‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯಲ್ಲಿ ನಟ ರಜನೀಕಾಂತ್ ಕುರಿತು ಲೇಖಕಿ ಸಂಧ್ಯಾರಾಣಿ ಅವರ ಬರಹ.

ಲೇಖಕಿ
ರಜನಿಯ ಮಾಂತ್ರಿಕತೆ ಅರಿವಾಗಬೇಕಾದರೆ ಏಕಪರದೆಯ ಚಿತ್ರಮಂದಿರಗಳಲ್ಲಿ ತಮಿಳರ ನಡುವೆ ಕುಳಿತು ಚಿತ್ರ ನೋಡಬೇಕು! ಅಪಾರ ಬಿಸಿಲು, ಬಡತನ ಅನುಭವಿಸುವ ತಮಿಳುನಾಡಿನಲ್ಲಿ ತಮ್ಮಂತೆಯೇ ಬಡತನದಿಂದಲೇ ಬಂದು, ತಮ್ಮನ್ನು ಹಿಂಸಿಸುವ ಶಕ್ತಿಗಳೊಡನೆ ಹೋರಾಡಿ, ಗೆಲ್ಲುವ ನಾಯಕ ಜೀವಧಾರೆಯಂತೆ. ಅವನ ಗೆಲುವಲ್ಲಿ ಪ್ರೇಕ್ಷಕರು ತಮ್ಮ ಸೋಲುಗಳನ್ನು ಮರೆತು ನಾಳೆಗಳ ಬಗ್ಗೆ ವಿಶ್ವಾಸ ಬೆಳೆಸಿಕೊಳ್ಳುತ್ತಾರೆ.
1975ರ ಸುಮಾರು. ‘ಗಿರಿಕನ್ಯೆ’ ಚಿತ್ರದ ಶೂಟಿಂಗ್. ಮದ್ರಾಸಿನ ಫಿಲಂ ಇನ್‌ಸ್ಟಿಟ್ಯೂಟ್‌ನ ಹುಡುಗನೊಬ್ಬ ತನ್ನ ಆರಾಧ್ಯದೈವ ರಾಜಕುಮಾರ್ ಅವರೊಟ್ಟಿಗೆ ನಟಿಸುವ ಅವಕಾಶ ಸಿಕ್ಕಿದ್ದಕ್ಕಾಗಿ ಖುಷಿಯಿಂದ ಮೇಕಪ್ ಮಾಡಿಸಿಕೊಂಡು, ತನ್ನ ಬದುಕಿನ ಕನಸು ನನಸಾಗಲು ಕಾಯುತ್ತಿದ್ದ. ಅಷ್ಟರಲ್ಲೆ ಯೂನಿಟ್‌ನವರೊಬ್ಬರು ಬಂದು ಆತ ಅಭಿನಯಿಸಬೇಕಾಗಿದ್ದ ಪಾತ್ರವನ್ನು ಮತ್ಯಾರೋ ಅಭಿನಯಿಸುತ್ತಿದ್ದಾರೆ, ಆತ ಹೋಗಬಹುದು ಎಂದು ಹೇಳುತ್ತಾರೆ. ಆ ಹುಡುಗ ಅವಮಾನ, ನೋವು, ದುಃಖವನ್ನು ನುಂಗಿಕೊಳ್ಳುತ್ತಾ ಎದ್ದು ನಿಲ್ಲುತ್ತಾನೆ. ನಿರಾಸೆಯಿಂದ ಮುಖ ಕಪ್ಪುಗಟ್ಟಿರುತ್ತದೆ.

ಅಷ್ಟರಲ್ಲಿ ರಾಜಕುಮಾರ್ ಅದನ್ನು ಗಮನಿಸಿ ಆತನನ್ನು ಹತ್ತಿರ ಕರೆದು ಸಮಾಧಾನ ಮಾಡುತ್ತಾರೆ. ವಾಪಸ್ ಬಂದ ಆ ಹುಡುಗ ತನ್ನ ಬದುಕಿನ ಅನೇಕ ಅವಮಾನಗಳ ಹಾಗೆ, ಆ ನಿರಾಸೆಯನ್ನೂ ನುಂಗಿಕೊಳ್ಳುತ್ತಾನೆ. 1975ರಲ್ಲಿ ಕೆ.ಬಾಲಚಂದರ್‌ರ ‘ಅಪೂರ್ವ ರಾಗಂಗಳ್’ ಚಿತ್ರದ ಮೂಲಕ ಆ ಹುಡುಗ ತೆರೆಗೆ ಬರುತ್ತಾನೆ. ಅದರಲ್ಲಿದ್ದ ಸೌಂದರ ರಾಜನ್, ಶ್ರೀವಿದ್ಯಾ, ಕಮಲಹಾಸನ್, ಜಯಸುಧಾ ಮುಂತಾದ ದಿಗ್ಗಜರ ನಡುವೆ ಕಪ್ಪುಬಣ್ಣದ, ವಿಭಿನ್ನ ಅಭಿನಯ ಶೈಲಿಯ, ಚೂರಿಕಣ್ಣುಗಳ ಈ ಒರಟು ಹುಡುಗ ಎಲ್ಲರ ಗಮನ ಸೆಳೆಯುತ್ತಾನೆ. ಆತನೇ ಶಿವಾಜಿರಾವ್ ಗಾಯಕ್ವಾಡ್ ಉರುಫ್ ರಜನೀಕಾಂತ್, ಎಂ.ಜಿ.ರಾಮಚಂದ್ರನ್ ನಂತರ ತಮಿಳುಚಿತ್ರರಂಗ ಕಂಡ ಏಕೈಕ ಸೂಪರ್‌ಸ್ಟಾರ್.

ಮೊದಲ ಚಿತ್ರ ಬಾಲಚಂದರ್ ಅವರೊಂದಿಗಾದರೆ, ಎರಡನೆಯದು ಪುಟ್ಟಣ್ಣನವರ ‘ಕಥಾಸಂಗಮ’, ಮೂರು ಸಣ್ಣ ಕಥೆಗಳನ್ನು ಹೆಣೆದು ಚಿತ್ರವಾಗಿಸಿದ್ದ ಈ ಪ್ರಯೋಗದಲ್ಲಿ ಕಡೆಯ ಭಾಗದ ‘ಮುನಿತಾಯಿ’ಯಲ್ಲಿ ಯಾವುದೇ ಪಾಲೀಶಿಂಗ್ ಇಲ್ಲದೆ, ಹಳ್ಳಿಯ ಒಬ್ಬ ಕುಡುಕ, ಕಾಮುಕನ ಪಾತ್ರದಲ್ಲಿ ರಜನಿಯ ಅಭಿನಯ ಇಂದಿಗೂ ಒಂದು ಮೈಲಿಗಲ್ಲಾಗಿ ನಿಲ್ಲುತ್ತದೆ. 1977ರ ಸುಮಾರಿಗೆ ಬಂದ ‘ಅವರ್ಗಳ್’ ಸಹ ಬಾಲಚಂದರ್ ನಿರ್ದೇಶನದ ಚಿತ್ರವೇ. ಸ್ಯಾಡಿಸ್ಟ್ ಗಂಡನಾಗಿ ರಜನಿ ಅದರಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಅವರು ಸಿಗರೇಟು ಮೇಲೆಸೆದು ಬಾಯಿಂದ ಹಿಡಿವ ರೀತಿ ಅವರಿಗೊಂದು ವಿಶಿಷ್ಟ ಮ್ಯಾನರಿಸಂ ತಂದುಕೊಟ್ಟಿತು. ಆ ಸಿಗರೇಟು ಇಂದಿಗೂ ಹೊಗೆಯಾಡುತ್ತಲೇ ಇದೆ. ಅದರ ಬಿಸುಪು, ಬೆಳಕು ಎರಡೂ ಉರಿಯುತ್ತಲೇ ಇದೆ, ಥೇಟ್ ರಜನಿಯಂತೆಯೇ!

ನಾಲ್ಕು ವರ್ಷಗಳಲ್ಲಿ, ನಾಲ್ಕು ಭಾಷೆಗಳಲ್ಲಿ 50 ಚಿತ್ರಗಳಲ್ಲಿ ನಟನೆ ಈ ಪಯಣದ ಆರಂಭ ಮಾತ್ರ. ಈಗ ಭಾರತದ ಸಿನಿಮಾರಂಗದ ಅತ್ಯುನ್ನತ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಘೋಷಣೆಯಾಗಿದೆ. 2019ರ ಸಾಲಿನ ಪ್ರಶಸ್ತಿಗೆ ರಜನೀಕಾಂತ್ ಭಾಜನರಾಗಿದ್ದಾರೆ. ಕಲಾವಿದ ಮತ್ತು ಸೂಪರ್ ಸ್ಟಾರ್ ಎರಡೂ ಆಗಿರುವ ಈ ನಟ ಕ್ಲಾಸ್, ಮಾಸ್ ಎನ್ನುವ ಹಣೆಪಟ್ಟಿಯೇ ಇಲ್ಲದೆ ಪ್ರೇಕ್ಷಕರನ್ನು ತನ್ನ ಕಡೆಗೆ ಸೆಳೆದುಕೊಳ್ಳುತ್ತಾನೆ. ರಜನಿಯ ಮಾಂತ್ರಿಕತೆ ಅರಿವಾಗಬೇಕಾದರೆ ಏಕಪರದೆಯ ಚಿತ್ರಮಂದಿರಗಳಲ್ಲಿ ತಮಿಳರ ನಡುವೆ ಕುಳಿತು ಚಿತ್ರ ನೋಡಬೇಕು! ಅಪಾರ ಬಿಸಿಲು, ಬಡತನ ಅನುಭವಿಸುವ ತಮಿಳುನಾಡಿನಲ್ಲಿ ತಮ್ಮಂತೆಯೇ ಬಡತನದಿಂದಲೇ ಬಂದು, ತಮ್ಮನ್ನು ಹಿಂಸಿಸುವ ಶಕ್ತಿಗಳೊಡನೆ ಹೋರಾಡಿ, ಗೆಲ್ಲುವ ನಾಯಕ ಜೀವಧಾರೆಯಂತೆ. ಅವನ ಗೆಲುವಲ್ಲಿ ಪ್ರೇಕ್ಷಕರು ತಮ್ಮ ಸೋಲುಗಳನ್ನು ಮರೆತು ನಾಳೆಗಳ ಬಗ್ಗೆ ವಿಶ್ವಾಸ ಬೆಳೆಸಿಕೊಳ್ಳುತ್ತಾರೆ.

ಎಂಜಿಆರ್ ಮುಖ್ಯಮಂತ್ರಿಯಾಗಿದ್ದು, ಕರುಣಾನಿಧಿಯವರ ಸಂಭಾಷಣೆಗಳು ಗೆದ್ದದ್ದು ಹಾಗೆ. ದೇಶ ಬಿಟ್ಟುಹೋಗಿ ಇನ್ಯಾವುದೋ ದೇಶದಲ್ಲಿ ಬೆವರು, ರಕ್ತ ಬಸಿಯುವ ತಮಿಳರಿಗೆ ರಜನಿ ‘ಕಬಾಲಿ ಡಾ!’. ಯಾವುದೇ ಜಾಹಿರಾತಿಗೆ ಒಪ್ಪಿಕೊಳ್ಳದ, ಟೀವಿ ಶೋಗಳಲ್ಲಿ ಕಾಣಿಸಿಕೊಳ್ಳದ, ತಲೈವಾ ರೂಪದಲ್ಲಿ ಜನರ ಮುಂದೆ ಬರದ ಈ ಮಾಯಗಾರನನ್ನು ಜನ ಆತನ ಚಿತ್ರಗಳಲ್ಲಿಯೇ ನೋಡಬೇಕು ಎನ್ನುವ ಅನನ್ಯತೆಯೇ ರಜನಿ ಮಾಯೆಯನ್ನು ಜೀವಂತವಾಗಿಟ್ಟಿದೆ.

ಬೆಂಗಳೂರಿನಲ್ಲಿ ಕೂಲಿಯಾಗಿ ಕೆಲಸ ಮಾಡಿದ್ದ, ಆಚಾರ್ಯ ಪಾಠಶಾಲೆಯಲ್ಲಿ ಓದಿದ್ದ, ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದ, ಬಿಟಿಎಸ್ ಬಸ್‌ನಲ್ಲಿ ಕಂಡಕ್ಟರ್ ಕೆಲಸ ಸಿಕ್ಕಾಗ ಜೀವನಕ್ಕೆ ನೆಲೆ ಸಿಕ್ಕಿತು ಎಂದು ನಿಟ್ಟುಸಿರಿಟ್ಟಿದ್ದ ಶಿವಾಜಿ ರಾವ್ ಎಲ್ಲಿಯೂ ನಿಲ್ಲಲಿಲ್ಲ, ಮುಂದೆ ಹೆಜ್ಜೆ ಇಡುತ್ತಲೇ ನಡೆದರು. ಆದರೆ ಹಾಗೆ ನಡೆಯುವಾಗ ಬೇರಿನೆಡೆಗಿನ ತಮ್ಮ ಸಂಬಂಧವನ್ನು ಕಡಿದುಕೊಳ್ಳಲಿಲ್ಲ. ಹಿಮಾಲಯಕ್ಕೆ ಹೋಗುವಷ್ಟೇ ಶೃದ್ಧೆಯಿಂದ ಅವರು ಆಗಾಗ್ಗೆ ಕರ್ನಾಟಕಕ್ಕೂ ಬರುತ್ತಾರೆ. ಕನ್ನಡ ಚಿತ್ರರಂಗದ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದಾರೆ.

‘ಒಂದು ಊರಿನ ಕಥೆ’, ‘ಘರ್ಜನೆ’, ‘ಸಹೋದರರ ಸವಾಲ್’, ‘ಗಲಾಟೆ ಸಂಸಾರ’ ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ, ವೀರಪ್ಪನ್ ವರನಟ ರಾಜಕುಮಾರ್ ಅವರನ್ನು ಅಪಹರಿಸಿದ್ದಾಗ ಕನ್ನಡಿಗರೊಂದಿಗೆ ಗಟ್ಟಿಯಾಗಿ ನಿಂತು ಕನ್ನಡಿಗರು ಮತ್ತು ತಮಿಳರ ನಡುವಿನ ಸೇತುವೆ ತುಂಡಾಗದಂತೆ ನೋಡಿಕೊಂಡಿದ್ದಾರೆ. ತಮಿಳುನಾಡು ಅವರ ಕರ್ಮಭೂಮಿ ಆದರೆ ಕರ್ನಾಟಕ ಅವರ ಮಟ್ಟಿಗೆ ಜನ್ಮಭೂಮಿ, ಆದ್ದರಿಂದಲೇ ಈ ಪ್ರಶಸ್ತಿ ಕನ್ನಡಿಗರಿಗೂ ಹೆಮ್ಮೆಯೇ.

ರಜನಿಯ ಗೆಲುವನ್ನು ವಿಧಿಯೆದುರಲ್ಲಿ ಪ್ರತಿಭೆ ಮತ್ತು ಪರಿಶ್ರಮಕ್ಕೆ ಸಂದ ಜಯ ಇದು ಎಂದು ಚಪ್ಪಾಳೆ ಹೊಡೆಯುವ ಕ್ಷಣದಲ್ಲಿಯೇ ನಾವು ಗಮನಿಸಬೇಕಾದ ಇನ್ನೊಂದು ಅಂಶ ಈ ಮಟ್ಟದ ಯಶಸ್ಸನ್ನು ಸಂಭಾಳಿಸುವುದು ಆ ಮನುಷ್ಯನಿಗೆ ಎಷ್ಟು ಕಷ್ಟವಾಗಿರಬೇಕು ಎನ್ನುವುದು. ಬಡತನ, ಹಸಿವು, ಆ ಕಾರಣಕ್ಕೇ ಹುಡುಕಿ ಬರುವ ಅವಮಾನ, ಕೀಳರಿಮೆ, ಕಳೆದುಕೊಂಡ ಪ್ರೇಮ ಎಲ್ಲವೂ ಕೊರೆದ ಒಳಗನ್ನು ಹೊತ್ತುಕೊಂಡು ಯಶಸ್ಸಿನ ಸಮುದ್ರವನ್ನು ಈಜಿ ದಾಟುವುದು ಸಲೀಸಲ್ಲ. ಸಮಾನಾಂತರದಲ್ಲೇ ಸಾಗಿದ ಕಮಲಹಾಸನ್ ಮತ್ತು ರಜನಿ ಚಿತ್ರಗಳ ಗ್ರಾಫ್ ಅನ್ನು ಸಮಾನ ನೆಲೆಗಳಲ್ಲಿ ಅರ್ಥೈಸಿಕೊಳ್ಳುವುದು ಸಾಧ್ಯವಿಲ್ಲ. ಕಮಲಹಾಸನ್‌ಗೆ ಚಿತ್ರಗಳು ಹೊಸತಲ್ಲ. ಜಾತಿಯ ಬಲ, ಬಣ್ಣ, ಸೌಂದರ್ಯದ ಬಲ, ಇಲೈಟ್ ಬುದ್ದಿಮತ್ತೆ ಕಮಲ್‌ಗೆ ಆತ್ಮವಿಶ್ವಾಸ ತಂದುಕೊಟ್ಟರೆ, ಅವುಗಳ ಇಲ್ಲದಿರುವಿಕೆ ರಜನಿಯಲ್ಲಿನ ಹಸಿವನ್ನು ಜೀವಂತವಾಗಿಟ್ಟವು.

ಅತಂತ್ರತೆಯನ್ನು ಮರೆಯಲಾರದ ಈ ನಟನಿಗೆ ಚಿತ್ರಗಳನ್ನು ನಿರಾಕರಿಸುವ ಧೈರ್ಯವೇ ಆಗುತ್ತಿರಲಿಲ್ಲ. ಅನೇಕ ಶಿಫ್ಟ್‌ಗಳು, ಬಿಡುವಿಲ್ಲದ ದುಡಿಮೆ, ಸಂಬಂಧಗಳು, ಹಣ, ಖ್ಯಾತಿ, ಬೇಕು ಎಂದಿದ್ದನ್ನು ಗುಣಿಸಿ ತಂದು ಸುರಿಯುವ ಚಿತ್ರರಂಗ ಎಲ್ಲವೂ ಒಂದೊಂದಾಗಿ ಸೇರಿ, ಒಂದು ಹಂತದಲ್ಲಿ ಬಾಟಲಿ ಮತ್ತು ಸಿಗರೇಟು ನಿರಂತರ ಸಂಗಾತಿಯೇ ಎನ್ನುವಂತಾಯಿತು. ಈ ಎಲ್ಲಾ ಒತ್ತಡಕ್ಕೆ ಸಿಲುಕಿ ರಜನಿ ನರ್ವಸ್ ಬ್ರೇಕ್‌ಡೌನ್‌ಗೂ ಒಳಗಾದರು. ಆಗ ಅವರ ಮಡದಿ ಮೊರೆಹೋಗಿದ್ದು ಕೆ. ಬಾಲಚಂದರ್ ಅವರಲ್ಲಿ. ರಜನಿ ಬದುಕನ್ನು ಮತ್ತೆ ಕೈಗೆತ್ತಿಕೊಳ್ಳುತ್ತಾರೆ. ಆಧ್ಯಾತ್ಮ ಅವರ ಜೀವನವನ್ನು ಪ್ರವೇಶಿಸುತ್ತದೆ. ಈ ಎಲ್ಲಾ ಕಾರಣಗಳಿಂದಲೇ ಏನೋ ಸೂಪರ್‌ಸ್ಟಾರ್ ಎನ್ನುವ ಪಟ್ಟವನ್ನು ಅವರು ಇಂದಿಗೂ ಸಂಪೂರ್ಣ ತಮ್ಮದು ಎಂದು ಒಪ್ಪಿಕೊಳ್ಳಲಾಗಿಯೇ ಇಲ್ಲ. ತಮ್ಮ ವಯಸ್ಸಿಗೆ, ವ್ಯಕ್ತಿತ್ವಕ್ಕೆ ಮೇಕಪ್ ಮಾಡಿಕೊಳ್ಳದೆ ಹೊರಬರುವ ಧೈರ್ಯ ಮಾಡುತ್ತಾರೆ. ಕಪ್ಪುಗಟ್ಟಿದ ಮುಖ, ಒಣಗಿದ ತುಟಿಗಳು, ವಿರಳ ತಲೆಗೂದಲಿನ ಮಂಡೆ, ಸಾದಾ ಪಂಚೆ, ಶರಟು ಧರಿಸಿ ಯಾವುದೋ ಟೀ ಅಂಗಡಿಯಲ್ಲಿ ಟೀ ಕುಡಿಯುವುದು, ಕಾವೇರಿ ತಟದ ಬಂಡೆಯ ಮೇಲೆ ತಲೆಕೆಳಗೆ ಟವಲ್ ಮಡಿಸಿಟ್ಟುಕೊಂಡು ಮಲಗುವುದು ಅವರಿಗೆ ಸಾಧ್ಯವಾಗುತ್ತದೆ.

ತಮ್ಮ ಚಿತ್ರ ಸೋತಾಗ ರಜನಿ ಮೊದಲು ಮಾಡುವ ಕೆಲಸ ನಿರ್ಮಾಪಕರಿಗೆ ಧೈರ್ಯ ಕೊಟ್ಟು ಆಸರೆಯಾಗಿ ನಿಲ್ಲುವುದು. ಸ್ನೆಹಿತರಿಗೆ, ತಮ್ಮ ಪಯಣದಲ್ಲಿ ಜೊತೆಯಾದವರಿಗೆ ಎಲ್ಲರಿಗೂ ರಜನಿಯ ಬಾಯಿಯಲ್ಲಿ ಪ್ರೀತಿಯ ಮಾತು ಮತ್ತು ಅವರ ಮುಷ್ಟಿಯಲ್ಲಿ ಸಹಾಯದ ಬಿಸುಪು ಇದ್ದೇ ಇರುತ್ತದೆ. ಅವರ ಮೊದಲ ಚಿತ್ರ ಬಿಡುಗಡೆಯಾದ 45 ವರ್ಷಗಳ ಸಂದರ್ಭದಲ್ಲಿ ಆಂಗ್ಲದಿನಪತ್ರಿಕೆಯಲ್ಲಿ ಬಂದ ಒಂದು ಲೇಖನ, ಸಚಿನ್ ನಂತರ 10 ನಂಬರಿನ ಜರ್ಸಿಯನ್ನು ನಿವೃತ್ತಿಗೊಳಿಸಿದ ಹಾಗೆ ರಜನಿಯ ಜೊತೆಜೊತೆಯಲ್ಲಿ ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಪಟ್ಟ ಸಹ ನಿವೃತ್ತಿಯಾಗುತ್ತದೆ ಎಂದು ಭವಿಷ್ಯ ನುಡಿದಿತ್ತು. ನಿಜವೇ ಇದ್ದೀತು, ಈ ಸ್ಟಾರ್, ತಲ, ದಳಪತಿಗಳ ನಡುವೆಯೂ ಮಗುವಿನಂತೆ ನಗುವ ನಿನಗೆ ಅಭಿನಂದನೆಗಳು ತಲೈವಾ..
