತ್ ಸಮ್ಮೇಳನದ ಅಧ್ಯಕ್ಷತೆ, 2010ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಸಂತ ಶಿಶುನಾಳ ಶರೀಫ ಪ್ರಶಸ್ತಿ, 2011ರಲ್ಲಿ ಕೊಪ್ಪ ತಾಲ್ಲೋಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 2012ರಲ್ಲಿ ಆಳ್ವಾಸ್ ನುಡಿಸಿರಿ ಗೌರವ, 2013ರಲ್ಲಿ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಗೌರವ, ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‍ ಅವರಿಗೆ ಸಿಕ್ಕಿರುವ ಪ್ರಮುಖ ಗೌರವಗಳು. ಎಂಬತ್ತರ ಮಾಗಿದ ವಯಸ್ಸಿನಲ್ಲಿಯೂ ಸಂಗೀತಕ್ಕೆ ಸಂಪೂರ್ಣ ತಮ್ಮನ್ನು ಕೊಟ್ಟುಕೊಂಡಿರುವ ಸುಮಿತ್ರಾ ಅವರು ನೂರನ್ನು ತಲುಪಲಿ. ಆ ಶತಮಾನೋತ್ಸವವನ್ನು ಆಚರಿಸುವ ಸಂಭ್ರಮ ನಮ್ಮದಾಗಲಿ ಎಂದು ಆಶಿಸುತ್ತಾ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ.

ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಕರುಳಿನ ಕರೆ’ (1970) ಚಿತ್ರದ ಹಾಡಿನ ಧ್ವನಿಮುದ್ರಣ ಸಂದರ್ಭ. ಆರ್.ಎನ್.ಜಯಗೋಪಾಲ್ ರಚನೆ, ಎಂ.ರಂಗರಾವ್ ಸಂಗೀತ ಸಂಯೋಜನೆಯ ‘ಅ ಆ ಇ ಈ ಕನ್ನಡದ ಅಕ್ಷರಮಾಲೆ’ ಹಾಡುತ್ತಿರುವ ಗಾಯಕಿಯರಾದ ಎಸ್.ಜಾನಕಿ ಮತ್ತು ಬಿ.ಕೆ.ಸುಮಿತ್ರ. (Photos: B.K.Sumithra facebook page)

ಈ ಬರಹಗಳನ್ನೂ ಓದಿ