ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ವೈಭವೀಕರಣ ಇಲ್ಲದ ಸಹಜ ದೃಶ್ಯ ಸಂಯೋಜನೆ

ಪೋಸ್ಟ್ ಶೇರ್ ಮಾಡಿ
ಬಿ.ಎಸ್‌.ಲಿಂಗದೇವರು
ಚಿತ್ರನಿರ್ದೇಶಕ

ಸದಾ ಮುಂಗಾಲನ್ನು ಕಟ್ಟಿರುವ ಕತ್ತೆಯನ್ನು ಎಲ್ಲೆಲ್ಲಿ ಎಷ್ಟು ಬಳಸಬೇಕು ಅಲ್ಲಲ್ಲಿ ಮಾತ್ರ ರೂಪಕವಾಗಿ ಬಳಸಿ, ನಿರ್ದೇಶಕರು ತಾನೊಬ್ಬ ಅತ್ಯುತ್ತಮ ನಿರ್ದೇಶಕ ಎನ್ನುವುದನ್ನು ಸಾಬೀತು ಮಾಡುತ್ತಾರೆ. ಇವುಗಳ ಜೊತೆ ಬೆಕ್ಕು, ನಾಯಿ, ಹಂದಿ, ಕುದುರೆ, ಹದ್ದು, ಕೋಳಿ, ಚಿಟ್ಟೆ ಹೀಗೆ ಎಲ್ಲವೂ ರೂಪಕವಾಗಿ ಕಾಣಿಸುತ್ತವೆ.

ತಮಿಳಿನ ‘ಕರ್ಣನ್’ ಸಿನಿಮಾ ಒಂದು ನಿರ್ದೇಶಕನ ಚಿತ್ರ ಎಂಬುದಕ್ಕೆ ಪಕ್ಕಾ ಉದಾಹರಣೆ. ಫಿಟ್ಸ್ ಬಂದು ರಸ್ತೆಯ ಮಧ್ಯೆದಲ್ಲಿ ಬಿದ್ದಿರುವ ಯುವತಿಯ ದೃಶ್ಯದಿಂದ ಸಿನಿಮಾ ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತದೆ. ಸದಭಿರುಚಿಯ ಪ್ರೇಕ್ಷಕನಿಗೆ  ಪ್ರಾರಂಭದ  ಈ ಒಂದು ದೃಶ್ಯ ಮುಂದಿನ ಎರಡೂವರೆ ಗಂಟೆ ಕೂರಿಸುವಲ್ಲಿ ಯಶಸ್ವಿಯಾಗುತ್ತದೆ.

ಸಿನಿಮಾ ಅಥವಾ ಕತೆ ಕಾದಂಬರಿಗಳಲ್ಲಿ ಮೊದಲು ಪಾತ್ರಗಳ ಪರಿಚಯ ನಂತರ ಕತೆಯ ಆರಂಭವಾಗುವುದು ವಾಡಿಕೆ. ಪಾತ್ರಗಳ ಪರಿಚಯದಲ್ಲಿ ಮುಖ್ಯ ಪಾತ್ರಕ್ಕೆ ವಿಶೇಷ ಒತ್ತು ಕೊಟ್ಟು ಪರಿಚಯಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಆಯಾ ಪ್ರದೇಶದ ಸಂಪ್ರದಾಯ ಇಟ್ಟುಕೊಂಡು ಪರಿಚಯ ಮಾಡುವುದು ಹೆಚ್ಚು ಪರಿಣಾಮ ಬೀರುವುದಲ್ಲದೆ, ಯಶಸ್ಸು ಸಾಧಿಸುವುದರಲ್ಲಿ ಯಾವುದೇ ಅನುಮಾನ ಬೇಡ. ಸದರಿ ಸಿನಿಮಾದಲ್ಲಿ ತಲೆಯಿಲ್ಲದ ದೇವರಿಗೆ ಪೂಜೆಯಾದ ನಂತರ ಬಂಡೆ ಮೇಲಿಂದ ಜಿಗಿದು ಮೀನನ್ನು ಕತ್ತಿಯಿಂದ ತುಂಡರಿಸುವ ತನ್ನ ಊರಿನ ಸಂಪ್ರದಾಯವನ್ನು ಯಶಸ್ವಿಯಾಗಿ ನಿರ್ವಹಿಸುವ ಮುಖ್ಯ ಪಾತ್ರದ ಕರ್ಣನ್ ಪರಿಚಯ. ಯಾವುದೇ ‌ಕೃತಕವಾದ ವೈಭವೀಕರಣ ಇಲ್ಲದೆ ತುಂಬಾ ಸಹಜವಾದ ದೃಶ್ಯ ಸಂಯೋಜನೆ ಇಲ್ಲಿ ಪ್ಲಸ್ ಪಾಯಿಂಟ್.

ಇಲ್ಲಿಂದ ರೂಪಕಗಳ ಸರಮಾಲೆಯ ಆರಂಭ ಸದಾ ಮುಂಗಾಲನ್ನು ಕಟ್ಟಿರುವ ಕತ್ತೆಯನ್ನು ಎಲ್ಲೆಲ್ಲಿ ಎಷ್ಟು ಬಳಸಬೇಕು ಅಲ್ಲಲ್ಲಿ ಮಾತ್ರ ರೂಪಕವಾಗಿ ಬಳಸಿ, ನಿರ್ದೇಶಕರು ತಾನೊಬ್ಬ ಅತ್ಯುತ್ತಮ ನಿರ್ದೇಶಕ ಎನ್ನುವುದನ್ನು ಸಾಬೀತು ಮಾಡುತ್ತಾರೆ. ಇವುಗಳ ಜೊತೆ ಬೆಕ್ಕು, ನಾಯಿ, ಹಂದಿ, ಕುದುರೆ, ಹದ್ದು, ಕೋಳಿ, ಚಿಟ್ಟೆ ಹೀಗೆ ಎಲ್ಲವನ್ನೂ ಬಳಸಿಕೊಂಡು ಒಟ್ಟಾರೆ ಪರಿಸರವನ್ನು ಕಟ್ಟಿಕೊಡುತ್ತ ಆ ಹಳ್ಳಿಯಲ್ಲಿ ಬಸುರಿ ಹೆಂಗಸು, ಆಗ ತಾನೆ ಹುಟ್ಟಿರುವ ಮಗುವಿನಿಂದ ಹಿಡಿದು ಹಾಸಿಗೆ ಹಿಡಿದಿರುವ ಹಣ್ಣಣ್ಣು ಮುದುಕಿಯವರೆಗೆ ಪಾತ್ರಗಳನ್ನು ಸೃಷ್ಟಿ ಮಾಡಿ ಎಲ್ಲಾ ಪಾತ್ರಗಳಿಗೂ ನ್ಯಾಯ ಒದಗಿಸಿದ್ದಾರೆ. ಈ ಕುಸುರಿ ಕೆಲಸವೇ ಸಿನಿಮಾ ಯಶಸ್ವಿಯಾಗಲು ಕಾರಣ ಎಂದು ನಾನು ಭಾವಿಸುತ್ತೇನೆ.

ಹುಟ್ಟುವಾಗ ವಿಶ್ವ ಮಾನವನಾಗಿಯೇ ಹುಟ್ಟುವ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಮುಂತಾದ ಉಪಾಧಿಗಳಿಂದ ಬದ್ದನನ್ನಾಗಿ ಮಾಡುತ್ತೇವೆ. ಇವೆಲ್ಲವುಗಳಿಂದ ಪಾರಾಗಿಸಿ ಅವನನ್ನು ಬುದ್ಧನನ್ನಾಗಿಸಿ ಅಂದರೆ ವಿಶ್ವ ಮಾನವನನ್ನಾಗಿ ಪರಿವರ್ತಿಸುವುದು ನಮ್ಮ ವಿಧ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆರ್ಧ್ಯ ಕರ್ತವ್ಯ ಎಂದು ಹೇಳಿದ ಕುವೆಂಪುರವರ ವಿಶ್ವಮಾನವ ಸಂದೇಶ.. ಸಿನಿಮಾ ಮುಗಿದ ನಂತರ ನಮ್ಮನ್ನು ಮತ್ತೆ ಮತ್ತೆ ಕಾಡತೊಡಗುತ್ತದೆ.
Mise en scene ಎಂದರೆ ಏನು ಎಂದು ಕೇಳುವ ಸಿನಿಮಾ ವಿಧ್ಯಾರ್ಥಿಗಳು ಈ ಸಿನಿಮಾವನ್ನು ತನ್ನ ಕಲಿಕೆಯ ಭಾಗವಾಗಿ, ಟೆಕ್ಸ್ಟ್ ಆಗಿ ನೋಡಬಹುದು.
(Mise en scène, pronounced meez-ahn-sen, is a term used to describe the setting of a scene in a play or a film. It refers to everything placed on the stage or in front of the camera – including Artist )

ಪಾತ್ರಗಳಿಗೆ ಸೂಕ್ತವಾದ ಕಲಾವಿದರ ಅಯ್ಕೆ ಮತ್ತು ನಿರ್ದೇಶಕನ ನಾಡಿ ಮಿಡಿತವನ್ನು ಅರಿತ ತಂತ್ರಜ್ಞರು ಕರ್ಣನ್ ಸಿನಿಮಾವನ್ನು ಶ್ರೀಮಂತ ಗೊಳಿಸಿದ್ದಾರೆ.

(‘ಕರ್ಣನ್‌’ ಸಿನಿಮಾ ಪ್ರಸ್ತುತ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.)

ಈ ಬರಹಗಳನ್ನೂ ಓದಿ