ಕದಂಬ ವಂಶದ ದೊರೆಯ ಸಾಹಸಗಾಥೆಯನ್ನು ಸಾರುವ ‘ಮಯೂರ’ (1975) ಕನ್ನಡದ ಮಹೋನ್ನತ ಚಿತ್ರಗಳಲ್ಲೊಂದು. ಈ ಚಿತ್ರದಲ್ಲಿ ಡಾ.ರಾಜಕುಮಾರ್ ಅವರಿಗೆ ನಾಯಕಿಯಾಗಿ ಕನ್ನಡತಿಯೇ ಆದ ಹಿಂದಿ ತಾರೆ ಲೀನಾ ಚಂದಾವರ್ಕರ್ ನಟಿಸಬೇಕಿತ್ತು. ಈ ಬಗ್ಗೆ ಬೆಳಕು ಚೆಲ್ಲುವ ಮಾಹಿತಿಯೂ ‘ಪ್ರಜಾಮತ’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಲೀನಾರನ್ನು ಕರೆತರುವ ಪ್ರಯತ್ನಗಳ ನಂತರ ಅಂತಿಮವಾಗಿ ಚಿತ್ರದ ನಾಯಕಿಯಾಗಿ ಮಂಜುಳಾ ಆಯ್ಕೆಯಾದರು.
ದೇವುಡು ನರಸಿಂಹಶಾಸ್ತ್ರಿಯವರ ಕಾದಂಬರಿ ಆಧರಿಸಿದ ‘ಮಯೂರ’ ಚಿತ್ರದ ತಯಾರಿಕೆಯ ಹಿನ್ನೆಲೆಯಲ್ಲಿ ಹಲವು ಕತೆಗಳಿವೆ. ಮೊಟ್ಟಮೊದಲನೆಯದಾಗಿ ಇದು ಸಿನಿಮಾ ಆಗಿದ್ದು ಪಾರ್ವತಮ್ಮ ರಾಜಕುಮಾರ್ ಅವರ ಒತ್ತಾಸೆಯಿಂದ. ದುಬಾರಿ ವೆಚ್ಚದಲ್ಲಿ ಸಿನಿಮಾ ತಯಾರಿಸಲು ಉದ್ದೇಶಿಸಿದ ಟಿ.ಪಿ.ವೇಣುಗೋಪಾಲ್ ಪ್ರಯೋಗಶೀಲತೆ ಇರಲಿ ಎನ್ನುವ ಅಭಿಲಾಷೆಯಿಂದ ಬಾಲಿವುಡ್ ನಟಿಯನ್ನು ಕರೆತರಲು ಯೋಚಿಸಿದ್ದರು ಎನಿಸುತ್ತದೆ.

ರುಕ್ಕೋಜಿ ಅವರ ‘ಡಾ.ರಾಜಕುಮಾರ್ ಸಮಗ್ರ ಚರಿತ್ರೆ’ ಕೃತಿಯಲ್ಲಿ ಮತ್ತಷ್ಟು ಅಂಶಗಳು ಕಾಣಿಸುತ್ತವೆ. ಚಿತ್ರದ ಪಲ್ಲವ ರಾಜನ ಪಾತ್ರಕ್ಕೆ ಜನಪ್ರಿಯ ತಮಿಳು ನಟ ಎಂಜಿಆರ್ ಅವರನ್ನು ಕರೆತರಬೇಕೆಂದು ನಿರ್ಮಾಪಕರು ಆಲೋಚಿಸಿದ್ದರು. ಕಾದಂಬರಿಯಲ್ಲಿ ಬರುವ ರಾಜನರ್ತಕಿಯ ಪಾತ್ರಕ್ಕೆ ಬಾಲಿವುಡ್ ನಟಿ, ನೃತ್ಯಗಾರ್ತಿ ಹೇಮಾಮಾಲಿನಿ ಅವರನ್ನು ಕರೆತರುವ ಉದ್ದೇಶವೂ ಅವರದಾಗಿತ್ತು. ಈ ಸುದ್ದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದಂತೆ ಚಿತ್ರರಸಿಕರು ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗುತ್ತದೆ. ರಾಜ್ ಅವರು ಕೂಡ, “ಚಿತ್ರದಲ್ಲಿನ ಅನೇಕ ಸೂಕ್ಷ್ಮ ಹಾಗೂ ಮಾರ್ಮಿಕ ದೃಶ್ಯಗಳ ನಿರ್ವಹಣೆಗೆ ಕಷ್ಟವಾಗಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿನಿಪ್ರೇಮಿಗಳು ಮತ್ತು ರಾಜ್‌ರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ನಿರ್ಮಾಪಕ ವೇಣುಗೋಪಾಲ್ ಅವರು ತಮ್ಮ ಪ್ರಯತ್ನಗಳನ್ನು ಕೈಬಿಟ್ಟರು ಎನ್ನಲಾಗುತ್ತದೆ ಎಂದು ರುಕ್ಕೋಜಿಯವರು ಮಾಹಿತಿ ದಾಖಲಿಸಿದ್ದಾರೆ.
ನಿರ್ಮಾಪಕ ವೇಣುಗೋಪಾಲ್ ಅಂದುಕೊಂಡಂತೆಯೇ ಆಗಿದ್ದರೆ ವರನಟ ರಾಜ್ ಅವರಿಗೆ ನಾಯಕಿಯಾಗಿ ಲೀನಾ ಚಂದಾವರ್ಕರ್ ಆಯ್ಕೆಯಾಗಿರುತ್ತಿದ್ದರು. ಧಾರವಾಡ ಮೂಲದ ನಟಿ ಲೀನಾ ಎಪ್ಪತ್ತರ ದಶಕದ ಜನಪ್ರಿಯ ಹಿಂದಿ ತಾರೆ. ಖ್ಯಾತ ಗಾಯಕ ಕಿಶೋರ್ ಕುಮಾರ್ ಅವರನ್ನು ಎರಡನೇ ಮದುವೆಯಾಗಿದ್ದರು. ಮೊದಲನೆಯ ಪತಿ ಆಕಸ್ಮಿಕ ಗುಂಡೇಟಿಗೆ ಬಲಿಯಾದಾಗ ಲೀನಾರಿಗೆ 25 ವರ್ಷ. ಮುಂದೆ ಗಾಯಕ ಕಿಶೋರ್ ಕುಮಾರ್ ಅವರಿಗೆ ಲೀನಾ ನಾಲ್ಕನೇ ಪತ್ನಿಯಾದರು. ಇವರ ದಾಂಪತ್ಯಕ್ಕೆ ಜನಿಸಿದ ಸುಮಿತ್ ಕುಮಾರ್ ಕೂಡ ಗಾಯಕ.
