ಭಾರತೀಯ ಚಿತ್ರರಂಗ ಕಂಡ ಪ್ರಮುಖ ಹಿನ್ನೆಲೆ ಗಾಯಕ ಟಿ.ಎಂ.ಸೌಂದರರಾಜನ್. ಕರ್ನಾಟಕ ಶಾಸ್ತ್ರೀಯ ಸಂಗೀತಗಾರ. ಆತ್ಮೀಯರಿಂದ ‘ಟಿಎಂಎಸ್’ ಎಂದೇ ಕರೆಸಿಕೊಳ್ಳುತ್ತಿದ್ದ ಅವರು ಆರೂವರೆ ದಶಕಗಳ ವೃತ್ತಿ ಬದುಕಿನಲ್ಲಿ 10 ಸಾವಿರಕ್ಕೂ ಹೆಚ್ಚು ಚಲನಚಿತ್ರ ಗೀತೆಗಳಿಗೆ ದನಿಯಾಗಿದ್ದಾರೆ. ಪ್ರಮುಖವಾಗಿ ತಮಿಳು ಸಿನಿಮಾಗಳಿಗೆ ಹಾಡಿರುವ ಟಿಎಂಎಸ್ ಕನ್ನಡ, ತೆಲುಗು, ಹಿಂದಿ, ಮಲಯಾಳಂ ಸೇರಿದಂತೆ ಹನ್ನೊಂದು ಭಾಷೆಗಳಲ್ಲಿ ಹಾಡಿದ್ದಾರೆ. ದಕ್ಷಿಣ ಭಾರತದ ಎರಡು ತಲೆಮಾರಿನ ಪ್ರಮುಖ ನಾಯಕನಟರಿಗೆ ಹಾಡಿರುವ ಹೆಗ್ಗಳಿಕೆ ಅವರದು.
ಟಿಎಂಎಸ್ 1943ರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಕಚೇರಿಗಳನ್ನು ಕೊಡಲು ಆರಂಭಿಸಿದ್ದರು. ತಮ್ಮ 24ನೇ ವಯಸ್ಸಿನಲ್ಲಿ ಮೊದಲ ಸಿನಿಮಾ ಗೀತೆ (1946) ಹಾಡಿದರು. ಕೊನೆಯ ಗೀತೆ ಹಾಡಿದ್ದು 2010ರಲ್ಲಿ. ಖ್ಯಾತ ಗಾಯಕಿ ಪಿ.ಸುಶೀಲಾ ಅವರೊಂದಿಗೆ ಹಾಡಿದಾಗ ಅವರಿಗೆ 88 ವರ್ಷ. ಹಲವಾರು ಭಕ್ತಿಗೀತೆಗಳನ್ನು ರಚಿಸಿರುವ ಟಿಎಂಎಸ್ ತಮ್ಮ ರಚನೆಯ ಗೀತೆಗಳಿಗೆ ತಾವೇ ಸಂಗೀತ ಸಂಯೋಜಿಸಿದ್ದಾರೆ. ದಕ್ಷಿಣ ಭಾರತದ ಎಲ್ಲಾ ಪ್ರಮುಖ ಗಾಯಕ – ಗಾಯಕರೊಂದಿಗೆ ಟಿಎಂಎಸ್ ಹಾಡಿದ್ದಾರೆ.
ಟಿ.ಎಂ.ಸೌಂದರರಾಜನ್ | ಜನನ: 24/03/1922 | ನಿಧನ: 25/05/2013
