ಪವನ್ ಒಡೆಯರ್ ನಿರ್ದೇಶನದ ‘ಬೇಲ್’ ಚಿತ್ರದ ‘ಚೆಲುವೆ ಕೇಳೇ ಚೆಲುವೆ’ ಹಾಡು ಬಿಡುಗಡೆಯಾಗಿದೆ. ನಿರ್ದೇಶಕ ಪವನ್ ಒಡೆಯರ್ ಸಾಹಿತ್ಯ ಬರೆದಿರುವ ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಕೆ.ಎಸ್. ಹರಿಶಂಕರ್ ಹಾಗೂ ಹರ್ಷಿಕಾ ದೇವನಾಥ್ ಹಾಡಿದ್ದಾರೆ. ಯುವ ಪ್ರತಿಭೆಗಳಾದ ದೀಕ್ಷಿತ್ ಶೆಟ್ಟಿ ಮತ್ತು ಸಂಜನಾ ಆನಂದ್ ಜೋಡಿ ಮೇಲೆ ಈ ಹಾಡು ಪಿಕ್ಚರೈಸ್ ಆಗಿದೆ.
ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ಆಕ್ಷನ್ ಎಂಟರ್‌ಟೇನರ್ ‘ಬೇಲ್’ ಚಿತ್ರದಿಂದ ಮೊದಲ ರೊಮ್ಯಾಂಟಿಕ್ ಮೆಲೋಡಿ ‘ಚೆಲುವೆ ಕೇಳೇ ಚೆಲುವೆ’ ಬಿಡುಗಡೆಯಾಗಿದ್ದು, ಸಂಗೀತ ಪ್ರೇಮಿಗಳ ಮನಗೆದ್ದಿದೆ. ಈ ಇಂಪಾದ ಗೀತೆಯಲ್ಲಿ ಯುವ ಪ್ರತಿಭೆಗಳಾದ ದೀಕ್ಷಿತ್ ಶೆಟ್ಟಿ ಮತ್ತು ಸಂಜನಾ ಆನಂದ್ ಅವರ ಮುದ್ದಾದ ಕೆಮಿಸ್ಟ್ರಿ ಪ್ರೇಕ್ಷಕರನ್ನು ಆಕರ್ಷಿಸಿದೆ. ಸ್ವತಃ ನಿರ್ದೇಶಕ ಪವನ್ ಒಡೆಯರ್ ಸಾಹಿತ್ಯ ಬರೆದಿರುವ ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಕೆ.ಎಸ್. ಹರಿಶಂಕರ್ ಹಾಗೂ ಹರ್ಷಿಕಾ ದೇವನಾಥ್ ಹಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಹಾಡಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಟೀಸರ್‌ನಲ್ಲಿ ಶಿವಣ್ಣ ತಮ್ಮ ಪವರ್‌ಫುಲ್ ಲುಕ್ ಹಾಗೂ ಖಡಕ್ ಡೈಲಾಗ್‌ಗಳ ಮೂಲಕ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹುಟ್ಟುಹಾಕಿದ್ದರು. ಮಾಸ್ ಆಕ್ಷನ್ ಕಥಾಹಂದರ ಹೊಂದಿರುವ ಈ ಸಿನಿಮಾದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನೂ ಪವನ್ ಒಡೆಯರ್ ಅವರೇ ಹೊತ್ತುಕೊಂಡಿದ್ದಾರೆ.
‘ಟಾಕ್ಸಿಕ್’ ಮತ್ತು ‘ಜನ ನಾಯಗನ್’ ಚಿತ್ರಗಳನ್ನು ನಿರ್ಮಿಸಿದ್ದ ಪ್ರತಿಷ್ಠಿತ ‘ಕೆವಿಎನ್ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ್ ಅವರು ‘ಬೇಲ್’ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಶಿವರಾಜ್‌ಕುಮಾರ್ ಅವರ ಜೊತೆಗೆ ಮಲಯಾಳಂನ ಖ್ಯಾತ ನಟ ಜಯರಾಮ್, ಸಾಯಿಕುಮಾರ್, ‘ಲೂಸ್ ಮಾದ’ ಯೋಗಿ, ದೀಕ್ಷಿತ್ ಶೆಟ್ಟಿ, ಸಂಜನಾ ಆನಂದ್ ಹಾಗೂ ಕಿರಣ್ ಶ್ರೀನಿವಾಸ್ ಸೇರಿದಂತೆ ಬಹುದೊಡ್ಡ ತಾರಾಗಣವೇ ಜತೆಯಾಗಿದೆ. ಗಾಂಧಿ ಜಯಂತಿಯ ಪ್ರಯುಕ್ತ ಅಕ್ಟೋಬರ್ 2 ರಂದು ‘ಬೇಲ್’ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ.







