ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕಲ್ಪನಾ ನಟನೆಯಲ್ಲಿ ಕಲಾದೇವಿಯ ದರ್ಶನ

ಪೋಸ್ಟ್ ಶೇರ್ ಮಾಡಿ
ವಿ.ಶ್ರೀಧರ
ಲೇಖಕ

”ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ ಮದುವೆಗೋ ಮಸಣಕೋ ಹೋಗೆಂದ ಕಡೆ ಹೋಗು ಮಂಕುತಿಮ್ಮ” (ಕಲ್ಪನಾ ಸಾಯುವ ಮುನ್ನ ಪೊಲೀಸ್ ಅಧಿಕಾರಿಗೆ ಬರೆದ ಪತ್ರದಲ್ಲಿ ಇದ್ದ ಡಿ.ವಿ .ಜಿ ಯವರ ಪದ್ಯ). ಮೇ 12ಕ್ಕೆ ಕಲ್ಪನಾ ಕಾಲವಾಗಿ 42 ವರ್ಷಗಳು ಸಂದವು. ಈ ಸಂದರ್ಭದಲ್ಲಿ ಅವರ ಸ್ಮರಣೆ.

ಆವಾಗ ರೇಡಿಯೋ ಜನಪ್ರಿಯ ಮಾಧ್ಯಮ. 1979ರ ಮೇ 12ರ ಮಧ್ಯಾಹ್ನ ಎರಡು ಗಂಟೆಯ ಸಮಯ. ಅದರಲ್ಲಿ ಮೂಡಿ ಬರುತ್ತಿದ್ದ ಸುದ್ದಿಯ ತುಣುಕೊಂದು ಕೇಳುಗರ ಕಿವಿಗೆ ಸುಳ್ಳಿನಂತಿತ್ತು. ಕೇಳುಗರು ಇದು ಇರಲಾರದು ಎಂದುಕೊಳ್ಳುತ್ತಿದ್ದವರೆಲ್ಲರಿಗೂ ಕ್ರಮೇಣ ವಾಸ್ತವಿಕತೆಯ ಅರಿವಾಗುತ್ತಿತ್ತು. ಒಂದು ಕ್ಷಣ ಎಲ್ಲರಲ್ಲಿಯೂ ವಿದ್ಯುತ್ ಸಂಚಾರವಾಗುವಂತೆ ಮಾಡಿದ ಆ ಸುದ್ದಿ ‘ತಾರೆ ಕಲ್ಪನಾ ಇನ್ನೂ ನೆನಪು ಮಾತ್ರ’ ಎಂಬುದು. ತಾರೆ ಕಲ್ಪನಾ ಬೆಳಗಾವಿಗೆ 50 ಕಿ.ಮೀ. ದೂರದ ಸಂಕೇಶ್ವರದ ಗೋಟೂರು ಪ್ರವಾಸಿ ನಿಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡರು ಎಂದು ಸುದ್ದಿ.

ಅದು ಎಪ್ಪತ್ತರ ದಶಕ. ತನ್ನ ಅಪೂರ್ವ ನಟನಾ ಕೌಶಲ್ಯಗಳಿಂದ ನಾಡಿನ ಕಲಾ ಪ್ರೇಮಿಗಳನ್ನು ಬೆಚ್ಚಿ ಬೀಳಿಸಿದ ಆ ನಟಿಯ ಹೆಸರು ಕಲ್ಪನಾ. ಕಲ್ಪನಾ ನದಿಯಂತೆ ಪ್ರಶಾಂತವಾಗಿ ಹರಿಯುವುದಕ್ಕಿಂತ ಸಮುದ್ರದಂತೆ ಭೋರ್ಗರೆದುದೇ ಹೆಚ್ಚು. ಇದು ಆಕೆಯೊಳಗಿನ ಭಾವನೆಗಳ ತೀವ್ರತೆಯ ಅಭಿವ್ಯಕ್ತಿ. ಕಲ್ಪನಾ ನಮ್ಮನಗಲಿ 42 ವರ್ಷಗಳೇ ಕಳೆದವು. ಆದರೂ  ಇದುವರೆಗೂ ಒಬ್ಬ ಕಲಾವಿದೆಯೂ ಕಲ್ಪನಾ ಅವರನ್ನು ನಟನೆಯಲ್ಲಿ ಮೀರಿಸಲಾಗಲಿಲ್ಲ. ತನ್ನ ಹಾವ, ಭಾವ, ನಡೆ, ನುಡಿ, ನಗು ಇನ್ನೂ ಯಾವ ಕಲಾವಿದೆಯರಿಗೂ ಸಾಧ್ಯವಾಗಿಲ್ಲ. ದುರಂತ ನಾಯಕಿ ಕಲ್ಪನಾರಿಗೆ ಕಲ್ಪನಾರೇ ಸಾಟಿ. ಅಂದೂ ಕಾದಂಬರಿ ಆಧರಿಸಿದ ಚಿತ್ರಗಳೆಂದರೆ ಅದೂ ಕಲ್ಪನಾರ ಚಿತ್ರಗಳೆಂದೇ ಹೇಳಬಹುದು. ಕೃಷ್ಣಮೂರ್ತಿ ಮತ್ತು ಜಾನಕಮ್ಮನ ಮಗಳಾದ ಕಲ್ಪನಾ ಬೆಳೆದದ್ದೂ ಚಿಕ್ಕಮ್ಮನ ಬಳಿ, ‘ಸಾಕುಮಗಳು’ ಆಗೆ ಚಿತ್ರರಂಗ ಪ್ರವೇಶಿಸಿದ ಕಲ್ಪನಾ ಜನಮನ ಸೂರೆಗೊಂಡಿದ್ದು ಗಟ್ಟಿ ಪಾತ್ರಗಳ ಮೂಲಕ, ‘ಸರ್ವಮಂಗಳ’ ಚಿತ್ರೀಕರಣ ಸಂದರ್ಭ, ಸರ್ವಮಂಗಳೆಯ ಬೆನ್ನಿನ ಮೇಲೆ ಏಟು ಬಿದ್ದು ಗಂಡ ಉಪ್ಪು ಶಾಖ ಕೊಡುವ ದೃಶ್ಯವೊಂದಿದೆ.

ಆ ದೃಶ್ಯದ ಚಿತ್ರೀಕರಣಕ್ಕೆ ಮುನ್ನ ಚದುರಂಗರು ಕಲ್ಪನಾಗೆ ರವಿಕೆ ತೆಗೆದು ಬರೀ ಸೆರಗು ಹೊದ್ದುಕೊಳ್ಳಲು ಹೇಳಿದರು. ”ಚದುರಂಗರೆ ಇವತ್ತಿನವರಿಗೆ ನೀವು ಒಬ್ಬ ದೊಡ್ಡ ಸಾಹಿತಿಯೆಂದು ಬಹಳ ಗೌರವ ಇಟ್ಟುಕೊಂಡಿದ್ದೆ. ಈಗ ಅದು ಹೋಯಿತ್ತು” ಎಂದರು ಕಲ್ಪನಾ. ”ಯಾಕಮ್ಮ?”. ”ನೀವು ಎಲ್ಲಾ ವ್ಯಾಪಾರಿ ಚಿತ್ರ ನಿರ್ಮಾಪಕರಂತೆ ನನ್ನ ಸೆಕ್ಸ್ ಎಕ್ಸ್‌ಪ್ಲಾಯ್ಟ್‌ ಮಾಡ ಬಯಸಿದ್ದೀರಾ”! ಎಂದಾಗ ಚದುರಂಗರು ಮತ್ತೊಮ್ಮೆ ಸನ್ನಿವೇಶವನ್ನು ವಿವರಿಸಿ ಹಳ್ಳಿಗಾಡಿನಲ್ಲಿ ಉಪ್ಪು ಶಾಖ ಕೊಡುವ ರೀತಿಯ ಬಗ್ಗೆ ಹೇಳಿದರು. ಜತೆಗೆ ಇನ್ನೂ ಒಂದು ಮಾತು ಸೇರಿಸಿದರು. ”ನಿನ್ನ ಸೆಕ್ಸ್ ಎಕ್ಸ್‌ಪ್ಲಾಯ್ಟ್‌ ಮಾಡುವ ಬಯಕೆ ಇದ್ದಿದ್ದರೆ ಕ್ಯಾಮರಾ ಮುಂದೆ ಇಡುತ್ತಿದ್ದೆ. ಬೆನ್ನ ಹಿಂದೆ ಅಲ್ಲ” ಎಂದು. ಗಟ್ಟಿಯಾಗಿ ನಕ್ಕ ಕಲ್ಪನಾ ಚದು ರಂಗರು ಹೇಳಿದಂತೆಯೇ ಚಿತ್ರೀಕರಣದಲ್ಲಿ ಸಹಕರಿಸಿದರು. ಇದೇ ಸನ್ನಿವೇಶದಲ್ಲಿ ಗಂಡ ಹಾಗೆ ಶಾಖ ಕೊಡುತ್ತಿರುವಂತೆಯೇ ಆಕೆಯ ಪ್ರಿಯಕರ ಬರುತ್ತಾನೆ. ಆತ ಬಾಗಿಲಲ್ಲಿ ಕಾಣಿಸಿಕೊಂಡ ಕೂಡಲೇ ಕಲ್ಪನಾ ತಾವಾಗಿಯೇ ಅತ್ಯಂತ ಸಹಜವಾಗಿ ಥಟ್ಟನೆ ಬೆನ್ನ ಮೇಲೆ ಸೆರಗು ಎಳೆದುಕೊಂಡರು. ಇದನ್ನು ಚದುರಂಗರು ಮುಂಚೆ ನಿರ್ದೇಶಿಸಿರಲಿಲ್ಲ. ಅಂತಹ ಒಂದು ಸನ್ನಿವೇಶದಲ್ಲಿ ಒಬ್ಬ ಹಿಂದೂ ಸ್ತ್ರೀ ಸಹಜವಾಗಿ ತೋರಬಹುದಾದ ಪ್ರತಿಕ್ರಿಯೆ ಯನ್ನು ಕಲ್ಪನಾ ಸಮಯ ಸ್ಪೂರ್ತಿಯಿಂದ ತೋರಿದರು. ಅಷ್ಟರ ಮಟ್ಟಿಗೆ ಪಾತ್ರದ ಆಳ ಹೊಕ್ಕಿದ್ದರು. ಕಲ್ಪನಾ ಎಂತಹ ದೊಡ್ಡ ನಟಿಯೆಂಬುದು ಆಗ ಗೊತ್ತಾಯಿತು. ಮನಸ್ಸಿನಲ್ಲಿಯೇ ಆಕೆಗೆ ವಂದಿಸಿದೆ ಎನ್ನುತ್ತಾರೆ ಚದುರಂಗರು.

‘ಶರಪಂಜರ’ ಪುಟ್ಟಣ್ಣ ಕಣಗಾಲರ ಅತ್ಯಂತ ಯಶಸ್ವಿ ಚಿತ್ರ, ಕಡೆಯ ದೃಶ್ಯ ಕಾವೇರಿ ತನ್ನ ಹೆಪ್ಪುಗಟ್ಟಿದ ನೋವನ್ನು ಹೊರಹಾಕ ಬೇಕಿತ್ತು. ಹುಚ್ಚಿಯ ಪಾತ್ರದಲ್ಲಿ ಕಲ್ಪನಾ ಪರಕಾಯ ಪ್ರವೇಶ ಮಾಡಬೇಕಿತ್ತು. ಕಲ್ಪನ ಕಲ್ಪನಾಳಾಗದೆ ಕಾವೇರಿಯಾದ ಆ ಸಂದರ್ಭದಲ್ಲಿ ಹುಚ್ಚಿಯಾಗಿ ಬಂದು ಗಾಜಿನ ಕಿಟಕಿಯನ್ನು ಒಡೆದು ಸೋಫಾ ಮೇಲೆ ಕುಳಿತು ಸೋಫಾ ಅರಿಯುವ ದೃಶ್ಯ ಟೀಕ್ ಓಕೆಯಾಯ್ತು. ಕಲ್ಪನಾ ಮಾತ್ರ ಸೋಫಾ ಅರಿಯುತ್ತಲೇ ಇದ್ರು. ತಕ್ಷಣ ಅಲ್ಲಿದ್ದ ಕಲಾವಿದರು ಕಲ್ಪನಾರ ಬಳಿ ಓಡಿ ಬಂದಾಗ ಅವರನ್ನು ತಡೆದ ಪುಟ್ಟಣ್ಣ. ”ಅವಳನ್ನು ಯಾರು ಮುಟ್ಟಬೇಡಿ ಅವಳಿಗೆ ಕಲಾದೇವಿ ಆವಾಹನೆಯಾಗಿದ್ದಾಳೆ” ಎಂದು ಹೇಳಿ ತಮ್ಮ ಎರಡು ಕೈಗಳನ್ನು ಆಕೆಗೆ ಮುಗಿಯುತ್ತಾರೆ. ಶರಪಂಜರ ಚಿತ್ರದಲ್ಲಿನ ಹುಚ್ಚಿಯ ಪಾತ್ರದಲ್ಲಿ ಕಲ್ಪನಾ ಕೇವಲ ಗಂಡಿನ ದಬ್ಬಾಳಿಕೆಯನ್ನು ಹೇಳುವುದಿಲ್ಲ. ಹೆಣ್ಣಿನ ಮೌನದ ಮಾದರಿಗಳನ್ನು ಅಭಿವ್ಯಕ್ತಿಸುತ್ತಾಳೆ. ಅದರಿಂದ ಎದುರಾಗುವ ಕಷ್ಟ ಕೋಟಲೆಯನ್ನು ಒಳನುಂಗಿ ಮತ್ತೆ ಹುಚ್ಚಿಯಾಗುವ ಕಲ್ಪನಾ ಎವರ್ಗ್ರೀನ್ ಹೀರೋಯಿನ್.

‘ಎರಡು ಕನಸು’ ಚಿತ್ರೀಕರಣದ ಒಂದು ಸಂದರ್ಭ, ಡಾ. ರಾಜ್ ಪತ್ನಿಯ ಪಾತ್ರದಲ್ಲಿದ್ದವರು. ಕಲ್ಪನಾ ಅಗ್ನಿಸಾಕ್ಷಿಯಾಗಿ ಕೈ ಹಿಡಿದರೂ ತನ್ನನ್ನು ಮಾತನಾಡಿಸದೆ ಸರಸದ ಮಾತಾಡದೆ ಇರುವ ಪತಿಯನ್ನು ತರಾಟೆಗೆ ತೆಗೆದುಕೊಂಡು ಮಾತಾಡುತ್ತ ಮಾತಾಡುತ್ತಲೇ ಭಾವಾವೇಶದಿಂದ ಕುಸಿದು ಬೀಳುವ ಸನ್ನಿವೇಶ, ಈ ದೃಶ್ಯದಲ್ಲಿ ಕಲ್ಪನಾ ಎಲ್ಲರ ನಿರೀಕ್ಷೆ ಮೀರಿ ಅದ್ಭುತವಾಗಿ ಅಭಿನಯಿಸಿದರು. ಟೇಕ್ ಓಕೆಯಾದ ತಕ್ಷಣ ಕಲ್ಪನಾಗೆ ತಮ್ಮ ಎರಡು ಕೈಗಳನ್ನು ಮುಗಿದರು ರಾಜ್, ಇದರಿಂದ ಬೆರಗಾದ ಕಲ್ಪನಾ ”ಅಣ್ಣಾ ನೀವು ನನಗೆ ನಮಸ್ಕರಿಸುವುದೆ”? ಎಂದಾಗ ರಾಜ್ ”ನಾನು ನಮಸ್ಕರಿಸಿದ್ದು ನಿನಗಲ್ಲಮ್ಮ, ನಿನ್ನಲ್ಲಿ ನಾಟ್ಯ ಮಾಡುತ್ತಿರುವ ಕಲಾದೇವಿಗೆ” ಅಂದರಂತೆ. ಹೌದು ಕಲ್ಪನಾ ತಮ್ಮ ವೈಯಕ್ತಿಕ ಬದುಕಿಗೆ ಹತ್ತಿರವಾದ ಪಾತ್ರಗಳಲ್ಲಿ ಹೆಚ್ಚು ಲೀಲಾಜಾಲವಾಗಿ ಅಭಿನಯಿಸುತ್ತಿದ್ದರು. ಒಂದು ರೀತಿಯಲ್ಲಿ ಆ ಚಿತ್ರಗಳಲ್ಲಿ ಆಕೆಯೆ ವಿಜೃಂಭಿಸುತ್ತಿದ್ದುದು ಉಂಟು. ನಾಯಕ ಕೆಲವೊಮ್ಮೆ ನೆಪಮಾತ್ರ ಎಂಬಷ್ಟು ಆಕೆಯೇ ಚಿತ್ರಗಳಲ್ಲಿ ಸಂಪೂರ್ಣ ಆವರಿಸಿಕೊಳ್ಳುತ್ತಿದ್ದರು. ಈ ಕಾರಣಕ್ಕಾಗಿಯೇ ಯಾರೂ ಕಲ್ಪನಾರವರ ಸಿನಿಮಾವನ್ನು ನೋಡ್ತಾರೋ ಅವರು ಆಕೆಯ ಅಭಿನಯವನ್ನು ಮರೆಯೋದಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ ಕಲ್ಪನಾ ಕೇವಲ ಅಭಿನಯಿಸುತ್ತಿರಲಿಲ್ಲ ಆ ಚಿತ್ರದ ಪಾತ್ರವೇ ಅವರಾಗುತ್ತಿದ್ದರು.

ಒಮ್ಮೆ ಬೆಂಗಳೂರಿನ ಚಲನಚಿತ್ರ ವಾರ ಪತ್ರಿಕೆಯೊಂದರ ಕೋರಿಕೆ ಮೇಲೆ ಕಲ್ಪನಾ ಆಗಿನ ಹಿಂದಿ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಅವರನ್ನು ಅಶೋಕ ಹೋಟೆಲ್‌ನಲ್ಲಿ ಸಂದರ್ಶಿಸಿದರು. ಅದಕ್ಕೂ ಮುನ್ನಾ ರಾಜೇಶ್ ಖನ್ನಾ ಆ ಪತ್ರಿಕೆ ಸಂಪಾದಕರನ್ನು ”ಕಲ್ಪನಾ ಯಾರು?” ಎಂದು ಕೇಳಿದಾಗ ”ಕನ್ನಡದ ಮೀನಾ ಕುಮಾರಿ” ಎಂದು ಸಂಪಾದಕರು ವಿವರಿಸಿದರು. ರಾಜೇಶ್ ಖನ್ನಾ ತಕ್ಷಣವೇ ಒಪ್ಪಿಕೊಂಡರು . ‘ಕನ್ನಡದ ಮೀನಾಕುಮಾರಿ’ ಯ ಬಾಳೂ ಅಷ್ಟೇ ದುರಂತವಾಗುವುದೆಂಬುದನ್ನು ಅಂದು ಯಾರೂ ನಿರೀಕ್ಷಿಸಿರಲಿಲ್ಲ, ಕನ್ನಡದಲ್ಲಿ 69, ತಮಿಳಿನಲ್ಲಿ 6, 2 ತುಳು, 3 ಮಲೆಯಾಳಂ ಹಾಗೂ  ತೆಲುಗಿನಲ್ಲಿ 1 ಹೀಗೆ ಒಟ್ಟು 81  ಚಿತ್ರಗಳಲ್ಲಿ ಎಲ್ಲಾ ನಾಯಕ ನಟರೊಂದಿಗೆ ಅಭಿನಯಿಸಿ ಹೆಸರು ಮಾಡಿದವರು ಕಲ್ಪನಾ.

ಈ ಬರಹಗಳನ್ನೂ ಓದಿ