ಹಿಂದಿ ಚಿತ್ರರಂಗದ ಮೈಲುಗಲ್ಲು ಎನಿಸಿಕೊಂಡ `ಮೊಘಲ್ ಎ ಅಜಾಮ್’ (1960) ಸಿನಿಮಾ ವಿದ್ಯಾರ್ಥಿಗಳು, ಚಿತ್ರಪ್ರೇಮಿಗಳು ನೋಡಲೇಬೇಕಾದ ಅದ್ಭುತ ಪ್ರಯೋಗ. ಗಂಭೀರ ಮುಖಭಾವ, ಭಾವಪೂರ್ಣ ಕಣ್ಗಳ ನಟ ಪೃಥ್ವಿರಾಜ್ ಕಪೂರ್ ಚಿತ್ರದಲ್ಲಿ ಅಕ್ಬರ್ ಪಾತ್ರದಲ್ಲಿ ಅಮೋಘ ಅಭಿನಯ ನೀಡಿದ್ದಾರೆ. ಇಂತಹ ಹತ್ತಾರು ಪಾತ್ರಗಳ ಮೂಲಕ ಭಾರತೀಯ ಚಿತ್ರರಂಗದ ಮೇರು ತಾರೆ ಎನಿಸಿದವರು ಪೃಥ್ವಿರಾಜ್. ಹಿಂದಿ ರಂಗಭೂಮಿಗೂ ಅವರ ಅಪಾರ ಕೊಡುಗೆ ಸಂದಿದೆ.
ಪೃಥ್ವಿರಾಜ್ ಹುಟ್ಟಿದ್ದು 1906, ನವೆಂಬರ್ 3ರಂದು. ಫೈಸಲಾಬಾದ್‌ನ (ಈಗ ಪಾಕಿಸ್ತಾನದಲ್ಲಿದೆ) ಸಮುಂದ್ರಿ ಅವರ ಜನ್ಮಸ್ಥಾನ. ಪೃಥ್ವಿರಾಜ್ ತಂದೆ ದಿವಾನ್ ಬಾಷೇಶ್ವರ್‌ನಾಥ್ ಕಪೂರ್ ಸಬ್ ಇನ್‌ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಪೃಥ್ವಿರಾಜ್‌ರ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಲಾಹೋರ್‌ನಲ್ಲಿ. ಪೇಶಾವರ್‌ನಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡಿದ ಅವರು ಅಲ್ಲೇ ಕಾನೂನು ಕೋರ್ಸ್ ಕಲಿತರು. ಕಾಲೇಜ್‌ನ ರಂಗಭೂಮಿಯಿಂದ ಪೃಥ್ವಿರಾಜ್‌ರಲ್ಲಿದ್ದ ಕಲಾವಿದ ಹೊರಹೊಮ್ಮಲು ಸಾಧ್ಯವಾಯ್ತು. ಅಲ್ಲಿಂದ ಮುಂದೆ ನಾಲ್ಕು ದಶಕಗಳ ಕಾಲ ಅವರು ರಂಗಭೂಮಿ ಮತ್ತು ಸಿನಿಮಾಗೆ ಅಪಾರ ಸೇವೆ ಸಲ್ಲಿಸಿದರು.

1927ರಲ್ಲಿ ಕಾಲೇಜು ತೊರೆದ ಪೃಥ್ವಿರಾಜ್ ನಟನಾಗಿ ಮುಂದುವರೆಯಲು ನಿರ್ಧರಿಸಿದ್ದರು. ಮುಂಬೈಗೆ ಬಂದವರು ಇಂಪೀರಿಯಲ್ ಸ್ಟುಡಿಯೋ ಕಂಪನಿ ಸೇರಿದರು. ಅದೃಷ್ಟ ಅವರ ಕೈಹಿಡಿಯಿತು. `ಸಿನಿಮಾ ಗರ್ಲ್’ ಮೂಕಿ ಚಿತ್ರದ ನಾಯಕನಟನಾಗಿ ಅಭಿನಯಿಸುವ ಅವಕಾಶ ಅವರದಾಯ್ತು. ಇಂಥ ಒಂಭತ್ತು ಮೂಕಿ ಚಿತ್ರಗಳ ನಂತರ ಅವರು ಭಾರತದ ಮೊದಲ ಮಾತಿನ ಸಿನಿಮಾ `ಆಲಂ ಅರಾ’ದಲ್ಲಿ (1931) ಪಾತ್ರ ನಿರ್ವಹಿಸಿದರು. 1937ರಲ್ಲಿ ತೆರೆಕಂಡ `ವಿದ್ಯಾಪತಿ’ ಚಿತ್ರ ಅವರಿಗೆ ಹೆಸರು ತಂದುಕೊಟ್ಟಿತು. ಸೊಹ್ರಬ್ ಮೋದಿ ನಿರ್ದೇಶನದ `ಸಿಕಂದರ್’ (1941) ಮತ್ತು `ಮೊಘಲ್ ಎ ಅಜಾಮ್’ ಚಿತ್ರಗಳ ಪೃಥ್ವಿರಾಜ್ ಪಾತ್ರಗಳು ಚಿತ್ರ ಪ್ರೇಮಿಗಳ ಮನಸ್ಸಿನಲ್ಲಿ ಇಂದಿಗೂ ಅಚ್ಚೊತ್ತಿವೆ. `ನಾನಕ್ ನಾಮ್ ಜಹಾಜ್ ಹೈ’, `ನಾನಕ್ ದುಃಖಿಯಾ ಸಬ್ ಸನ್ಸಾರ್’, `ಮಿಲಿ ಮಿತ್ರನ್ ದೇ’ ಪಂಜಾಬಿ ಚಿತ್ರಗಳಲ್ಲೂ ಅವರು ಮಿಂಚಿದ್ದಾರೆ.

1944ರಲ್ಲಿ ಪೃಥ್ವಿರಾಜ್, `ಪೃಥ್ವಿ ಥಿಯೇಟರ್’ ಸ್ಥಾಪಿಸಿದರು. ತಮ್ಮ ರಂಗತಂಡದೊಂದಿಗೆ ಅವರು ದೇಶದಾದ್ಯಂತ ನಾಟಕಗಳನ್ನು ಪ್ರದರ್ಶಿಸಿದರು. ಹದಿನಾರು ವರ್ಷಗಳ ಅವಧಿಯಲ್ಲಿ ಪೃಥ್ವಿ ಥಿಯೇಟರ್‌ನಿಂದ ಹತ್ತಾರು ನಾಟಕಗಳ 2.660ಕ್ಕೂ ಹೆಚ್ಚು ಪ್ರದರ್ಶನಗಳು ನಡೆದದ್ದೊಂದು ದಾಖಲೆ. ತಮ್ಮ ತಂಡದ ಬಹುತೇಕ ನಾಟಕಗಳಲ್ಲಿ ಪೃಥ್ವಿರಾಜ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಪೃಥ್ವಿ ಥಿಯೇಟರ್ ವೇದಿಕೆಯಲ್ಲೇ ಅವರ ಹಿರಿಯ ಪುತ್ರ ರಾಜ್‌ಕಪೂರ್ ಕೂಡ ನಟನಾಗಿ ರೂಪುಗೊಂಡರು. ಪೃಥ್ವಿ ಥಿಯೇಟರ್‌ನಲ್ಲಿ ಕಲಾವಿದರು ಹಾಗೂ ತಂತ್ರಜ್ಞರ ಎಂಭತ್ತು ಜನರ ತಂಡವಿತ್ತು. 50ರ ದಶಕದ ವೇಳೆಯಲ್ಲಿ ಜನರು ನಾಟಕಗಳಿಂದ ಸಿನಿಮಾದೆಡೆ ಹೊರಳಿದ್ದರು. ತಮ್ಮ ದೊಡ್ಡ ತಂಡವನ್ನು ಮುನ್ನಡೆಸಲು ಪೃಥ್ವಿರಾಜ್‌ಗೆ ಆರ್ಥಿಕ ಸಮಸ್ಯೆಗಳು ತಲೆದೋರಿದವು.

ಪೃಥ್ವಿ ಥಿಯೇಟರ್‌ನ ಪ್ರತಿಭಾವಂತ ಕಲಾವಿದರು ಹಾಗೂ ತಂತ್ರಜ್ಞರು ಚಿತ್ರರಂಗದಲ್ಲಿ ತೊಡಗಿಸಿಕೊಂಡರು. ಪೃಥ್ವಿರಾಜ್ ಕಪೂರ್‌ರ ಮಕ್ಕಳು ಕೂಡ ಆ ವೇಳೆಗೆ ಸಿನಿಮಾದಲ್ಲಿ ಭದ್ರ ನೆಲೆ ಕಂಡುಕೊಂಡಿದ್ದರು. ಅದಾಗಲೇ ಮಧ್ಯ ವಯಸ್ಸು ದಾಟಿದ್ದ ಪೃಥ್ವಿರಾಜ್‌ರಿಗೂ ಸಿನಿಮಾಗಳಲ್ಲಿ ನಟಿಸುವಂತೆ ಆಹ್ವಾನವಿತ್ತು. ಮುಂದೆ ಪೃಥ್ವಿರಾಜ್‌ರ ಪುತ್ರ ಶಶಿ ಕಪೂರ್ ಮತ್ತು ಅವರ ಪತ್ನಿ ಜೆನಿಫರ್ ಕೆಂಡಲ್ `ಇಂಡಿಯನ್ ಶೇಕ್‌ಸ್ಪಿಯರ್ ಥಿಯೇಟರ್ ಕಂಪನಿ’ ಆರಂಭಿಸಿದರು. ಈ ಕಂಪನಿ ಪೃಥ್ವಿ ಥಿಯೇಟರ್‌ನೊಂದಿಗೆ ಮಿಳಿತಗೊಂಡಿತು. 1996ರಲ್ಲಿ ಪೃಥ್ವಿ ಥಿಯೇಟರ್‌ನ ಸುವರ್ಣ ಮಹೋತ್ಸವದಂದು (1945 – 95) ಪೃಥ್ವಿರಾಜ್ ಕಪೂರ್ ಗೌರವಾರ್ಥ ಕೇಂದ್ರ ಸರ್ಕಾರ ಅಂಚೆ ಚೀಟಿ ಬಿಡುಗಡೆ ಮಾಡಿತ್ತು.

ಪೃಥ್ವಿರಾಜ್ ಕಪೂರ್ ಎಂಟು ವರ್ಷಗಳ ಕಾಲ ರಾಜ್ಯಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರತಿಷ್ಠಿತ ಪದ್ಮಭೂಷಣ (1969), ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರಗಳೂ ಅವರಿಗೆ ಸಂದಿವೆ. ಐತಿಹಾಸಿಕ ಮತ್ತು ಪೌರಾಣಿಕ ಪಾತ್ರಗಳಲ್ಲಿ ಅವರದು ಬಹುದೊಡ್ಡ ಹೆಸರು. ದೇವದಾಸಿ, ನಳ ದಮಯಂತಿ, ಶ್ರೀ ಕೃಷ್ಣ ಯುದ್ಧ, ವಿಕ್ರಮಾದಿತ್ಯ, ವಾಲ್ಮೀಕಿ, ಪರಶುರಾಮ್, ಛದ್ರಪತಿ ಶಿವಾಜಿ, ಸೇನಾಪತಿ, ರುಸ್ತುಂ ಸೊಹ್ರಬ್, ಜಹಾನ್ ಸತಿ ವಹಾನ್ ಭಗವಾನ್, ಖಾಕನ್, ರಾಮ್ – ಭರತ್ ಮಿಲಪ್, ಸಿಕಂದರ್ ಎ ಅಜಾಮ್, ಶೇರ್ ಎ ಅಫ್ಘನ್, ಶಮ್ಶೀರ್, ಬಲರಾಮ್ – ಶ್ರೀ ಕೃಷ್ಣ, ಸತಿ ಸುಲೋಚನ, ನಾಗ ಪಂಚಮಿ ಅವರ ಜನಪ್ರಿಯ ಸಿನಿಮಾಗಳು. ಡಾ.ರಾಜ್‌ಕುಮಾರ್ ಅಭಿನಯದ `ಸಾಕ್ಷಾತ್ಕಾರ’ ಚಿತ್ರದಲ್ಲಿಯೂ ಪೃಥ್ವಿರಾಜ್ ಕಪೂರ್ ಅಭಿನಯಿಸಿದ್ದಾರೆ.
ಪೃಥ್ವಿರಾಜ್ ಕಪೂರ್ ಅವರ ಕೊನೆಯ ಸಿನಿಮಾ `ಕಲ್ ಆಜ್ ಔರ್ ಕಲ್’. ಇದು ರಣಧೀರ್ ಕಪೂರ್ ಚೊಚ್ಚಲ ನಿರ್ದೇಶನದ ಚಿತ್ರವೂ ಹೌದು. ಅವರ ಸಹೋದರ ತ್ರಿಲೋಕ್ ಕಪೂರ್ ಅವರು ಕೂಡ ಚಿತ್ರನಟರಾಗಿ ಗುರುತಿಸಿಕೊಂಡಿದ್ದರು. ಪೃಥ್ವಿರಾಜ್ ಕಪೂರ್ ಅವರ ಪುತ್ರರಾದ ರಾಜ್‌ಕಪೂರ್, ಶಮ್ಮಿ ಕಪೂರ್ ಮತ್ತು ಶಶಿ ಕಪೂರ್ ಹಿಂದಿ ಚಿತ್ರರಂಗದ ಮೇರು ತಾರೆಯರಾಗಿ ಜನ ಮಾನಸದಲ್ಲಿ ಉಳಿದಿದ್ದಾರೆ. 1972, ಮೇ 29ರಂದು ಪೃಥ್ವಿರಾಜ್ ಕಪೂರ್ ಇಹಲೋಕ ತ್ಯಜಿಸಿದರು.
