
ಸಿನಿಮಾ ಛಾಯಾಗ್ರಾಹಕ
ಪದ್ಮಶ್ರೀ ಪುರಸ್ಕೃತ ಚಿತ್ರಸಾಹಿತಿ – ನಿರ್ದೇಶಕ ಕೆ.ಎ.ಅಬ್ಬಾಸ್ ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಅಂಕಣಕಾರರಾಗಿಯೂ ಖ್ಯಾತಿ ಪಡೆದಿದ್ದ ಅಬ್ಬಾಸ್ (07/06/1914 – 01/06/1987) ಜನ್ಮದಿನವಿಂದು. – ಹಿರಿಯ ಸಿನಿಮಾ ಛಾಯಾಗ್ರಾಹಕ ಬಿ.ಎಸ್.ಬಸವರಾಜ್ ಮೇರು ತಂತ್ರಜ್ಞರನ್ನು ಸ್ಮರಿಸಿಕೊಂಡಿದ್ದಾರೆ.
ಖ್ವಾಜಾ ಅಹ್ಮದ್ ಅಬ್ಬಾಸ್ ಹಿಂದಿ ಚಿತ್ರರಂಗದಲ್ಲಿ ಕೆ.ಎ.ಅಬ್ಬಾಸ್ ಎಂದೇ ಗುರುತಿಸಿಕೊಂಡವರು. ಹಿಂದಿ ಸಿನಿಮಾ ವಲಯದ ಪ್ರಭಾವಿ ನಿರ್ದೇಶಕ ಮತ್ತು ಚಿತ್ರಸಾಹಿತಿ. ಅವರ ನಿರ್ದೇಶನ ಮತ್ತು ಚಿತ್ರಕಥೆ ರಚಿಸಿದ ಹಲವಾರು ಚಿತ್ರಗಳು ಮೈಲುಗಲ್ಲು ಎನಿಸಿವೆ. ಸಿನಿಮಾರಂಗದ ಹೊರತಾಗಿ ಪತ್ರಕರ್ತನಾಗಿಯೂ ಅವರು ಹೆಸರು ಮಾಡಿದ್ದಾರೆ. ಬಾಂಬೆ ಕ್ರಾನಿಕಲ್ ಮತ್ತು ಬ್ಲಿಟ್ಸ್ ಪತ್ರಿಕೆಗಳಿಗೆ ಅವರು ಕಾರ್ಯನಿರ್ವಹಿಸಿದ್ದಾರೆ.
ಹುಟ್ಟಿದ್ದು 1914ರ ಜೂನ್ 7ರಂದು ಪಾಣಿಪಟ್‌ನಲ್ಲಿ. ಸ್ಥಿತಿವಂತ ಕುಟುಂಬದಲ್ಲಿ ಜನಿಸಿದ ಅವರು ಅಲಿಘರ್ ಮುಸ್ಲಿಂ ಯುನಿವರ್ಸಿಟಿಯಲ್ಲಿ ಇಂಗ್ಲಿಷ್ ಸಾಹಿತ್ಯ ಮತ್ತು ಕಾನೂನು ವಿಷಯದಲ್ಲಿ ಪದವಿ ಪಡೆದರು. ದಿಲ್ಲಿಗೆ ಬಂದ ಅವರು ಪತ್ರಕರ್ತನಾಗಿ ವೃತ್ತಿ ಆರಂಭಿಸಿದರು. ‘ಬಾಂಬೆ ಕ್ರಾನಿಕಲ್’ ಪತ್ರಿಕೆಯ ಸಿನಿಮಾ ವಿಭಾಗದ ಸಂಪಾದಕನಾಗಿದ್ದ ಅವರು ಸಿನಿಮಾ ವಿಮರ್ಶಕರಾಗಿ ಚಿತ್ರರಂಗಕ್ಕೆ ಪರಿಚಿತರಾದರು.

ಅಬ್ಬಾಸ್ ಸಿನಿಮಾ ವಲಯಕ್ಕೆ ಅಧಿಕೃತವಾಗಿ ಪ್ರವೇಶಿದ್ದು 1936ರಲ್ಲಿ. ಹೊಸದಾಗಿ ಆರಂಭವಾಗಿದ್ದ ‘ಬಾಂಬೆ ಟಾಕೀಸ್’ ಚಿತ್ರನಿರ್ಮಾಣ ಸಂಸ್ಥೇಯ ಪ್ರಚಾರಕನಾಗಿ ಅವರು ಸಿನಿಮಾದ ಒಳಹೊರಗುಗಳ ಬಗ್ಗೆ ಅರಿತರು. ಆಗ ಇದು ಅವರಿಗೆ ಪಾರ್ಟ್‌ಟೈಮ್ ವೃತ್ತಿ. ‘ನಯಾ ಸನ್ಸಾರ್’ (1941) ಚಿತ್ರದ ಪ್ರಚಾರ ವಿಭಾಗದಲ್ಲಿ ಕೆಲಸ ಮಾಡಿದ ಅವರು ಈ ಚಿತ್ರಕ್ಕೆ ಚಿತ್ರಕಥೆಯನ್ನೂ ಬರೆದಿದ್ದರು. ಇದು ಅವರು ಚಿತ್ರಕಥೆ ರಚಿಸಿದ ಮೊದಲ ಹಿಂದಿ ಸಿನಿಮಾ. ಮುಂದೆ ನೀಚಾ ನಗರ್, ಅಮರ್ ಕಹಾನಿ, ಧರ್ತಿ ಕೆ ಲಾಲ್ ಚಿತ್ರಗಳಿಗೆ ಚಿತ್ರಕಥೆ ರಚಿಸಿದರು. ಈ ಚಿತ್ರಗಳಿಂದ ಅವರು ಸಿನಿಮಾ ಬರಹಗಾರರ ಬಳಗದ ಗೌರವಕ್ಕೆ ಪಾತ್ರರಾದರು. ‘ನೀಚಾ ನಗರ್’ ಚಿತ್ರಕಥೆಗೆ ಕಾನ್ಸ್ ಚಿತ್ರೋತ್ಸವದಲ್ಲಿ ಪ್ರಶಸ್ತಿಯೂ ಲಭಿಸಿತು.
ಮುಂದೆ 50ರ ದಶಕದಲ್ಲಿ ಚಿತ್ರಕಥೆ ವಿಭಾಗದಲ್ಲಿ ಅಬ್ಬಾಸ್ ದೊಡ್ಡ ಹೆಸರು ಮಾಡಿದರು. ಅವರು ಚಿತ್ರಕಥೆ ರಚಿಸಿದ ಆವಾರಾ, ರಾಹಿ, ಶ್ರೀ 420, ಪರ್‌ದೇಸಿ, ಸತ್ತಾ ಬಜಾರ್ ಚಿತ್ರಗಳು ಅಭೂತಪೂರ್ವ ಯಶಸ್ಸು ಕಂಡವು. 60ರ ದಶಕದ ಹೊತ್ತಿಗೆ ಬರಹಗಾರನಾಗಿ ಅವರ ಹೆಸರು ಮುಂಚೂಣಿಗೆ ಬಂದಿತ್ತು. ಹಮಾರಾ ಘರ್, ಸಪ್ನೋ ಕಾ ಸೌಧಾಗರ್, ಸಾತ್ ಹಿಂದೂಸ್ತಾನಿ, ಮೇರಾ ನಾಮ್ ಜೋಕರ್, ಬಾಬ್ಬಿ ಚಿತ್ರಗಳು ಅವರ ಯಶಸ್ಸನ್ನು ಮುಂದುವರೆಸಿದವು.

ಸಾಮಾಜಿಕ ಕಳಕಳಿ ಮತ್ತು ರಾಷ್ಟ್ರೀಯವಾದದ ವಸ್ತು – ವಿಷಯ ಅವರ ಬರಹದ ವೈಶಿಷ್ಠ್ಯ. ದಿ ನಕ್ಸಲೈಟ್, ಆಕಾಂಕ್ಷಾ, ಏಕ್ ಆದ್ಮಿ, ಮಿಸ್ಟರ್ ಎಕ್ಸ್ (1988) ಅವರು ಕೊನೆಕೊನೆಗೆ ಚಿತ್ರಕಥೆ ರಚಿಸಿದ ಪ್ರಮುಖ ಚಿತ್ರಗಳು. ಸ್ವತಃ ತಾವೇ ಚಿತ್ರಕಥೆ ರಚಿಸಿ, ನಿರ್ದೇಶಿಸಿದ ಚಿತ್ರಗಳಲ್ಲೂ ಅವರು ಗೆಲುವು ಕಂಡಿದ್ದಾರೆ. ಧರ್ತಿ ಕಾ ಲಾಲ್, ಆಜ್ ಔರ್ ಕಲ್, ಚಾರ್ ದಿಲ್ ಚಾರ್ ರಹೇ, ಆಸ್ಮಾನ್ ಮಹಲ್, ದೋ ಬೂಂದ್ ಪಾನಿ ಅವರ ನಿರ್ದೇಶನದ ಪ್ರಮುಖ ಚಿತ್ರಗಳು. ಶೆಹರ್ ಔರ್ ಸಪ್ನಾ, ಸಾತ್ ಹಿಂದೂಸ್ತಾನಿ ಮತ್ತು ದೋ ಬೂಂದ್ ಪಾನಿ ಚಿತ್ರಗಳಿಗಾಗಿ ಅವರು ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಪದ್ಮಶ್ರೀ ಪುರಸ್ಕೃತ ಅಬ್ಬಾಸ್ 1987ರ ಜೂನ್ 1ರಂದು ಇಹಲೋಕ ತ್ಯಜಿಸಿದರು.
