ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಬಸ್‌ ಕಂಡಕ್ಟರ್‌ ಆಗಿದ್ದ ಹಸ್ರತ್ ಚಿತ್ರಸಾಹಿತಿಯಾಗಿ ಮಿಂಚಿದರು!

ಪೋಸ್ಟ್ ಶೇರ್ ಮಾಡಿ

‘ಜಿಂದಗೀ ಏಕ್ ಸಫರ್ ಹೈ ಸುಹಾನಾ’ ಗೀತೆಯಿಂದ ಆರಂಭಿಸಿ ‘ಎಹ್ಸಾನ್ ತೇರಾ ಹೋಗಾ ಮುಝ್ ಪರ್‌…’ವರೆಗೆ ಹಿಂದಿ ಸಿನಿಮಾಗಳಿಗೆ ನೂರಾರು ಕವಿಗುಣದ ಗೀತೆಗಳನ್ನು ರಚಿಸಿದವರು ಹಸ್ರತ್ ಜೈಪುರಿ. ವಿಶೇಷವಾಗಿ ರಾಜ್‌ಕಪೂರ್‌ ಸಿನಿಮಾಗಳಿಗೆ ಅವರು ರಚಿಸಿದ ಹಾಡುಗಳು ಚಿರಕಾಲ ನೆನಪಿನಲ್ಲುಳಿಯುವಂಥವು. ರಾಜ್‌ಕಪೂರ್‌ ನಟನೆಯ ‘ಬರ್ಸಾತ್‌’ (1949) ಚಿತ್ರದಿಂದ ‘ಕಲ್ ಆಜ್ ಔರ್ ಕಲ್‌’ (1971) ಸಿನಿಮಾದವರೆಗೆ ಹಸ್ರತ್‌ ಗೀತೆಗಳು ಚಿತ್ರರಸಿಕರ ಮನಗೆದ್ದಿವೆ.

ಅವರ ಜನ್ಮನಾಮ ಇಕ್ಬಾಲ್ ಹುಸೇನ್‌. ಜೈಪುರದಲ್ಲಿ ಹುಟ್ಟಿ ಬೆಳೆದ ಅವರಿಗೆ ಹಿಂದಿ ಮತ್ತು ಉರ್ದು ಸಿದ್ಧಿಸಿತ್ತು. ಹರೆಯದಲ್ಲಿ ರಾಧಾ ಹೆಸರಿನ ಯುವತಿಯನ್ನು ಪ್ರೀತಿಸಿದ್ದರು. ಏಕಮುಖವಾಗಿದ್ದ ಈ ಪ್ರೀತಿ ಫಲಿಸಲಿಲ್ಲ. ಆದರೇನಂತೆ, ತನ್ನ ಪ್ರೇಯಸಿಗೆ ಅವರು ಬರೆದ ಪತ್ರವೇ ದಶಕಗಳ ನಂತರ ರಾಜ್‌ ಕಪೂರ್‌ ನಟನೆಯ ‘ಸಂಗಮ್‌’ ಚಿತ್ರದ ‘ಯೆಹ್ ಮೇರಾ ಪ್ರೇಮ ಪತ್ರ’ ಗೀತೆಯಾಯ್ತು.

ನಟ ರಾಜ್‌ಕಪೂರ್ ಜೊತೆ ಹಸ್ರತ್ ಜೈಪುರಿ (ಮಧ್ಯ ಇರುವವರು) (Photo courtesy: Film History Pics)

ಇಪ್ಪತ್ತರ ಹರೆಯದಲ್ಲಿ ಸಿನಿಮಾಗೆ ಹಾಡು ಬರೆಯುವ ಕನಸು ಕಾಣುತ್ತಾ ಮುಂಬಯಿಗೆ ತೆರಳಿದರು ಹಸ್ರತ್‌. ಗಾಡ್‌ಫಾದರ್‌ಗಳಿಲ್ಲದ ಅವರಿಗೆ ಸಿನಿಮಾರಂಗದ ಅವಕಾಶ ಸುಲಭವೇ? ಮುಂದೆ ಅವರು ಎಂಟು ವರ್ಷ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದರು. ಕಂಡಕ್ಟರ್‌ ಕೆಲಸ ಮುಗಿದ ಮೇಲೆ ಸಂಜೆ ‘ಮುಶೈರಾ’ದಲ್ಲಿ ತಾವು ರಚಿಸಿದ ಕವಿತೆಗಳನ್ನು ಓದುತ್ತಿದ್ದರು. ಅದೊಂದು ದಿನ ಅಲ್ಲಿಗೆ ಬಂದಿದ್ದ ನಟ, ನಿರ್ದೇಶಕ, ರಂಗಕರ್ಮಿ ಪೃಥ್ವಿರಾಜ್ ಕಪೂರ್ ಅವರ ಕಣ್ಣಿಗೆ ಬಿದ್ದರು. ಅದು ಅವರ ಬದುಕಿನ ತಿರುವು.

ಹಸ್ರತ್‌ ರಚನೆಯ ಸಹಜ, ಸರಳ ಕವಿತೆಗಳು ಪೃಥ್ವಿರಾಜ್ ಕಪೂರ್‌ ಗಮನ ಸೆಳೆದವು. ತಮ್ಮ ಪುತ್ರ ರಾಜ್‌ಕಪೂರ್‌ ಅವರಿಗೆ ಹಸ್ರತ್‌ರನ್ನು ತಮ್ಮ ಸಂಸ್ಥೆಗೆ ಸೇರಿಸಿಕೊಳ್ಳುವಂತೆ ಸೂಚಿಸಿದರು. ಹಾಗೆ ಹಸ್ರತ್‌ ‘ಬರ್ಸಾತ್‌’ (1949) ಚಿತ್ರಕ್ಕೆ ತಮ್ಮ ಮೊದಲ ಗೀತೆ ‘ಜಿಯಾ ಬೇಕರಾರ್ ಹೈ’ ರಚಿಸಿದರು. ರಾಜ್‌ಕಪೂರ್‌ ಅವರ ನೆಚ್ಚಿನ ಸಂಗೀತ ಸಂಯೋಜಕ ಜೋಡಿ ಶಂಕರ್‌ – ಜೈಕಿಶನ್ ಈ ಚಿತ್ರಕ್ಕೆ ಸಂಗೀತ ಸಂಯೋಜಕರು. ಶೈಲೇಂದ್ರ ಕೂಡ ಈ ಸಿನಿಮಾಗೆ ಹಾಡು ರಚಿಸಿದ್ದರು. ಅಲ್ಲಿಂದ ಮುಂದೆ ಹಸ್ರತ್ ಮತ್ತು ಶೈಲೇಂದ್ರ ಜೊತೆಯಾಗಿ ಸಿನಿಮಾಗಳಿಗೆ ಗೀತೆಗಳನ್ನು ರಚಿಸುತ್ತಾ ಬಂದರು. ಹಿಂದಿ ಚಿತ್ರರಂಗದಲ್ಲಿ ಹಲವಾರು ಅಮರ ಗೀತೆಗಳು ಸೃಷ್ಟಿಯಾದವು. ರಾಮ್‌ ತೇರಿ ಗಂಗಾ ಮೈಲಿ, ಶ್ರೀ 420, ಅಂದಾಜ್‌, ಜಂಗ್ಲಿ, ಲವ್ ಇನ್‌ ಟೋಕಿಯೋ ಸೇರಿದಂತೆ ಹಲವು ಚಿತ್ರಗಳಲ್ಲಿನ ಹಸ್ರತ್‌ ಗೀತೆಗಳು ಜನಮಾನಸದಲ್ಲಿ ಹಸಿರಾಗಿವೆ.

ಶೈಲೇಂದ್ರ – ಹಸ್ರತ್ ಜೈಪುರಿ

ಅಂದಾಜ್‌ ಮತ್ತು ಸೂರಜ್‌ ಚಿತ್ರಗಳಲ್ಲಿನ ಉತ್ತಮ ಗೀತೆಗಳ ರಚನೆಗೆ ಅವರು ಎರಡು ಬಾರಿ ಫಿಲ್ಮ್‌ಫೇರ್‌ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ‘ಹಲ್‌ಚಲ್‌’ (1951) ಚಿತ್ರಕ್ಕೆ ಅವರು ಚಿತ್ರಕಥೆ ರಚಿಸಿದ್ದು, ಅವರು ಗೀತೆ ರಚಿಸಿದ ಕೊನೆಯ ಸಿನಿಮಾ ‘ಹತ್ಯಾ – ದಿ ಮರ್ಡರ್‌’ (2004). ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಅವರು ಕವಿತೆಗಳನ್ನು ರಚಿಸಿದ್ದು, ಕವಿತಾ ಸಂಕಲನಗಳು ಪ್ರಕಟವಾಗಿವೆ.

ಹಸ್ರತ್ ಜೈಪುರಿ | ಜನನ: 15/04/1922 | ನಿಧನ: 17/09/1999

ಹಸ್ರತ್ ಜೈಪುರಿ ಅವರ ಕೆಲವು ಜನಪ್ರಿಯ ರಚನೆಗಳು ಇಲ್ಲಿವೆ.

ಜಿಯಾ ಬೆಕರಾರ್ ಹೈ (ಬರ್ಸಾತ್‌, 1949)
ಯಾದ್‌ ಕಿಯಾ ದಿಲ್‌ ನೇ (ಪತೀತಾ, 1953)
ವೋ ಮೇರಾ ಪ್ಯಾರ್‌ ಆ ಜಾ (ಭೂತ್ ಬಂಗ್ಲಾ, 1965)
ಬದನ್ ಪೆ ಸಿತಾರೇ (ಪ್ರಿನ್ಸ್‌, 1969)
ಸುನ್ ಸಾಯಿಬಾ ಸುನ್‌ (ರಾಮ್ ತೇರಿ ಗಂಗಾ ಮೈಲಿ, 1985)

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಪರ್ವೀನ್ ಬಾಬಿ

ಎಪ್ಪತ್ತರ ದಶಕದಲ್ಲಿ ಹಿಂದಿ ಚಿತ್ರರಂಗದ ಯಶಸ್ವೀ ನಾಯಕನಟಿ ಎಂದು ಕರೆಸಿಕೊಂಡವರು ಪರ್ವೀನ್ ಬಾಬಿ. ಸಮಾಜದ ಸಂಪ್ರದಾಯಗಳನ್ನು ಧಿಕ್ಕರಿಸುವ ಆಧುನಿಕ ಯುವತಿ

ದೇವಿಕಾ ರಾಣಿ

ದೇವಿಕಾ ರಾಣಿ ಜನಿಸಿದ್ದು ವಿಶಾಖಪಟ್ಟಣದಲ್ಲಿ (30/03/1908). ಪೋಷಕರು ಬೆಂಗಾಲಿ ಮೂಲದವರು. ಅವರ ತಂದೆ ಹೆಸರಾಂತ ವೈದ್ಯರಾದರೆ, ಚಿಕ್ಕಪ್ಪ ದೊಡ್ಡ ಲೇಖಕ.