ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಆಹಾರವನ್ನು ರೂಪಕವಾಗಿಟ್ಟುಕೊಂಡ ಸಿನಿಮಾ

ಪೋಸ್ಟ್ ಶೇರ್ ಮಾಡಿ
ರೇಣುಕಾ ಚಿತ್ರದುರ್ಗ
ಲೇಖಕಿ

ಫ್ಯಾಸಿಸಂನ ಹೊರಮುಖ ತುಂಬಾ ಸುಂದರವಾಗಿರುತ್ತದೆ. ದ್ವಂದಗಳು ಅದ್ಭುತವಾಗಿ ಮೂಡಿ ಬಂದಿವೆ. – ‘ದಿ ಪ್ಲಾಟ್‌ಫಾರ್ಮ್‌’ (2019) ಸ್ಪಾನಿಷ್‌ ಸಿನಿಮಾ ಕುರಿತ ರೇಣುಕಾ ಚಿತ್ರದುರ್ಗ ಅವರ ವಿಶ್ಲೇಷಣೆ.

ಅದೊಂದು ಜೈಲು, ಜೈಲಿಗೆ ಹೋಗುವವರು ತಮಗೆ ಇಷ್ಟವಾದ ಒಂದು ವಸ್ತುವನ್ನು ಮಾತ್ರ ತೆಗೆದುಕೊಂಡು ಹೋಗಬಹುದು. ಆ ಜೈಲಿನ ಕೊಠಡಿಗಳನ್ನು ಒಂದರ ಕೆಳಗೆ ಒಂದು, ಒಂದರ ಕೆಳಗೆ ಒಂದರಂತೆ ಜೋಡಿಸಿರಲಾಗಿರುತ್ತೆ. ಕೊಠಡಿಗೆ ಬಾಗಿಲುಗಳಿಲ್ಲ. ಮಧ್ಯೆ ತೊಟ್ಟಿ ಮನೆಯ ಮಧ್ಯದಂತ ಸ್ಥಳದಲ್ಲಿ ಉದ್ದನೆಯ ಪ್ರಪಾತ. ಕೆಳಗೆ ಬಗ್ಗಿ ನೋಡಿದರೆ, ತಮಗಿಂತ ಕೆಳಗಿರುವ ಕೊಠಡಿಗಳೆಲ್ಲ ಕಾಣುತ್ತವೆ. ಪ್ರತಿ ದಿನ ಒಂದು ದೊಡ್ಡ ಡೈನಿಂಗ್ ಟೇಬಲ್ ಮೇಲೆ ಅತಿ ಉತ್ಕೃಷ್ಟ ಆಹಾರಗಳು ಒಂದು ಕೊಠಡಿಯ ನಂತರ ಮತ್ತೊಂದು ಕೊಠಡಿ ಈ ತರ ಇಳಿಯುತ್ತ ಹೋಗುತ್ತದೆ. ಪ್ರತಿ ರೂಮಿನ ಬಳಿ ಕೇವಲ ಎರಡು ನಿಮಿಷ ಮಾತ್ರ ಆ ಟೇಬಲ್ ನಿಲ್ಲುತ್ತೆ. ಅಷ್ಟರಲ್ಲಿ ಆ ರೂಮಲ್ಲಿ ಇರುವ ಇಬ್ಬರು ಖೈದಿಗಳು ಊಟ ಮಾಡಿ ಮುಗಿಸಬೇಕು. ಏನನ್ನೂ ತೆಗೆದಿಟ್ಟುಕೊಳ್ಳುವಂತಿಲ್ಲ.

ಕಥಾನಾಯಕ ಕಣ್ಣು ಬಿಟ್ಟಾಗ 48ನೇ ನಂಬರಿನ ರೂಮಲ್ಲಿರುತ್ತಾನೆ. ತನ್ನ ಜೊತೆಯಲ್ಲಿರುವ ಅಜ್ಜ ಚೂಪಾದ ಸಾಮುರಾಯ್ ಕತ್ತಿ ತೆಗೆದುಕೊಂಡು ಬಂದಿದ್ದರೆ ಇವನು ಓದಲು ಪುಸ್ತಕ ತಂದಿರುತ್ತಾನೆ. ಪುಸ್ತಕ ನೋಡಿ ಅಜ್ಜ ನಗುತ್ತಾನೆ. ಡೈನಿಂಗ್ ಟೇಬಲ್ ಬರುತ್ತೆ. ಒಂದರಿಂದ ನಲವತ್ತೇಳು ಟೇಬಲ್ ಹಾಯ್ದು ಬಂದ ಆ ಊಟದ ತಟ್ಟೆ ಗಬ್ಬೆದ್ದು ಹೋಗಿರುತ್ತೆ. ಎಲ್ಲವನ್ನು ಕೆಟ್ಟದಾಗಿ ಎಂಜಲು ಮಾಡಿರುತ್ತಾರೆ. ಅಲ್ಲಲ್ಲೇ ಉಗಿದಿರುತ್ತಾರೆ, ವಾಂತಿ ಮಾಡಿರುತ್ತಾರೆ. ತುಳಿದಿರುತ್ತಾರೆ. ಆ ತಟ್ಟೆ ನೋಡಿದರೆ ವಾಂತಿ ಬರೋತರ ಇರುತ್ತೆ. ಆದರೆ ಈಗಾಗಲೇ ಮೂರು ತಿಂಗಳು ಅಲ್ಲಿ ವಾಸವಿದ್ದು ಅನುಭವವಿರುವ ಅಜ್ಜ ಆ ಎಂಜಲನ್ನೇ ಗಬಗಬ ತಿನ್ನಲು ಶುರು ಮಾಡುತ್ತಾನೆ. ತಡ ಮಾಡಿದರೆ ತಟ್ಟೆ ಕೆಳಗೋಗುತ್ತೆ. ನಾಯಕ ತಿನ್ನಲ್ಲ. ಇಲ್ಲಿ ಇಂತಹ ಎಷ್ಟು ರೂಮ್ ಇವೆ ಎಂದಾಗ ಅಜ್ಜ ಗೊತ್ತಿಲ್ಲ, ನಾನು 132ನೇ ರೂಮ್ ವರೆಗೆ ಹೋಗಿ ಬಂದಿದ್ದೇನೆ ಅಂತಾನೆ. ಅಲ್ಲಿವರೆಗೂ ಈ ಊಟ ತಲುಪುತ್ತ!! ಅಂತ ಆಶ್ಚರ್ಯದಿಂದ ಕೇಳಿದಾಗ ಖಂಡಿತಾ ಇಲ್ಲ ಅಂತಾನೆ ಹಾಗಾದ್ರೆ ಅಲ್ಲಿ ಇರುವವರು ಹೊಟ್ಟೆಗೆ ಏನು ತಿಂತಾರೆ!!

ಎರಡನೆ ದಿನ ಉಪವಾಸ ಇರ್ತಾನೆ, ಮೂರನೇ ದಿನ ಹೊಟ್ಟೆ ಕೇಳಬೇಕಲ್ಲ, ಅನಿವಾರ್ಯವಾಗಿ ತಿನ್ನಲು ಶುರು. ಒಮ್ಮೆ ತಟ್ಟೆ ಕೆಳಗಿಳಿದಾಗ ಅದರಲ್ಲಿ ಒಬ್ಬ ಹೆಂಗಸು ಕೂತಿರೋದು ನೋಡಿ ಇವ ಗಾಬರಿ ಆಗ್ತಾನೆ. ಆದರೆ ಅಜ್ಜ ಹೆದರಬೇಡ ಅವಳ ಮಗು ಈ ಜೈಲಲ್ಲಿ ಕಳೆದುಹೋಗಿದೆ ಅದನ್ನು ಹುಡುಕುತ್ತ ಪ್ರತಿ ತಿಂಗಳಿಗೊಮ್ಮೆ ಬರ್ತಾಳೆ. ಆದರೆ ಅವಳಿಗೆ ಜನ ಪೂರ ಕೆಳಗೆ ಹೋಗಲು ಬಿಡೋದೆ ಇಲ್ಲ, ಪ್ರತಿ ಒಬ್ಬರು ಅವಳನ್ನು ಒಂದು ದಿನ, ಎರಡು ದಿನ ಇಟ್ಕೊಳ್ತಾರೆ, ನಿಂಗೂ ಬೇಕಾದ್ರೆ ಇಟ್ಕೋ ಅಂತಾನೆ. ಆಗ ನಾಯಕ, ಛೇ ನಾ ಅವಳಿಗೆ ಸಹಾಯ ಮಾಡಲು ಬಯಸ್ತೀನಿ ಅಂದಾಗ, ಆಕೆ ಅವನನನ್ನೇ ನೋಡ್ತ ಕೆಳಗೆ ಹೋಗ್ತಾಳೆ. ಅಲ್ಲಿ ಜನ ಅವಳನ್ನು ಕೆಳಗೆ ಎಳ್ಕೋತಾರೆ.

ಅಲ್ಲಿನ ನಿಯಮದ ಪ್ರಕಾರ ಒಂದು ತಿಂಗಳ ನಂತರ ಇವರಿಗೆ ಮತ್ತು ಬರಿಸುವ ಗಾಳಿ ಹಾಕಿ ಜ್ಞಾನ ತಪ್ಪಿಸಿ ರೂಮ್ ಬದಲಾಯಿಸಲಾಗುತ್ತದೆ. ತಿಂಗಳ ನಂತರ ಇವರಿಬ್ಬರೂ 155ನೇ ರೂಮಲ್ಲಿರುತ್ತಾರೆ. ನಾಯಕನ ಕೈಕಾಲು ಕಟ್ಟಿ ಹಾಕಲಾಗಿರುತ್ತೆ. ಅಜ್ಜ ಕತ್ತಿ ಹಿಡಿದು ನಿಂತಿರುತ್ತಾನೆ. ಯೋಚನೆ ಮಾಡಬೇಡ ಗೆಳೆಯಾ ಇಲ್ಲಿಗೆ ತಟ್ಟೆ ಬರೋಷ್ಟರಲ್ಲಿ ಒಂದು ಅಗುಳು ಅನ್ನ ಕೂಡ ಉಳಿದಿರಲ್ಲ. ಆದ್ದರಿಂದ ನಾನು ಎಂಟು ದಿನಕ್ಕೊಮ್ಮೆ ನಿನ್ನ ತೊಡೆಯ ಮಾಂಸ ಕಟ್ ಮಾಡ್ತೇನೆ, ಇಬ್ಬರೂ ಹಂಚಿಕೊಂಡು ತಿನ್ನೋಣ. ಮತ್ತೆ ಎಂಟು ದಿನ ಆಗುವವರೆಗೆ ನಿನ್ನ ಗಾಯ ವಾಸಿ ಆಗತ್ತೆ ಮತ್ತೆ ಒಂಭತ್ತನೆಯ ದಿನ ನಿನ್ನ ಮಾಂಸ ಕಟ್ ಮಾಡಿ ತಿನ್ನಣ ಅಂದಾಗ ನಾಯಕ ಬೇಡ ಬೇಡ ಎಂದು ಬೇಡ್ತಾನೆ. ಆದರೆ ಅಜ್ಜ ಬಿಡಬೇಕಲ. ಎಂಟನೇ ದಿನ ಅಜ್ಜ ತೊಡೆಯ ಮಾಂಸ ಕಟ್ ಮಾಡಿಯೇ ಬಿಡ್ತಾನೆ ಅಷ್ಟರಲ್ಲಿ ಆ ಮಗುವನ್ನು ಹುಡುಕಿ ಹೊರಟ ಹೆಂಗಸು ಬಂದು ಆ ಅಜ್ಜನಿಗೆ ಹೊಡೆದು ಇವನ ಕಟ್ಟು ಬಿಚ್ಚುತ್ತಾಳೆ. ಆಗ ಸಿಟ್ಟಿಗೆದ್ದ ಇವನು ಅಜ್ಜನನ್ನು ಸಾಯಿಸಿ ಇಬ್ಬರು ಅಜ್ಜನ ಮಾಂಸ ತಿಂತಾರೆ. ಅವಳು ಮಗುವನ್ನು ಹುಡುಕಿ ಕೆಳಗೆ ಹೊರಡ್ತಾಳೆ.

ಇಲ್ಲಿ ಅಜ್ಜನ ಆತ್ಮ ಮಾತಾಡಲು ಶುರು ಮಾಡತ್ತೆ. ನಾನು ಬರೀ ಎಂಟು ದಿನಕ್ಕೊಮ್ಮೆ ನಿನ್ನ ತೊಡೆಯ ಮಾಂಸ ತಿನ್ನುವ ಪ್ಲಾನ್ ಮಾಡಿದೆ ಆದರೆ ನೀನು ಒಂದೇ ಏಟಿಗೆ ನನ್ನ ಸಾಯಿಸಿ ನನ್ನ ತಿಂತಾ ಇದಿಯಾ. ಈಗ ಹೇಳು ಕ್ರೂರಿ ಯಾರೆಂದು!! ಆ ಒಂದು ತಿಂಗಳು ಅಜ್ಜನ ಕೊಳೆತ ಮಾಂಸ, ದೇಹದಲ್ಲಿ ಉದ್ಭವವಾದ ಹುಳುಗಳನ್ನು ತಿಂದು ಬದುಕ್ತಾನೆ. ನಂತರ 55ನೇ ರೂಮ್ ಅಲ್ಲಿನ ಕತೆ. ನಂತರ 202ನೇ ರೂಮ್….

ನಂತರ 6ನೇ ರೂಮ್ ಸಿಗತ್ತೆ. ಆರನೇ ರೂಮಲ್ಲಿ ಇನ್ನೂ ಯಥೇಚ್ಚ ಆಹಾರ ಇರುತ್ತೆ, ಏಳನೇ ರೂಮಿನ ಜನ ಆಹಾರ ತುಳಿಯೋದು ವೇಷ್ಟ್ ಮಾಡೋದು ಗಮನಿಸ್ತಾನೆ. ಆಗ ತನ್ನ ರೂಮ್’ಮೇಟಿಗೆ ಹೇಳ್ತಾನೆ. ನಾವ್ಯಾಕೆ ಪ್ರತಿ ರೂಮಿಗೂ ಈ ಊಟದ ಟೇಬಲ್ ಮೇಲೆ ಕುಳಿತು ಹೋಗಿ ಎಲ್ಲ ಜನಗಳಿಗೂ ಅವರು ಉಳಿಯಲು ಬೇಕಾದಷ್ಟು ಮಾತ್ರ ರೇಷನ್ ಹಂಚಬಾರದು? ಆಗ ಕೆಳಗಿನ ಕೊನೇ ರೂಮಿನವರಿಗೂ ಆಹಾರ ಸಿಗತ್ತೆ. ಈ ಐಡಿಯಾ ಬಂದಿದ್ದೇ ತಡ ಮಂಚವನ್ನು ಮುರಿದು ಆಯುಧವನ್ನಾಗಿ ಮಾಡಿಕೊಂಡು ವಿರೋಧಿಸಿದವರಿಗೆ ಹೊಡೀತ ರೇಷನ್ ಹಂಚುತಾ ಹೋಗ್ತಾರೆ. ಅವರು ಕೊನೆಯ ರೂಮಿನ ಜನರವರೆಗೂ ರೇಷನ್ ಹಂಚಿದರೆ! ಕೊನೆಯವರೆಗೂ ಊಟ ಸಾಲುತ್ತ!! ಮಧ್ಯದಲ್ಲಿ ಜನ ಇವರನ್ನು ಹೇಗೆ ವಿರೋಧಿಸಿದರು. ಕೆಳಗೆ ಹೋಗ್ತ ಹೋಗ್ತ ಅಲ್ಲಿನ ಜನರ ಪರಿಸ್ಥಿತಿ ಹೇಗಿತ್ತು! ತನ್ನ ಮಗುವನ್ನು ಹುಡುಕುತ್ತ ಅಲೆದ ಅಮ್ಮನಿಗೆ ಅವಳ ಮಗು ಸಿಗ್ತ!! ಇವೆಲ್ಲ ಪ್ರಶ್ನೆಗಳಿಗೆ ನೀವು ಸಿನಿಮಾ ನೋಡಬೇಕು.

ಫ್ಯಾಸಿಸಂನ ಹೊರಮುಖ ತುಂಬಾ ಸುಂದರವಾಗಿರುತ್ತದೆ. ದ್ವಂದಗಳು ಅದ್ಭುತವಾಗಿ ಮೂಡಿ ಬಂದಿವೆ. ಮೊದಲ ಮಹಡಿಯಲ್ಲಿ ಈ ಜೈಲಿಗಾಗಿ ಆಹಾರ ತಯಾರಿಸುತ್ತ ಇರುತ್ತಾರೆ. ಅಲ್ಲಿ ಫೈವ್ ಸ್ಟಾರ್ ಹೋಟೆಲ್ ಲೆವಲ್ಲಲ್ಲಿ ಆಹಾರ ತಯಾರಾಗುತ್ತೆ. ಒಂದು ಕೂದಲು ಸಿಕ್ಕಿದರೂ ಲೀಡರ್ ಕೆಂಡಮಂಡಲವಾಗಿ ಅಡುಗೆಯವರನ್ನು ಬೈತಾನೆ. ಆದರೆ ಕೆಳಗಿನ ಮನೆಯಲ್ಲಿ ಊಟವಿಲ್ಲದೆ ಮನುಷ್ಯ ಮನುಷ್ಯನನ್ನೇ ತಿನ್ನುತ್ತ ಇರುತ್ತಾನೆ. ಖೈದಿಗಳಿಗೆ ಅತ್ಕ್ರೃಷ್ಟ ಊಟ ನೀಡ್ತೀವೆಂದು ಹೊರಜಗತ್ತಿಗೆ ತೋರಿಸಿಕೊಳ್ಳುವ ಇವರು ಕೆಳಸ್ತರದ ಜನಗಳು ನರಮಾಂಸ ಭಕ್ಷಕರಾಗಲು ಕಾರಣವಾಗಿರೋದು ಕಳವಳ ಮೂಡಿಸುತ್ತೆ. ಇಂತಾ ಭಯಂಕರ ಪ್ರತಿಮೆಗಳನ್ನು ಸಿನಿಮಾ ತುಂಬೆಲ್ಲ ಕಾಣಬಹುದು. ಪ್ರತಿ ತಿಂಗಳಿಗೊಮ್ಮೆ ಕೊಠಡಿ ಬದಲಾದಾಗ ಅತ್ಯಂತ ಕೆಳ ಸ್ತರದವರು ಮೇಲಿನ ಸ್ತರಕ್ಕೆ ಬಂದಾಗ ಕೆಳಗಿನವರು ಊಟವಿಲ್ಲದೆ ನರಳುತ್ತಿದ್ದಾರೆ ಎಂದು ಗೊತ್ತಿದ್ದರೂ ಊಟ ಹಾಳು ಮಾಡುವುದನ್ನು ಬಿಡುವುದಿಲ್ಲ. ಊಟ ತುಳಿದು, ಉಗಿದು ಹಾಳು ಮಾಡುತ್ತಾರೆ.

ಅಲ್ಲಿರುವ ಹಿಂಸಾತ್ಮಕ ದೃಶ್ಯಗಳು ಮನಕ್ಕೆ ಕಿರಿಕಿರಿ ನೀಡಿದೆ ಬೇಸರ ಮೂಡಿಸುತ್ತವೆ, ದುಃಖ ತರಿಸುತ್ತವೆ. ಇದಕ್ಕೆಲ್ಲ ಕಾರಣ ಯಾರು?? ಮೇಲೆ ಅತಿ ಕಾಳಜಿಯಿಂದ ಆಹಾರ ತಯಾರಿಸುತ್ತಿರುವ ಆಡಳಿತಗಾರನೇ? ಅವನು ಒಮ್ಮೆಯೂ ಈ ಆಹಾರ ಎಲ್ಲರಿಗೂ ಸಾಲುತ್ತ? ಎಲ್ಲರಿಗೂ ತಲುಪುತ್ತ? ಎಂದು ಯೋಚನೆ ಮಾಡಲಿಲ್ಲವೆ? ಎಂಬ ಪ್ರಶ್ನೆ ಮೂಡುತ್ತದೆ. ಇನ್ನೂರು ಜನಕ್ಕೆ ಊಟ ತಯಾರಿಸಿ ಆರು ನೂರು ಜನರನ್ನು ಒಳಗೆ ಕೂಡಿ ಹಾಕಿದ ವ್ಯವಸ್ಥೆಯ ಬಗೆಗೆ ಖೇದ ಮೂಡುತ್ತದೆ. ಇವರನ್ನೆಲ್ಲ ನೋಡಿದಾಗ ವಾರಕ್ಕೊಮ್ಮೆ ತೊಡೆ ಮಾಂಸ ಕಟ್ ಮಾಡಿ ಇಬ್ಬರೂ ತಿಂದು ಒಂದು ತಿಂಗಳು ಬದುಕೋಣ ಎಂದು ಸಮುರಾಯ್ ಅಜ್ಜನೇ ಅತ್ಯಂತ ಕರುಣಾಮೂರ್ತಿ ಎಂದು ಅನಿಸಿದೆ ಇರಲಾರದು. ಅವಶ್ಯವಾಗಿ ನೋಡಬೇಕಾದ ಸಿನಿಮಾ.

ಈ ಬರಹಗಳನ್ನೂ ಓದಿ