ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಸ್ವರಮಾಂತ್ರಿಕ ಪಂಚಮ್

ಸಂಗೀತ ಸಂಯೋಜಕ
ಪೋಸ್ಟ್ ಶೇರ್ ಮಾಡಿ
ಶ್ರೀನಿವಾಸ ಪ್ರಸಾದ್
ಲೇಖಕ

ಮೊಹಮ್ಮದ್ ರಫಿ – ಆಶಾ ಬೋಸ್ಲೆ ಹಾಡಿದ ‘ಚುರಾಲಿಯಾ  ಹೆ ತುಂನೆ ಜೋ ದಿಲ್’ ಹಾಡಿನ ಆರಂಭದ ರಿದಂಗೆ ಪಂಚಮ್‌ ಅವರು ಬಿಯರ್ ಬಾಟಲ್ ಮೇಲೆ ಚಮಚಗಳನ್ನು ಲಯಬದ್ಧವಾಗಿ ನುಡಿಸಿ ಚಮತ್ಕಾರ ಸೃಷ್ಟಿಸಿದ್ದರು – ಸಂಗೀತ ಸಂಯೋಜಕ ಆರ್‌.ಡಿ.ಬರ್ಮನ್ ಕುರಿತ ಲೇಖಕ ಶ್ರೀನಿವಾಸ ಪ್ರಸಾದ್ ಬರಹ.

ಯಾದೋಂಕಿ ಬಾರಾತ್ ನಿಕ್ ಲೀ ಹೆ ಆಜ್ ದಿಲ್ ಕೆ ದ್ವಾರೇ..

ಮೇಲ್ನೋಟಕ್ಕೆ ಇವರು ಎಲ್ಲರಿಗೂ ತಮಾಷೆಯ ಮತ್ತು ಹುಡುಗಾಟದ ಸ್ವಭಾವದವರ ಹಾಗೇ ಕಂಡರು. ಚಿತ್ರ – ಖಾಸಗಿ ಬದುಕು ಎರಡರಲ್ಲೂ ಬಹಳ ನೊಂದು ನೆಂದು 53 ವರ್ಷಕ್ಕೇ ಅವರೇ ಸಂಯೋಜಿಸಿದ ಹಾಡಾದ ‘ಜಿಂದಗಿ ಕೆ ಸಫರ್ ಮೆ ಗುಜ಼ರ್ ಜಾತೇ ಹೆ ಜೋ ಮೊಕಾಮ್, ವೋ ನಹೀ ಆತೇ, ವೋ ಫಿರ್ ನಹೀ ಆತೇ’ ಎಂದು ಮರೆಯಾದ ರಾಗ ಗಾರುಡಿಗ ಆರ್.ಡಿ. ಬರ್ಮನ್  (ಪಂಚಮ್)  ನನ್ನನ್ನು ಇಂದಿಗೂ ಕಾಡುವ ಮಹಾನ್ ಸಂಗೀತ ನಿರ್ದೇಶಕ. ಆ ಅದ್ಭುತ ಸಂಗೀತ ನಿರ್ದೇಶಕನ ನೂರಾರು ಮಧುರ ಹಾಡುಗಳು ಸ್ಮೃತಿಪಟಲದಲ್ಲಿ ಹಾಸುಹೊಕ್ಕಾಗಿವೆ.

ನಿಸುಲ್ ತನಾರೆ ಪ್ಯಾರ್ ಕಾ ಮೌಸಂ ಆಯಾ, ಮೇರೆ ಸಾಮ್ನೆ ವಾಲಿ ಖಿಡ್ಕಿ ಮೆ, ಬಾಹೋಮೆ ಚಲೀ ಆವ್, ಏ ಜವಾನಿ ಹೇ ದಿವಾನಿ, ಚಡ್ತಿ ಜವಾನಿ ತೇರಿ ಚಾಲ್ ಮಸ್ತಾನಿ, ಲೇಕರ್ ಹಂ ದೀವಾನಾ ದಿಲ್… ಈ ಹಾಡುಗಳ ಮಧುರಾನುಭೂತಿಯ ಮುದ್ರೆ ಚಿತ್ರರಸಿಕರ ಎದೆಯಲ್ಲಿ ಸದಾ ಶಾಶ್ವತ ಎನ್ನಲು ಅಡ್ಡಿ ಇಲ್ಲ. ಇಂಥ ಸಾವಿರಾರು ಗೀತೆಗಳನ್ನು ತಮ್ಮ ರಾಗ ವೈಭವದಿಂದ ಸುಶ್ರಾವ್ಯವಾಗಿಸಿದ ಆರ್.ಡಿ.ಬರ್ಮನ್ ಭಾರತೀಯ ಚಿತ್ರರಂಗದ ಅಪರೂಪದ ಮೇಧಾವಿ.  ಆರ್.ಡಿ.ಬರ್ಮನ್, ಕಿಶೋರ್ ಕುಮಾರ್, ರಾಜೇಶ್ ಖನ್ನಾ ಇವರ ತ್ರಿವೇಣಿಸಂಗಮದ ಮಧುರ ಯಶಸ್ಸಿನ ಸಂಚಲನ ಹಿಂದಿ ಚಿತ್ರರಂಗದ ಅನರ್ಘ್ಯ, ಸಂಪದ್ಭರಿತ ಸಂಪುಟವೇ ಹೌದು.

ಅಪ್ಪ ಸಂಗೀತಗಾರ – ಸಂಗೀತನಿರ್ದೇಶಕ ಸಚಿನ್ ದೇವ್ ಬರ್ಮನ್ ಮುಂದೆ, 1956ರಲ್ಲಿ ತೆರೆಕಂಡ ‘ಫಂತೂಷ್’ ಚಿತ್ರಕ್ಕೆ ‘ಆಯೆ ಮೇರಿ ಟೋಪಿ ಪಲಟ್ ಕೆ..’ ಗೀತೆಯ ಸಂಗೀತವನ್ನು ಬಳಸಿಕೊಳ್ಳುತ್ತಾರೆ. ಆದರೆ ಕೇವಲ 9 ವರ್ಷದ ಹುಡುಗ ಆರ್.ಡಿ ಬರ್ಮನ್ ಇದಕ್ಕೆ ಸಂಗೀತ ಸಂಯೋಜಿಸಿದ್ದನ್ನೇ ಅಪ್ಪ ಬಳಸಿಕೊಳ್ತಾರೆ, ಪ್ಯಾಸಾ ಚಿತ್ರಕ್ಕೂ ಮಗ ಆರ್. ಡಿ. ಚಿಕ್ಕವಯಸ್ಸಿನಲ್ಲೇ ಸಂಯೋಜಿಸಿದ್ದ ‘ಸರ್ ಜೋ ತೇರಾ ಚಕರಾಯೇ’ ಗೀತೆಯ ರಾಗವನ್ನೇ ಬಳಸಿಕೊಂಡಿದ್ದರು. ‘ಆರಾಧನಾ’ ಚಿತ್ರದ ಸೂಪರ್ ಗೀತೆ ‘ಮೇರೇ ಸಪನೋಂಕಿ ರಾಣಿ ಕಬ್ ಆಯೇ’  ಹಾಡಿನಲ್ಲಿ  ನಾಯಕನ ಗೆಳೆಯ ನುಡಿಸುವ ಮೌತ್ ಆರ್ಗನ್ ಸಂಯೋಜನೆ ಪಂಚಂ ಕೈಚಳಕವೇ ಹೌದು. “ಏನ್ಮಾಡ್ಲಿ, ನಾನು ಸಂಯೋಜನೆ ಮಾಡಿದ ಎಷ್ಟೋ ಗೀತೆಗಳು ಅಪ್ಪನ ಹೆಸರಲ್ಲಿದೆ, what to do!” ಎಂದು ತಮಾಷೆಯಾಗಿಯೇ ಆರ್.ಡಿ ಹೇಳಿಕೊಂಡೂ ಇದ್ದರು.

ಆರ್.ಡಿ ಬೇಡ ಎಂದು ಬಂದ ಶಮ್ಮಿಕಪೂರ್ ಅದೇ ಆರ್.ಡಿ ಅವರ  ಕೈಕುಲುಕಿ ಅಭಿನಂದಿಸಿದ್ದರು. ನಿರ್ಮಾಪಕ ನಾಸಿರ್ ಹುಸೇನ್ ಅವರ ‘ತೀಸ್ರಿ ಮಜ಼ಿಲ್’ಗೆ ಶಮ್ಮಿಕಪೂರ್ ನಾಯಕ. (ದೇವಾನಂದ್ ಬೇಡ ಎಂದು ಬಿಟ್ಟ ಚಿತ್ರ) ಶಮ್ಮಿಗೆ ಶಂಕರ್-ಜೈಕಿಶನ್ ಸಂಗೀತ ನಿರ್ದೇಶನ ಮಾಡಲೆಂಬ ಆಸೆ. ಆದರೆ, ಆರ್.ಡಿ.ಬರ್ಮನ್ ಎಂದು ಗೊತ್ತಾಗಿ ಧುಮುಗುಡುತ್ತಾ ಸ್ಟುಡಿಯೋಗೆ ಬಂದ ಶಮ್ಮಿ ಎಲ್ಲರ ಮುಂದೆ ಕೂಗಾಡಿದಾಗ, ಆರ್.ಡಿ .ಬರ್ಮನ್ ತಣ್ಣಗೆ ತಾವು ಸಂಯೋಜಿಸಿದ್ದ ಗೀತೆಗಳನ್ನು ಶಮ್ಮಿಗೆ ಕೇಳಿಸಿದರು. ವೋ ಹಸೀನಾ ಜ಼ುಲ್ಫೋವಾಲಿ, ಆಜಾ ಆಜಾ ಮೆ ಹು ಪ್ಯಾರ್ ತೇರಾ.. ಹಾಡುಗಳ ಸಂಯೋಜನೆ ಕೇಳಿದ ಶಮ್ಮಿಕಪೂರ್  ಆನಂದ ತಡೆಯಲಾರದೆ, ಮೇಜು ಕುಟ್ಟುತ್ತಾ, ಶಿಳ್ಳೆ ಹಾಕಿ, ‘ಈ ಗೀತೆಗಳು ಈ ವರ್ಷದ ಸೂಪರ್ ಡೂಪರ್ ಗೀತೆಗಳಾಗುತ್ತವೆ’ ಎಂದು ಆರ್.ಡಿ ಬರ್ಮನ್  ಅವರನ್ನು ಮನಸಾರೆ ಅಭಿನಂದಿಸಿದ್ದರು. ಇದು ಪಂಚಮ್‌ ದಾ ಅವರ ಪರಮ ಪ್ರತಿಭೆಯ ಒಂದು ಸಣ್ಣ ಝಲಕ್.

ವೈವಿಧ್ಯತೆಯ ಪ್ರಯೋಗಶೀಲರು ಆರ್.ಡಿ ಬರ್ಮನ್. ‘ತೀಸ್ರಿ ಮಂಜ಼ಿಲ್’ನ ‘ಓ ಮೇರೆ ಸೋನಾ ರೆ ಸೋನಾರೆ ಸೋನ’ ಹಾಡಿನಲ್ಲಿ ಮೊಟ್ಟಮೊದಲ ಬಾರಿಗೆ ಎಲೆಕ್ಟ್ರಾನಿಕ್ ವಾದ್ಯದ ಸಮರ್ಥ ಬಳಕೆ ಮಾಡಿದ ಪಂಚಮ್‌ ‘ಡಾರ್ಲಿಂಗ್ ಡಾರ್ಲಿಂಗ್’ ಚಿತ್ರದ ‘ರಾತ್ ಗಯೀ ಬಾತ್ ಗಯೀ’ ..ಕ್ಯಾಬರೆ ಹಾಡಿಗೆ ಸಂಯೋಜನೆ ಮಾಡುವಾಗ ತಮ್ಮ ಸಹೋದ್ಯೋಗಿ ಅಮೃತ್ ಅವರ ಅಂಗಿ ಬಿಚ್ಚಿಸಿ ಮೃದುವಾಗಿ ಬೆನ್ನ ಮೇಲೆ ಕುಟ್ಟುತ್ತಾ ಮೈಕ್ರೋಫೋನ್ ಬಳಸಿ ಆ ಹಾಡಿನ ಲಯ ಹೆಚ್ಚಿಸಿದರು. ‘ಗುಲಾಬಿ ಆಂಖೆ ಜೋ ತೇರಿ ದೇಖೆ ಶರಾಬಿ ಏ ದಿಲ್ ಹೋಗಯ’ (ಟ್ರೈನ್) (ರಾಜೇಶ್ ಖನ್ನಾಗೆ ಅಪರೂಪಕ್ಕೆ ಮೊಹಮ್ಮದ್ ರಫಿ  ಅವರು ಹಾಡಿದ ಗೀತೆ) ಹಾಡಿಗೆ ಹಿನ್ನೆಲೆಯಲ್ಲಿ ರೈಲಿನ ಚುಕುಬುಕು ಸದ್ದಿನ ಶಬ್ದಗಳನ್ನು ಹೊರಡಿಸಿ ಚಿತ್ರ ಶೀರ್ಷಿಕೆಯನ್ನು ಆರ್.ಡಿ. ಬರ್ಮನ್ ಸಾರ್ಥಕಗೊಳಿಸಿದ್ದರು.

ಮಹ್ಮದ್ ರಫಿ – ಆಶಾ ಹಾಡಿದ ‘ಯಾದೋ ಕಿ ಬಾರಾತ್’ನ ಸುಶ್ರಾವ್ಯ ಗೀತೆಯಾದ ‘ಚುರಾಲಿಯಾ  ಹೆ ತುಂನೆ ಜೋ ದಿಲ್ ಕೋ’ ಹಾಡಿನ ಆರಂಭದ ರಿದಂಗೆ ಅವರು ಬಿಯರ್‌ ಬಾಟಲ್ ಹಲವು spoons ಬಳಸಿ ಬಾಟಲ್ ಮೇಲೆ ಚಮಚಗಳನ್ನು ಲಯಬದ್ಧವಾಗಿ ನುಡಿಸಿ ಈ ಹಾಡಿನ ರಿದಂ ಕೊಟ್ಟರು. ‘ಅಗರ್ ತುಂ ನ ಹೋತೆ’ ಚಿತ್ರದಲ್ಲಿ ರೇಖಾ ‘ಧೀರೇ ಧೀರೇ ಜ಼ರಾ ಜ಼ರಾ’ ಹಾಡಿನಲ್ಲಿ ಸೊಂಟಕ್ಕೆ ಸಿಕ್ಕಿಸಿಕೊಂಡ ಚಿಕ್ಕ ಚಿಕ್ಕ ಆಭರಣಗಳನ್ನು ಹಿಡಿದು ಸದ್ದು ಮಾಡುತ್ತಾರೆ. ಆ ಸದ್ದನ್ನು ಪಂಚಮ್‌ ಕೇವಲ ಐದಾರು ಕೀ ಚೈನ್‌ಗಳ ಸಹಾಯದಿಂದ ನಾದ ಮೂಡಿಸಿದ್ದರು. ಶ್ರುತಿ, ರಾಗ – ತಾಳಗಳ  ಸವ್ಯಸಾಚಿ ಪಂಚಮ್ ದಾ. ‘ ಜವಾನಿ ದಿವಾನಿ’ ಸಿನಿಮಾದಲ್ಲಿ ಇಂದಿಗೂ ಜನಪ್ರಿಯ ವಾಗಿರುವ ‘ಜಾನೇ ಜಾ ಢೂಂಡ್ ಥಾ ಫಿರ್ ರಹಾ..’ ಹಾಡಿನಲ್ಲಿ ಆರ್.ಡಿ ಅವರು ಕಿಶೋರ್ – ಆಶಾ ಇಬ್ಬರಿಂದಲೂ ಮಂದ್ರ, ಮಧ್ಯಮ –ತಾರಾಸ್ಥಾಯಿ (lower octave, medium, higher,octave) ಮೂರನ್ನೂ ಸೊಗಸಾಗಿ ಹಾಡಿಸಿದ್ದಾರೆ. ಅದರ ಏರಿಳಿತ ಹಾಗಿವೆ. ‘ಆಪ್ ಕಿ ಕಸಂ’ನ ‘ಕರ್ವಟೇ ಬದಲ್ತೆ ರಹೇ ಸಾರಿ ರಾತ್ ಹಂ ಆಪ್ ಕೀ ಕಸಂ..’ (ಪಹಾಡಿ ರಾಗದ್ದು) ಕಿಶೋರ್ ಲತಾ ಅವರ ಧ್ವನಿಯಲ್ಲೂ ಈ ಮೂರೂ ಸ್ಥಾಯಿಗಳ ಅತ್ಯುತ್ತಮ ಅಳವಡಿಕೆ ಆಗಿದೆ.

ಕಿಶೋರ್ ಜೊತೆ ಪಂಚಮ್‌ ಜೋಡಿ ಅನನ್ಯ ಮತ್ತು ಅಭೂತಪೂರ್ವ ಹೌದು, ಆದರೆ ‘ಶಾನ್’ ಚಿತ್ರದ ‘ಯಮ್ಮ ಯಮ್ಮಾ..’ ಹಾಡಿಗೆ ತನ್ನ ಜೊತೆಗೆ ರಫಿ ಅವರೇ ಹಾಡಲೆಂದು ಬಯಸಿದ ಪಂಚಮ್‌, ರಫಿ ಸಾಬ್ ಈ ಹಾಡಿನಲ್ಲಿ ತಂದ ಶಕ್ತಿ ಅತ್ಯಮೋಘ ಎಂದು ಗುಣಗಾನ ಮಾಡಿದರು. ‘ಹಮ್‌ ಕಿಸೀಸೇ ಕಂ ನಹೀ ಹೈ’ನ ‘ಕ್ಯಾ ಹುವಾ ತೇರಾ ವಾದಾ ಜೋ ಕಸಂ ವೋ ಇರಾದಾ..’ ಹಾಡು ಹಾಡಿ ರಫಿ ರಾಷ್ಟ್ರಪ್ರಶಸ್ತಿ ಪಡೆದದ್ದು ಆರ್.ಡಿ ಬರ್ಮನ್ ಅವರ ಸಂಯೋಜನೆಯಲ್ಲೇ ಆಗಿದೆ. ಅಮರ್ ಪ್ರೇಮ್‌ನ ‘ಕುಚ್ ತೋ ಲೋಗ್ ಕಹೇಂಗೆ..’ ಹಾಡಿಗೆ ಜೋಡಿಸಿದ ಖಮಾಚ್ + ಸ್ವಲ್ಪ ಕಲಾವತಿ ರಾಗದ ಸೊಗಸು, ಅದೇ ಚಿತ್ರದ ‘ರೈನಾ ಬೀತಿ ಜಾಯೆ..’ ಹಾಡಿಗೆ ಮೂಡಿಸಿದ ಖಮಾಜ್ + ತೋಡಿ ಆಗಲಿ, ಇದರ ಇನ್ನೊಂದು ಗೀತೆ ಚಿಂಗಾರಿ ಕೋಯಿ ಭಡ್ಕೆ…ಯಲ್ಲಿ ಮುಂಜಾನೆಯ ರಾಗ ಎಂದೇ ಹೆಸರಾದ ಭೈರವಿರಾಗವನ್ನು 4/4 ತಾಳದಲ್ಲಿ ಬಹಳ ಅಚ್ಚುಕಟ್ಟಾಗಿ ತಂದ ಕ್ರಮ ಆರ್. ಡಿ .ಬರ್ಮನ್ ಗೆ ಬಹಳ ಸುಲಭ ಸಾಧ್ಯ.

‘ಘರ್’ ಚಿತ್ರಕ್ಕೆ ‘ಆಪ್ ಕಿ ಆಂಖೋಮೆ ಕುಚ್..’ ಕೇದಾರ್ ರಾಗದ  ಕಂಪನಗಳನ್ನು ಬಳಸಿಕೊಂಡಿದ್ದು ಪಂಚಮ್ ದಾ ಅವರ ಪರಮೋಚ್ಚ ಶಕ್ತಿ. ‘ಕಾರವಾನ್’ ಚಿತ್ರಕ್ಕೆ ಲತಾ – ರಫಿಯವರಿಂದ ‘ಚಡ್ತೀ ಜವಾನಿ ಮೇರಿ ಚಾಲ್ ಮಸ್ತಾನಿ..’ ಹಾಡು ಹಾಡಿಸುವಾಗ ಬರ್ಮನ್ ರಫಿ – ಲತಾ ಇಬ್ಬರಿಗೂ ಅದರಲ್ಲಿ ಬರುವ ‘ಹಾಯ್ ರಾಮಾ.. ಹಾಯ್ ರಾಮಾ..’ ಸಾಲನ್ನು ಮಾಧುರ್ಯ- ಮಾದಕತೆ ಎರಡೂ ಬೆರೆಸಿ ಹಾಡಿ ಆಮೇಲೆ ಅದರ ತಾಕತ್ ನೋಡಿ ಅಂದರಂತೆ. ಸರಿ ಇದರಲ್ಲಿ ಏನಿದೆ ವಿಶೇಷ ಅಂತ ಅಂದು ಕೊಂಡೇ ರಫಿ – ಲತಾ ಹಾಗೇ ಹಾಡಿಯೂ ಬಿಟ್ಟರು. ಆಮೇಲೆ ಜನ ಆರ್.ಡಿ ಹೇಳಿದ ಹಾಗೆ ‘ಹಾಯ್ ರಾಮಾ ಹಾಯ್ ರಾಮಾ..’ ಸಾಲಿಗೆ ಖುಷಿ ಪಡುತ್ತಾ ಇದ್ದಿದ್ದನ್ನು ನೋಡಿ ಲತಾ  ‘ಪಂಚಮ್‌ ಸಿರ್ಫ್ ಉಮರ್ ಮೆ ಛೋಟಾ ಹೈ, ಲೇಕಿನ್ ಸಂಗೀತ್ ಮೆ ಹಮ್‌ ಸಬ್ಕೋ ಬಡಾ, ಬಹುತ್ ಬಡಾ ಆದ್ಮಿ ಹೈ’ ಅಂದಿದ್ದರು. ಇದೇ ಚಿತ್ರದ ‘ಪಿಯಾ ತೂ ಅಬ್ ತೋ ಆಜಾ..’ ಹಾಡಿಗೆ ‘ಅಅಅ ಅಹಾ ಅಅಅಅಹಾ..ಮೋನಿಕಾ  ಓ ಮೈ ಡಾರ್ಲಿಂಗ್..’ ಸಾಲುಗಳು ಪಂಚಂ ಸ್ಪೆಷಲ್. ಖುದ್ರತ್ ನ ‘ಹಮೇ ತುಮ್ ಸೆ ಪ್ಯಾರ್ ಕಿತ್ ನ’ ಹಿನ್ನೆಲೆಯಲ್ಲಿ ಬೆಳಗಿನ ದೃಶ್ಯಾವಳಿ ತೋರಿಸುವುದಕ್ಕೆ ತಕ್ಕಂತೆ ರೂಪಿಸಿರುವ ಭೈರವಿ ರಾಗದ ಇಂಚರ ಕಿಶೋರ್ ಕಂಠಸಿರಿಯನ್ನು ಮರೆಯಲಾದೀತೇ? (ಆದರೆ ಇದೇ ಹಾಡು ಹಾಡಿದ ಪರ್ವೀನ್ ಸುಲ್ತಾನಾಗೆ ಅತ್ಯುತ್ತಮ ಗಾಯಕಿ ಪ್ರಶಸ್ತಿ ಲಭಿಸಿತು.)

ದೇವಾನಂದ್ ಅವರ ‘ಹರೇ ರಾಮಾ ಹರೇ ಕೃಷ್ಣ’ ಸಿನಿಮಾದ ‘ಕಾಂಚಾರೆ ಕಾಂಚಾರೆ’ ಈ ಹಾಡನ್ನು ಹಾಡುವಾಗ ಲತಾ ಅವರ ಗಂಟಲು ಕಟ್ಟಿತ್ತು, ಕೆಟ್ಟಿತ್ತು, ಆಗ ಈ ಕೊರತೆಯನ್ನು ವಾದ್ಯ ಸಂಯೋಜನೆಯ ಮೂಲಕ ಸರಿದೂಗಿಸಿದವರು ಆರ್.ಡಿ‌.ಬರ್ಮನ್. ಈ ಹಾಡಿನ ಸಂಯೋಜನೆ ಕನಸಿನಲ್ಲಿ ಹೊಳೆದ ಸ್ಫೂರ್ತಿಯ ಸ್ಫುರಣೆಯ ಫಲ ಎನ್ನುತ್ತಿದ್ದ ಪಂಚಮ್‌ ದಾ ಅವರ ‘ಧಮ್ ಮಾರೋ ಧಮ್‌..’ ಹಾಡಿನ ಸಂಗೀತದ ಮಾದಕತೆ – ಇಂಪು ಅದರ ಪ್ರಭಾವ – ಪರಿಣಾಮಗಳನ್ನು ಕಂಡ ದೇವಾನಂದ್ ಈ ಹಾಡು ಇಡೀ ಚಿತ್ರದ ಕಥೆಯ ಸತ್ವವನ್ನೇ ನುಂಗಿ ಬಿಡಬಲ್ಲದು ಎಂದು ಪೂರ್ತಿ ಹಾಡನ್ನು ಈ ಚಿತ್ರದಲ್ಲಿ ಬಳಸಲೇ ಇಲ್ಲ. (ಅರ್ಧ ಮಾತ್ರ ತೋರಿಸಿ, ಉಳಿದದ್ದು ಕತ್ತರಿ ಪ್ರಯೋಗಕ್ಕೆ ಒಳಗಾಯಿತು, ಹೀಗೆ ಮಾಡಿದರೂ ‘ಧಮ್‌ ಮಾರೋ ಧಮ್‌’ ಹೇಳಲಾರದಷ್ಟು ಎಲ್ಲರ ತುದಿ ನಾಲಗೆಯ ಮೇಲೆ ಅನುರಣಿತವಾಗಿದ್ದು ಇವತ್ತಿಗೂ ಕಾಣುವ ಜೀವಂತ ಜ್ವಲಂತ ಸತ್ಯ.ಇದು ಪಂಚಂ ದಾ ಶ್ರೇಷ್ಠತೆ.)

ಭೂತ್ ಬಂಗ್ಲಾ, ಪ್ಯಾರ್ ಕಾ ಮೌಸಮ್‌ನ ಚಿಕ್ಕ ಪಾತ್ರಗಳಲ್ಲಿ ನಟಿಸಿಯೂ ಇದ್ದ ಆರ್.ಡಿ.ಬರ್ಮನ್ ‘ಪ್ಯಾರ್ ಕಾ ಮೌಸಂ’ನಲ್ಲಿ ‘ತುಂ ಬಿನ್ ಜಾವೂ ಕಹಾ..’ ಹಾಡನ್ನು ಕಿಶೋರ್ – ರಫಿ ಇಬ್ಬರಿಂದಲೂ ಪ್ರತ್ಯೇಕವಾಗಿ ಹಾಡಿಸಿದ್ದಾರೆ. ‘ಹಮೇ ಔರ್ ಜೀನೇಕಿ ಚಾಹತ್‌ನ ಹೋತೆ… ಅಗರ್ ತುಂ ನ ಹೋತೆ’ ಚಿತ್ರದ ಗುಲ್ಷನ್ ಬಾವ್ರಾ ಅವರ ಈ ಗೀತೆಗೆ ಅಸಾವರಿ ರಾಗದ ಸಂಯೋಜನೆ (ಜಾದೂ ತೇರಿ ನಜ಼ರ್ ಸಹಾ ಶಿವ್ ಹರಿ ಸಂಗೀತ ಸಂಯೋಜನೆಯಲ್ಲಿ ಮಿಶ್ರ ಅಸಾವರಿಯಲ್ಲೇ ಇದೆ, ಶಿವಕುಮಾರ ಶರ್ಮ, ಹರಿಪ್ರಸಾದ್ ಚೌರಾಸಿಯಾ ಶಿವ್ – ಹರಿ ಆರ್.ಡಿ  ಅವರಿಗೆ ಸಹಾಯಕರಾಗಿ ಇದ್ದವರು. ‘ಆಶಿಕಿ-2’ ಚಿತ್ರದ ‘ತುಮ್ಹೀ ಹೋ..ಸಹಾ ಅಸಾವರಿ ರಾಗದ್ದೇ ಆಗಿದೆ) ಆನೇವಾಲಾ ಪಲ್  ಕೀರವಾಣಿ ರಾಗದ್ದು. (ಇದೇ ಕನ್ನಡದಲ್ಲಿ ಕೆಣಕುತಿದೆ ನಿನ್ನ ಕಣ್ಣೋಟ ಆಗಿದೆ).

ರಿಮ್ ಝಿಮ್ ಗಿರೆ ಸಾವನ್ ಸುಲಗ್ ಸುಲಗ್ ಜಾಯೇ ಮನ್…ಆರ್.ಡಿ, ಕೀರವಾಣಿ ರಾಗದಲ್ಲಿ ಸಂಯೋಜಿಸಿದ ಅಮರ ಗೀತೆಗಳು. ಮಜ್ರೂಹ್ ಸುಲ್ತಾನಪುರಿ ಬರೆದ ‘ಅನಾಮಿಕಾ’ ಚಿತ್ರದ ಮೇರೇ ಭೀಗಿ ಭೀಗಿ ಸಿ, ಪಲುಕೋಂಪೆ ರೆಹಗಯಿ.. ಕೀರವಾಣಿ ರಾಗದ ಪಂಚಮ್ ಸ್ಪೆಷಲ್‌ನ ಸಾಕ್ಷಿ. ‘ಆಂಧಿ’ ಚಿತ್ರವನ್ನು ಮರೆಯುವುದುಂಟೇ, ಯಮನ್ ರಾಗದಲ್ಲಿರುವ ಲತಾ ಮಂಗೇಶ್ಕರ್ – ಕಿಶೋರ್ ಹಾಡಿದ ‘ಇಸ್ ಮೋಡ್ ಸೆ ಜಾತೇ ಹೈ’ ಇಂದಿಗೂ ಕಾಡುವ ಗೀತೆ. ಇದೇ ಚಿತ್ರದ ತುಂ ಆಗಯೇ ಹೋ, ತೇರೆ ಭೀ ನಾ ಜ಼ಿಂದಗಿ ಸೆ ಕೋಯಿ ಗೀತೆಗಳ ರಾಗಸಿಂಚನಕ್ಕೆ ಪದಗಳ ವರ್ಣನೆ ಸಾಲುವುದೇ ಇಲ್ಲ. ‘ಮಾಸೂಮ್‌’ ಚಿತ್ರದ ಲಕ್ಡೀ ಕಿ ಕಾಟಿ, ಸನಂ ತೇರಿ ಕಸಂ ನ ಕಿತ್ ನೆ ಭಿ ತು ಕರ್ ಲೆ ಸಿತಂ, ಹಸ್ ಹಸ್ ಕೆ ಸಹೇಂಗೆ ಹಂ.. ಇವೆಲ್ಲ ಕೇವಲ 10 -15ನಿಮಿಷದಲ್ಲಿ ಆರ್.ಡಿ ಸಂಯೋಜನೆ ಮಾಡಿದ ಹಾಡುಗಳು.

ಖುಷ್ಬೂ ಸಿನಿಮಾದಲ್ಲಿ ‘ಬೇಚಾರಾ ದಿಲ್ ಕ್ಯಾ ಕರೇ’ ಹಾಡಲ್ಲಿ ಸಂಗೀತವೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಅತ್ಯಂತ ಮೆಲುಸ್ವರ ಪ್ರಸ್ತಾರದಲ್ಲಿ ಆಶಾ ಹೀಗೂ ಹಾಡಬಲ್ಲರೆಂದು ತೋರಿಸಿದ ಪಂಚಂ, ಕಿಶೋರ್ ಇದೇ ಚಿತ್ರಕ್ಕೆ ಹಾಡಿದ, ‘ಓ ಮಾಝಿ ರೇ’. ಗೀತೆಗೆ ಗಾಂಭೀರ್ಯವನ್ನೇ ಮೆಲೋಡಿಯ ಭಾಷೆಯಾಗಿಸಿದವರು. ರಾಜೇಶ್ ಖನ್ನಾ ,ಜೀ಼ನತ್ ಅಮಾನ್ ಜೋಡಿಯ ‘ಅಜನಬಿ’ ಚಿತ್ರದ ಕಿಶೋರ್, ಲತಾ ಧ್ವನಿಯಲ್ಲಿರುವ ‘ಹಮ್‌ ದೋನೋ ದೋ ಪ್ರೇಮಿ…’ ಗೀತೆಯ ಧ್ವನಿಮುದ್ರಣದ ಸಂದರ್ಭದಲ್ಲಿ ಎದುರಾದ ತೊಡಕನ್ನು ಸಮರ್ಥವಾಗಿ ನಿಭಾಯಿಸಿ  ಅತ್ಯಂತ ಕಡಿಮೆ ವಾದ್ಯಗಳ ಮತ್ತು ಲತಾ, ಕಿಶೋರ್ ಧ್ವನಿ ಶಕ್ತಿಯನ್ನೇ ಊರ್ಧ್ವಮಟ್ಟದಲ್ಲಿ ಬಳಸಿ,ಮಧುಮದ್ ಸಾರಂಗ್/ಮಧ್ಯಮಾವತಿಯಲ್ಲಿ ಅದ್ಭುತ ಹಾಡು ಸಂಯೋಜಿಸಿದ ಮಹಾನ್ ಸೃಜನಶೀಲರು ಪಂಚಮ್ ದಾ. ‘ಮಾಸ್ಟರ್ ಜಿ ಕಿ ಚಿಟ್ಟಿ ಆಯಿ”.. (ಕಿತಾಬ್) ಶಾಲಾ ಮಕ್ಕಳಹಾಡಿಗೆ, Class room benches ಅನ್ನು ಬಳಸಿಕೊಂಡು ಹಾಡಿನ ಝಲಕ್ ಹೆಚ್ಚಿಸಿದ ಅಪಾರ ಸೃಜನತೆಯ, ಸೃಷ್ಟಿಶೀಲ ಸಾಮರ್ಥ್ಯದ ರಸಜ್ಞರು ರಾಹುಲ್ ದೇವ್ ಬರ್ಮನ್.

1942 A love story ಪಂಚಮ್  ಸೌಭಾಗ್ಯ- ದೌರ್ಭಾಗ್ಯ ಎರಡನ್ನೂ ಹೇಳುವ ಚಿತ್ರ. ಇದರ ನಿರ್ಮಾಪಕ- ನಿರ್ದೇಶಕ ವಿಧು ವಿನೋದ್ ಛೋಪ್ರಾ ಮುಂದೆ ಒಂದು ಹಾಡಿಗೆ ಪಂಚಮ್‌ ರಾ ರಾ ರಾ ರಾರಿ ರೆ ರಾರಾ ರಾರಿ ರೇ..’ ಟ್ಯೂನ್ ಕೊಟ್ಟು ಹಾಡುತ್ತಿದ್ದಾಗ ವಿಧು ಅವರು ‘ದಾದಾ ಹಂ ಕೋ ಬಹುತ್ silent and soft ಗಾನಾ ಚಾಹಿಯೇ ಅಂದಾಗ ಹತ್ತು ದಿನಕ್ಕೇ ಅವರು ನೀಡಿದ ಟ್ಯೂನ್ ತಾನನನ, ತನನನಾನ.. ಲಾಲಿ ಹಾಡಿನ ತರಹ ಕೊಟ್ಟಾಗ ಆರ್.ಡಿ, ವಿಧು ಇಬ್ಬರೂ ಆನಂದದಿಂದ ಕಣ್ಣೀರು ಹಾಕಿದರು. ದೇಶ್ ರಾಗಾಧಾರಿತ ಆ ಗೀತೆಯೇ ಕುಚ್ ನ ಕಹೋ ಕುಚ್ ಭಿ ನ ಕಹೋ, ಕ್ಯಾ ಕೆಹನಾ ಹೆ, ಕ್ಯಾ ಸುನ್ ನ ಹೆ.. ಈ ಹಾಡು ಹಾಡ ಬೇಕಿದ್ದ ಲತಾ ಊರೂರು ಸುತ್ತಬೇಕಾಗಿತ್ತು, ಪಂಚಮ್‌ಗೆ ಊರಿಗೆ ಹೋಗಿ ಬಂದು ಹಾಡ್ತೀನಿ ಎಂದು ಹೇಳಿ ಆಮೇಲೆ  ಹಾಡಿದರು. ಆದರೆ ಅಷ್ಟರಲ್ಲಿ ಪಂಚಮ ಸ್ವರ ತನ್ನ ರಾಗ – ಗಾನಗಳನ್ನು ಶಾಶ್ವತವಾಗಿ ನಿಲ್ಲಿಸಿ, ‘’ಮುಸಾಫಿರ್ ಹು ಯಾರೋ ನ ಘರ್ ಹೆ ನಾ ಠಿಕಾನಾ ಮುಝೇ ಚಲ್ಕೇ ಜಾನಾ, ಬಸ್ ಚಲ್ಕೇ ಜಾನಾ’ ಎನ್ನುತ್ತಾ ತಾನೇ ಸಂಯೋಜಿಸಿದ ಹಾಗೆ ಹೊರಟೇ ಹೋಗಿತ್ತು. ‘ಪಂಚಮ್‌ ಇಲ್ಲದೆ ಈ ಹಾಡು ಹಾಡಬೇಕಾದರೆ ನನಗಾದ ದುಃಖ ಅಷ್ಟಿಷ್ಟಲ್ಲ, ಹಾಡಿನ ರೆಕಾರ್ಡಿಂಗ್ ಸಮಯದಲ್ಲೂ ಪಂಚಮ್‌ ಅವರನ್ನು ನೆನೆಸಿಕೊಂಡೇ ದುಃಖ ಅದುಮಿಟ್ಟುಕೊಂಡು ಗದ್ಗದಿತಳಾಗಿಯೇ ಈ ಹಾಡು ಹಾಡಿದ್ದೇನೆ’ ಎಂದು ಲತಾ ಕಂಬನಿ ಮಿಡಿದರು. ತಮ್ಮನ್ನು ಗುರುತಿಸಿದ ನಾಸಿರ್ ಹುಸೇನ್ ದಿಢೀರನೆ ತಮ್ಮ ಬದಲಿಗೆ ಇನ್ನೊಬ್ಬರಿಗೆ ಸಂಗೀತ ನಿರ್ದೇಶನದ ಜವಾಬ್ದಾರಿ ವಹಿಸಿದ್ದು, ‘ರಾಮ್ ಲಖನ್’ ಚಿತ್ರಕ್ಕೆ ನಿಮಗೇ ಸಂಗೀತ ನಿರ್ದೇಶನದ ಜವಾಬ್ದಾರಿ 100% ಎಂದೂ ಲಕ್ಷ್ಮಿಕಾಂತ್ ಪ್ಯಾರೇಲಾಲ್ ಜೋಡಿಗೆ ಆ ಕೆಲಸ ವಹಿಸಿದ ಸುಭಾಷ್ ಘಾಯ್ ಇವೆಲ್ಲವೂ ಪಂಚಮ್‌ ರಿಗೆ ಘಾಸಿ ಮಾಡಿತ್ತು. ಮೊದಲೇ ಹೃದಯಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಆರ್.ಡಿ.ಬರ್ಮನ್ ಮತ್ತಷ್ಟು ಕುಗ್ಗಿ ಹೋದರು. ಪರಿಣಾಮ 1994 ಜನವರಿ 4ಕ್ಕೆ 53 ವರ್ಷಕ್ಕೇ ಪಂಚಮ ಸ್ವರ ಶಾಶ್ವತವಾಗಿ ತನ್ನ ಸಂಗೀತವನ್ನು ನಿಲ್ಲಿಸಿತು.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ನೆಲದ ಸೊಗಡಿನ ನಿರ್ದೇಶಕ

ಕನ್ನಡ ಚಿತ್ರರಂಗ ಕಂಡ ಪ್ರಮುಖ ಚಿತ್ರಸಾಹಿತಿ ಮತ್ತು ಅಪ್ಪಟ ನೆಲದ ಸೊಗಡಿನ ನಿರ್ದೇಶಕ ಗೀತಪ್ರಿಯ. ನೂರಾರು ಮಧುರ ಗೀತೆಗಳ ಕತೃ.

ಚಿತ್ರಸಾಹಿತಿ ಗೋಪಾಲ ವಾಜಪೇಯಿ

ಕವಿ, ಪತ್ರಕರ್ತ, ನಾಟಕಕಾರ ಗೋಪಾಲ ವಾಜಪೇಯಿ (01/06/1951 – 20/09/2016) ಚಿತ್ರಸಾಹಿತ್ಯಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಇಂದು (ಸೆಪ್ಟೆಂಬರ್‌ 20)