ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಜೂನ್ 20 ರಂದು ‘ರಾಯರ ದರ್ಶನ’ ಆಲ್ಬಂ ಸಾಂಗ್ ಬಿಡುಗಡೆ

ಪೋಸ್ಟ್ ಶೇರ್ ಮಾಡಿ
ಜೂನ್ 20 ರಂದು 'ರಾಯರ ದರ್ಶನ' ಆಲ್ಬಂ ಸಾಂಗ್ ಬಿಡುಗಡೆ

ಸುಗುಣ ರಘು ನಿರ್ಮಾಣ, ರಘು ಭಟ್‌ ನಿರ್ದೇಶನದ ‘ರಾಯರ ದರ್ಶನ’ ಅಲ್ಬಂ ಸಾಂಗ್‌ ಇದೇ ಜೂನ್‌ 20ರಂದು ಲೋಕಾರ್ಪಣೆಗೊಳ್ಳಲಿದೆ. ಇದೀಗ ಸಿದ್ಧವಾಗಿರುವ ಟೀಸರ್‌ ಅನ್ನು ನಟಿ ತಾರಾ ಬಿಡುಗಡೆಗೊಳಿಸಿದ್ದಾರೆ.

ಮಂತ್ರಾಲಯದ ಗುರು ಶ್ರೀರಾಘವೇಂದ್ರಸ್ವಾಮಿಗಳ ಕುರಿತು ಈವರೆಗೂ ಸಾಕಷ್ಟು ಭಕ್ತಿಗೀತೆಗಳು ಹಾಗೂ ಆಲ್ಬಂ ಸಹ ಬಂದಿದೆ. ಆದರೆ ಈವರೆಗೂ ಯಾರು ಹೇಳದ ಹಾಗೂ ತೋರಿಸದ ರಾಯರ ಬಗೆಗಿನ ಕೆಲವು ವಿಶೇಷ ವಿಷಯಗಳು ಹಾಗೂ ಮಂತ್ರಾಲಯದಲ್ಲಿ ರಾಯರಿಗೆ ವರ್ಷಾವಧಿ ನಡೆಯುವ ವಿಶೇಷ ಉತ್ಸವಗಳನ್ನು ಕಣ್ತುಂಬಿಕೊಳ್ಳುವ ‘ರಾಯರ ದರ್ಶನ’ ಆಲ್ಭಂ ಬಿಡುಗಡೆಗೆ ಸಿದ್ದವಾಗಿದೆ. ಲಕ್ಷ್ಮೀ ಗಣೇಶ ಪ್ರೊಡಕ್ಷನ್ಸ್ ಹಾಗೂ ದಿ ನ್ಯೂ ಇಂಡಿಯನ್ ಟೈಮ್ಸ್ ಲಾಂಛನದಲ್ಲಿ ಸುಗುಣ ರಘು ನಿರ್ಮಾಣ ಮಾಡಿರುವ ಈ ಆಲ್ಬಂನ ಲೋಕಾರ್ಪಣೆ ಜೂನ್ 20 ರಂದು ಮಂತ್ರಾಲಯದಲ್ಲಿ ಅದ್ದೂರಿಯಾಗಿ ನೆರವೇರಲಿದೆ. ಮಂತ್ರಾಲಯದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥರ ದಿವ್ಯ ಸಾನಿಧ್ಯದಲ್ಲಿ ಹಾಗೂ ದೇಶದ ವಿವಿಧ ವಿಭಾಗದ ಗಣ್ಯರ ಉಪಸ್ಥಿತಿಯಲ್ಲಿ ಈ ಸಮಾರಂಭ ನಡೆಯಲಿದೆ ಹಾಗೂ ಇದೇ ಸಂಸ್ಥೆಯಿಂದ ಮಾಧ್ಯಮದವರಿಗೆ ನೀಡಲಾಗುವ “TNIT” ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ ನಲ್ಲಿ ನೆರವೇರಲಿದೆ.

ಈ ಎರಡು ಸಮಾರಂಭಗಳ ಕುರಿತು ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಲಕ್ಷ್ಮೀ ಗಣೇಶ ಪ್ರೊಡಕ್ಷನ್ಸ್ ಹಾಗೂ ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆಯ ಮುಖ್ಯಸ್ಥರಾದ ರಘು ಭಟ್ ಹಾಗೂ ಸುಗುಣ ರಘು ಉಪಸ್ಥಿತರಿದ್ದರು. ‘ರಾಯರ ದರ್ಶನ’ ಆಲ್ಬಂ ನ ಟೀಸರ್ ಅನ್ನು ಹಿರಿಯ ನಟಿ ತಾರಾ ಅನುರಾಧ ಅನಾವರಣ ಮಾಡಿದರು. ಹಿರಿಯ ಪತ್ರಕರ್ತರಾದ ಗಣೇಶ್ ಕಾಸರಗೋಡು, ಮಹೇಶ್ ಗೌಡ, ಮಂತ್ರಾಲಯ ಮಠದ ಶ್ರೀನಿಧಿ ಕರಣಂ, ಶ್ರೀಶ ಜೋಯಿಸ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಆಲ್ಬಂ ಸಾಂಗ್ ಗೆ ಸಂಗೀತ ಸಂಯೋಜಿಸಿರುವ ಅಜನೀಶ್ ಲೋಕನಾಥ್, ಸಿ.ಆರ್.ಬಾಬಿ, ಹಾಡು ಬರೆದಿರುವ ನಾಗಾರ್ಜುನ ಶರ್ಮ ಹಾಗೂ ಗಾಯಕ ಅಬ್ಬಿ ವಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಮಂತ್ರಾಲಯದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥರ ಅಡಿದಾವರೆಗಳಿಗೆ ವಂದಿಸಿ ಮಾತು ಆರಂಭಿಸಿದ ಈ ಎರಡು ಕಾರ್ಯಕ್ರಮಗಳ ಸಾರಥ್ಯ ವಹಿಸಿರುವ ರಘು ಭಟ್, ‘ಈ ಆಲ್ಬಂ ಸಾಂಗ್ ನಿರ್ಮಾಣವಾಗಲು ಒಂದು ವರ್ಷ ಸಮಯ ಬೇಕಾಯಿತು. ಕಾರಣ, ಇದರಲ್ಲಿ ಮಂತ್ರಾಲಯದಲ್ಲಿ ನಡೆಯುವ ಪೂಜೆ ಹಾಗೂ ವೈಭವೋತ್ಸವ, ಆರಾಧನೆ ಮುಂತಾದ ಉತ್ಸವಗಳ ವಿವರಣೆ ಇದೆ. ಅಜನೀಶ್ ಲೋಕನಾಥ್ ಹಾಗೂ ಸಿ ಆರ್ ಬಾಬಿ ಅವರ ಅದ್ಭುತ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಆಲ್ಬಂ ಸಾಂಗ್ ಅನ್ನು “ಕಾಂತಾರ” ಸಿನಿಮಾದ ಬ್ರಹ್ಮಕಳಶ ಹಾಡಿನ ಖ್ಯಾತಿಯ ಅಬ್ಬಿ ವಿ ಹಾಡಿದ್ದಾರೆ. ನಾಗಾರ್ಜುನ ಶರ್ಮ ಬರೆದಿದ್ದಾರೆ. ಜೂನ್ 20 ರಂದು ಮಂತ್ರಾಲಯದ ರಾಯರ ಸನ್ನಿಧಿಯಲ್ಲೇ “ರಾಯರ ದರ್ಶನ” ಆಲ್ಬಂ ಸಾಂಗ್ ಅದ್ದೂರಿಯಾಗಿ ಅನಾವರಣವಾಗಲಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಸಂಜೆ ಕೂಡ ಅಂದು ಇರುತ್ತದೆ. ಮೂರು ರಾಜ್ಯಗಳ ಉಪ ಮುಖ್ಯಮಂತ್ರಿಗಳನ್ನು ಸಮಾರಂಭಕ್ಕೆ ಆಹ್ವಾನಿಸುವ ಪ್ರಯತ್ನ ನಡೆಯುತ್ತಿದೆ’ ಎಂದರು.
‘ನಾನು ಚಿಕ್ಕವಯಸ್ಸಿನಿಂದಲೂ “ಪೂಜ್ಯಾಯಾ ರಾಘವೇಂದ್ರಯಾ” ಶ್ಲೋಕ ಹೇಳಿಯೆ ಆಚೆ ಹೊಗುತ್ತಿದ್ದದ್ದು ಎಂದು ಮಾತನಾಡಿದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ತಮ್ಮ ಜೀವನದಲ್ಲಿ ಆದ ರಾಯರ ಅನುಗ್ರಹವನ್ನು ಮಾತುಗಳ ಮೂಲಕ ಹಂಚಿಕೊಂಡರು. ನಾನು ಹಾಗೂ ಬಾಬಿ ಅವರು ರಾಯರ ಮೇಲಿನ ಅಪಾರ ಭಕ್ತಿಯಿಂದ ಈ ಆಲ್ಬಂ ಗೆ ಸಂಗೀತ ಸಂಯೋಜನೆ ಮಾಡಿದ್ದೇವೆ. ಇದು ನಮ್ಮ ಪುಣ್ಯ. “ಕಾಂತಾರ” ದ “ಬ್ರಹ್ಮಕಳಶ”ದ ಹಾಡನ್ನು ಹಾಡಿರುವ ಕೆನಡಾ ಮೂಲದ ಅಬ್ಬಿ ವಿ ಅವರು ರಾಯರ ಮೇಲಿನ ಈ ಹಾಡನ್ನು ಬಹಳ ಸುಶ್ರಾವ್ಯವಾಗಿ ಹಾಡಿದ್ದಾರೆ. ಅಷ್ಟೇ ಚೆನ್ನಾಗಿ ನಾಗಾರ್ಜುನ ಶರ್ಮ ಬರೆದಿದ್ದಾರೆ’ ಎಂದರು.

ಟೀಸರ್ ಬಿಡುಗಡೆ ಮಾಡಿ ಅತಿಥಿಗಳಾಗಿ ಆಗಮಿಸಿದ್ದ ನಟಿ ತಾರಾ ಅನುರಾಧ, ಹಿರಿಯ ಪತ್ರಕರ್ತರಾದ ಗಣೇಶ್ ಕಾಸರಗೋಡು, ” ಕ್ಯೂ.ಪಿ.ಎಲ್” ನ ಮುಖ್ಯಸ್ಥರಾದ ಮಹೇಶ್ ಗೌಡ ಮಾತನಾಡಿ, ರಘು ಭಟ್ ದಂಪತಿಗಳ ಎರಡು ಪ್ರಯತ್ನಕ್ಕೆ ಯಶಸ್ಸನ್ನು ಕೋರಿದರು. ಗಾಯಕ ಅಬ್ಬಿ ವಿ “ರಾಯರ ದರ್ಶನ” ಆಲ್ಬಂನ ಕೆಲವು ಸಾಲುಗಳನ್ನು ಹಾಡಿದರು. ಗೀತರಚನೆಕಾರ ನಾಗಾರ್ಜುನ ಶರ್ಮ ಹಾಡು ಹುಟ್ಟಿದ ಸಮಯದ ಕುರಿತು ವಿವರಣೆ ನೀಡಿದರು. ಮಂತ್ರಾಲಯದಿಂದ ಬಂದಿದ್ದ ಶ್ರೀನಿಧಿ ಕರಣಂ ಹಾಗೂ ಶ್ರೀಶ ಜೋಯಿಸ್ ಅವರು ಜೂನ್ 20 ರ “ರಾಯರ ದರ್ಶನ” ಆಲ್ಬಂ ಬಿಡುಗಡೆ ಸಮಾರಂಭಕ್ಕೆ ಮಂತ್ರಾಲಯಕ್ಕೆ ಎಲ್ಲರನ್ನು ಆಹ್ವಾನಿಸಿದರು.

ಈ ಬರಹಗಳನ್ನೂ ಓದಿ