ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಸಾಹಸಿ ಚಿತ್ರಕರ್ಮಿ ದ್ವಾರಕೀಶ್

ಪೋಸ್ಟ್ ಶೇರ್ ಮಾಡಿ

ಕನ್ನಡ ಚಿತ್ರರಂಗದಲ್ಲಿ ಹೊಸತನಕ್ಕಾಗಿ ಮಿಡಿಯುತ್ತಿದ್ದ ನಟ, ನಿರ್ಮಾಪಕ ದ್ವಾರಕೀಶ್. ಕನ್ನಡ ಸಿನಿಮಾ ಮಾರುಕಟ್ಟೆ ಅಷ್ಟೇನೂ ವಿಸ್ತಾರವಾಗಿಲ್ಲದ ಕಾಲದಲ್ಲೇ ದೊಡ್ಡ ಬಜೆಟ್‌ನ ಅದ್ಧೂರಿತನದ ಚಿತ್ರಗಳನ್ನು ತೆರೆಗೆ ತಂದವರು. ಇಂದು ಅವರ 79ನೇ ಹುಟ್ಟುಹಬ್ಬ. ಅವರ ಹಲವು ಚಿತ್ರಗಳಿಗೆ ಸ್ಥಿರಚಿತ್ರ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ಪ್ರಗತಿ ಅಶ್ವತ್ಥ ನಾರಾಯಣ ಅವರು ತಾವು ಕಂಡ ದ್ವಾರಕೀಶ್ ಬಗ್ಗೆ ಇಲ್ಲಿ ಹೇಳಿಕೊಂಡಿದ್ದಾರೆ.

ವೃತ್ತಿ ಬದುಕಿನಲ್ಲಿ ನಾನು ಕಂಡ ಕಡು ಸಿನಿಮಾ ವ್ಯಾಮೋಹಿ ಅಂದರೆ ದ್ವಾರಕೀಶ್. ಸಿನಿಮಾ ಬಗ್ಗೆ ವಿಪರೀತ ಪ್ರೀತಿಯಿದ್ದ ದ್ವಾರಕೀಶ್ ಎಂಥ ಸವಾಲಿಗೂ ಸನ್ನದ್ಧರಾಗುತ್ತಿದ್ದರು. ಸದಾ ಹೊಸ ಪ್ರಯೋಗಗಳಿಗೆ ಮುಂದಾಗುತ್ತಿದ್ದ ದ್ವಾರಕೀಶ್ ಹಣಕಾಸಿನ ವಿಚಾರದಲ್ಲಿ ತಲೆ ಕೆಡಿಸಿಕೊಂಡವರೇ ಅಲ್ಲ. ಒಟ್ಟಾರೆ ಚಿತ್ರ ಸೊಗಸಾಗಿ ಮೂಡಿಬರಬೇಕೆನ್ನುವುದಷ್ಟೇ ಅವರ ಗುರಿಯಾಗಿರುತ್ತಿತ್ತು. ಇದಕ್ಕಾಗಿ ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳಲೂ ಹಿಂಜರಿಯುತ್ತಿರಲಿಲ್ಲ. ಆರ್ಥಿಕ ಸಂಕಷ್ಟದಲ್ಲೇ ಚಿತ್ರಗಳು ತಯಾರಾಗುತ್ತಿದ್ದ ಆ ಕಾಲದಲ್ಲಿ ಕಲಾವಿದರಿಗೆ, ತಂತ್ರಜ್ಞರಿಗೆ ಅವರು ಮುಂಗಡವಾಗಿಯೇ ಹಣ ಕೊಡುತ್ತಿದ್ದರು. ನಾನು ಕೈತುಂಬಾ ದುಡ್ಡು ನೋಡಿದ್ದು ಕೂಡ ಅವರ ಚಿತ್ರಗಳಲ್ಲೇ. ಅವರ ನಿರ್ಮಾಣ ಸಂಸ್ಥೆಯಲ್ಲಿ ಎಲ್ಲಾ ಕಾರ್ಯಗಳೂ ವ್ಯವಸ್ಥಿತವಾಗಿ ನಡೆಯುತ್ತಿದ್ದವು. ಶೂಟಿಂಗ್ ಪಿಕ್‍ಅಪ್ ಮತ್ತು ಡ್ರಾಪ್‍ಗೆ ಕಾರುಗಳು ಕಲಾವಿದರ ಮನೆಯ ಬಾಗಿಲಿಗೇ ಬರುತ್ತಿದ್ದವು. ಸೆಟ್‍ನಲ್ಲಿದ್ದ ಎಲ್ಲರಿಗೂ ರುಚಿಕರ ಊಟ – ತಿಂಡಿಯ ಸೇವೆಯಾಗುತ್ತಿತ್ತು. ಒಟ್ಟಾರೆ ಎಲ್ಲರೂ ಸಂತೃಪ್ತಿಯಿಂದ ಕೆಲಸ ಮಾಡುತ್ತಿದ್ದರು.

ದ್ವಾರಕೀಶ್ ತಲೆ ತುಂಬಾ ಬರೀ ಕನಸುಗಳೇ ಇರುತ್ತಿದ್ದವು. ಅಷ್ಟೇ ಅಲ್ಲ ಕನಸುಗಳನ್ನು ಸಾಕಾರಗೊಳಿಸಲು ಅವರು ಶ್ರಮಿಸುತ್ತಿದ್ದರು. ಟ್ರೆಂಡ್ ಸೆಟರ್ ಸಿನಿಮಾ `ಗುರು ಶಿಷ್ಯರು’ ಕೂಡ ಅಂಥದ್ದೇ ಒಂದು ಪ್ರಯೋಗ. ತೆಲುಗಿನ `ಪರಮಾನಂದಯ್ಯ ಶಿಷ್ಯಲು ಕಥಾ’ ಚಿತ್ರವನ್ನು ಶ್ರೀಮಂತವಾಗಿ ಕನ್ನಡಕ್ಕೆ (ಗುರು ಶಿಷ್ಯರು) ತಂದರು. ಈ ಚಿತ್ರದಲ್ಲಿ ಕನ್ನಡದ ಎಲ್ಲಾ ಹಾಸ್ಯ ಕಲಾವಿದರು ಇರಬೇಕೆನ್ನುವುದು ಅವರ ಆಸೆಯಾಗಿತ್ತು. ಅದರಂತೆ ಎಲ್ಲರನ್ನೂ ಒಂದೆಡೆ ಸೇರಿಸಿದರು. ಆ ವೇಳೆಗಾಗಲೇ ಹಾಸ್ಯನಟ ನರಸಿಂಹರಾಜು ನಮ್ಮನ್ನಗಲಿದ್ದರು. ಅವರೊಬ್ಬರು ತಮ್ಮ ಚಿತ್ರದಲ್ಲಿ ನಟಿಸಲು ಸಾಧ್ಯವಾಗಲಿಲ್ಲ ಎಂದು ದ್ವಾರಕೀಶ್‍ಗೆ ತುಂಬಾ ನೊಂದುಕೊಂಡಿದ್ದರು. ಚಿತ್ರಕ್ಕಾಗಿ ಕಂಠೀರವ ಸ್ಟುಡಿಯೋದಲ್ಲಿ ದುಬಾರಿ ಬೃಹತ್ ಸೆಟ್‍ಗಳನ್ನು ಹಾಕಲಾಗಿತ್ತು. ವೈಭವದ ಸೆಟ್‍ಗೆ ಹಣ ಚೆಲ್ಲಿದ್ದನ್ನು ಉದ್ಯಮದ ಹಲವರು ಆಡಿಕೊಂಡಿದ್ದರು. ಯಾರ ಮಾತುಗಳಿಗೂ ತಲೆಕೆಡಿಸಿಕೊಳ್ಳದ ದ್ವಾರಕೀಶ್ ಚಿತ್ರೀಕರಣದ ಯಾವ ಹಂತದಲ್ಲೂ ರಾಜಿಯಾಗಲಿಲ್ಲ.

‘ಕಳ್ಳ ಕುಳ್ಳ’ (1975) ಚಿತ್ರದಲ್ಲಿ ದ್ವಾರಕೀಶ್, ಜಯಲಕ್ಷ್ಮಿ

ದರ್ಬಾರ್ ಸ್ಟಿಲ್ | `ಗುರು ಶಿಷ್ಯರು’ ಚಿತ್ರಕ್ಕಾಗಿ ಕಂಠೀರವ ಸ್ಟುಡಿಯೋದ ದೊಡ್ಡ ಫ್ಲೋರ್‌ನಲ್ಲಿ ದರ್ಬಾರ್ ಸೆಟ್ ಹಾಕಲಾಗಿತ್ತು. ಅತ್ಯಂತ ಶ್ರೀಮಂತವಾಗಿದ್ದ ಸೆಟ್‍ನ ದೃಶ್ಯದಲ್ಲಿ ನೂರೈವತ್ತಕ್ಕೂ ಹೆಚ್ಚು ಕಲಾವಿದರಿದ್ದರು! ಮಹಾರಾಜನ (ವಿಷ್ಣುವರ್ಧನ್) ಒಡ್ಡೋಲಗದ ಸುಮಾರು ಇನ್ನೂರು ಅಡಿ ಅಂತರವನ್ನು ಒಮ್ಮೆಗೇ ಸೆರೆಹಿಡಿಯುವಂತೆ ಕ್ರೇನ್ ಮೇಲೆ ಕ್ಯಾಮರಾ ಅಳವಡಿಸಿ ಚಿತ್ರಿಸಲಾಗುತ್ತಿತ್ತು. ಮೊದಲ ಶಾಟ್ ಮುಗಿಯುತ್ತಿದ್ದಂತೆ ಸ್ಟಿಲ್ಸ್ ತೆಗೆಯುವಂತೆ ದ್ವಾರಕೀಶ್ ನನಗೆ ಸೂಚಿಸಿದರು. ಸ್ಟಿಲ್‍ಗಳಲ್ಲಿ ಕೂಡ ಇಡೀ ದರ್ಬಾರು ಹಾಗೂ ಪ್ರತಿಯೊಬ್ಬ ಕಲಾವಿದರೂ ಕಾಣಿಸುವಂತಿರಬೇಕು ಎಂದು ದ್ವಾರಕೀಶ್ ಅಪ್ಪಣೆ ಮಾಡಿದ್ದರು. `ಕ್ರೇನ್ ಹತ್ತಿ ತೆಗೆಯಲು ನನ್ನಿಂದಾಗದು. ಅಲ್ಲದೆ ಕ್ರೇನ್ ಮೂವ್ ಆದರೆ ಸ್ಟಿಲ್ಸ್ ಹಾಳಾಗುತ್ತವೆ’ ಎಂದೆ ನಾನು.

ದ್ವಾರಕೀಶ್ ಹಿಡಿದ ಪಟ್ಟು ಬಿಡಲೇ ಇಲ್ಲ. ಸ್ಟುಡಿಯೋ ಗೋಡೌನ್‍ನಿಂದ ಎತ್ತರದ ಸ್ಟೂಲ್ ತರುವಂತೆ ಸಹಾಯಕರಿಗೆ ಸೂಚಿಸಿದರು. ಹತ್ತನ್ನೆರಡು ಜನ ಅದನ್ನು ಹೊತ್ತು ತಂದರು. ಇಡೀ ದರ್ಬಾರನ್ನು ಕ್ಯಾಮರಾದ ಫ್ರೇಮ್‍ನಲ್ಲಿ ತರುವುದು ನಿಜಕ್ಕೂ ಸವಾಲು. ಮತ್ತೊಂದೆಡೆ ದ್ವಾರಕೀಶ್ ನನಗೋಸ್ಕರ ಎಷ್ಟೊಂದು ರಿಸ್ಕ್, ಸಮಯ ವ್ಯಯಿಸುತ್ತಿದ್ದರು. ನಾನು ಕ್ಯಾಮರಾ ಹಿಡಿದು ಎತ್ತರದ ಸ್ಟೂಲ್ ಹತ್ತಿದೆ. ಹೆಚ್ಚು ಮೂವ್‍ಮೆಂಟ್ ಮಾಡದೆ ಸ್ಟಡೀ ಆಗಿರಿ ಎಂದು ಕಲಾವಿದರೆಲ್ಲರಿಗೂ ತಿಳಿಸಿದೆ. ಮಾಕ್ಸಿಮಮ್ ಅಪರ್ಚರ್‌ನಲ್ಲಿ ಸ್ಲೋ ಸ್ಪೀಡ್‍ನೊಂದಿಗೆ ಕ್ಲಿಕ್ಕಿಸಿದ ಫೋಟೋ ಸೊಗಸಾಗಿ ಮೂಡಿಬಂತು.

ಇದೇ ಚಿತ್ರದ ಮತ್ತೊಂದು ಸನ್ನಿವೇಶವೂ ನನಗೆ ಚೆನ್ನಾಗಿ ನೆನಪಿದೆ. ಕೈಲಾಸದ ಸೆಟ್‍ನಲ್ಲಿ ಹಿರೋಯಿನ್ ಮಂಜುಳಾ ನೃತ್ಯ ಮಾಡುವ ಸನ್ನಿವೇಶವನ್ನು ಚಿತ್ರಿಸಲಾಗುತ್ತಿತ್ತು. ಆ ದೃಶ್ಯಗಳಲ್ಲಿ ಬಿಸಿ ನೀರಿಗೆ ಡ್ರೈ ಐಸ್ ಹಾಕಿ ಹೊಗೆ ಬರುವಂತೆ ಮಾಡುತ್ತಾರೆ. ಇದೆಲ್ಲವನ್ನೂ ಕಲಾ ನಿರ್ದೇಶಕ ನಿರ್ವಹಿಸಬೇಕು. ಅವರು ಹೆಚ್ಚು ಡ್ರೈ ಐಸ್ ತರಿಸಿರಲಿಲ್ಲ. ಹಾಗಾಗಿ ಸ್ಟಿಲ್ಸ್ ಫೋಟೋ ತೆಗೆಯುವಾಗ ಡ್ರೈ ಐಸ್ ಹಾಕೋದು ಬೇಡವೆಂದರು. ದ್ವಾರಕೀಶ್‍ಗೆ ಕೋಪ ಬಂದಿತು. `ದೊಡ್ಡ ಚಿತ್ರ ಮಾಡ್ತಾ ಇದ್ದೀವಿ. ಯಾವ ಕಾರಣಕ್ಕೂ ಚಿಕ್ಕ ತಪ್ಪುಗಳೂ ಆಗಬಾರದು. ಸ್ಟಿಲ್‍ಗಳಲ್ಲೂ ಸ್ಮೋಕಿಂಗ್ ಎಫೆಕ್ಟ್ ಬೇಕೇಬೇಕು’ ಎನ್ನುತ್ತಾ ತಾವು ಅಂದುಕೊಂಡಂತೆಯೇ ಸ್ಟಿಲ್ಸ್ ತೆಗೆಸಿದರು.

‘ಕೂಡಿ ಬಾಳೋಣ’ (1975) ಚಿತ್ರದಲ್ಲಿ ಬಾಲಕೃಷ್ಣ, ದ್ವಾರಕೀಶ್‌

ಹಠವಾದಿ | ದ್ವಾರಕೀಶ್ ನಿರ್ಮಾಣದಲ್ಲಿ ತಯಾರಾದ `ನ್ಯಾಯ ಎಲ್ಲಿದೆ?’ ಚಿತ್ರದಲ್ಲಿ ಶಂಕರನಾಗ್ ಹೀರೋ. ಈ ಚಿತ್ರದ ವಿತರಣೆ ಹಕ್ಕುಗಳನ್ನು ನಿರ್ಮಾಪಕ ವೀರಾಸ್ವಾಮಿ ಅವರು ಪಡೆದಿದ್ದರು. ಕಟೌಟ್ ತಯಾರಿಸಲು ವಿತರಕರಿಗೆ ಚಿತ್ರದ ಹೀರೋನ ಉತ್ತಮ ಗುಣಮಟ್ಟದ ಸ್ಟಿಲ್‍ಗಳ ಅಗತ್ಯವಿರುತ್ತದೆ. ವೀರಾಸ್ವಾಮಿ ಅವರಿಗೆ ಶಂಕರನಾಗ್‍ರ ಸ್ಟಿಲ್‍ಗಳು ಸಿಕ್ಕಿರಲಿಲ್ಲ. ಇದನ್ನು ನಿರ್ಮಾಪಕ ದ್ವಾರಕೀಶ್ ಗಮನಕ್ಕೆ ತಂದಿದ್ದರು. ದ್ವಾರಕೀಶ್, `ಕಟೌಟ್‍ಗೆ ಶಂಕರ್ ಸ್ಟಿಲ್ಸ್ ಬೇಕಂತೆ, ಯಾಕೆ ನೀನು ಕೊಟ್ಟಿಲ್ಲ?’ ಎಂದು ನನ್ನನ್ನು ಕೇಳಿದರು. `ನಾನೇನು ಮಾಡ್ಲಿ, ಶಂಕರ್ ಸದಾ ಅವಸರದಲ್ಲೇ ಇರ್ತಾರೆ..’ ಎಂದೆ. ಕೋಪಿಸಿಕೊಂಡ ದ್ವಾರಕೀಶ್, ಸೆಟ್‍ನಲ್ಲೇ ಇದ್ದ ಶಂಕರ್‍ರನ್ನು ತರಾಟೆಗೆ ತೆಗೆದುಕೊಂಡರು. ಸಮಸ್ಯೆ ಅರ್ಥ ಮಾಡಿಕೊಂಡ ಶಂಕರನಾಗ್ ನನ್ನ ಮೇಲೆ ಬೇಸರ ಮಾಡಿಕೊಳ್ಳಲಿಲ್ಲ. `ಎಷ್ಟು ಬೇಕೋ ಅಷ್ಟು ಸ್ಟಿಲ್ ತೆಗೆದುಕೊಳ್ಳಿ’ ಎಂದು ಕ್ಯಾಮರಾಗೆ ಪೋಸು ಕೊಟ್ಟರು. ಸ್ಟಿಲ್ಸ್‍ಗಳ ಸಲುವಾಗಿ ದ್ವಾರಕೀಶ್‍ರಿಂದ ಶಂಕರ್ ಬಯ್ಯಿಸಿಕೊಳ್ಳುವಂತಾಯ್ತಲ್ಲಾ ಎಂದು ನನಗೇ ಬೇಸರವಾಯ್ತು. ಹೀಗೆ ದ್ವಾರಕೀಶ್ ಸಿನಿಮಾಗೆ ಸಂಬಂಸಿದಂತೆ ಯಾವುದೇ ವಿಚಾರಕ್ಕೂ ರಾಜಿ ಆಗುತ್ತಿರಲಿಲ್ಲ. ಈ ವಿಷಯದಲ್ಲಿ ಯಾರಾದರೂ ತಕರಾರು ಎತ್ತಿದರೆ ಕೋಪ ಮಾಡಿಕೊಳ್ಳುತ್ತಿದ್ದರು. ಅವರ ವೃತ್ತಿಪರತೆಯನ್ನು ಪ್ರಶ್ನಿಸುವಂತೆಯೇ ಇರಲಿಲ್ಲ. ಹಾಗಾಗಿ ದ್ವಾರಕೀಶ್‍ರೊಂದಿಗೆ ಕೆಲಸ ಮಾಡಲು ನನಗೂ ಖುಷಿ, ಸವಾಲೆನಿಸುತ್ತಿತ್ತು.

(ಫೋಟೊಗಳು: ಪ್ರಗತಿ ಅಶ್ವತ್ಥ ನಾರಾಯಣ)

‘ಮಂಕುತಿಮ್ಮ’ (1980) ಚಿತ್ರದಲ್ಲಿ ದ್ವಾರಕೀಶ್‌

ಈ ಬರಹಗಳನ್ನೂ ಓದಿ