
ಸಿನಿಮಾ ಬರಹಗಾರ
ಪಾತ್ರಗಳ ಆಯ್ಕೆಯಲ್ಲಿ ಎಸ್‌ವಿಆರ್ ಅವರದ್ದು ವೃತ್ತಿ ಬದುಕಿನ ಆರಂಭದ ದಿನಗಳಿಂದಲೂ ಎಚ್ಚರಿಕೆಯ ನಡೆ. ಅವರಿಗೆ ನಾಯಕನಟನಾಗುವ ಸಾಕಷ್ಟು ಅವಕಾಶಗಳಿದ್ದವು. ಆದರೆ ಅವರು ಹೀರೋ ಆಗಲು ಬಯಸಿದವರಲ್ಲ. ನಟನೆಗೆ ಅವಕಾಶವಿರುವ ಪೋಷಕ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ಪಾತ್ರಗಳಿಗೆ ಜೀವ ತುಂಬಿದರು.
ಸಮರಾಲ ವೆಂಕಟರಂಗಾರಾವು ಅಂದರೆ ಸಾಮಾನ್ಯವಾಗಿ ಯಾರಿಗೂ ತಕ್ಷಣಕ್ಕೆ ಇದ್ಯಾರು ಎಂದು ಗೊತ್ತಾಗದು. ಎಸ್.ವಿ.ರಂಗಾರಾವ್ ಅಥವಾ ಎಸ್.ವಿ.ಆರ್ ಅಂದರೆ ಗೌರವದ ಭಾವ ಮೂಡುತ್ತದೆ. ನಟ, ನಿರ್ಮಾಪಕ, ನಿರ್ದೇಶಕರಾಗಿ ಹಾಗೂ ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನಟಿಸಿ ‘ವಿಶ್ವನಟ ಚಕ್ರವರ್ತಿ’ ಎಂದು ಅಭಿಮಾನಿಗಳಿಂದ ಕರೆಸಿಕೊಂಡವರು ಎಸ್‌ವಿಆರ್. ಶ್ರೇಷ್ಠ ನಟನೆಗಾಗಿ ಐದು ಬಾರಿ ರಾಷ್ಟ್ರಪತಿ ಗೌರವ ಪಡೆದಿರುವ ಅವರು ಆಫ್ರೋ-ಇಂಡಿಯನ್ ಚಿತ್ರೋತ್ಸವದ ಅಂತಾರಾಷ್ಟ್ರೀಯಪ್ರಶಸ್ತಿ ಪಡೆದಿದ್ದಾರೆ. ಆಂಧ್ರದ ಪ್ರತಿಷ್ಠಿತ ನಂದಿ ಪುರಸ್ಕಾರಗಳು, ಫಿಲ್ಮ್‌ಫೇರ್ ಗೌರವಕ್ಕೆ ಪಾತ್ರರಾಗಿದ್ದಾರೆ. ಸಿನಿಮಾ ಇತಿಹಾಸಕಾರರು ಎಸ್‌ವಿಆರ್ ಅವರನ್ನು ‘ಮೆಥೆಡ್ ಆಕ್ಟರ್’ ಎಂದು ಗುರುತಿಸುತ್ತಾರೆ.

ಸುಮಾರು ಮೂರು ದಶಕಗಳ ನಟನಾ ಬದುಕಿನಲ್ಲಿನ ಅವರ ವೈವಿಧ್ಯಮಯ ಪಾತ್ರಗಳು ಸಿನಿಪ್ರೇಮಿಗಳ ಮನದಲ್ಲಿ ಅಚ್ಚಾಗಿವೆ. ಇವತ್ತಿಗೂ ನಮ್ಮ ಮನದಲ್ಲಿ ಘಟೋತ್ಕಚ ಎಂದರೆ ನೆನಪಿಗೆ ಬರುವುದು ‘ಮಾಯಾಬಜಾರ್’ ಚಿತ್ರದ ಎಸ್‌ವಿಆರ್. ಕೀಚಕ (ನರ್ತನಶಾಲಾ), ದುರ್ಯೋಧನ (ಪಾಂಡವ ವನವಾಸಮು), ಮಾಯಾಸುರ (ಭೂಕೈಲಾಸ), ಹಿರಣ್ಯ ಕಶಿಪು (ಭಕ್ತಪ್ರಹ್ಲಾದ), ಹರಿಶ್ಚಂದ್ರ (ಸತ್ಯಹರಿಶ್ಚಂದ್ರ), ಭೋಜರಾಜ (ಮಹಾಕವಿಕಾಳಿದಾಸು), ಮಾಂತ್ರಿಕ (ಪಾತಾಳಭೈರವಿ), ಯಮ (ಸತಿಸಾವಿತ್ರಿ). ನರಕಾಸುರ (ದೀಪಾವಳಿ ಮತ್ತು ವಿನಾಯಕ ಚವತಿ), ರಾವಣ (ಸಂಪೂರ್ಣರಾಮಾಯಣ), ಅಕ್ಬರ್ (ಅನಾರ್ಕಲಿ) ಸೇರಿದಂತೆ ಅವರು ಅಭಿನಯಿಸಿರುವ ಪಾತ್ರಗಳು ಸಿನಿಪ್ರೇಮಿಗಳ ಮನದಲ್ಲಿ ಅಚ್ಚಳಿಯದ ಸ್ಥಾನ ಪಡೆದಿವೆ. ಎಸ್‌ವಿಆರ್ ಅಭಿನಯದ ‘ನರ್ತನಶಾಲಾ’ ಚಿತ್ರ ಜಕಾರ್ತಾದ ಆಫ್ರೋ-ಇಂಡಿಯನ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಎಸ್‌ವಿಆರ್ ಅತ್ಯುತ್ತಮ ನಟ ಗೌರವಕ್ಕೆ ಪಾತ್ರರಾಗಿದ್ದರು. ಪೌರಾಣಿಕ, ಜಾನಪದ, ಸಾಮಾಜಿಕ, ಕೌಟುಂಬಿಕ ಪಾತ್ರಗಳಲ್ಲಿ ಮಿಂಚಿ, ಪಾತ್ರಕ್ಕೆ ನ್ಯಾಯ ಒದಗಿಸಿ, ಖಳನಟನಾಗಿಯೂ ನಟಿಸಿ, ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುವ ನಟರಾಗಿದ್ದರು.
ಆಂಧ್ರದ ರಾಜಮಂಡ್ರಿಯಲ್ಲಿ ಜನಿಸಿದ ಅವರು ಮೊದಲಿಗೆ ಜಮ್‌ಶೆಡ್‌ಪುರದ ಟಾಟಾ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಇದ್ದುದು ಕೆಲವೇ ತಿಂಗಳು, ಸಿನಿಮಾ ಹಾಗೂ ರಂಗಭೂಮಿಯ ಗೀಳು ಅವರನ್ನು ಮದರಾಸಿಗೆ ಕರೆದೊಯ್ದಿತು. 1947ರಲ್ಲಿ ‘ವರೂಧಿನಿ’ ಚಿತ್ರದ ಮೂಲಕ ಎಸ್‌ವಿಆರ್ ಬೆಳ್ಳಿತೆರೆ ಪ್ರವೇಶವಾಯ್ತು. ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿ, ಅಂದಿನ ಎಲ್ಲಾ ಮಹಾನ್ ನಾಯಕರ ಜೊತೆ ಅಭಿನಯಿಸಿದರು. ಸಾಮಾಜಿಕ ಚಿತ್ರಗಳಾದ ಪಲ್ಲೆಟೂರಿಪಿಲ್ಲ, ಗುಂಡಮ್ಮಕಥ, ದೇವದಾಸು, ದಸರಾ ಬುಲ್ಲೋಡು, ಸುಖದುಃಖಾಲು, ವಸಂತಮಾಳಿಗೈ, ನಾನುಮ್ಒರುಪೆಣ್, ಅನ್ನೈ, ತೋಡಿಕೋಡಳ್ಳು, ನಾದಿ ಆಡಜನ್ಮ, ಭಾಂಧವ್ಯಲು, ರಾಮು, ತೋಡುನೀಡ, ತಾತಮನವುಡು.. ಹೀಗೆ ಹಲವು ಚಿತ್ರಗಳು. ಮುಖ್ಯವಾಗಿ ಸಾಮಾಜಿಕ ಚಿತ್ರಗಳಲ್ಲಿ ‘ಪಂಡಂಟಿಕಾಪುರಂ’ ಚಿತ್ರದ ಅವರ ಅಭಿನಯ ಮನಮುಟ್ಟುತ್ತದೆ.

ಅವರ ಕೊನೆಯ ಚಿತ್ರ 1974ರಲ್ಲಿ ತಯಾರಾದ ‘ಯಶೋಧಕೃಷ್ಣ’. ಈ ಸಿನಿಮಾ ಬಿಡುಗಡೆಯಾಗುವ ಮುನ್ನವೇ 1974 ಜುಲೈ 18ರಂದು ಅವರು ಹೃದಯಾಘಾತದಿಂದ ನಿಧನರಾದರು. ಆಗ ಅವರಿಗೆ 56 ವರ್ಷವಷ್ಟೆ. ಎಸ್‌ವಿಆರ್ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇಂದು ಅವರು ನಮ್ಮೊಡನಿಲ್ಲದಿದ್ದರೂ ಅವರ ಅಭಿನಯದ ಚಿತ್ರಗಳು ಎಲ್ಲಾ ಕಾಲಕ್ಕೂ ನಮ್ಮನ್ನು ರಂಜಿಸುತ್ತದೆ. ಎಸ್‌ವಿಆರ್‌ಗೌರವಾರ್ಥ ಭಾರತ ಸರ್ಕಾರ ಅವರ ಹೆಸರಿನ ಅಂಚೆ ಚೀಟಿ ಬಿಡುಗಡೆ ಮಾಡಿದರೆ, ಆಂಧ್ರ ಸರ್ಕಾರ ಇವರ ಹೆಸರಿನಲ್ಲಿ ಪೋಷಕ ನಟರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.