ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಕಲಿಗಾಲವಯ್ಯ ಕಲಿಗಾಲ…

ಪೋಸ್ಟ್ ಶೇರ್ ಮಾಡಿ
ಎನ್‌.ಎಸ್‌.
ಶ್ರೀಧರಮೂರ್ತಿ
ಲೇಖಕ

ಕವಿ ಸಿದ್ದಲಿಂಗಯ್ಯ ಅವರು ಪುಟ್ಟಣ್ಣ ಕಣಗಾಲರ ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರಕ್ಕೆ ಮೂರು ಹಾಡು ರಚಸಿದ್ದಾರೆ. ಈ ಚಿತ್ರಕ್ಕೆ ಅವರು ಬರೆದ ‘ಕಾಸನು ಬೀಸಿ’ ಹಾಡಿಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಹಾಡುಗಳು ರೂಪುಗೊಂಡದ್ದೇಗೆ? – ಲೇಖಕ ಶ್ರೀಧರಮೂರ್ತಿ ಅವರು ಸಿದ್ದಲಿಂಗಯ್ಯನವರು ತಮ್ಮೊಂದಿಗೆ ಹಂಚಿಕೊಂಡ ಮಾತುಗಳನ್ನು ಸ್ಮರಿಸಿದ್ದಾರೆ..

ನಿನ್ನೆ ನಮ್ಮನ್ನು ಅಗಲಿದ ಕವಿ ಸಿದ್ದಲಿಂಗಯ್ಯ ಅವರನ್ನು ನಾನು ಕೊನೆಯ ಸಲ ಭೇಟಿ ಮಾಡಿದ್ದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೀಟಿಂಗ್ ನಲ್ಲಿ. ಆಗ ಅವರು ನನ್ನ ಕವಿಗೀತ ಸಂಪುಟದಲ್ಲಿ ತಮ್ಮ ಕುರಿತು ಇಲ್ಲ ಎಂದು ಔಪಚಾರಿಕವಾಗಿ ಮಾತನಾಡುತ್ತಾ ಪ್ರಶ್ನಿಸಿದ್ದರು. ಅದು ಕನ್ನಡ ಚಿತ್ರರಂಗದಲ್ಲಿ ಕವಿಗಳು ಬರೆದ, ಅಳವಡಿಸಿದ ಚಿತ್ರಗೀತೆಗಳ ಸಂಕಲನ. ಒಂದು ಹಂತಕ್ಕೆ ಅದು ನಿಂತು ಹೋಗಿದೆ. ಎರಡನೇ ಸಂಪುಟ ತರುವ ಒತ್ತಡ ಇದ್ದರೂ ಅನೇಕ ಕಾರಣದಿಂದ ಅದು ಆಗಿರಲಿಲ್ಲ.

ಅಂದು ಸಿದ್ದಲಿಂಗಯ್ಯ ತಾವು ಚಿತ್ರಗೀತೆ ಬರೆದ ಸನ್ನಿವೇಶ ವಿವರಿಸಿದ್ದರು. ಆಗ ಪುಟ್ಟಣ್ಣ ಕಣಗಾಲ್ ಅವರು ಸಮಾಜವಾದಿ ಹಿನ್ನೆಲೆ ಕತೆಯ ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾ ತೆಗೆಯುತ್ತಿದ್ದರು. ಅದಕ್ಕೆ ಸಿದ್ದಲಿಂಗಯ್ಯ ಅವರಿಂದ ಹಾಡು ಬರೆಸಿದರೆ ಚೆನ್ನಾಗಿರುತ್ತದೆ ಎನ್ನುವ ಐಡಿಯಾ ಕೊಟ್ಟವರು ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದ ಟಿ.ಎನ್.ಸೀತಾರಾಂ. ಸಿದ್ದಲಿಂಗಯ್ಯನವರನ್ನು ಅವರೇ ಒಪ್ಪಿಸಿದ್ದರು. ಆಗ ಪುಟ್ಟಣ್ಣ ಜಯನಗರದಲ್ಲಿ ಹೆಡ್ಡನ ಹಟ್ಟಿ ಎಂಬ ಆಫೀಸ್ ಮಾಡಿ ಕೊಂಡಿದ್ದರು. ಅಲ್ಲಿ ಬೆಳಗಿನ ಎಂಟು ಗಂಟೆಗೆ ಹಾಡು ಬರೆಯುವುದು ಎಂದು ನಿರ್ಧಾರ ಆಯಿತು. ಆಗ ಸಿದ್ದಲಿಂಗಯ್ಯ ಕೆಂಗೇರಿಯಲ್ಲಿದ್ದರು. ಅಲ್ಲಿಂದ ಜಯನಗರಕ್ಕೆ ನೇರ ಬಸ್ ಇರಲಿಲ್ಲ. ಹೀಗಾಗಿ ರಾತ್ರಿ ತಮ್ಮ ಗೆಳೆಯ, ನಾಟಕಕಾರ ಸಿಜಿಕೆ ಅವರ ರಾಜಾಜಿನಗರದ ಮನೆಯಲ್ಲಿ ಉಳಿದು ಕೊಂಡರು. ಅಲ್ಲಿ ಚಿತ್ರಗೀತೆ ಬರೆಯುವ ಕುರಿತು ಗಂಭೀರ ಚರ್ಚೆಗಳು ನಡೆದವು. ಕೊನೆಗೆ ಸಿಜಿಕೆ ಅವರು ಪುಟ್ಟಣ್ಣನವರಂತಹ ನಿರ್ದೇಶಕರ ಚಿತ್ರಕ್ಕೆ ಬರೆಯುವುದು ಒಳ್ಳೆಯದು ಎಂದು ಹೇಳಿ, ಪ್ಯಾಡ್ ಮತ್ತು ಪೆನ್ ನೀಡಿ ಇದರಲ್ಲಿ ಬರಿ ಎಂದರು.

‘ಕಲಿಗಾಲವಯ್ಯಾ..’ ಹಾಡಿನಲ್ಲಿ ನಟ ಶ್ರೀನಿವಾಸಮೂರ್ತಿ ಅವರೊಂದಿಗೆ ನಿರ್ದೇಶಕ ಪುಟ್ಟಣ್ಣವರಾದ ಮಕ್ಕಳಾದ ತ್ರಿವೇಣಿ ಮತ್ತು ರಾಮು (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಸರಿ ಅಲ್ಲಿಂದ ಪುಟ್ಟಣ್ಣ ಅವರ ಆಫೀಸ್‌ಗೆ ಪಯಣ. ಅಲ್ಲಿ ಆಗ ತಾನೇ ಪೂಜೆ ಮುಗಿಸಿ ಕುಂಕುಮ ಧಾರಿಯಾಗಿದ್ದ ಪುಟ್ಟಣ್ಣ ಕಾಯುತ್ತ ಇದ್ದರು. ಸಂಗೀತ ಸಂಯೋಜಕ ವಿಜಯ ಭಾಸ್ಕರ್ ಇದ್ದರು. ಟ್ಯೂನ್ ಕೊಟ್ಟರು. ಬಹು ಬೇಗ ‘ಗೆಳತಿ ಓ ಗೆಳತಿ’ ಹಾಡು ಸಿದ್ಧವಾಯಿತು. ಪುಟ್ಟಣ್ಣ ಅವರಿಗೆ ಬಹಳ ಮೆಚ್ಚುಗೆಯಾಗಿ, “ಉಳಿದ ಎರಡು ಹಾಡನ್ನು ನೀವೇ ಬರೆಯಿರಿ” ಎಂದರು. ಸಿದ್ದಲಿಂಗಯ್ಯ ಆರಂಭದಲ್ಲಿ ಹಿಂಜರಿದರೂ ನಂತರ ಒಪ್ಪಿದ್ದರು. ‘ಕಾಸಾನು ಬೀಸಿ’ ಸಿದ್ಧವಾಯಿತು. ಮೂರನೇ ಹಾಡು ಏನು ಮಾಡಿದರೂ ಹುಟ್ಟಲಿಲ್ಲ. ಕೊನೆಗೆ ಲಂಚ್ ಬ್ರೇಕ್ ಎಂದರು. ಆಗ ಸಮಾಜವಾದ ಆಗಿನ ಸೋವಿಯತ್ ಯೂನಿಯನ್ ಸಾಗುತ್ತಾ ಇದ್ದ ರೀತಿ ಎಲ್ಲವೂ ಚರ್ಚೆಗೆ ಬಂತು. ಕೊನೆಗೆ ಪುಟ್ಟಣ್ಣ ‘ಎಲ್ಲ ಕಲಿಗಾಲ’ ಎಂದರು. ಆಗಲೇ ಕವಿಗಳಿಗೆ ಹಾಡು ಹೊಳೆಯಿತು. ಆದರೆ ಅದು ಪೂರ್ತಿ ಆಗಲು ಸಂಜೆ ಬೇಕಾಯಿತು. ಹೀಗೆ ರೂಪುಗೊಂಡಿದ್ದು ‘ಕಲಿಗಾಲವಯ್ಯಾ’ ಹಾಡು. ಮುಂದೆ ಪತ್ರಿಕೆಗಳಲ್ಲಿ ಸಿದ್ದಲಿಂಗಯ್ಯ ಚಿತ್ರಗೀತೆ ಬರೆದ ಕುರಿತು ತುರುಸಿನ ಚರ್ಚೆ ನಡೆದು ವಿವಾದ ಆಯಿತು. ಸಿದ್ದಲಿಂಗಯ್ಯ ಇದರ ತಂಟೆ ಬೇಡ ಎಂದು ‘ಆದಿತ್ಯ’ ಎಂಬ ಹೆಸರಿನಲ್ಲಿ ಹಾಡುಗಳು ಇರಲಿ ಎಂದು ಪುಟ್ಟಣ್ಣ ಅವರಿಗೆ  ಹೇಳಿದರು. ಹಾಗೇ ಆಯಿತು. ‘ಗೆಳತಿ’ ಜನಪ್ರಿಯವಾಯ್ತು. ‘ಕಾಸನು ಬೀಸಿ’ ಹಾಡಿಗೆ ರಾಜ್ಯ ಪ್ರಶಸ್ತಿ ಬಂತು. ಆದರೆ ಅವರಿಗೆ ಪ್ರಿಯವಾದ ‘ಕಲಿಗಾಲವಯ್ಯಾ’ ಗೀತೆ ಮರೆಯಲ್ಲಿ ಉಳಿಯಿತು.

ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ ಬಿ.ಎಸ್‌.ಬಸವರಾಜು ಅವರು ಹಾಡಿನ ಚಿತ್ರೀಕರಣ ನೆನಪಿಸಿಕೊಳ್ಳುತ್ತಾ, “ಧಾರವಾಡದಲ್ಲಿ ಲೇಖಕಿ ಗೀತಾ ಕುಲಕರ್ಣಿ ಮನೆ ಎದುರು ‘ಕಲಿಗಾಲವಯ್ಯಾ’ ಹಾಡನ್ನು ಚಿತ್ರಿಸಿದ್ದೆವು. ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಶಿವರಾಮ ಕಾರಂತರು ಅಂದು ಗೀತಾ ಕುಲಕರ್ಣಿ ಅವರ ಮನೆಗೆ ಬಂದಿದ್ದರು. ಕಾರಂತರಿಗೆ ಅವರು ದೂರದ ಸಂಬಂಧಿ ಎನ್ನುವ ನೆನಪು. ಅಂದು ನಾವು ಹಾಡು ಚಿತ್ರಿಸುತ್ತಿದ್ದಾಗ ಕಾರಂತರು ಹತ್ತು ನಿಮಿಷ ಚಿತ್ರೀಕರಣ ವೀಕ್ಷಿಸಿದ್ದರು. ಹಾಡಿನ ನೃತ್ಯದಲ್ಲಿ ನಟ ಶ್ರೀನಿವಾಸಮೂರ್ತಿ ಅವರೊಂದಿಗೆ ಪುಟ್ಟಣ್ಣ ಕಣಗಾಲರ ಮಕ್ಕಳಾದ ತ್ರಿವೇಣಿ ಮತ್ತು ರಾಮು ಕಾಣಿಸಿಕೊಂಡಿರುವುದು ವಿಶೇ‍ಷ” ಎನ್ನುತ್ತಾರೆ.

ರಾಜ್ಯ ಪ್ರಶಸ್ತಿ ಗೌರವ ಪಡೆದ ‘ಕಾಸನು ಬೀಸಿ..’ ಗೀತೆ

ಈ ಬರಹಗಳನ್ನೂ ಓದಿ