ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸಂಯಮದ ವಾಗ್ವಾದಕ್ಕೆ ಸೆಳೆಯುವ ‘ಲೈಲಾ ಇನ್ ಹೈಫಾ’

ಪೋಸ್ಟ್ ಶೇರ್ ಮಾಡಿ
ಕೆ.ಫಣಿರಾಜ್‌
ಸಿನಿಮಾ ವಿಶ್ಲೇಷಕ

ವೈಯಕ್ತಿಕ – ಸಾಮಾಜಿಕ ಬದುಕಗಳ ವಿಷಾದ, ವಕ್ರತೆ, ಅಸಂಗತತೆಗಳನ್ನು ಕಾಣಿಸುವ ಕಲಾಕಸುಬಿನ ಧೀಮಂತಿಕೆಗಾಗಿಯೇ ಈ ಸಿನಿಮಾ ನೋಡಬೇಕು – ‘ಲೈಲಾ ಇನ್ ಹೈಫಾ’ (2000) ಇಸ್ರೇಲ್‌ – ಫ್ರೆಂಚ್ ಸಿನಿಮಾ ಕುರಿತ ಕೆ.ಫಣಿರಾಜ್‌ ಅವರ ವಿಶ್ಲೇಷಣೆ.

ಅಮೋಸ್ ಗಿತಾಯ್ ಯಹೂದಿ – ಅರಬ್ ಸಹಬಾಳ್ವೆಯಲ್ಲಿ ನಂಬಿಕೆ ಇರುವ, ತನ್ನ  ಚಿತ್ರ – ಸ್ಥಾಪನಾ ಕಲೆ, ನಾಟಕ, ಸಾಕ್ಷ್ಯ ಚಿತ್ರ ಹಾಗೂ ಕಥನಾ ಚಿತ್ರಗಳ ಮೂಲಕ  ಈ ಸಂಗತಿಯನ್ನು ಪದೆ ಪದೇ ಮುಖ್ಯ ಕೇಂದ್ರವಾಗಿಸಿಕೊಳ್ಳುತ್ತಿರುವ ಚಿತ್ರನಿರ್ದೇಶಕ. ಯಹೂದಿ ಬಲಪಂಥೀಯರಿಗೆ ದೇಶದ್ರೋಹಿ ವೈಚಾರಿಕನಂತೆ ಕಾಣುವ, ಅರಬ್ ತೀವ್ರ ಕ್ರಾಂತಿವಾದಿಗಳಿಗೆ ಉಪಯುಕ್ತವಲ್ಲದ ಮೃದು ಧೋರಣೆಯವನಂತೆ ಕಾಣುವ ಗಿತಾಯ್ ರ ಸಿನಿಮಾಗಳು ಮೆಲುದನಿಯಲ್ಲಿ ಯಹೂದಿ – ಅರಬ್ ಸಂಘರ್ಷ, ಸಹಬಾಳ್ವೆಗಳ ನಾಜೂಕಿನ ಸ್ಥಿತಿಯನ್ನು ನಿತ್ಯ ಬದುಕಿನ ವ್ಯಕ್ತಿ ನಂಬಿಕೆ ಸಂಬಂಧಗಳ ನೆಲೆಯಲ್ಲಿ, ಕೂಡಿ ಬಾಳಿದ ಪರಿಸರ – ವಿದ್ಯಮಾನಗಳ ಪ್ರತಿಮೆಯಾಗಿ ಹರಳುಗಟ್ಟಿಸುವ ಸಂವೇದನೆಯವು.

ಒಂದು ಸೀಮಿತ ಸ್ಥಳದಲ್ಲಿ ನಡೆಯುವ ಒಂದು ಹೊತ್ತಿನ ಸಹಜ ವಿದ್ಯಮಾನಗಳನ್ನು, ಪಾತ್ರಗಳ ಚಲನೆ – ಸಂಭಾಷಣೆಗಳನ್ನು ಹಿಂಬಾಲಿಸುವಂತೆ ಒಡಾಡುವ ಕ್ಯಾಮೆರಾ ನೋಟದಲ್ಲಿ ನಿರೂಪಿಸುವ ಸೂಕ್ಷ್ಮ ದೃಶ್ಯ ಕಟ್ಟುಗಳು ಅವರ ವಿಶೇಷ. ಸಂಕಲನ ತಂತ್ರಗಳನ್ನು ತೀವ್ರತೆಯಿಂದ ಹಿಡಿದು ಇಲ್ಲವೇ ಇಲ್ಲ ಎನಿಸುವಷ್ಟು ಸರಳವಾದ ನಿರಂತರ ಸರಣಿ ಸಂಕಲನವರೆಗೆ, ಅವಶ್ಯಕತೆಗೆ ತಕ್ಕ ಹಾಗೆ ಅವರು ಬಳಸುತ್ತಾರೆ.

ಈ ಕ್ಯಾಮೆರಾ – ಸಂಕಲನದಿಂದ ಸಾಧ್ಯವಾಗುವ ದೃಶ್ಯ ಆಕೃತಿ ರಚನೆಯನ್ನೂ, ವಾಸ್ತವಾವಾದಿ ಸಿನಿಮಾದ ಸ್ಥಳ ಸನ್ನಿವೇಶತೆಯ ಸಹಜತೆಯಲ್ಲಿ ಚಿತ್ರಿಸುವ ವಿಧಾನವನ್ನೂ ಹದದಲ್ಲಿ ಬಳಸಿ, ಗಾಯಗೊಂಡ ಸಮಾಜದಿಂದ ಒಸರುವ ವಿಷಾದ – ನೋವು, ಪ್ರೀತಿ – ಸೌಹಾರ್ದದ ಆಸೆ, ಅಸಂಗತ ಅಸ್ತಿತ್ವದ ವಿಪರೀತ ವ್ಯಂಗ್ಯ ವಿಪರ್ಯಾಸಗಳನ್ನು ಅವರು ಪ್ರಕಟಿಸುವ ಬಗೆಯ ಕಲಾ ಘನತೆಗಾಗಿಯೇ ಅವರ ಸಿನೆಮಾಗಳು ಮೌಲಿಕ ಕಲೆಯಾಗಿವೆ ಹಾಗೂ ರಸಿಕರಿಗೆ ಇಷ್ಟವಾಗುತ್ತವೆ.

ಲೈಲಾ ಇನ್ ಹೈಫಾ (2020)

ಇಸ್ರೇಲ್ – ಪ್ಯಾಲಸ್ತೀನ್ ಗಳ ಹಿಂಸಾತ್ಮಕ  ಭೂಪ್ರದೇಶದಲ್ಲಿ, ಸಹಬಾಳ್ವೆಯ ಕೊನೆಯ ಸೆಲೆಯಂತೆ ಕಾಣುವ ಹೈಫಾ ಬಂದರು ನಗರದ, ಒಂದು ಕಲಾ ಪ್ರದರ್ಶನಾಲಯ ಸಹಿತವಾದ ತೆರೆದ ಬಾರ್ ರೆಸ್ಟೋರೆಂಟಿನಲ್ಲಿ, ಇಳಿ ಸಂಜೆಯಿಂದ ರಾತ್ರಿಯವರೆಗೆ ನಡೆಯುವ ಹಲವು ಬಗೆಯ ಮನುಷ್ಯ ಸಂಬಂಧಗಳ ಮುಖಾಬಲವನ್ನು, ಯಾವ ಉದ್ದೇಶವೂ ಇಲ್ಲದೆ, ಧೀರ್ಘ ಟ್ರಾಕ್ ಷಾಟಿನಂತೆ ನಿರುದ್ವಿಗ್ನವಾಗಿ ದೃಶ್ಯ ಕಟ್ಟಿನಲ್ಲಿ ಹಿಡಿಯುತ್ತಲೇ, ವೈಯಕ್ತಿಕ – ಸಾಮಾಜಿಕ ಬದುಕಗಳ ವಿಷಾದ, ವಕ್ರತೆ, ಅಸಂಗತತೆಗಳನ್ನು ಕಾಣಿಸುವ ಕಲಾಕಸುಬಿನ ಧೀಮಂತಿಕೆಗಾಗಿಯೇ ಈ ಸಿನಿಮಾ ನೋಡಬೇಕು; ಹೀಗೆ ಕಂಡಾಗ ಅರಿವಾಗುವ ರಾಜಕೀಯ ವಿಚಾರಗಳು – ಒಪ್ಪಿತವಲ್ಲದಿದ್ದರೂ, ನಮ್ಮನ್ನು ಸಂಯಮದ ವಾಗ್ವಾದಕ್ಕೆ ಸೆಳೆಯತ್ತವೆ.

ನಿರ್ದೇಶಕ ಅಮೋಸ್‌ ಗಿತಾಯ್ ಯಹೂದಿ

ಈ ಬರಹಗಳನ್ನೂ ಓದಿ