
ಪತ್ರಕರ್ತ
ಡಾ.ರಾಜ್ ಅವರು ನಾಯಕನಾಗಿ ಪದಾರ್ಪಣೆ ಮಾಡಿದ `ಬೇಡರ ಕಣ್ಣಪ್ಪ’ ಚಿತ್ರದಲ್ಲಿ ರಾಮಚಂದ್ರಶಾಸ್ತ್ರಿಗಳು ಶಿವನಾಗಿ ನಟಿಸಿದ್ದರೆ, ರಾಜ್ ಅವರದೇ `ಸ್ವರ್ಣಗೌರಿ’ ಚಿತ್ರದಲ್ಲಿ ತೆಲುಗು ನಟ ಸತ್ಯನಾರಾಯಣ ಪರಶಿವನಾಗಿದ್ದರು.
ಪೌರಾಣಿಕ ಸಿನಿಮಾಗಳಲ್ಲಿ ಪ್ರಧಾನವಾಗಿ ಚಿತ್ರಿತವಾದ ದೇವತೆ ಶಿವ. ಪುರಾಣದ ಹಲವಾರು ಕತೆಗಳಲ್ಲಿ ಶಿವ, ಕೈಲಾಸದ ಪ್ರಸ್ತಾಪವಾಗುವುದರಿಂದ ಶಿವನಿಗೆ ಹೆಚ್ಚಿನ ಮನ್ನಣೆ. ಬೇಡರ ಕಣ್ಣಪ್ಪ, ಭಕ್ತ ಸಿರಿಯಾಳ, ಭಕ್ತ ಮಾರ್ಕಂಡೇಯ, ಭಕ್ತ ಮಲ್ಲಿಕಾರ್ಜುನ, ಭೂ ಕೈಲಾಸ, ಗಿರಿಜಾ ಕಲ್ಯಾಣ, ಗಂಗೆ ಗೌರಿ, ಪಾರ್ವತಿ ಕಲ್ಯಾಣ, ಶಿವಕೊಟ್ಟ ಸೌಭಾಗ್ಯ, ಶ್ರೀ ಧರ್ಮಸ್ಥಳ ಮಹಾತ್ಮೆ, ಶಿವ ಮೆಚ್ಚಿದ ಕಣ್ಣಪ್ಪ, ಶಿವ ಕೊಟ್ಟ ಸೌಭಾಗ್ಯ, ಸ್ವರ್ಣಗೌರಿ, ಬಾಲ ಶಿವ ಸೇರಿದಂತೆ ಶಿವನ ಕುರಿತಾದ ಹಲವಾರು ಪೌರಾಣಿಕ, ಸಾಮಾಜಿಕ, ಭಕ್ತಿ ಪ್ರಧಾನ ಚಿತ್ರಗಳನ್ನು ಹೆಸರಿಸಬಹುದಾಗಿದೆ. ಪಿ.ಆರ್.ಕೌಂಡಿನ್ಯ ನಿರ್ದೇಶನದಲ್ಲಿ ತೆರೆಕಂಡ `ಶಿವರಾತ್ರಿ ಮಹಾತ್ಮೆ’ ಈ ಯಾದಿಯಲ್ಲಿ ಪ್ರಮುಖ ಚಿತ್ರ. ಶಿವಭಕ್ತ ರಾವಣನ ಕಥೆಯಿದ್ದ `ಪ್ರಚಂಡ ರಾವಣ’ ಹೆಚ್ಚು ಸದ್ದು ಮಾಡಲಿಲ್ಲ. ತೊಂಬತ್ತರ ದಶಕದ ನಂತರ ಪೌರಾಣಿಕ ಚಿತ್ರಗಳು ಕಡಿಮೆಯಾಗುತ್ತಿದ್ದಂತೆ ಶಿವಪಾತ್ರಗಳೂ ಕಣ್ಮರೆಯಾದವು. ಈಗ ಹಿಂದಿ ಸೇರಿದಂತೆ ಪ್ರಾದೇಶಿಕ ಭಾಷೆಗಳ ಕಿರುತೆರೆಯ ಪೌರಾಣಿಕ ಸರಣಿಗಳಲ್ಲಿ ಶಿವನ ಪಾತ್ರಗಳನ್ನು ನೋಡಬಹುದಾಗಿದೆ.

ಶಿವ ಪಾತ್ರಧಾರಿಗಳು
ದೊಡ್ಡ ಹಣೆ, ಗಿರಿಜಾ ಮೀಸೆ, ನೇರ ನಿಲುವು, ನಿಷ್ಕಲ್ಮಷ ಕಿರುನಗೆ – ಶಿವ ಪಾತ್ರಕ್ಕೆ ಭೂಷಣ. ಯಾವುದೇ ಪೌರಾಣಿಕ ಪಾತ್ರವನ್ನಾದರೂ ಸರಾಗವಾಗಿ ಆವರಿಸಿಕೊಳ್ಳುವ ಡಾ.ರಾಜ್ ಶಿವನ ಪಾತ್ರಧಾರಿಯಾಗಿ ಯಶಸ್ಸು ಕಂಡ ನಟ. ರಾಜ್ ಅವರ ಸಮಕಾಲೀನರಾದ ಕೆ.ಎಸ್.ಅಶ್ವಥ್ ನಟಿಸಿದ ಶಿವ ಪಾತ್ರಗಳೂ ಕಣ್ಮುಂದೆ ಬರುತ್ತವೆ. ಡಾ.ರಾಜ್ ಅವರು ನಾಯಕನಾಗಿ ಪದಾರ್ಪಣೆ ಮಾಡಿದ `ಬೇಡರ ಕಣ್ಣಪ್ಪ’ ಚಿತ್ರದಲ್ಲಿ ರಾಮಚಂದ್ರಶಾಸ್ತ್ರಿಗಳು ಶಿವನಾಗಿ ನಟಿಸಿದ್ದರೆ, ರಾಜ್ ಅವರದೇ `ಸ್ವರ್ಣಗೌರಿ’ ಚಿತ್ರದಲ್ಲಿ ತೆಲುಗು ನಟ ಸತ್ಯನಾರಾಯಣ ಪರಶಿವನಾಗಿದ್ದರು. ನಂತರದ ದಿನಗಳಲ್ಲಿ ಶ್ರೀನಿವಾಸಮೂರ್ತಿ (ಗುರುಶಿಷ್ಯರು, ನಂಜುಂಡೇಶ್ವರ ಮಹಿಮೆ, ಶಿವಲೀಲೆ), ಶ್ರೀಧರ್ (ಶಬರಿಮಲೆ ಸ್ವಾಮಿ ಅಯ್ಯಪ್ಪ, ಕೊಲ್ಲೂರು ಮೂಕಾಂಬಿಕಾ, ಬಾಲಶಿವ, ಮಹಾಸ್ವಾ ಮಲ್ಲಮ್ಮ) ಶಿವನಾಗಿ ಮಿಂಚಿದರು. ಭರತನಾಟ್ಯ ಕಲಾವಿದರೂ ಆದ ಶ್ರೀಧರ್ ಮತ್ತು ಡಾ.ಸಂಜಯ್, ಶಿವತಾಂಡವದ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದರು. `ಪ್ರಚಂಡ ಕುಳ್ಳ’ ಚಿತ್ರದಲ್ಲಿ ವಿಷ್ಣುವರ್ಧನ್, `ಶ್ರೀ ಮಂಜುನಾಥ’ ಚಿತ್ರದಲ್ಲಿ ತೆಲುಗು ನಟ ಚಿರಂಜೀವಿ, ಶಿವನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಿದೆ.

ಜನಪ್ರಿಯ ಶಿವಗೀತೆಗಳು
ಶಿವಸ್ತುತಿ, ಶಿವಭಕ್ತಿಗೀತೆಗಳು, ಶಿವರಾತ್ರಿ ಮಹಾತ್ಮೆಯ ನೂರಾರು ಧ್ವನಿಸುರಳಿಗಳು ಮಾರುಕಟ್ಟೆಯಲ್ಲಿವೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ, ಬಿ.ಕೆ.ಸುಮಿತ್ರ, ಕಸ್ತೂರಿ ಶಂಕರ್, ಡಾ.ರಾಜ್, ರಾಜೇಶ್ ಕೃಷ್ಣನ್ ಮತ್ತಿತರರು ಶಿವಗೀತೆಗಳಿಗೆ ದನಿಯಾಗಿದ್ದಾರೆ. ಸಿನಿಮಾಗಳಲ್ಲಿ ಬಳಕೆಯಾಗಿರುವ ಹಲವಾರು ಗೀತೆಗಳು ಪ್ರತೀ ಶಿವರಾತ್ರಿಯಂದು ತಪ್ಪದೆ ಜನರ ಕಿವಿ ಮೇಲೆ ಬೀಳುತ್ತವೆ. ಶಿವಪ್ಪ ಕಾಯೋ ತಂದೆ… (ಬೇಡರ ಕಣ್ಣಪ್ಪ), ಶಿವ ಶಿವ ಎಂದರೆ ಭಯವಿಲ್ಲ… (ಭೂಮಿಗೆ ಬಂದ ಭಗವಂತ), ಏಕೋ ಈ ಕೋಪ ಶಂಕರಾ… (ಭಕ್ತ ಸಿರಿಯಾಳ), ಶಿವನೊಲಿದರೆ… (ಚೆಲ್ಲಿದ ರಕ್ತ), ಏಳು ಶಿವ ಏಳು ಶಿವ.. (ಹಾಲುಂಡ ತವರು) ಸಿನಿಮಾಗಳಲ್ಲಿ ಬಳಕೆಯಾಗಿರುವ ಕೆಲವು ಜನಪ್ರಿಯ ಶಿವಗೀತೆಗಳು.
