ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಮೇರು ತಾರೆ ದಿಲೀಪ್ ಕುಮಾರ್

ಪೋಸ್ಟ್ ಶೇರ್ ಮಾಡಿ

ಹಿಂದಿ ಚಿತ್ರರಂಗದ ಮೇರು ನಟ ದಿಲೀಪ್ ಕುಮಾರ್ ಹುಟ್ಟಿದ್ದು ಪೇಶಾವರದಲ್ಲಿ (ಈಗಿನ ಪಾಕಿಸ್ತಾನ) 1922, ಡಿಸೆಂಬರ್ 11ರಂದು. ಜನ್ಮನಾಮ ಮೊಹಮ್ಮದ್ ಯೂಸುಫ್ ಖಾನ್. ದಿಲೀಪ್‌ರ ತಂದೆ ಲಾಲಾ ಗುಲಾಮ್ ಸರ್ವಾರ್ ಪೇಶಾವರ ಮತ್ತು ಮಹಾರಾಷ್ಟ್ರದಲ್ಲಿ ಹಣ್ಣಿನ ತೋಟ ಹೊಂದಿದ್ದರು. 1930ರ ಸುಮಾರಿಗೆ ದಿಲೀಪ್ ಕುಮಾರ್ ಕುಟುಂಬ ಶಾಶ್ವತವಾಗಿ ಪೇಶಾವರ ತೊರೆದು ಮುಂಬೈಗೆ ಬಂದು ನೆಲೆಸಿತು. ದಿಲೀಪ್ ಕುಮಾರ್ 1940ರಲ್ಲಿ ಪುಣೆಗೆ ತೆರಳಿ ಹೊಟೇಲ್ ವ್ಯವಹಾರ ಆರಂಭಿಸಿದರು. ಆಗ ಖ್ಯಾತ ನಟಿ ದೇವಿಕಾ ರಾಣಿ ಕಣ್ಣಿಗೆ ಬಿದ್ದಿದ್ದು ದಿಲೀಪ್ ಜೀವನದ ದೊಡ್ಡ ತಿರುವು. ನಿರ್ದೇಶಕ ಹಿಮಾನ್ಶು ರಾಯ್ ಪತ್ನಿಯೂ ಆದ ನಟಿ ದೇವಿಕಾ, ದಿಲೀಪ್‌ರನ್ನು ಬೆಳ್ಳಿತೆರೆಗೆ ಪರಿಚಯಿಸಿದರು. ಹಾಗೆ ದಿಲೀಪ್ ಅಭಿನಯಿಸಿದ ಮೊದಲ ಸಿನಿಮಾ ‘ಜ್ವರ್ ಭಟಾ’ (1944). ಈ ಚಿತ್ರದ ನಿರ್ಮಾಪಕ ಅಮಿಯಾ ಚಕ್ರವರ್ತಿ, ಯೂಸುಫ್ ಖಾನ್‌ಗೆ ‘ದಿಲೀಪ್ ಕುಮಾರ್’ ಎಂದು ನಾಮಕರಣ ಮಾಡಿದರು.

ಖ್ಯಾತ ಗಾಯಕಿ, ನಟಿ ನೂರ್ ಜಹಾನ್ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ದಿಲೀಪ್‌ಗೆ ವರವಾಯ್ತು. ನೂರ್ ಅವರಿಗೆ ನಾಯಕಿಯಾಗಿ ‘ಜುಗ್ನು’ ಚಿತ್ರದಲ್ಲಿ ನಟಿಸಿದರು. ಮುಂದೆ ರೊಮ್ಯಾಂಟಿಕ್ ಸಿನಿಮಾ ‘ಅಂದಾಜ್’ನಲ್ಲಿ (1949) ಅವಕಾಶ. ರಾಜ್‌ಕಪೂರ್ ನಾಯಕನಾಗಿದ್ದ ಚಿತ್ರದಲ್ಲಿ ದಿಲೀಪ್‌ಗೆ ಉತ್ತಮ ಪಾತ್ರವಿತ್ತು. ನಂತರ ದೇವ್ ಆನಂದ್‌ರ ‘ಇನ್ಸಾನಿಯಾತ್’ (1955) ಸಿನಿಮಾ ಅವರಿಗೆ ಸ್ಟಾರ್ ಪಟ್ಟು ತಂದುಕೊಟ್ಟಿತು. 50ರ ದಶಕದಲ್ಲಿ ರಾಜ್‌ಕಪೂರ್, ದೇವ್ ಆನಂದ್ ಜೊತೆ ದಿಲೀಪ್ ಕುಮಾರ್ ಕೂಡ ಸ್ಟಾರ್‌ ಆಗಿ ಹೊರಹೊಮ್ಮಿದರು. ‘ದೀದಾರ್’ (1951), ‘ಅಮರ್’ (1954), ‘ದೇವದಾಸ್’ (1955), ‘ಮಧುಮತಿ’ (1958) ಸಿನಿಮಾಗಳಲ್ಲಿ ದಿಲೀಪ್‌ಗೆ ದುರಂತ ನಾಯಕನ ಪಾತ್ರ. ಈ ಚಿತ್ರಗಳ ದೊಡ್ಡ ಯಶಸ್ಸಿನೊಂದಿಗೆ ಅವರು ‘ಟ್ರ್ಯಾಜಿಡಿ ಕಿಂಗ್’ ಎಂದೇ ಹೆಸರಾದರು. ‘ಆನ್’ (1952) ಚಿತ್ರದ ಲವರ್‌ಬಾಯ್, ‘ಆಜಾದ್’ನ (1955) ಕಾಮಿಡಿ ಪಾತ್ರಗಳಲ್ಲೂ ಅವರು ಮಿಂಚಿದರು.

1960ರ ‘ಮೊಘಲ್-ಎ-ಅಜಾಮ್’, ದಿಲೀಪ್ ಸಿನಿಮಾ ಜೀವನದ ಮೇರು ಸಿನಿಮಾ. ಇದು ಹಿಂದಿ ಚಿತ್ರರಂಗದ ಚಿರಸ್ಮರಣೀಯ ಪ್ರಯೋಗ ಎಂದೇ ಹೆಸರಾಗಿದೆ. ದಿಲೀಪ್ ಕುಮಾರ್ ಅವರಿಗೆ ಇಂಗ್ಲಿಷ್ ಚಿತ್ರವೊಂದರಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. 1962ರಲ್ಲಿ ಬ್ರಿಟಿಷ್ ನಿರ್ದೇಶಕ ಡೇವಿಡ್ ಲೀನ್ ತಮ್ಮ ‘ಲಾರೆನ್ಸ್‌ ಆಫ್ ಅರೇಬಿಯಾ’ ಚಿತ್ರದಲ್ಲಿ ನಟಿಸುವಂತೆ ಆಹ್ವಾನಿಸಿದ್ದರು. ದಿಲೀಪ್ ಒಲ್ಲೆ ಎಂದ ಪಾತ್ರ ಕೊನೆಗೆ ಈಜಿಪ್ಟ್‌ ನಟ ಒಮರ್ ಶರೀಫ್ ಪಾಲಾಯಿತು. 60ರ ದಶಕದಲ್ಲಿ ದಿಲೀಪ್‌ರ ಕೆಲವು ಸಿನಿಮಾಗಳು ಗೆಲ್ಲಲಿಲ್ಲ. ಮುಂದೆ ‘ರಾಮ್ ಔರ್ ಶ್ಯಾಮ್’ ಚಿತ್ರದ ದೊಡ್ಡ ಯಶಸ್ಸಿನೊಂದಿಗೆ ಗೆಲುವಿನ ಹಾದಿಗೆ ಮರಳಿದರು. 70ರ ದಶಕದಲ್ಲಿ ದಿಲೀಪ್ ಆಗಷ್ಟೇ ಉದ್ಯಮಕ್ಕೆ ಕಾಲಿಟ್ಟಿದ್ದ ರಾಜೇಶ್ ಖನ್ನಾ, ಅಮಿತಾಭ್ ಬಚ್ಚನ್ ಅವರೊಂದಿಗೆ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದರು.

1976ರ ‘ಬೈರಾಗ್’ ಚಿತ್ರದಲ್ಲಿ ದಿಲೀಪ್ ತ್ರಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ನೆಲಕಚ್ಚಿದ್ದರಿಂದ ಅವರು ನಟನೆಯಿಂದ ಐದು ವರ್ಷ ವಿರಾಮ ಪಡೆದರು. ಬಹುತಾರಾಗಣದ ‘ಕ್ರಾಂತಿ’ (1981) ಚಿತ್ರದೊಂದಿಗೆ ದಿಲೀಪ್ ಮತ್ತೆ ತೆರೆಗೆ ಮರಳಿದರು. ಆಗಿನ ಸೂಪರ್‌ಸ್ಟಾರ್ ಅಮಿತಾಭ್ ಜೊತೆ ‘ವಿಧಾತಾ’ (1982), ‘ಮಶಾಲ್’ (1984), ‘ಕರ್ಮ್’ (1986) ಚಿತ್ರಗಳಲ್ಲಿ ಅಭಿನಯಿಸಿದರು. ಅವರು ಮೇಜರ್ ಪಾತ್ರದಲ್ಲಿ ನಟಿಸಿದ ಕೊನೆಯ ಸಿನಿಮಾ ‘ಸೌಧಾಗರ್’ (1991). ದಿಲೀಪ್ ನಿರ್ದೇಶಿಸಿದ ಏಕೈಕ ಸಿನಿಮಾ ‘ಕಾಳಿಂಗ’ (1996) ಬಾಕ್‌ಸ್‌ ಆಫೀಸ್‌ನಲ್ಲಿ ಯಶಸ್ವಿಯಾಗಲಿಲ್ಲ. ಅವರು ಕೊನೆಯ ಬಾರಿಗೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡ ಸಿನಿಮಾ ‘ಕ್ವಿಲಾ’. ಅವರ ಕ್ಲಾಸಿಕ್ ಸಿನಿಮಾ ‘ಮೊಘಲ್-ಎ-ಅಜಾಮ್’ 2004ರಲ್ಲಿ ಬಣ್ಣದ ಲೇಪದೊಂದಿಗೆ ತೆರೆಕಂಡಿತ್ತು. ಬಣ್ಣದ ಲೇಪದೊಂದಿಗೆ ರಿಲೀಸ್ ಆದ ದಿಲೀಪ್‌ರ ‘ನಯಾ ದೌರ್’ (2007) ಚಿತ್ರಕ್ಕೂ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ದಿಲೀಪ್ ಕುಮಾರ್ 1966ರಲ್ಲಿ ನಟಿ ಸಾಯಿರಾ ಬಾನು ಅವರನ್ನು ವರಿಸಿದರು. ಅತ್ಯುತ್ತಮ ಅಭಿನಯಕ್ಕಾಗಿ ದಿಲೀಪ್‌ಗೆ  8 ಫಿಲ್ಮ್‌ಫೇರ್‌ ಸಂದಿವೆ. ಭಾರತ ಸರ್ಕಾರ 1991ರಲ್ಲಿ ಪದ್ಮಭೂಷಣ ಮತ್ತು 1994ರಲ್ಲಿ ದಾದಾ ಸಾಹೇಬ್ ಫಾಲ್ಕೆ ಗೌರವ ನೀಡಿ ಪುರಸ್ಕರಿಸಿದೆ. ‘ನಿಶಾನ್-ಎ-ಪಾಕಿಸ್ತಾನ್’ ಪ್ರಶಸ್ತಿಯೊಂದಿಗೆ ಪಾಕಿಸ್ತಾನ ದಿಲೀಪ್‌ರನ್ನು ಸ್ಮರಿಸಿದೆ. ಅಮಿತಾಭ್ ಬಚ್ಚನ್, ಶಾರುಖ್ ಖಾನ್ ಸೇರಿದಂತೆ ಇತ್ತೀಚಿನ ಅನೇಕ ಯುವ ನಟರಿಗೆ ದಿಲೀಪ್ ಕುಮಾರ್ ಪ್ರೇರಣೆಯಾಗಿದ್ದಾರೆ.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

‘ದಾದಾ’ ಎಂದೇ ಕರೆಸಿಕೊಳ್ಳುತ್ತಿದ್ದ ನಿರ್ಮಾಣ ನಿರ್ವಾಹಕ, ನಟ ಶಿವಾಜಿ ರಾವ್

ಸಿನಿಮಾವೊಂದು ತಯಾರಾಗುವ ಪ್ರತೀ ಹಂತದಲ್ಲಿ ನಿರ್ಮಾಣ ನಿರ್ವಾಹಕನ ಪಾತ್ರ ದೊಡ್ಡದು. ಚಿತ್ರದಲ್ಲಿ ಕೆಲಸ ಮಾಡುವ ನಟ-ನಟಿಯರು ಹಾಗೂ ತಂತ್ರಜ್ಞರಿಗೆ ಚಿತ್ರೀಕರಣದ

ಸ್ವಂತಿಕೆಯ ಹರಿಕಾರ ಶಂಕರ್ ಸಿಂಗ್

(ಬರಹ: ಎನ್‌.ಎಸ್‌.ಶ್ರೀಧರಮೂರ್ತಿ, ಲೇಖಕ) ಚಿತ್ರನಿರ್ಮಾಪಕ, ನಿರ್ದೇಶಕ ಶಂಕರ್‌ ಸಿಂಗ್‌ ಅವರ ಜನ್ಮಶತಮಾನೋತ್ಸವ ಸಂದರ್ಭವಿದು (ಜನನ 15, ಆಗಸ್ಟ್ 1921). ಕನ್ನಡ