ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

‘ಅಂಕಲ್‌’ ಲೋಕನಾಥ್

ಪೋಸ್ಟ್ ಶೇರ್ ಮಾಡಿ

ಸಿದ್ದಲಿಂಗಯ್ಯ ನಿರ್ದೇಶನದ ‘ಬೂತಯ್ಯನ ಮಗ ಅಯ್ಯು’ ಚಿತ್ರದ ಉಪ್ಪಿನಕಾಯಿ ಪ್ರಿಯ ಮಾಚ, ಪುಟ್ಟಣ್ಣರ ‘ನಾಗರಹಾವು’ ಚಿತ್ರದ ಖಡಕ್ ಪ್ರಿನ್ಸಿಪಾಲ್‌ ಶ್ಯಾಮರಾಯರ ಪಾತ್ರಗಳನ್ನು ಕನ್ನಡಿಗರು ಮರೆಯಲು ಸಾಧ್ಯವೇ? ಶಂಕರ್‌ನಾಗ್ ನಿರ್ದೇಶನದ ಮಿಂಚಿನ ಓಟ, ಕಾಕನ ಕೋಟೆ, ಗೆಜ್ಜೆಪೂಜೆ, ಹೊಸನೀರು, ಕಥಾಸಂಗಮ, ಬಂಗಾರದ ಮನುಷ್ಯ, ಕಾಡ ಬೆಳದಿಂಗಳು, ಒಲವಿನ ಆಸರೆ, ಮನೆಮನೆ ಕಥೆ, ಕಿಟ್ಟುಪುಟ್ಟು, ಪುಷ್ಟಕ ವಿಮಾನ, ಬೆಳದಿಂಗಳ ಬಾಲೆ ಮುಂತಾದ ಚಿತ್ರಗಳಲ್ಲಿ ಲೋಕನಾಥ್ ನಿರ್ವಹಿಸಿರುವ ಪಾತ್ರಗಳಲ್ಲಿ ಬೇರೆ ಯಾರನ್ನೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ರಂಗಭೂಮಿ ಹಿನ್ನೆಲೆಯ ಕಲಾವಿದ ಪಾತ್ರವನ್ನು ಜೀವಿಸುತ್ತಿದ್ದುದೇ ಹಾಗೆ. ಎಲ್ಲರಿಂದಲೂ ‘ಅಂಕಲ್‌’ ಎಂದೇ ಕರೆಸಿಕೊಳ್ಳುತ್ತಿದ್ದರು  ಲೋಕನಾಥ್.

ಬೆಂಗಳೂರಿನಲ್ಲಿ ವಾಸವಿದ್ದ ಅವಿಭಕ್ತ ಕುಟುಂಬದಲ್ಲಿ ಜನಿಸಿದ ಲೋಕನಾಥ್‌ ನಟನಾಗಿದ್ದು ಆಕಸ್ಮಿಕ ಎಂದೇ ಹೇಳಬಹುದು. ಮನಸ್ಸಿನಲ್ಲಿ ಸಂಗೀತ, ನಟನಾ ಕಲೆಯ ಬಗ್ಗೆ ಒಲವಿತ್ತಾದರೂ ಮನೆಯಲ್ಲಿ ಅದಕ್ಕೆ ಪೂರಕ ವಾತಾವರಣ ಇರಲಿಲ್ಲ. ತಂದೆಯ ವ್ಯಾಪಾರದಲ್ಲಿ ನೆರವಾಗಲು ಇಂಜಿನಿಯರಿಂಗ್ ಓದುತ್ತಿದ್ದವರು ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದರು. ಪ್ರತಿದಿನ ಬೆಳಗ್ಗೆ ವ್ಯಾಯಾಮ ಶಾಲೆಗೆ ಹೋಗುತ್ತಿದ್ದ ಅವರಿಗೆ ಅಲ್ಲಿ ರಂಗಭೂಮಿ ನಂಟು ಶುರುವಾಯ್ತು. ವ್ಯಾಯಾಮ ಶಾಲೆಗೆ ಬರುತ್ತಿದ್ದ ಖ್ಯಾತ ಲೇಖಕ ಕೆ.ವಿ.ಅಯ್ಯರ್ ಅವರು ಲೋಕನಾಥ್‌ರಲ್ಲಿನ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಿದರು. ಕೆ.ವಿ.ಅಯ್ಯರ್ ಮೂಲಕ ಲೋಕನಾಥ್‌ರಿಗೆ ನಾಟಕಕಾರ ಕೈಲಾಸಂ ಅವರ ಪರಿಚಯ ಸಿಕ್ಕಿತು. ಮುಂದೆ ‘ರವಿ ಕಲಾವಿದರು’ ರಂಗತಂಡದ ಸಕ್ರಿಯ ಸದಸ್ಯರಾಗಿ ಗುರುತಿಸಿಕೊಂಡರು. ನಾಟಕಗಳಲ್ಲಿ ಅಭಿನಯಿಸುವುದು ಮನೆಯಲ್ಲಿ ಇಷ್ಟವಿರಲಿಲ್ಲ. ಹಾಗಾಗಿ ಅವರು ಬಿಡುವಿನ ವೇಳೆಯಲ್ಲಿ ಲಾಲ್‌ಭಾಗ್‌ನಲ್ಲಿ ನಾಟಕಗಳ ಸಂಭಾಷಣೆಗಳನ್ನು ಪ್ರಾಕ್ಟೀಸ್ ಮಾಡುತ್ತಿದ್ದರು.

‘ಸುಬ್ಬಿ ಸುಬ್ಬಕ್ಕ ಸುವ್ವಲಾಲಿ’ ಚಿತ್ರದಲ್ಲಿ ನಟ ಅಮರೀಶ್ ಪುರಿ ಅವರೊಂದಿಗೆ (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಬಂಡವಾಳವಿಲ್ಲದ ಬಡಾಯಿ, ಅಳಿಯ ದೇವರು, ರಕ್ತಾಕ್ಷಿ, ವಿಗಡ ವಿಕ್ರಮರಾಯ, ಬಿರುದಂತೆಂಬರ ಗಂಡ, ಬಹದ್ದೂರ್ ಗಂಡು, ಬಿಡುಗಡೆ, ಚಂದ್ರಹಾಸ, ಮನವೆಂಬ ಮರ್ಕಟ, ತನುವು ನಿನ್ನದೆ ಮನವು ನಿನ್ನದೆ ನಾಟಕಗಳಲ್ಲಿನ ಪಾತ್ರಗಳು ಲೋಕನಾಥ್ ಅವರಿಗೆ ಹೆಸರು ತಂದುಕೊಟ್ಟವು. ಮುಂದೆ ಖ್ಯಾತ ನಾಟಕರಾರಾದ ಬಿ.ವಿ.ಕಾರಂತರ ನಿರ್ದೇಶನದಲ್ಲಿ ಗೋಸ್ಟ್‌, ಈಡಿಪಸ್‌, ನಾಗೇಶ್‌ ನಿರ್ದೇಶನದ ನಾಟಕಗಳು, ಪ್ರಸನ್ನ ಅವರ ತಾಯಿ, ಗೆಲಿಲಿಯೋ ನಾಟಕಗಳಲ್ಲಿ ಅಭಿನಯಿಸುವುದರೊಂದಿಗೆ ಲೋಕನಾಥ್‌ ರಂಗಭೂಮಿಯಲ್ಲಿ ಹೆಸರು ಗಳಿಸಿದರು.

ರಂಗಭೂಮಿಯಲ್ಲಿ ಹೆಸರು ಮಾಡಿದ ಲೋಕನಾಥ್ ಸಹಜವಾಗಿಯೇ ಸಿನಿಮಾದವರ ಕಣ್ಣಿಗೆ ಬಿದ್ದರು. ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯ ಚಿತ್ರಗಳಿಗೆ ನಾಂದಿ ಹಾಡಿದ ‘ಸಂಸ್ಕಾರ’ದೊಂದಿಗೆ ಅವರ ಬೆಳ್ಳಿತೆರೆ ಪ್ರವೇಶವಾಯ್ತು. ಆದರೆ ಬಿಡುಗಡೆಯಾದ ಅವರ ಮೊದಲ ಚಿತ್ರ ‘ಗೆಜ್ಜೆಪೂಜೆ’. ಪುಟ್ಟಣ್ಣನವರ ಈ ಚಿತ್ರ ಅವರಿಗೆ ಬೆಳ್ಳಿತೆರೆಗೆ ಉತ್ತಮ ಪ್ರವೇಶ ದೊರಕಿಸಿಕೊಟ್ಟಿತು. ಮುಂದೆ ಸಾಲು, ಸಾಲು ಚಿತ್ರಗಳಲ್ಲಿ ನಟಿಸುತ್ತಾ ಬಂದ ಲೋಕನಾಥ್‌ ಆರಂಭದಲ್ಲೇ ವಯಸ್ಸಿಗೆ ಮೀರಿದ ಪಾತ್ರಗಳಲ್ಲಿ ಕಾಣಿಸಿಕೊಂಡದ್ದೇ ಹೆಚ್ಚು.  ಸುಮಾರು ಆರು ದಶಕದ ನಟನಾ ಬದುಕಿನಲ್ಲಿ ಲೋಕನಾಥ್ ನೂರಕ್ಕೂ ಹೆಚ್ಚು ನಾಟಕಗಳು ಹಾಗೂ ನಾಲ್ಕುನೂರಕ್ಕೂ ಹೆಚ್ಚು ಸಿನಿಮಾಗಳು ಸೇರಿದಂತೆ ಕಿರುತೆರೆ ಸರಣಿಗಳಲ್ಲೂ ಅಭಿನಯಿಸಿದ್ದಾರೆ.

ಔತಣಕೂಟವೊಂದರಲ್ಲಿ ನಟ, ನಿರ್ಮಾಪಕ ದ್ವಾರಕೀಶ್‌, ಈಶ್ವರಿ ಪಿಕ್ಚರ್ಸ್‌ ಮ್ಯಾನೇಜರ್‌ ಗಂಗಪ್ಪ ಅವರೊಂದಿಗೆ ಲೋಕನಾಥ್‌ (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಸಿನಿಮಾಗಳಲ್ಲಿ ಅಭಿನಯ ಹೆಚ್ಚುತ್ತಿದ್ದಂತೆ ಅವರು ರಂಗಭೂಮಿಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ನಾಟಕಗಳಿಗೆ ತಾಲೀಮು ನಡೆಸಲು ಅವರಿಗೆ ಹೆಚ್ಚು ಸಮಯ ಸಿಗುತ್ತಿರಲಿಲ್ಲ. “ಅತಿಯಾದ ಒತ್ತಡದಿಂದ ಹೆಚ್ಚಿನ ತಾಲೀಮು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಸಂಭಾಷಣೆ ನೆನಪಲ್ಲಿ ಉಳಿಯುವುದು ಕಷ್ಟವಾಗುತ್ತಿತ್ತು. ಪ್ರೇಕ್ಷಕರಿಗೆ ಅನ್ಯಾಯ ಮಾಡಬಾರದೆಂದು ನಾಟಕಗಳಲ್ಲಿ ಅಭಿನಯಿಸುವುದನ್ನು ಬಿಟ್ಟೆ” ಎಂದು ಅವರು ಹೇಳಿಕೊಂಡಿದ್ದರು. ಲೋಕನಾಥ್ ಅವರಿಗೆ ಅಪಾರ ಜನಮನ್ನಣೆ ಸಿಕ್ಕಿತಾದರೂ ಪ್ರಶಸ್ತಿಗಳು ಅರಸಿ ಬರಲಿಲ್ಲ. ‘ಮಿಂಚಿನ ಓಟ’ ಚಿತ್ರದ ನಟನೆಗೆ ಅವರಿಗೆ ಪ್ರಶಸ್ತಿ ಸಂದಿತ್ತು. ಈಗ ಬಗ್ಗೆ ಲೋಕನಾಥ್ ಕೂಡ ಸ್ಥಿತಪ್ರಜ್ಞರಾಗಿದ್ದರು. ಅವರೆಂದೂ ಪ್ರಶಸ್ತಿ, ಪುರಸ್ಕಾರಗಳ ಬಗ್ಗೆ ಯೋಚಿಸಿದವರಲ್ಲ. ಅದು ಅವರಿಗೆ ರಂಗಭೂಮಿ ಕಲಿಸಿದ ಪಾಠ. “ಪ್ರಶಸ್ತಿಗಳೆಂದರೆ ಒಂದು ಕಾಲದಲ್ಲಿ ಹೆಮ್ಮೆ ಎನಿಸುತ್ತಿತ್ತು. ಕ್ರಮೇಣ ಪ್ರಶಸ್ತಿಗಳು ಅರ್ಥ ಕಳೆದುಕೊಂಡವು. ಜನರ ಪ್ರೀತಿಯ ಚಪ್ಪಾಳೆ, ಅಭಿಮಾನಕ್ಕಿಂತ ದೊಡ್ಡ ಪುರಸ್ಕಾರ ಮತ್ತಾವುದೂ ಇಲ್ಲ” ಎನ್ನುತ್ತಿದ್ದರು ಲೋಕನಾಥ್‌.

‘ಬೂತಯ್ಯನ ಮಗ ಅಯ್ಯು’ ಚಿತ್ರದಲ್ಲಿ ‘ಉಪ್ಪಿನಕಾಯಿ ಮಾಚ’ನಾಗಿ

“ಕಲಾವಿದರನ್ನು ಅವನು ಮಾಡಿದ ಪಾತ್ರಗಳ ಮೂಲಕ ಪ್ರಶಂಸೆ ವ್ಯಕ್ತಪಡಿಸಿದರೆ ಅದಕ್ಕಿಂತ ಬೇರೆ ಗೌರವ ಬೇಕಿರುವುದಿಲ್ಲ. ನನ್ನ ಹಲವು ಪಾತ್ರಗಳು ಇಂತಹ ಪುರಸ್ಕಾರ ತಂದುಕೊಟ್ಟಿವೆ. ಬೂತಯ್ಯನ ಮಗ ಅಯ್ಯು ಚಿತ್ರದಲ್ಲಿನ ಪಾತ್ರದವನ್ನು ಜನರು ತುಂಬಾ ಮೆಚ್ಚಿಕೊಂಡಿದ್ದರು. ಮಂಡ್ಯದಲ್ಲಿ ಏರ್ಪಡಿಸಿದ್ದ ಚಿತ್ರದ ಸಮಾರಂಭದಲ್ಲಿ ಮಹಿಳೆಯೊಬ್ಬರು ಉಪ್ಪಿನಕಾಯಿ ಜಾಡಿಯನ್ನು ತಂದು ನನ್ನ ಮುಂದಿಟ್ಟು ಎಷ್ಟು ಬೇಕಾದರೂ ತಿನ್ನು ಎಂದಿದ್ದರು. ಹೋಟೆಲ್‌ನಲ್ಲಿ ಜಾಮೂನು ಕೇಳಿದರೆ ಉಪ್ಪಿನಕಾಯಿ ತಂದು ಮುಂದಿಡುತ್ತಿದ್ದರು! ಬೀದರಿನಲ್ಲೊಬ್ಬರು ನನಗೆಂದೇ ರೊಟ್ಟಿ ಮಾಡಿಕೊಂಡು ಬಂದಿದ್ದರು. ಇಂತಹ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ” ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ನಟನೆ ಜೊತೆ ನಿರ್ದೇಶನದಲ್ಲೂ ಲೋಕನಾಥ್ ಕೆಲಸ ಮಾಡಿದ್ದಾರೆ. ರಂಗಭೂಮಿಗೆ ನಾಟಕಗಳನ್ನು ನಿರ್ದೇಶಿಸಿದ್ದ ಅವರು ಕಿರುತೆರೆಗೆ ‘ಅನೀಶ್‌’, ‘ನಿರೀಕ್ಷೆ’ ಧಾರಾವಾಹಿಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದರು. ಆರೂವರೆ ದಶಕಗಳ ನಟನಾ ಬದುಕಿನಲ್ಲಿ ಅವರು ಚಿತ್ರರಂಗದಲ್ಲಿ ಎಲ್ಲರಿಗೂ ಬೇಕಾದವರಾಗಿ ಬಾಳಿದರು. ಶಿಸ್ತು, ಬದ್ಧತೆಯಿಂದ ಗುರುತಿಸಿಕೊಂಡಿದ್ದ ಅವರ ಬಗ್ಗೆ ಚಿತ್ರರಂಗದವರಲ್ಲಿ ಗೌರವವಿತ್ತು. 2018ರ ಡಿಸೆಂಬರ್‌ 31ರಂದು ಲೋಕನಾಥ್ ಅಗಲಿದರು. ಆದರೆ ತಮ್ಮ ಪಾತ್ರಗಳೊಂದಿಗೆ ಅವರು ಸದಾ ಸಿನಿಪ್ರಿಯರ ಮನಸ್ಸಿನಲ್ಲುಳಿದಿದ್ದಾರೆ.

ನಟ ಲೋಕನಾಥ್ ಅವರು ವಿದೇಶ ಪ್ರವಾಸಕ್ಕೆ ಹೊರಟಾಗಿ ಡಾ.ರಾಜಕುಮಾರ್ ಅವರಿಂದ ಅಭಿನಂದನೆ (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಕನ್ನಡ ಚಿತ್ರರಂಗದ ಕಲ್ಪವೃಕ್ಷ ಕು.ರ.ಸೀತಾರಾಮ ಶಾಸ್ತ್ರಿ

(ಬರಹ: ಎನ್.ಎಸ್.ಶ್ರೀಧರ ಮೂರ್ತಿ) ಕನ್ನಡ ಚಿತ್ರರಂಗಕ್ಕೆ ಬಹುಮುಖೀ ಕೊಡುಗೆಯನ್ನು ನೀಡಿದ ಕು.ರ.ಸೀತಾರಾಮ ಶಾಸ್ತ್ರಿಗಳ ಪೂರ್ವಿಕರದ್ದು ತಲೆತಲಾಂತರಗಳಿಂದ ವೇದ ವೇದಾಂತಗಳನ್ನು ಅಧ್ಯಯನ

ಮೆಥೆಡ್ ಆಕ್ಟರ್ ಎಸ್‌ವಿಆರ್

ಪಾತ್ರಗಳ ಆಯ್ಕೆಯಲ್ಲಿ ಎಸ್‌ವಿಆರ್‌ ಅವರದ್ದು ವೃತ್ತಿ ಬದುಕಿನ ಆರಂಭದ ದಿನಗಳಿಂದಲೂ ಎಚ್ಚರಿಕೆಯ ನಡೆ. ಅವರಿಗೆ ನಾಯಕನಟನಾಗುವ ಸಾಕಷ್ಟು ಅವಕಾಶಗಳಿದ್ದವು. ಆದರೆ

ಸದಭಿರುಚಿಯ ಚಿತ್ರಗಳ ನಿರ್ದೇಶಕ ವಿ.ಸೋಮಶೇಖರ್

ದೇವನಹಳ್ಳಿ ತಾಲೂಕಿನ ಚಿಕ್ಕನಹಳ್ಳಿ ವಿ.ಸೋಮಶೇಖರ್‌ ಅವರ ಹುಟ್ಟೂರು. ಅನುಕೂಲಸ್ಥ ಕುಟುಂಬದಲ್ಲಿ ಜನಿಸಿದ ಅವರಿಗೆ ಶಾಲೆ ಓದುತ್ತಿದ್ದಾಗಲೇ ಸಿನಿಮಾದೆಡೆ ವ್ಯಾಮೋಹ ಶುರುವಾಗಿತ್ತು.