
ಲೇಖಕ, ಸಿನಿಮಾ ವಿಶ್ಲೇಷಕ
ಭಾರತೀಯ ಸಿನಿಮಾದ ಗಮನಾರ್ಹ ಚಿತ್ರನಿರ್ದೇಶಕರಲ್ಲೊಬ್ಬರಾದ ಸತ್ಯಜಿತ್ ರೇ ಅಗಲಿದ ದಿನವಿಂದು (ಏಪ್ರಿಲ್ 23). ರೇ ನಿರ್ದೇಶನದ ಪ್ರಮುಖ ಚಿತ್ರಗಳಲ್ಲಿ ‘ಸದ್ಗತಿ’ ಮಹತ್ವದ ಪ್ರಯೋಗ. ಸಿನಿಮಾ ವಿಶ್ಲೇಷಕ ಬಿ. ಶ್ರೀಪಾದ ಭಟ್ ಅವರ ‘ಬಿಸಿಲು, ಬಯಲು, ನೆಳಲು’ ಹೊಸ ಅಲೆ ಸಿನಿಮಾ ಕುರಿತ ಪುಸ್ತಕದಿಂದ ಆಯ್ದ ‘ಸದ್ಗತಿ’ ಬರಹ ಇಲ್ಲಿದೆ.
ಎಪ್ಪತ್ತರ ದಶಕದಲ್ಲಿ ಕಾಂಗ್ರೆಸ್ ಕೃಪೆಯಿಂದ ರಾಜ್ಯಸಭಾ ಸದಸ್ಯೆಯಾಗಿದ್ದ ನಟಿ ನರ್ಗಿಸ್ ದತ್ ಸದನದಲ್ಲಿ ಮಾತನಾಡುತ್ತ ಸತ್ಯಜಿತ್ ರೇ ಅವರ ಸಿನಿಮಾಗಳು ಬಡತನವನ್ನು ವಿದೇಶಕ್ಕೆ ರಫ್ತು ಮಾಡುತ್ತವೆ, ದೇಶದ ಮಾನ ಹಾಳು ಮಾಡುತ್ತವೆ ಎಂದು ಟೀಕಿಸಿದ್ದರು. ಸ್ವತ ಸೂಕ್ಷ್ಮ ಸಂವೇದನಾಶೀಲ ನಟಿಯಾಗಿದ್ದ ನರ್ಗಿಸ್ ಅವರ ಈ ಟೀಕೆಗಳು ಹಾಸ್ಯಾಸ್ಪದವಾಗಿತ್ತು, ಅದು ಬೇರೆ ವಿಚಾರ. ಆದರೆ ಭಾರತೀಯ ಸಿನಿಮಾರಂಗದ ಹೊಸ ಅಲೆ ಸಿನಿಮಾದ ಹರಿಕಾರರಲ್ಲೊಬ್ಬರು ಎಂದೇ ಸತ್ಯಜಿತ್ ರೇ ಅವರು ಪ್ರಸಿದ್ಧಿಯಾಗಿದ್ದಾರೆ. ಐವತ್ತರ ದಶಕದಲ್ಲಿ ಪ್ರೆಂಚ್ ನಿಯೋರಿಯಲಿಸಂನಿಂದ ಪ್ರಭಾವಿತರಾಗಿದ್ದ ಸತ್ಯಜಿತ್ ರೇ ಆ ಮೂಲಕ ತಾವು ಕಂಡುಕೊಂಡ ಕಾಣ್ಕೆಯನ್ನು ಇಂಡಿಯಾದ ಪಶ್ಚಿಮದ ಮಾದರಿಯನ್ನು ಅನುಸರಿಸಿ ಇಂಡಿಯಾದ ನೆಲಕ್ಕೆ ಬಗ್ಗಿಸಿದರು. ತಮ್ಮ ಕಾಲದ ಸಮಕಾಲೀನರಾಗಿದ್ದ ಋತ್ವಿಕ್ ಘಟಕ್ ಅವರಿಗಿಂತ ವ್ಯಕ್ತಿತ್ವದಲ್ಲಿ ಸಂಪೂರ್ಣ ಭಿನ್ನರಾಗಿದ್ದ ಸತ್ಯಜಿತ್ ರೇ ನಿರೂಪಣೆಯಲ್ಲಿ ಮತ್ತು ಸಿನಿಮಾಟೋಗ್ರಫಿಯಲ್ಲಿ ಅಪಾರ ಶಿಸ್ತು ಮತ್ತು ತತ್ವಬದ್ಧತೆಯನ್ನು ಪ್ರದರ್ಶಿಸಿದಂತಹ ನಿರ್ದೇಶಕ.
ಸಾಂಸ್ಕೃತಿಕ ಸೂಕ್ಷ್ಮಗಳನ್ನು ಗ್ರಹಿಸಿ ಅದನ್ನು ನಾಟಕೀಯ ಮತ್ತು ಬಿಗಿಯಾದ ಚಿತ್ರಕತೆಯ ಮೂಲಕ 1955ರಲ್ಲಿ ತಮ್ಮ ಮೊಟ್ಟ ಮೊದಲ ಸಿನಿಮಾ ‘ಪಥೇರ್ ಪಾಂಚಾಲಿ’ (ರಸ್ತೆಯ ಹಾಡು)ಯನ್ನು ನಿರ್ದೇಶಿಸಿದರು. ಬರಡಾದ ಇಂಡಿಯಾದ ಹಳ್ಳಿಗಳ ಸೋಲು, ಹತಾಶೆಗೊಂಡ ಬದುಕು, ಸಂಬಂಧಗಳ ಕ್ಲಿಷ್ಟತೆ ಮತ್ತು ಗಹನತೆ ಹಾಗೂ ಸಾವಿನ ದರ್ಶನ ಎಲ್ಲವನ್ನೂ ಅದ್ಭುತವಾಗಿ ಒಂದು ಎಳೆಯಲ್ಲಿ ಪೋಣಿಸಿ ಹೇಳಿದ ಸಿನಿಮಾ ‘ಪಥೇರ್ ಪಾಂಚಾಲಿ’. ತಂಬಿಗೆಯೊಂದು ಉರುಳುತ್ತಾ ನಿಧಾನವಾಗಿ ಒಂದೆಡೆ ನಿಶ್ಚಲವಾಗುವುದನ್ನು ತೋರಿಸುವುದರ ಮೂಲಕ ಸಾವನ್ನು ಸಂಕೇತಿಸುವ ದೃಶ್ಯ, ಬಂಜರು ಭೂಮಿಯ ನಡುವೆ ರೈಲನ್ನು ಕಂಡುಹಿಡಿಯುವ ದೃಶ್ಯಗಳ ಮೂಲಕ ರೂಪಕಗಳ ಪರಂಪರೆಗೆ ನಾಂದಿ ಹಾಡಿದರು. ನಂತರ ಅಪರಾಜಿತೋ, ಜಲಸಾಗರ, ದೇವಿ, ತೀನ್ ಕನ್ಯಾ, ಮಹಾನಗರ, ಚಾರುಲತಾ, ಅರಣ್ಯೇರ ದಿನ ರಾತ್ರಿ, ಶತರಂಜ್ ಕೆ ಖಿಲಾಡಿಯಂತಹ ಮಹತ್ವದ ಸಿನಿಮಾಗಳನ್ನು ನಿರ್ದೇಶಿಸಿದರು.
1981ರಲ್ಲಿ ಮೊಟ್ಟ ಮೊದಲ ಬಾರಿಗೆ ದೂರದರ್ಶನಕ್ಕಾಗಿ ‘ಸದ್ಗತಿ’(ಮೋಕ್ಷ) ಹಿಂದಿ ಸಿನಿಮಾವನ್ನು ನಿರ್ದೇಶಿಸಿದರು. ಮೊಟ್ಟ ಮೊದಲ ಬಾರಿಗೆ ಸತ್ಯಜಿತ್ ರೇ ಅವರು ಜಾತಿಯನ್ನು ಕೈಗೆತ್ತಿಕೊಂಡಿದ್ದರು. ಮುನ್ಷೀ ಪ್ರೇಮಚಂದ್ ಅವರ ಕತೆಯನ್ನು ಆಧರಿಸಿದ ‘ಸದ್ಗತಿ’ ಸಿನಿಮಾದಲ್ಲಿ ಪ್ರೇಮ್ ಚಂದ್ ಅವರ ಸಣ್ಣ ಸಣ್ಣ ವಿವರಗಳನ್ನು ಸಹ ಕರಾರುವಕ್ಕಾಗಿ ಗುರುತಿಸಿ ಚಿತ್ರಕತೆಯನ್ನು ಹೆಣೆಯಲಾಗಿತ್ತು. ಚಮಾರ್ ಜಾತಿಗೆ ಸೇರಿದ ದಲಿತ ಸಮುದಾಯದ ದುಕಿಯಾ( ಓಂಪುರಿ) ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುತ್ತಾನೆ. ತನ್ನ ಮಗಳಿಗೆ ಮದುವೆ ದಿನಾಂಕವನ್ನು ನಿಶ್ಚಯ ಮಾಡಲು ಗ್ರಾಮದ ಪುರೋಹಿತನ ಬಳಿ ಹೋಗುತ್ತಾನೆ. ಅಲ್ಲಿ ಪುರೋಹಿತ ತನ್ನ ಮನೆಯಲ್ಲಿ ದುಕಿಯಾಗೆ ಬಗೆಬಗೆಯ ಕೆಲಸಗಳನ್ನು ಹೇಳುತ್ತಾನೆ. ದುಕಿಯಾನನ್ನು ಒಬ್ಬ ಜೀತದಾಳುವಿನಂತೆ ನಡೆಸಿಕೊಳ್ಳುವ ಪುರೋಹಿತ (ಮೋಹನ ಅಗಾಸೆ) ಪ್ರತಿಯಾಗಿ ಭತ್ಯೆಯನ್ನೂ ಸಹ ಕೊಡದೆ ಅದು ದಲಿತ ದುಕಿಯಾನ ಪೂರ್ವಜನ್ಮದ ಪಾಪಕ್ಕೆ ಪ್ರಾಯಶ್ಚಿತ ಎಂಬಂತೆ ವರ್ತಿಸುತ್ತಾನೆ. ಪುರೋಹಿತನ್ನು ಒಪ್ಪಿಸಲು ಆತ ಹೇಳಿದ ಎಲ್ಲಾ ಕೆಲಸಗಳನ್ನು ಮಾಡುವ ದುಕಿಯಾ ಕಡೆಗೆ ಆಯಾಸ, ಹಸಿವಿನಿಂದ ಕಂಗೆಟ್ಟು ಕುಸಿದು ಹೋಗುತ್ತಾನೆ.

ಈ ಎಲ್ಲಾ ಒತ್ತಡದ ಪರಿಣಾಮವಾಗಿ ಪಾರ್ಶ್ವವಾಯು ಹೊಡೆಯುತ್ತದೆ. ಒಂದೆಡೆ ಪುರೋಹಿತ ತನ್ನ ಪೂಜೆ, ತಿಂಡಿ, ಊಟ, ನಿದ್ದೆಯನ್ನು ಕಾರ್ಯಗಳನ್ನು ಮಾಡುತ್ತಿರುವಾಗ ಇತ್ತ ದುಕಿಯಾ ತನ್ನ ಅನಾರೋಗ್ಯದ ನಡುವೆಯೂ ಜೀತದ ಕೆಲಸ ಮಾಡುತ್ತಿರುತ್ತಾನೆ. ಇಲ್ಲಿ ನಮ್ಮ ಎಂಬತ್ತರ ದಶಕದ ದಲಿತ, ಬಂಡಾಯದ ಕತೆಗಳು ನೆನಪಾಗುತ್ತವೆ. ಇಂಡಿಯಾದ ಚಾತುರ್ವರ್ಣದ ಫ್ಯೂಡಲಿಸಂ ಮತ್ತು ಜಾತೀಯತೆಯ ಅಹಂಕಾರವನ್ನು ದುಕಿಯಾ ಮತ್ತು ಪುರೋಹಿನ ನಡುವಿನ ಇಡೀ ದೃಶ್ಯಾವಳಿಗಳ ಮೂಲಕ ಮಾರ್ಮಿಕವಾಗಿ ನಿರೂಪಿಸಲ್ಪಟ್ಟಿದೆ. ಸತ್ಯಜಿತ್ ರೇ ಕಳೆದ ಮೂವತ್ತೈದು ವರ್ಷಗಳಲ್ಲಿ ನಿರ್ದೇಶಕನಾಗಿ ಗಳಿಸಿದ ನಿಯೋರಿಯಲಿಸಂನ ಅನುಭವ ಮತ್ತು ಕಲಾತ್ಮಕ ಸಿನಿಮಾದ ನುಡಿಕಟ್ಟನ್ನು ಸಮರ್ಥವಾಗಿ ಬಳಸಿಕೊಂಡು ವಸ್ತುನಿಷ್ಠವಾಗಿ ಕತೆಯನ್ನು ಹೇಳುತ್ತಾ ಹೋಗುತ್ತಾರೆ. ಮೆಲೋಡ್ರಾಮಕ್ಕೆ ಅವಕಾಶವನ್ನೇ ನೀಡದ ರೇ ತಳಸಮುದಾಯದ ಬದುಕಿನಲ್ಲಿ ಹಾಸುಹೊಕ್ಕಾಗಿರುವ ತಾರತಮ್ಯ ಮತ್ತು ಪ್ರತ್ಯೇಕತೆಯನ್ನು ಕರಾರುವಕ್ಕಾಗಿ ಗ್ರಹಿಸುತ್ತಾರೆ. ದಲಿತ ಬದುಕನ್ನು ತಳ ಮಟ್ಟದಿಂದ ಮುಟ್ಟುತ್ತಾರೆ. ಕಡೆಗೆ ದುಕಿಯಾ ಸ್ಟ್ರೋಕ್ ಹೊಡೆದು ಸಾಯುತ್ತಾನೆ. ತನ್ನ ಈ ದೌರ್ಜನ್ಯದ ಫಲವಾಗಿ ನಡೆದ ಈ ಸಾವಿನ ಹೊಣೆಗಾರಿಕೆಯಿಂದ ಪುರೋಹಿತ ಹೇಗೆ ನುಣುಚಿಕೊಳ್ಳುತ್ತಾನೆ ಎನ್ನುವುದೇ ಕ್ಲೈಮಾಕ್ಸ್.
ಸಾಮಾಜಿಕ ಸಂಬಂಧಗಳನ್ನು ವಿವರಿಸುವ ‘ಸದ್ಗತಿ’ ಸಿನಿಮಾದಲ್ಲಿ ರೇ ಅವರು ಸಂಕೇತಗಳನ್ನು ಬಳಸಿಕೊಳ್ಳುತ್ತಾ ಪಾತ್ರಗಳ ಮಾತು, ಸಂಭಾಷಣೆ ಮತ್ತು ವರ್ತನೆಗಳ ಮೂಲಕ ನಿರೂಪಿಸುತ್ತಾ ಹೋಗುತ್ತಾರೆ. ದಲಿತ ದುಕಿಯಾ ಪುರೋಹಿತನಿಗೆ ವಂದಿಸುವ ದೃಶ್ಯ, ದುಕಿಯಾನ ಬೇಡಿಕೆ, ಪುರೋಹಿತ ಪ್ರತಿಕ್ರಿಯಿಸುವ ದೃಶ್ಯ ಹೀಗೆ ಅನೇಕ ಸಣ್ಣ ಸಣ್ಣ ಸಂಗತಿಗಳು ಜಾತಿ ಪದ್ಧತಿಯ ಸಮಾಜದ ವಿವರಗಳನ್ನು ಬಿಚ್ಚಿಡುತ್ತಾ ಹೋಗುತ್ತವೆ. ಇದಕ್ಕೆ ದುಕಿಯನಾಗಿ ನಟ ಓಂಪುರಿಯ ಅಭಿನಯ ಅದ್ಭುತ. ರೇ ಅವರ ಆಶಯಕ್ಕೆ ಸಮರ್ಥವಾಗಿಯೇ ಸಾಥ್ ಕೊಡುವ ಓಂಪುರಿ ಸದ್ಗತಿ ಸಿನಿಮಾವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಮುನ್ನಡೆಸುತ್ತಾನೆ. ದುಕಿಯಾನ ಮಡದಿಯಾಗಿ ಸಣ್ಣ ಪಾತ್ರದಲ್ಲಿ ಅಭಿನಯಿಸಿರುವ ಸ್ಮಿತಾ ಪಾಟೀಲ್ ತನ್ನ ನಟನೆಯ ಛಾಪನ್ನು ಅಚ್ಚೊತ್ತಿದ್ದಾಳೆ. ಕಡೆಯ ದೃಶ್ಯದಲ್ಲಿ ತನ್ನ ಗಂಡನ ಶವವನ್ನು ನೋಡುವ ಸ್ಮಿತಾ ಪಾಟೀಲ್ ಅಸಹಾಯಕತೆಯಿಂದ, ಭಯದಿಂದ ರೋದಿಸುತ್ತಾಳೆ. ಪುರೋಹಿತ ದುಃಖಿತನಂತೆ ನಟಿಸುತ್ತಾ ಸಂಬಂಧವಿಲ್ಲದವನಂತೆ ತನ್ನ ಹಾಸಿಗೆಯ ಮೇಲೆ ವಿಶ್ರಾಂತಿಗೆ ಜಾರುತ್ತಾನೆ. ಗ್ರಾಮಸ್ಥರು ಕಿಂಕರ್ತವ್ಯ ಮೂಢರಂತೆ ನಿಶ್ಚಲರಾಗಿ ನಿಂತಿರುತ್ತಾರೆ. ಧಾರಾಕಾರವಾಗಿ ಮಳೆ ಸುರಿಯುತ್ತಿರುತ್ತದೆ. ಅನಾಥವಾಗಿ ಬೀದಿಯಲ್ಲಿ ಬಿದ್ದ ತನ್ನ ಗಂಡನ ಶವದ ಮುಂದೆ ರೋಧಿಸುವ ಸ್ಮಿತಾ ಪಾಟೀಲ್ ಸಹಾಯಕ್ಕಾಗಿ ಗ್ರಾಮದ ಮನೆ ಮನೆಯ ಬಾಗಿಲು ತಟ್ಟುತ್ತಾಳೆ. ಆದರೆ ಯಾರೊಬ್ಬರೂ ಸ್ಪಂದಿಸುವುದಿಲ್ಲ. ಕಡೆಗೆ ಅಪಾದನೆಯಿಂದ ನುಣಿಚಿಕೊಳ್ಳಲು ಪುರೋಹಿತ ತನ್ನ ಮನೆಯ ಆವರಣದಲ್ಲಿ ಹೆಣವಾಗಿ ಬಿದ್ದಿರುವ ದಲಿತ ದುಕಿಯಾನ ಶವವನ್ನು ಕೈಯಿಂದ ಮುಟ್ಟದೆ ಹಗ್ಗದಿಂದ ಕಟ್ಟಿ ಎಳೆದುಕೊಂಡು ಹೋಗಿ ಊರ ಹೊರಗಿನ ಬಯಲಲ್ಲಿ ಬಿಸಾಡುತ್ತಾನೆ. ತನ್ನ ಮನೆಗೆ ಮರಳಿ ಗೋಮೂತ್ರದಿಂದ ಮನೆಯನ್ನು ಶುದ್ಧೀಕರಿಸುತ್ತಾನೆ.

ದಲಿತ ಸಮುದಾಯದ ದುಕಿಯಾನ ಸಾವಿನ ಮೂಲಕ, ಅನಾಥವಾಗಿ ಬೀಳುವ ಹೆಣದ ಮೂಲಕ ಗ್ರಾಮ ಸಮಾಜದ ನೀಚತನ ಮತ್ತು ಜಾತಿ ವ್ಯವಸ್ಥೆಯ ಕ್ರೌರ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ ಸತ್ಯಜಿತ್ ರೇ. ಮೊಟ್ಟ ಮೊದಲ ಬಾರಿಗೆ ತಮ್ಮ ಟ್ರೇಡ್ ಅಭಿವ್ಯಕ್ತಿಯಾದಂತಹ ವ್ಯಕ್ತಿಗತ ತಾಕಲಾಟಗಳ ಘರ್ಷಣೆ, ಮನುಷ್ಯ ಮನುಷ್ಯರ ನಡುವಿನ ಕ್ಲಿಷ್ಟಕರ ಸಂಬಂಧಗಳ ಸಾಂಕೇತಿಕ ಅಭಿವ್ಯಕ್ತಿಯನ್ನು ಸಂಪೂರ್ಣವಾಗಿ ಕೈಬಿಟ್ಟು ನೇರವಾಗಿ ಸಾಮಾಜಿಕ ಬಿಕ್ಕಟ್ಟುಗಳ ಕತೆಯನ್ನು ಕೈಗೆತ್ತಿಕೊಂಡು ಸರಳವಾಗಿಯೇ ಹೇಳುತ್ತಾ ಹೋಗುತ್ತಾರೆ ಮತ್ತು ಅತ್ಯಂತ ಕಡಿಮೆ ಸಂಭಾಷಣೆಯನ್ನು ಬಳಸಿಕೊಳ್ಳುತ್ತಾರೆ. ಕಡೆಗೆ ‘ಸದ್ಗತಿ’ಒಂದು ಸೈಲೆಂಟ್ ಸಿನಿಮಾ ಎನ್ನಬಹುದಾದ ಮಟ್ಟಿಗೆ ದೃಶ್ಯಗಳನ್ನು ಕಟ್ಟುವ ರೇ ಅವರ ಪ್ರತಿಭೆ ಅನನ್ಯವಾದದ್ದು. ಏಕೆಂದರೆ ಜಾತಿ ಪದ್ಧತಿಯ ತಾರತಮ್ಯದ ಕ್ರೌರ್ಯವನ್ನು ಹೇಳಲು ಮಾತುಗಳ ಅವಶ್ಯಕತೆ ಇಲ್ಲ, ಪರಿಣಾಮಕಾರಿ ದೃಶ್ಯಗಳು ಮತ್ತು ಪಾತ್ರಗಳ ಅಭಿವ್ಯಕ್ತಿಯ ಸಂವಹನವೇ ಸಾಕು ಎಂದು ಸರಿಯಾಗಿಯೇ ಅರಿತುಕೊಂಡ ಸತ್ಯಜಿತ್ ರೇ ಅವರು ಇಲ್ಲಿ ನಿರ್ದೇಶಕನಾಗಿ ಯಶಸ್ವಿಯಾಗಿದ್ದಾರೆ. ತಮ್ಮ ಮೂವತ್ತು ವರ್ಷಗಳ ನಿಯೋರಿಯಲಿಸ್ಟಿಕ್ ಅನುಭವವನ್ನು ‘ಸದ್ಗತಿ’ಸಿನಿಮಾದ ನಿರೂಪಣೆಯಲ್ಲಿ ಲಯಬದ್ಧವಾಗಿ ಬಳಸಿಕೊಂಡ ರೇ ಚಿತ್ರಕತೆಯ ಮೇಲಿನ ತಮ್ಮ ಹಿಡಿತವನ್ನು ಸಡಿಲಿಸುವುದಿಲ್ಲ. ‘ಸದ್ಗತಿ’ ಸಿನಿಮಾದ ಮೂಲಕ ಮೊಟ್ಟ ಮೊದಲ ಬಾರಿಗೆ ರಾಜಕೀಯವಾಗಿ ಮಾತನಾಡುವ ರೇ ತಮ್ಮ ಸಮಕಾಲೀನ ಗೆಳೆಯ ಋತ್ವಿಕ್ ಘಟಕ್ ಮತ್ತು ಶ್ಯಾಂ ಬೆನಗಲ್‍ರವರಿಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸುತ್ತಾರೆ.
(ಈ ಸಿನಿಮಾ ಯೂಟ್ಯೂಬ್‌ನಲ್ಲಿದೆ, ಆಸಕ್ತರು ಗಮನಿಸಿ)
