ದಿಗಂತ್ ಅಭಿನಯದ ನೂತನ ಸಿನಿಮಾ ‘ರುದ್ರ ಕಾಲ’ ಸೆಟ್ಟೇರಿದೆ. ಬಹುಭಾಷಾ ನಟಿ ಸಮಂತಾ ಅವರು ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿ ಶುಭ ಹಾರೈಸಿದ್ದಾರೆ. ಗೋಪಿ ನಿರ್ದೇಶನದ ಚಿತ್ರ ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ತಯಾರಾಗಲಿದೆ.
ದಿಗಂತ್ ಅಭಿನಯದ ನೂತನ ಚಿತ್ರ ‘ರುದ್ರ ಕಾಲ’ ಶೀರ್ಷಿಕೆಯನ್ನು ಖ್ಯಾತ ನಾಯಕನಟಿ ಸಮಂತ ಬಿಡುಗಡೆ ಮಾಡಿ, ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ರಮೇಶ್ ನಾಯ್ಕ್ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಗೋಪಿ ಅವರು ನಿರ್ದೇಶಿಸುತ್ತಿದ್ದಾರೆ. ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಈ ಚಿತ್ರದ ಮುಹೂರ್ತ ಸಮಾರಂಭ ಇದೇ ತಿಂಗಳ 22 ರಂದು ನೆರವೇರಲಿದೆ. ‘ನಮ್ಮ ಡೈರೆಕ್ಟರ್ ಗೋಪಿ ಅವರು ಕಥೆ ಹೇಳುತ್ತಿದ್ದಾಗಲೇ ಈ ಚಿತ್ರದಲ್ಲಿ ನಟಿಸಬೇಕೆಂದು ನಿರ್ಧಾರ ಮಾಡಿದೆ. ಹಾಗೆಯೇ ನಮ್ಮ ಚಿತ್ರದ ಟೈಟಲ್ ಸಮಂತ ಅವರಿಂದ ರಿಲೀಸ್ ಆಗಿರುವುದು ತುಂಬಾ ಸಂತೋಷವಾಗಿದೆ. ಚಿತ್ರ ಎಲ್ಲರಿಗೂ ಮೆಚ್ಚುಗೆಯಾಗುವ ಭರವಸೆ ಇದೆ’ ಎನ್ನುತ್ತಾರೆ ನಟ ದಿಗಂತ್.
‘ನಮ್ಮ ಚಿತ್ರದ ಶೀರ್ಷಿಕೆ ಅನಾವರಣ ಮಾಡಿಕೊಟ್ಟ ಸಮಂತ ಅವರಿಗೆ ಧನ್ಯವಾದ. ಇದು ನಮ್ಮ ಚಿತ್ರದ ಶುಭಾರಂಭ ಎಂದು ಭಾವಿಸುತ್ತೇನೆ. ‘ರುದ್ರ ಕಾಲ’ ಚಿತ್ರಕ್ಕೆ ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಒಂದೇ ಹಂತದ ಚಿತ್ರೀಕರಣ ನಡೆಸಿ ಅದಷ್ಟು ಬೇಗ ತೆರೆಗೆ ತರುವ ಯೋಚನೆ ಇದೆ. ಇದು ನನ್ನ ನಿರ್ದೇಶನದ ನಾಲ್ಕನೇ ಚಿತ್ರ. ಕಥೆ ಕೇಳಿ ಮೆಚ್ಚಿಕೊಂಡು ನಾಯಕನಾಗಿ ನಟಿಸುತ್ತಿರುವ ದಿಗಂತ್ ಹಾಗೂ ನಿರ್ಮಾಣ ಮಾಡುತ್ತಿರುವ ರಮೇಶ್ ನಾಯ್ಕ್ ಅವರಿಗೆ ನನ್ನ ಧನ್ಯವಾದ’ ಎನ್ನುತ್ತಾರೆ ನಿರ್ದೇಶಕ ಗೋಪಿ. ರಮೇಶ್ ಅವರು ಕಥೆ ಬರೆದಿರುವ ಈ ಚಿತ್ರಕ್ಕೆ ಕ್ರಿಸ್ಟೋಫರ್ ಜೋಸೆಫ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಲೈನ್ ಪ್ರೊಡ್ಯೂಸರ್ ಆಗಿ ನವೀನ್ ಹಾಗೂ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಶಿವರಾಜ್ ಕಾರ್ಯನಿರ್ವಹಿಸುತ್ತಿದ್ದಾರೆ. ರಮೇಶ್ ಕೆ ಪೂಜಾರಿ ಈ ಚಿತ್ರದ ಸಹ ನಿರ್ದೇಶಕರು.







