ಹುಣಸೂರು ಕೃಷ್ಣಮೂರ್ತಿ ನಿರ್ದೇಶನದಲ್ಲಿ ರಾಜಕುಮಾರ್ ನಟಿಸಿರುವ ‘ಜಗಮೆಚ್ಚಿದ ಮಗ’ ಸಿನಿಮಾ ಕಲರ್‌ನಲ್ಲಿ ಬಿಡುಗಡೆಯಾಗಲಿದೆ. ಎಸ್.ಉದಯಶಂಕರ್ ಅವರು ಇದಕ್ಕೆ ತಯಾರಿ ನಡೆಸುತ್ತಿದ್ದಾರೆ.
ಡಾ.ರಾಜಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ ‘ಜಗಮೆಚ್ಚಿದ ಮಗ’. ಕಪ್ಪು – ಬಿಳುಪಿನ ಈ ಚಿತ್ರ ಈಗ ಆಧುನಿಕ ತಂತ್ರಜ್ಞಾನದಿಂದ ಸಿಂಗಾರಗೊಂಡು ಬಿಡುಗಡೆಯಾಗುತ್ತಿದೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಈ ಚಿತ್ರ ಕಲರ್ ನಲ್ಲಿ ಬಿಡುಗಡೆಯಾಗಲಿದೆ. ನಿರ್ಮಾಪಕರಾಗಿ ಹಾಗೂ ವಿತರಕರಾಗಿ ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿರುವ ಎಸ್ ಉದಯಶಂಕರ್ ಅವರು ಚಿತ್ರವನ್ನು ಕಲರ್ ನಲ್ಲಿ ತರುವ ಪ್ರಯತ್ನ ಮಾಡಿದ್ದಾರೆ.
ಈ ಬಗ್ಗೆ ಮಾತನಾಡುವ ಉದಯಶಂಕರ್, ‘ನಾನು, ಡಾ.ರಾಜ್ ಅವರ ಅಭಿಮಾನಿ. ನಿರ್ಮಾಪಕನಾಗಿ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದೇನೆ. ಕೆಲವು ಚಿತ್ರಗಳನ್ನು ವಿತರಣೆ ಮಾಡಿದ್ದೇನೆ. ಈಗ 1972ರಲ್ಲಿ ತೆರೆಕಂಡ ‘ಜಗಮೆಚ್ಚಿದ ಮಗ’ ಕಪ್ಪು ಬಿಳುಪಿನ ಚಿತ್ರವನ್ನು ಸಿನಿಮಾಸ್ಕೋಪ್ ಚಿತ್ರವಾಗಿಸಿ, 5.1 ಸೌಂಡ್ ಎಫೆಕ್ಟ್ ಅಳವಡಿಸಿ ಈಗಿನ ಆಧುನಿಕ ತಂತ್ರಜ್ಞಾನಕ್ಕೆ ತಕ್ಕ ಹಾಗೆ ಸಿದ್ದಮಾಡಿ ಇದೇ ಕನ್ನಡ ರಾಜ್ಯೋತ್ಸವಕ್ಕೆ ಬಿಡುಗಡೆ ಮಾಡಲು ತಯಾರಿ ನಡೆಸಿದ್ದೇನೆ. ಮುಂದೆ ‘ಮಂತ್ರಾಲಯ ಮಹಾತ್ಮೆ’ ಚಿತ್ರವನ್ನು ಕಲರ್ ನಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ. ಒಂದೂವರೆ ವರ್ಷಗಳಿಂದ ಚೆನ್ನೈನ ಪ್ರಸಾದ್ ಸ್ಟುಡಿಯೋದಲ್ಲಿ ಈ ಚಿತ್ರಕ್ಕೆ ಸಂಬಂಧಿಸಿದ ಕೆಲಸಗಳೆಲ್ಲಾ ನಡೆದಿದೆ. ಈಗ ಚಿತ್ರ ಹೊಸರೂಪದಲ್ಲಿ ತೆರೆಗೆ ಬರಲು ಸಿದ್ದವಾಗಿದೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಈ ಚಿತ್ರವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡುತ್ತಿದ್ದೇವೆ’ ಎನ್ನುತ್ತಾರೆ.







