ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಚಿತ್ರಸಾಹಿತಿ ಗೋಪಾಲ ವಾಜಪೇಯಿ

ಪೋಸ್ಟ್ ಶೇರ್ ಮಾಡಿ
ರಾಜಕುಮಾರ ಮಡಿವಾಳರ
ಕವಿ

ಕವಿ, ಪತ್ರಕರ್ತ, ನಾಟಕಕಾರ ಗೋಪಾಲ ವಾಜಪೇಯಿ (01/06/1951 – 20/09/2016) ಚಿತ್ರಸಾಹಿತ್ಯಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಇಂದು (ಸೆಪ್ಟೆಂಬರ್‌ 20) ಅವರ ಸಂಸ್ಮರಣಾ ದಿನ. – ಧಾರವಾಡದ ಕವಿ ರಾಜಕುಮಾರ ಮಡಿವಾಳರ ಅವರು ವಾಜಪೇಯಿ ಅವರನ್ನು ಸ್ಮರಿಸಿದ್ದಾರೆ.

ಕನ್ನಡ ಸಾಹಿತ್ಯ ಕ್ಷೇತ್ರ, ನಾಟಕ ಕ್ಷೇತ್ರ, ಚಿತ್ರರಂಗ ಮತ್ತು ಬಾನುಲಿ (ಆಕಾಶವಾಣಿ) ಕಂಡ ಚತುರ್ಮುಖ ಪ್ರತಿಭೆ ಶ್ರೀ ಗೋಪಾಲ ವಾಜಪೇಯಿ ಅಥವ ನಮ್ಮ ಪ್ರೀತಿಯ ಕಾಕಾ ಗೋಪಾಲ ವಾಜಪೇಯಿ.

ಅಚಾನಕ್ಕಾಗಿ ನಟೆನೆಗೆ ಬಂದು, ಅಕಸ್ಮಾತ್ ನಟಿಸಿ, ಮೊದಲ ಸಿನಿಮಾದಲ್ಲೇ ಯಶಸ್ಸಿನ ತುದಿಯೇರಿದ ಶಂಕರನಾಗ್ ನಟಿಸಿದ ‘ಒಂದಾನೊಂದು ಕಾಲದಲ್ಲಿ’ ಸಿನಿಮಾಕ್ಕೆ ವಾಜಪೇಯಿ ದುಡಿದರು, ನಟಿಸಿದರು. ಪತ್ರಿಕೆ ಕೆಲಸದಲ್ಲಿದ್ದ ಕಾರಣ ಆ ಪತ್ರಿಕೆ ಕಾನೂನು ಪ್ರಕಾರ ಬೇರೆ ಬರಹ ಮಾಡುವಂತಿಲ್ಲವಾಗಿ, ಆಕಾಶವಾಣಿ ಸಾಕಷ್ಟು ಬಾನುಲಿ ನಾಟಕ, ಹಾಡುಗಳನ್ನ ‘ಗೋಪಾಲ ಯಾಜ್ಞಿಕ್’ ಹೆಸರಲ್ಲಿ ಬರೆದರು, ಸಾಕಷ್ಟು ನಾಟಕ, ಆ ನಾಟಕಗಳಿಗೆ ಗೀತೆಗಳನ್ನ ಬರೆದರು. ಗೋಪಾಲ ವಾಜಪೇಯಿ ಕನ್ನಡ ರಂಗಭೂಮಿ ಕಂಡ ಅದ್ಭುತ ರಂಗಗೀತೆ ರಚನೆಕಾರ.

ಇದೆಲ್ಲದರ ಆಚೆ.

ವಾಜಪೇಯಿ ಸಿನಿಮಾರಂಗಕ್ಕೆ ಬಂದದ್ದು, ಅದು ಕೂಡ ಹಲವಾರು ಬಾಗಿಲುಗಳ ಮುಖಾಂತರ, ಸಂತ ಶಿಶುನಾಳ ಶರೀಫ, ಸಂಗ್ಯಾಬಾಳ್ಯಾ, ಸಿಂಗಾರೆವ್ವ, ಮುಂತಾದ ಪ್ರಮುಖ ಚಿತ್ರಗಳಿಗೆ ಸಂಭಾಷಣೆ ಬರೆದರು, ಸಂಭಾಷಣೆಕಾರನಾಗಿ ಗೆದ್ದರು ಕೂಡ, ಅವರ ಸಾಹಿತ್ಯ ಬಳಕೆಯ ಉತ್ತರ ಕರ್ನಾಟಕದ ಭಾಷೆಯಲ್ಲಿ ಅಂಥ ಮಮತೆ ಸಂಚಲನವಿತ್ತು. ಹಿಂದಿಯ ಖ್ಯಾತ ಲೇಖಕ ಭೀಷ್ಮ್ (ಭಿಷಮ್) ಸಹಾನಿಯವರ “ಕಬೀರ್ ಖಡಾ ಬಾಜಾರ ಮೇಂ” ನಾಟಕವನ್ನು ಪ್ರಾಯಶಃ 1980ರಲ್ಲಿ ( ಸರಿಯಾಗಿ ನೆನಪಿಲ್ಲ) ಅನುವಾದಿಸಿ ಸಂಗಕ್ಕೆ ತಂದರು. ಅಲ್ಲಿ ಬಳಸಿಕೊಂಡು ಕಬೀರ್ ದೋಹೆ ಅನುವಾದ ಸರ್ವ ಶ್ರೇಷ್ಠ ಅನುವಾದ ಎಂದರೆ ತಪ್ಪಾಗಲಾರದು, ಇಡಿ ನಾಟಕ ಕೂಡ ಅಷ್ಟೆ ಅಮೋಘ. ಅದೇ ಭೀಷ್ಮ್ ಸಹಾನಿ ಜನ್ಮ ಶತಮಾನೋತ್ಸವದ ವರ್ಷದಲ್ಲಿ ವಾಜಪೇಯಿ ಅನುವಾದದ “ಸಂತ್ಯಾಗ ನಿಂತಾನ ಕಬೀರ” ಸಿನಿಮಾ ಸೆಟ್ಟೇರಿತು, ಇಲ್ಲಿ ವಾಜಪೇಯಿ ಮತ್ತೆ ಸಿನಿಮಾಕ್ಕೆ ಸಂಭಾಷಣೆ, ದೋಹೆ ಅನುವಾದಕ್ಕೆ ನಿಂತರು.

ಇದೆಲ್ಲಕ್ಕೂ…

ದಂತಕಥೆಯಂತೆ ಜನಮಾನಸ ಗೆದ್ದ ನಾಟಕ “ನಾಗಮಂಡಲ” ನಾಟಕಕ್ಕಾಗಿ ಹಾಡು ಬರೆದದ್ದಾ? ಹಾಡುಗಳಿಗಾಗಿ ನಾಟಕ ಬರೆದದ್ದಾ? ಅನುವಷ್ಟರಮಟ್ಟಿಗೆ ನಾಟಕ ಮತ್ತು ಗೀತೆ ಅವಳಿಯಂತಾದವು. “ಶಂಕರನಾಗ್ ನನ್ನ ಕರಕೊಂಡು ಹೋಗಿ ಒಂದು ವಾರ ಕೋಣ್ಯಾಗ ಕೂಡಿ ಹಾಕಿ ಹಾಡು ಬರೆಸಿದಾ” ಸ್ವತಃ ಗೋಪಾಲ ವಾಜಪೇಯಿ ನನ್ನೊಂದಿಗೆ ಹೇಳಿದ್ದರು, ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ ಕೂಡ, ನಾಗಮಂಡಲ ನಾಗಾಭರಣ ನಿರ್ದೇಶನದಲ್ಲಿ ಸಿನಿಮಾ ಆಗುವ ಹೊತ್ತು. ಮೊದಲಿಗೆ ಗೀತೆ ರಚನೆಗೆ ಬೇರೊಬ್ಬರು ಕವಿ ಸಂಪರ್ಕಿಸಿದಾಗಿ, ಆ ಕವಿಗಳೆ ಸ್ವತಃ ಇಲ್ಲ ಇದು ನನ್ನಿಂದಾಗದು, ಗೋಪಾಲರಿಗೆ ಸಾಧ್ಯ ಅಂತ ಹೇಳಿ ಆದ ಮೇಲೆ ಗೋಪಾಲ  ವಾಜಪೇಯಿ ಮತ್ತೆ ಸಿನಿಮಾಕ್ಕಾಗಿ ಮತ್ತೊಮ್ಮೆ ನಾಗಮಂಡಲಕ್ಕೆ ನಿಂತರು, ಇವತ್ತಿಗೂ ಹಾಡು ಅಜರಾಮರ-ಮಧುರ!

ಇದರಲ್ಲಿ…

ಹುಡುಗಿ ಹೂ ಹುಡುಗಿ ನಿನಗ್ಯಾಕ ಈ ಮಲ್ಲಿಗಿ

ಮುಟ್ಟಿದರ ಒಂದವಾಸನಿ

ನಿನ್ನ ಮುಡಿದರ ಮತ್ತೊಂದ ವಾಸನಿ..

ಅನ್ನುವ ಹಾಡಿದೆ, ಹುಟ್ಟುಕರುಡಿ ಕುಲ್ಡವತ್ತಿ ಪಾತ್ರ ಹಾಡುವ ನಾಯಕಿ ರಾಣಿಯನ್ನ ಮುಟ್ಟಿ ಮುಟ್ಟಿ ನೋಡಿ, ರಾಣಿಯ ಚೆಂದ ವರ್ಣಿಸುವ ಹಾಡದು, ಪ್ರಾಯಶಃ ಕುರುಡಿ ಒಬ್ಬಳು ಹೀಗೆ ತಾನು ಕಾಣದೇ, ಮುಟ್ಟಿ ಕಾಣಿಸುವ ಹಾಡು ನನಗಂತೂ ಕನ್ನಡದಲ್ಲಿ ಇದುವರೆಗೂ ಸಿಕ್ಕಿಲ್ಲ, ಇಂಥ ಹಾಡುಗಳು ಗೋಪಾಲ ವಾಜಪೇಯಿ ಅನ್ನುವ ಹುಟ್ಟು ಪ್ರತಿಭೆಗೆ ಮಾತ್ರ ಸಾಧ್ಯ.

ಹಲವಾರು ಕ್ಷೇತ್ರಗಳಲ್ಲಿ, ಹಲವು ರೀತಿಯ ಗೆಲುವಿಗೆ ಮುಖ್ಯ ಕಾರಣವಾಗಿಯೂ ವಾಜಪೇಯಿ ಅವರಿಗೆ ಸಾಗಬೇಕಾದ ಮನ್ನಣೆ, ಪ್ರಾಶಸ್ತ್ಯ, ಪ್ರಶಸ್ತಿ, ಗೌರವ ಯಾವುದು ಸಿಗಲಿಲ್ಲ ಅನ್ನುವುದು ನಮ್ಮ ನಿರಭಿಮಾನಕ್ಕೆ ಹಿಡಿದ ಕನ್ನಡಿ. ಇವು ಸಿಗಲಿಲ್ಲ ಅಂದ ಮಾತ್ರಕ್ಕೆ ವಾಜಪೇಯಿ ಸಾಮಾನ್ಯ ಅಂತಲ್ಲ, ಅಸಾಮಾನ್ಯ ಪ್ರತೆಭೆಗೆ ಇವು ಮಾನದಂಡವೂ ಅಲ್ಲ, ಅವರು ಇವತ್ತಿಗೂ ಈ ಕ್ಷಣಕ್ಕೂ ಅವರದೇ ಅಭಿಮಾನಗಳ ವಲಯದ ಸಾಕಷ್ಟು ಹೃದಯಗಳಲ್ಲಿ ಅಮರರಾಗಿದ್ದಾರೆ.

‘ಒಂದಾನೊಂದು ಕಾಲದಲ್ಲಿ’ (1978) ಸಿನಿಮಾ ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಚಿತ್ರದ ನಿರ್ದೇಶಕ ಗಿರೀಶ್ ಕಾರ್ನಾಡ್, ಗೋಪಾಲ ವಾಜಪೇಯಿ, ನಟ ಶಂಕರ್‌ನಾಗ್‌, ಛಾಯಾಗ್ರಾಹಕ ಎ.ಕೆ.ಬೀರ್. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಮೇರು ತಾರೆ ದಿಲೀಪ್ ಕುಮಾರ್

ಹಿಂದಿ ಚಿತ್ರರಂಗದ ಮೇರು ನಟ ದಿಲೀಪ್ ಕುಮಾರ್ ಹುಟ್ಟಿದ್ದು ಪೇಶಾವರದಲ್ಲಿ (ಈಗಿನ ಪಾಕಿಸ್ತಾನ) 1922, ಡಿಸೆಂಬರ್ 11ರಂದು. ಜನ್ಮನಾಮ ಮೊಹಮ್ಮದ್

ಸಿನಿಮಾ ಮಾಹಿತಿ ಭಂಡಾರ ಆರ್.ಲಕ್ಷ್ಮಣ್

ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಶ್ರಮಿಸಿದ ಹಲವರಲ್ಲಿ ಆರ್‌.ಲಕ್ಷ್ಮಣ್ ಹೆಸರೂ ಪ್ರಸ್ತಾಪವಾಗುತ್ತದೆ. ಚಿತ್ರನಿರ್ಮಾಪಕ, ವಿತರಕರಾಗಿ ಅಷ್ಟೇ ಅಲ್ಲ ಕನ್ನಡ ಸಿನಿಮಾಗೆ