ಕತೆಗಾರ ಪ್ರವೀಣ್ ಕುಮಾರ್ ಜಿ ಅವರು ಹಲವು ವರ್ಷಗಳಿಂದ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ‘ಅಮರ ಪ್ರೇಮಿ ಅರುಣ್’ ಸಿನಿಮಾ ಮೂಲಕ ನಿರ್ದೇಶಕರಾದ ಪ್ರವೀಣ್ ಸದ್ಯ ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವ ‘ಅರಮನೆ’ ಧಾರಾವಾಹಿಗೆ ಸಂಭಾಷಣೆ ರಚಿಸುವ ಹೊಣೆ ಹೊತ್ತಿದ್ದಾರೆ. ಖ್ಯಾತ ಕಾದಂಬರಿಕಾರ ಕುಂವಿ ಅವರ ಈ ಕೃತಿಯಲ್ಲಿ ಬಳ್ಳಾರಿ ಭಾಗದ ದಟ್ಟ ನೇಟಿವಿಟಿ ಇದೆ. ಮೂಲತಃ ಬಳ್ಳಾರಿಯವರೇ ಆದ ಪ್ರವೀಣ್ ಕುಮಾರ್ ತುಂಬು ಪ್ರೀತಿಯಿಂದ ‘ಅರಮನೆ’ಗೆ ಬರೆಯುತ್ತಿದ್ದಾರೆ. ಅವರೊಂದಿಗಿನ ಪುಟ್ಟ ಮಾತುಕತೆ ಇಲ್ಲಿದೆ…
ಈ ಹಿಂದೆ ನೀವು ‘ಅರಮನೆ’ ಕಾದಂಬರಿ ಓದಿದ್ರಾ?
ಹೌದು, ಕಾಲೇಜು ಓದುತ್ತಿದ್ದಾಗಲೇ ‘ಅರಮನೆ’ ಓದಿದ್ದೆ. ಕಾದಂಬರಿಯಲ್ಲಿ ಪ್ರಮುಖವಾಗಿ ಪ್ರಸ್ತಾಪವಾಗುವ ಸರ್ ಥಾಮಸ್ ಮನ್ರೋ ತುಂಬಾ ಸೋಜಿಗದ ಮತ್ತು ಪ್ರಭಾವಶಾಲಿಯಾದ ಪಾತ್ರ. ಅವರ ಹೆಸರಿನಲ್ಲಿ ಗುಡಿಗಳೂ ಇವೆ. ಗೆಜೆಟಿಯರ್‌ನಲ್ಲೂ ಇದೆಲ್ಲಾ ಪ್ರಸ್ತಾಪವಾಗಿದೆ. ಕುಂವಿ ಅವರ ಬರವಣಿಗೆ ತುಂಬಾ ಆಪ್ತವಾಗಿದೆ. ನಮ್ಮ ತಂದೆ – ತಾಯಿ ಮಾತನಾಡುತ್ತಿದ್ದ slang ಅದು. ನನ್ನ ಸಣ್ಣ ಕತೆಗಳೆಲ್ಲವೂ ಅದೇ ನೇಟಿವಿಟಿಯಲ್ಲಿ ಹುಟ್ಟಿರುವಂಥವೇ. ಹಾಗಾಗಿ ನಿರ್ದೇಶಕ ಮಂಸೋರೆ ಅವರು ಫೋನ್ ಮಾಡಿ, ‘ಅರಮನೆ ಕಾದಂಬರಿಗೆ ಬರೀತೀರಾ?’ ಎನ್ನುತ್ತಿದ್ದಂತೇ ಖುಷಿಯಿಂದ ಒಪ್ಪಿಕೊಂಡೆ.
ಕಾದಂಬರಿಕಾರ ಕುಂವಿ ಅವರಿಂದ ನಿಮ್ಮ ಸಂಭಾಷಣೆಗೆ ಯಾವ ರೀತಿ ಪ್ರತಿಕ್ರಿಯೆ ಸಿಕ್ಕಿದೆ?
ಅವರಿಗೆ ನನ್ನ ಬರವಣಿಗೆ ಇಷ್ಟವಾಗಿದೆ. ಸ್ಕ್ರೀನ್‌ಗೆ ನಮ್ಮ ಬಳ್ಳಾರಿ ಸೀಮೆಯ slang ತುಂಬಾ ಹೊಸತು. ನನ್ನ ಚೊಚ್ಚಲ ನಿರ್ದೇಶನದ ‘ಅಮರ ಪ್ರೇಮಿ ಅರುಣ್’ ಚಿತ್ರದಲ್ಲಿ ಇದನ್ನು ಪ್ರಯೋಗ ಮಾಡಿದ್ದೆ. ಈ ಧಾರಾವಾಹಿಯಲ್ಲಿ ತುಂಬಾ ಪಾತ್ರಗಳಿವೆ. ಆಗಿನ ಸಂದರ್ಭದ ಸೋಷಿಯೋ ಪೊಲಿಟಿಕಲ್ ಸಂದರ್ಭಗಳೂ ಇಲ್ಲಿ ಪ್ರಸ್ತಾಪವಾಗುತ್ತವೆ. ಈಗ ಧಾರಾವಾಹಿಯಲ್ಲಿ ಅರಮನೆ ಕತೆ, ಆಳಿನ ಮನೆಯ ಕತೆ ಹೋಗುತ್ತಿದೆ. ಮುಂದೆ ಕತೆ ಹಲವು ಮಜಲುಗಳಿಗೆ ತೆರೆದುಕೊಳ್ಳಲಿದೆ. ಕುಂವಿ ಸರ್ ಬಳ್ಳಾರಿ ಭಾಗದ ನೇಟಿವಿಯನ್ನು ತುಂಬಾ ಸೂಕ್ಷ್ಮವಾಗಿ ಬರೆದಿದ್ದಾರೆ.
ಕಾದಂಬರಿ, ಧಾರಾವಾಹಿ ಆಗುವಾಗ ಬರಹಗಾರರು ಎದುರಿಸುವ ಸವಾಲುಗಳೇನು?
ಇಲ್ಲಿ ನಾವು ಹ್ಯೂಮನ್ ಎಮೋಷನ್ಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದೇವೆ. ಜಗಳೂರವ್ವ, ರಾಜಮಾತೆ ಪಾತ್ರಗಳ ಮೇಲೆ ಹೆಚ್ಚು ಫೋಕಸ್ ಮಾಡಲಾಗುತ್ತಿದೆ. ಆಗ ಜಮೀನ್ದಾರಿ ಪದ್ಧತಿ ಹೆಚ್ಚು ಪ್ರಚಲಿತವಾಗಿತ್ತು. ಈ ಪವರ್ ಡೈನಾಮಿಕ್ಸ್, ಎಲ್ಲವನ್ನೂ ಕಳೆದುಕೊಳ್ಳುತ್ತಾ ಹೋಗುವ ಅರಮನೆಯ ಕತೆ, ರಾಜಮಾತೆಯ ಮನೆತನದ ದೇವರು ಆಳಿನ ಮೈಮೇಲೆ ಬರುವುದು… ಈ ಕಾಂಪ್ಲೆಕ್ಸಿಟೀಸ್ ಬಗ್ಗೆ ಹೆಚ್ಚು ಫೋಕಸ್ ಮಾಡುತ್ತಿದ್ದೇವೆ. ಜೊತೆಜೊತೆಗೇ ಸಾಮಾನ್ಯ ಜನರ ಕತೆಗಳನ್ನೂ ಹೇಳುತ್ತಿದ್ದೇವೆ. ಹಾಗಾಗಿ ಬರವಣಿಗೆಯಲ್ಲಿ ಸವಾಲುಗಳೂ ಇವೆ.
‘ಅರಮನೆ’ಯ ಬಹುಪಾಲು ಕಲಾವಿದರು ರಂಗಭೂಮಿ ಹಿನ್ನೆಲೆಯವರು…
ಹೌದು, ಇಂಟರೆಸ್ಟಿಂಗ್ ಅಂದ್ರೆ ಇಲ್ಲಿ ಸಿಂಕ್ ಸೌಂಡ್ ಪ್ರಯೋಗ ಮಾಡ್ತಿದ್ದಾರೆ. ನುಡಿ ಮತ್ತು ನಟನೆ ಗೊತ್ತಿರೋರು ಇದನ್ನು ಸಮರ್ಥವಾಗಿ ನಿಭಾಯಿಸಬಲ್ಲರು. ಅಲ್ಲದೆ ಇದು ಸುಮಾರು 200 ವರ್ಷಗಳ ಹಿಂದಿನ ಕಥಾನಕ. ಸೂಕ್ತ ರೆಫರೆನ್ಸ್ ಕೂಡ ಸಿಗೋದಿಲ್ಲ. ನುರಿತ ಕಲಾವಿದರು ಇರೋದ್ರಿಂದ ಸುಗಮವಾಗಿ ನಡೆದಿದೆ.
ಧಾರಾವಾಹಿ ಬರವಣಿಗೆ ಸಿನಿಮಾ writingಗಿಂತ ಭಿನ್ನ. ಒತ್ತಡ ಅನಿಸುತ್ತಾ?
ಒತ್ತಡ ಅಂತ ಅನ್ನಿಸ್ತಿಲ್ಲ. ಕೆಲವು ಬಾರಿ ಬರವಣಿಗೆಯಲ್ಲಿ ತಾಂತ್ರಿಕ ಅಂಶಗಳಿಗಾಗಿ ಬೇರೆ ರೆಫರೆನ್ಸ್ ಬೇಕಾಗುತ್ತೆ. ಆಗ ತಿಳಿದವರೊಂದಿಗೆ ಚರ್ಚೆ, ಸಂವಾದಗಳು ನಡೆಯುತ್ತವೆ. ನಿರ್ದೇಶಕ ಮಂಸೋರೆ ಅವರ ಸೂಕ್ಷ್ಮ ಸಂವೇದನೆ, ಚಿತ್ರಕಥೆ ರಚಿಸುತ್ತಿರುವ ಪಿ.ಚಂದ್ರಿಕಾ ಮೇಡಂ ಅವರ ಅನುಭವ ಎಲ್ಲವೂ ಒಟ್ಟಾಗಿ ಧಾರಾವಾಹಿ ಚೆನ್ನಾಗಿ ಆಗುತ್ತಿದೆ. ಜೊತೆಗೆ ನನ್ನ ಬೇರೆ ಓದು, ಬರಹ, ಸಮಾನ ಮನಸ್ಕರ ಒಡನಾಟಗಳು ಮನಸ್ಸನ್ನು ತಿಳಿಯಾಗಿಸುತ್ತವೆ.
ಸಿನಿಮಾ ನಿರ್ದೇಶನಕ್ಕೆ ತಯಾರಿ ನಡೆದಿದ್ಯಾ?
‘ಅಮರ ಪ್ರೇಮಿ ಅರುಣ್’ ಸಿನಿಮಾ ನಂತರ ನಾಲ್ಕು ಸ್ಕ್ರಿಪ್ಟ್‌ಗಳು ಸಿನಿಮಾ ರೂಪಕ್ಕೆ ಸಿದ್ಧವಾಗುತ್ತಿವೆ. ನನ್ನ ‘ಎಡೆ’ ಕಥಾಸಂಕಲನದಲ್ಲಿನ ‘ರೊಟ್ಟಿ, ಬೆಂಡೇಕಾಯಿ ಚಟ್ಣಿ’ ಕತೆಯನ್ನು ಚಿತ್ರಕಥೆ ಮಾಡಿದ್ದೇನೆ. ಇದು ಎರಡು ಜನರೇಷನ್ ಲವ್‌ಸ್ಟೋರಿ ಹೇಳುವ ವಿಶಿಷ್ಟ ಕಥಾನಕ. ಲೇಖಕ ಡಾ.ನಾಗರಾಜ್ ಕೋರಿ ಅವರ ಸಣ್ಣ ಕತೆಯೊಂದನ್ನು ಆಧರಿಸಿ ನಟ ಧರ್ಮಣ್ಣ ಅವರಿಗಾಗಿ ಚಿತ್ರಕಥೆ ಸಿದ್ಧಪಡಿಸಿದ್ದೇನೆ. ಸದ್ಯ ‘ಅರಮನೆ’ಯ ದೊಡ್ಡ ಜವಾಬ್ದಾರಿ ಹೆಗಲ ಮೇಲಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಕೈಗೆತ್ತಿಕೊಳ್ಳಲಿದ್ದೇನೆ.

‘ಅರಮನೆ’ ಧಾರಾವಾಹಿ ಸೆಟ್‌ನಲ್ಲಿ ಕಲಾವಿದರೊಂದಿಗೆ ನಿರ್ದೇಶಕ ಮಂಸೋರೆ







