ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ರಾಜಕುಮಾರ…

ಪೋಸ್ಟ್ ಶೇರ್ ಮಾಡಿ
ರಾಜಕುಮಾರ ಮಡಿವಾಳರ
ಕವಿ

ರಾಜ್ ಸಿನಿಮಾ ನೋಡಿ, ಪ್ರೀತಿಸಿದವರು, ಹೆಂಡತಿಯ ಮೇಲೆ ಕೈ ಎತ್ತುವುದನ್ನು ಬಿಟ್ಟವರು, ಸಾರಾಯಿ ಕುಡಿಯೋದು ಬಿಟ್ಟವರು, ಕುಟುಂಬ ಪ್ರೀತಿ, ಸಮಾಜ ಪ್ರೀತಿ, ದೈವ ಭಕ್ತಿ, ಕೃಷಿ, ದುಡಿದು ಬದುಕು, ಹೀಗೆ ಹಲವಾರು ಆದರ್ಶ ಮೈಗೂಡಿಸಿಕೊಂಡಿರುವ ಪ್ರತ್ಯಕ್ಷ ಸಾಕ್ಷಿಗಳು ಈಗಲೂ ನಮ್ಮ ಜೊತೆಗಿದ್ದಾರೆ – ಕವಿ ರಾಜಕುಮಾರ ಮಡಿವಾಳರ ಬರಹ.

ಇದು ಕೇವಲ ನನ್ನ ಮಾತಲ್ಲ, ನನ್ನ ತಲೆಮಾರಿನ ಹುಚ್ಚು, ನಮ್ಮ ಭಾವಕೋಶಕ್ಕೆ ಡಾ.ರಾಜ್ ಲಗ್ಗೆ ಇಟ್ಟ ಒಂದಿಷ್ಟು ರಾಜ್ ಅವರನ್ನ ತೆರೆದಿಡುತ್ತಿರುವೆ.

ಕಸ್ತೂರಿ ನಿವಾಸದ ಕೊಡುಗೈ ರಾಜ್, ಬಂಗಾರದ ಮನುಷ್ಯ ಖುಷಿಯಿಂದ ಬದುಕು ಕಟ್ಟಿಕೊಡುವ ರಾಜ್, ಸನಾದಿ ಅಪ್ಪಣ್ಣದ ಸಮಾಜದ ವೃದ್ಧ ಅಪ್ಪ ರಾಜ್, ಒಂದು ಕಡೆ ಆದರೆ, ಈ ಕಡೆ ಕಾರ್ಮಿಕ ಐಕ್ಯತೆಯ, ಬಡವರ ಬಂಧು, ಅನುರಾಗ ಅರಳಿತು, ಗಿರಿಕನ್ಯೆ ಆ ಕಾಲದಲ್ಲಿಯೇ ಗಿರಿಕನ್ಯೆ ಮುಖಾಂತರ ಹೆಣ್ಣಿನ ಮೇಲೆ ‘ಭೂತದ ಹೇಳಿಕೆ’ ಅಂತ ನಡೆಸುತ್ತಿದ್ದ ಶೋಷಣೆ, ಮೌಢ್ಯ ವಿರೋಧಿ ರಾಜ್.

ಅಲ್ಲಿಂದ ನೇರವಾಗಿ ದಶಕ ದಾಟಿ ಬಂದರೆ ಜೀವನ ಚೈತ್ರ, ಮದ್ಯಪಾನದ ವಿರೋಧಿಯಾಗಿ ನಿಲ್ಲುವುದು, ಅಂದ ಹಾಗೆ ನಾನು ಓದಿದ ನೆನಪು, ಆಗಿನ್ನೂ ಅವರ ಸಹೋದರ ಬದುಕಿದ್ದರು, ರಾಜ್ ಮನೆಗೆ ಒಂದು ಪ್ರಖ್ಯಾತ ಮದ್ಯಕಂಪನಿಯಿಂದ ಫೋನ್ ಬಂತಂತೆ, ಕಂಪನಿಗೆ ಸಂಬಂಧಿಸಿದ ಒಂದು ಕಟ್ಟಡ ಉದ್ಘಾಟನೆಗೆ ರಾಜ್ ಅವರಿಗೆ, ರಾಜ್ ಅವರಿಂದಲೇ ಉದ್ಘಾಟಿಸಬೇಕು ಅನ್ನೋದು ಕಂಪನಿಯವರ ಆಸೆ, ತಕ್ಷಣ ರಾಜ್ ಒಪ್ಪಿದಾರೆ.  ನಂತರ ವಿಷಯ ವರದಣ್ಣನಿಗೆ ತಿಳಿಸಿದರೆ, ಸ್ವಲ್ಪ ತಡೆದು ವರದಣ್ಣ, ನೋಡಪ್ಪ ಈಗಷ್ಟೆ ನೀನು ಜೀವನ ಚೈತ್ರ ಸಿನಿಮಾದಲ್ಲಿ ಇದನ್ನ ವಿರೋಧಿಸಿ ಜನ ಮೆಚ್ಚುಗೆ ಗಳಿಸಿದಿಯಾ, ಇನ್ನೊಂದ್ಸಲ ವಿಚಾರ ಮಾಡು ಅಂದಾಗ, ತಕ್ಷಣ ರಾಜ್ ಹೌದಲ್ವ, ಅಭಿಮಾನಿ ದೇವರುಗಳು ನನ್ನ ನಂಬಿದಾರೆ, ನಾವು ಸಿನಿಮಾದಲ್ಲಿ ಏನೋ ಹೇಳಿ, ಮತ್ತೊಂದು ರೀತಿಯಲ್ಲಿ ಬದುಕಬಾರದು ಅಂತ ತಕ್ಷಣವೆ ಕಂಪನಿಯವರಿಗೆ ಫೋನ್ ಮಾಡಿ, ತುಂಬು ವಿನಯದಿಂದ ಆಹ್ವಾನ ನಿರಾಕರಿಸಿದರಂತೆ. 

ಇದು ರಾಜ್ ಸ್ಟಾರ್ ನಟ, ಕನ್ನಡದ ಶಕ್ತಿ, ಕೋಟ್ಯಾಧೀಶ್ವರ ಆಗಿದ್ದಾಗಿಯೂ ರಾಜ್ ಅಂದರೆ ಬಿಳಿ ಅಂಗಿ, ಬಿಳಿ ಲುಂಗಿ, ಮುಗ್ಧ ಮಗು ನಗು, ಸರಳತೆ, ಸತ್ವಸಹಿತ ಆದರ್ಶ, ಅನುಕರಣೀಯ ವ್ಯಕ್ತಿತ್ವ. ರಾಜ್ ಸಿನಿಮಾ ನೋಡಿ, ಪ್ರೀತಿಸಿದವರು, ಹೆಂಡತಿಯ ಮೇಲೆ ಕೈ ಎತ್ತುವುದನ್ನು ಬಿಟ್ಟವರು, ಸಾರಾಯಿ ಕುಡಿಯೋದು ಬಿಟ್ಟವರು, ತಂದೆ ತಾಯಿಯನ್ನ ಗೌರವದಿಂದ ನೋಡಿಕೊಳ್ಳುವವರು, ಕುಟುಂಬ ಪ್ರೀತಿ, ಸಮಾಜ ಪ್ರೀತಿ, ದೈವ ಭಕ್ತಿ, ಕೃಷಿ, ದುಡಿದು ಬದುಕು, ಹೀಗೆ ಹಲವಾರು ಆದರ್ಶ ಮೈಗೂಡಿಸಿಕೊಂಡಿರುವ ಪ್ರತ್ಯಕ್ಷ ಸಾಕ್ಷಿಗಳು ಈಗಲೂ ನಮ್ಮ ಜೊತೆಗಿದ್ದಾರೆ, ಕೊನೆ ಘಳಿಗೆಯಲ್ಲಿ ಅವರು ನೇತ್ರದಾನ, ನೇತ್ರದಾನದ ಒಟ್ಟು ಪ್ರತಿಶತ ಏರಿಕೆ ಪ್ರತಿಷ್ಠಿತ ನೇತ್ರ ಆಸ್ಪತ್ರೆಗಳು ದಾಖಲಿಸಿವೆ, ಸಾಕಷ್ಟು ಜನ ಸ್ವಯಂಪ್ರೇರಿತರಾಗಿ ನೇತ್ರದಾನಕ್ಕೆ ಮುಂದಾಗಿದ್ದು ಪವಾಡ ಸದೃಶ್ಯ, ಒಬ್ಬ ನಟನನ್ನ ಆ ಮಟ್ಟಿಗೆ ಪ್ರೀತಿಸಲು ಜನ ಹುಚ್ಚರಲ್ಲ, ಜನ ಹುಚ್ಚರಲ್ಲ ಅಂದರೆ ರಾಜ್ ಅಷ್ಟು ಸ್ವಚ್ಛ ಮನುಷ್ಯ ಅಂತ. 

ಇಂಥಹ ಒಂದು ರಾಜ್ಯದ, ಒಂದಿಡಿ ರಾಜ್ಯದ ಜನರ ಐಕಾನ್ ಆದ, ಇಡಿ ಭಾರತೀಯ ಚಿತ್ರರಂಗದ ಮೇರು ನಕ್ಷತ್ರ ರಾಜ್ ಹುಟ್ಟು ಹಬ್ಬ ಇವತ್ತು, ಶುಭಾಶಯಗಳು ವರನಟರೆ.

ಈ ಬರಹಗಳನ್ನೂ ಓದಿ