ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಮಾಸ್ಟರ್ ಡೈರೆಕ್ಟರ್ ಆಲ್ಫ್ರೆಡ್ ಹಿಚ್ಕಾಕ್

ಪೋಸ್ಟ್ ಶೇರ್ ಮಾಡಿ

(ಬರಹ: ಹೃದಯಶಿವ, ಚಿತ್ರಸಾಹಿತಿ)

ಆಲ್ಫ್ರೆಡ್‌ ಹಿಚ್ಕಾಕ್‌ ಹುಟ್ಟಿದ್ದು ಹಣ್ಣುತರಕಾರಿ ವ್ಯಾಪಾರಿಯ ಮಗನಾಗಿ, 1899, ಆಗಸ್ಟ್‌ 13ರಂದು. ರೋಮನ್ ಕ್ಯಾಥೊಲಿಕ್ಕಾಗಿ ಬೆಳೆದ ಈತ ಚಿಕ್ಕಂದಿನಿಂದಲೇ ತುಂಟನಾಗಿದ್ದ. ಹಿಚ್ಕಾಕ್ ಎಷ್ಟು ತುಂಟನಾಗಿದ್ದನೆಂದರೆ ಈತ ಐದು ವರ್ಷದವನಾಗಿದ್ದಾಗ ಸ್ವತಃ ತಂದೆಯೇ ಪೊಲೀಸರಿಗೆ ಹೇಳಿ ಈತನನ್ನು ಸ್ಟೇಷನ್ನಿನಲ್ಲಿ ಐದು ನಿಮಿಷಗಳ ಕಾಲ ಬಂಧನದಲ್ಲಿರಿಸುವಷ್ಟು! ಈ ಘಟನೆಯಿಂದ ಜೀವನಪೂರ್ತಿ ಹಿಚ್ಕಾಕ್ ಪೋಲೀಸರನ್ನು ಕಂಡರೆ ಭಯಪಡುವಂತಾಯಿತು. ಮಗ ಪೋಲಿಯಾಗದೆ ಶಿಸ್ತಿನಿಂದ ಬೆಳೆಯಲಿ ಅಂತ ಹೀಗೆಲ್ಲಾ ಮಾಡುತ್ತಿದ್ದ ತಂದೆ ಹಿಚ್ಕಾಕ್‌ಗೆ ಹದಿನೈದು ವರ್ಷವಿದ್ದಾಗ ತೀರಿಕೊಂಡ. ತಂದೆ ತೀರಿಕೊಂಡ ಬಳಿಕ ಲಂಡನ್ ಕಂಟ್ರಿ ಕೌನ್ಸಿಲ್ ಸ್ಕೂಲ್ ಸೇರಿ ಒಂದಿಷ್ಟು ಓದಿದಂತೆ ಮಾಡಿ ಕಡೆಗೆ ಅದನ್ನೂ ಬಿಟ್ಟು ನಕ್ಷೆ ಬರೆಯುವ ಅಂದರೆ ಸ್ಥೂಲಚಿತ್ರ ನಕಾಶೆಯನ್ನು ತಯಾರು ಮಾಡುವವನಾಗಿ ಗುರುತಿಸಿಕೊಂಡ. ಈ ನಡುವೆ ಒಂದನೇ ಮಹಾಯುದ್ಧದ ಸಂದರ್ಭದಲ್ಲಿ ಮಿಲಿಟರಿ ಸೇವೆ ಸಲ್ಲಿಸಬೇಕೆಂದು ಪ್ರಯತ್ನಿಸಿ ವಿಫಲನಾದದ್ದೂ ಉಂಟು. ಹಿಚ್ಕಾಕ್‌ಗಿದ್ದ ಅಪಾರ ಬೊಜ್ಜು ಈತನ ಮಿಲಿಟರಿ ಆಸೆಗೆ ತಣ್ಣೀರೆರಚಿತ್ತು.

ಆಮೇಲೆ ಸಿನಿಮಾದತ್ತ ಆಸಕ್ತಿ ಬೆಳೆಸಿಕೊಂಡ ಹಿಚ್ಕಾಕ್ ಮೊದಲಿಗೆ ಲಂಡನ್ನಿನ ಒಂದು ಫಿಲಂ ಪ್ರೊಡಕ್ಷನ್ ಕಂಪನಿಯಲ್ಲಿ ಟೈಟಲ್ ಕಾರ್ಡ್ ಡಿಸೈನ್ ಮಾಡುವ ಕೆಲಸಕ್ಕೆ ಸೇರಿಕೊಂಡ. ಟೈಟಲ್ ಡಿಸೈನ್ ಮಾಡುತ್ತಲೇ ‘ದಿ ವೈಟ್ ಶಾಡೋ’, ‘ದಿ ಪ್ಯಾಶನೇಟ್ ಅಡ್ವೆಂಚರ್’, ‘ದಿ ಬ್ಲಾಕ್ ಗಾರ್ಡ್’ ತರಹದ ಒಂದಿಷ್ಟು ಚಿತ್ರಗಳಿಗೆ ಚಿತ್ರಕತೆ ರಚನೆ, ಕಲಾನಿರ್ದೆಶನ, ಸಹಾಯಕ ನಿರ್ದೇಶನ- ಇತ್ಯಾದಿ ಬಗೆಯಲ್ಲಿ ತೊಡಗಿಸಿಕೊಂಡ. ಜರ್ಮನಿಯ ನಿರ್ದೇಶಕರಾದ ಎಫ್.ಡಬ್ಲ್ಯೂ. ಮುರ್ನಾವ್, ಫ್ರಿಟ್ಜ್ ಲ್ಯಾಂಗ್ ಮುಂತಾದವರ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಗಮನಿಸಿ ಎಷ್ಟು ಸಾಧ್ಯವೋ ಅಷ್ಟು ಕಲಿಯತೊಡಗಿದ. ಫ್ರಿಟ್ಜ್  ಲ್ಯಾಂಗ್ ತನ್ನ ಮೇಲೆ ಅಪಾರವಾದ ಪ್ರಭಾವ ಬೀರಿದ್ದಾನೆ ಎಂಬುದಾಗಿ ಹಿಚ್ಕಾಕ್ ಮೊಂದೊಂದು ದಿನ ಸಂದರ್ಶನವೊಂದರಲ್ಲಿ ಹೇಳಿಕೊಂಡದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಸಿನಿಮಾ ಬಗ್ಗೆ ಇಷ್ಟೆಲ್ಲಾ ಪ್ರೀತಿ, ಧ್ಯಾನ ಹೊಂದಿದ್ದ ಹಿಚ್ಕಾಕ್‌ನ ಆರಂಭಿಕ ಸಿನಿಮಾ ಬದುಕು ಅಷ್ಟು ಸಲೀಸಾಗಿ ಸಾಗಲಿಲ್ಲ. ಆತನ ಚೊಚ್ಚಲ ನಿರ್ದೇಶನದ ‘ನಂಬರ್ 13’ ಚಿತ್ರವು ಆರ್ಥಿಕ ಸಮಸ್ಯೆಯಿಂದಾಗಿ ಅರ್ಧಕ್ಕೇ ನಿಂತುಹೋಯಿತು. ಆಮೇಲೆ ಮಾಡಿದ ‘ದಿ ಪ್ಲೆಷರ್ ಗಾರ್ಡನ್’ ಫ್ಲಾಪ್ ಆದರೆ, ‘ದಿ ಮೌಂಟೇನ್ ಈಗಲ್’ ಬಾಕ್ಸಾಫೀಸಿನಲ್ಲಿ ಭರ್ಜರಿಯಾಗಿ ಸೋತಿತು. ಇಷ್ಟಾದರೂ ತಾಳ್ಮೆ, ಭರವಸೆ ಕಳೆದುಕೊಳ್ಳದ ಹಿಚ್ಕಾಕ್ 1927ರಲ್ಲಿ ‘ದಿ ಲಾಡ್ಜರ್: ಎ ಸ್ಟೋರಿ ಆಫ್ ದಿ ಲಂಡನ್ ಫಾಗ್’ ಚಿತ್ರದ ಮೂಲಕ ನಿರ್ದೇಶಕನಾಗಿ ಮೊಟ್ಟಮೊದಲ ಗೆಲುವು ಕಂಡ. ಎಂಭತ್ತು ನಿಮಿಷಗಳ ಈ ಚಿತ್ರವು ಹಣ ಮಾಡುವುದರ ಜೊತೆಗೆ ಪ್ರೇಕ್ಷಕರಿಂದ, ವಿಮರ್ಶಕರಿಂದ ಒಳ್ಳೆಯ ರಿಪೋರ್ಟ್ ಪಡೆದುಕೊಂಡಿತು. ಯುನೈಟೆಡ್ ಕಿಂಗ್ ಡಂನಲ್ಲಿ  ಹಿಚ್ಕಾಕ್‌ಗೆ ಸ್ಟಾರ್‌ಗಿರಿ ತಂದು ಕೊಟ್ಟ ಇತರ ಚಿತ್ರಗಳೆಂದರೆ ‘ದಿ ಮ್ಯಾನ್ ಹು ನ್ಯೂ ಟೂ ಮಚ್’, ‘ದಿ 39 ಸ್ಟೆಪ್ಸ್’ ಹಾಗೂ ‘ದಿ ಲೇಡಿ ವ್ಯಾನಿಷಸ್’ ಮುಂತಾದವು.

‘ರೆಬೆಕಾ’ ಹಿಚ್ಕಾಕ್ ಮಾಡಿದ ಮೊದಲ ಅಮೇರಿಕನ್ ಸಿನಿಮಾ. ಲಾರೆನ್ಸ್ ಒಲಿವಿಯರ್ ನಟಿಸಿದ್ದ ಈ ಚಿತ್ರವು ದಫ್ನೆ ದು ಮೌರಿಯರ್ ಎಂಬ ಬ್ರಿಟಿಷ್ ಕಾದಂಬರಿಕಾರ್ತಿಯ ಕಾದಂಬರಿಯನ್ನು ಆಧರಿಸಿದ್ದು. ಅತ್ಯುತ್ತಮ ಚಿತ್ರದ ಕೆಟಗರಿಯಲ್ಲಿ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿತು. ಯಾವಾಗ ‘ರೆಬೆಕಾ’ ಈ ಪರಿಯಲ್ಲಿ ಹಿಟ್ ಆಯಿತೋ ಅಲ್ಲಿಗೆ ಹಿಚ್ಕಾಕ್ ಮೋಡಿ ಹಾಲಿವುಡ್‌ನಲ್ಲೂ ಶುರುವಾಯಿತು. ಆ ಮೋಡಿ ಯಾವ ಮಟ್ಟದಲ್ಲಿತ್ತು ಎಂದರೆ, ‘ನೋಟೋರಿಯಸ್’, ‘ರೇರ್ ವಿಂಡೋ’, ‘ನಾರ್ತ್ ಬೈ ನಾರ್ತ್ ವೆಸ್ಟ್’, ‘ಸೈಕೋ’, ‘ಡಯಲ್ ಎಂ ಫಾರ್ ಮರ್ಡರ್’, ‘ಟು ಕ್ಯಾಚ್ ಎ ಥೀಫ್’, ‘ಬರ್ಡ್ಸ್’, ‘ಟಾರ್ನ್ ಕರ್ಟನ್’, ‘ವರ್ಟಿಗೋ’ ತರಹದ ಮಾಸ್ಟರ್ ಪೀಸ್‌ಗಳು ಪ್ರೇಕ್ಷಕರು ಸದಾ ಹಿಚ್ಕಾಕ್ ಗುಂಗಿನಲ್ಲೇ ಇರುವಂತೆ ಮಾಡುವಷ್ಟು, ಅವನ ಚಿತ್ರಗಳಿಗಾಗಿ ಥಿಯೇಟರಿಗೆ ಮುಗಿಬೀಳುವಷ್ಟು.

ಸಿನಿಮಾದಷ್ಟೇ ಪ್ರಮಾಣದಲ್ಲಿ ಅವನು ತನ್ನ ಕುಟುಂಬವನ್ನೂ ಪ್ರೀತಿಸುತ್ತಿದ್ದ. ಒಬ್ಬಳು ಮಗಳ ತಂದೆಯಾಗಿದ್ದ ಹಿಚ್ಕಾಕ್ ತನ್ನ ಹೆಂಡತಿ, ಚಿತ್ರಕಥಾರಚನಾಕಾರ್ತಿ, ಸಂಕಲನಕಾರ್ತಿ ಅಲ್ಮಾ  ರಿವಿಲ್‌ಗಿಂತ ಕೇವಲ ಒಂದೇ ಒಂದು ದಿನ ಹಿರಿಯನು. ಮಗಳು ಪಟ್ರೇಶಿಯಾ ತನ್ನದೇ (ಹಿಚ್ಕಾಕ್) ನಿರ್ದೇಶನದ ‘ಸೈಕೋ’ ಹಾಗೂ ‘ಸ್ಟ್ರೇಂಜರ್ಸ್ ಆನ್ ಎ ಟ್ರೇನ್’ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದರೂ ಮಗಳಿಗೆ ಅಂತಲೇ ತನ್ನ ಪ್ರಭಾವ ಬಳಸಿಕೊಂಡು ಹಾಲಿವುಡ್‌ನಲ್ಲಿ ವಿಶೇಷವಾದ ಪ್ರಚಾರ ಕೊಟ್ಟವನಲ್ಲ. ತನ್ನ ಕುಟುಂಬದೊಂದಿಗೆ ಈತನಿಗಿದ್ದ ಇನ್ನೊಂದು ವಿಚಿತ್ರ ಹವ್ಯಾಸಯೆಂದರೆ ಪ್ರತಿದಿನ ರಾತ್ರಿ ತನ್ನ ತಾಯಿಯ ಎದುರು ನಿಂತು ದಿನಪೂರ್ತಿ ನಡೆದುದನ್ನೆಲ್ಲ ವರದಿ ಒಪ್ಪಿಸುವುದು!

ಹಿಚ್ಕಾಕ್ ಇಷ್ಟವಾಗುವುದು, ಮಾದರಿಯಾಗುವುದು ಆತನ ಕೆಲಸ ಮಾಡುವಲ್ಲಿನ ಶ್ರದ್ಧೆ, ಶಿಸ್ತು, ಸಿದ್ಧತೆಗಳಿಂದಾಗಿ. “ನಾನು ಮತ್ತು ಬರಹಗಾರ ಕತೆಯ ಪ್ರತಿ ವಿಷಯವನ್ನೂ ಬರೆದಿಡುತ್ತೇವೆ. ಅದನ್ನು ಬರೆದು ಮುಗಿಸಿದ ನಂತರ ಉಳಿದಿರುವ ಏಕೈಕ ಕೆಲಸ ಅದನ್ನೆಲ್ಲ ಚಿತ್ರೀಕರಿಸುವುದು ಮಾತ್ರ. ನಾವು ಸ್ಟುಡಿಯೋ ಅನ್ನು ಪ್ರವೇಶಿಸಿದಾಗಲೇ ನಾವು ಬರೆದಿರುವ ಕತೆಯೊಂದಿಗೆ ಚೌಕಾಶಿ ಶುರುವಾಗುತ್ತದೆ. ಹಾಗೆ ನೋಡಿದರೆ ಬರಹಗಾರನಿಗೆ ತಾನು ಸೃಷ್ಟಿಸುವ ಪಾತ್ರಗಳೊಂದಿಗೆ ಕಾಂಪ್ರಮೈಸ್ ಮಾಡಿಕೊಳ್ಳುವ ಪ್ರಮೇಯವೇ ಬರುವುದಿಲ್ಲ, ಅದೇನಿದ್ದರೂ ನಿರ್ದೇಶಕನ ತಲೆನೋವು” ಎನ್ನುತ್ತಿದ್ದ ಹಿಚ್ಕಾಕ್.

ಹಿಚ್ಕಾಕ್ ಚಿತ್ರಕತೆ ಸಿದ್ಧವಾದ ಕೂಡಲೇ ಏಕದಂ ಶೂಟಿಂಗಿಗೆ ಹೊರಡುವುದಿಲ್ಲ. ತಾನು ಸಿದ್ಧಪಡಿಸಿಕೊಂಡಿರುವ ಚಿತ್ರಕತೆ ತೆರೆಯ ಮೇಲೆ ಹೇಗೆ ಮೂಡಿ ಬರಬೇಕು ಎಂಬುದಾಗಿ ಆಲೋಚಿಸುತ್ತಿದ್ದ. ಯಾವ ಸೀನ್‌ನಲ್ಲಿ ಎಷ್ಟು ಶಾಟ್ ಗಳಿರುತ್ತವೆ? ಯಾವ ಶಾಟ್‌ಗೆ ಎಲ್ಲಿ ಕಟ್ ಹೇಳಬೇಕು? ಆ ಶಾಟ್‌ಗಳು ಎಡಿಟಿಂಗ್ ನಂತರ ಹೇಗೆ ಒಂದು ಕ್ರಮದಲ್ಲಿ ಪರದೆಯ ಮೇಲೆ ಮೂಡಿ ಬರುತ್ತವೆ? ಆ ಮೂಲಕ ಪ್ರೇಕ್ಷಕನ ಮನಸಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ? ಎಂಬಿತ್ಯಾದಿ ಸಂಗತಿಗಳ ಬಗ್ಗೆ ತಾದಾತ್ಮ್ಯದಿಂದ ಧ್ಯಾನಿಸಿ ಆ ಕ್ಷಣಕ್ಕೆ ಹೊಳೆದ ಅಷ್ಟೂ ಸರಕನ್ನು ಒಂದು ಕಡೆ ಬರೆದಿಟ್ಟುಕೊಳ್ಳುತ್ತಿದ್ದ; ಆಮೇಲೆ ಒಮ್ಮೆ ಶೂಟಿಂಗ್ ಶುರುವಾದರೆ ಸ್ಕ್ರಿಪ್ಟ್‌ನ ಅಗತ್ಯ ಅವನಿಗಿರಲಿಲ್ಲ; ಎಲ್ಲವೂ ತಲೆಯಲ್ಲಿಯೇ ಇರುತ್ತಿತ್ತು. ತನ್ನ ಚಿತ್ರದ ಬರಹಗಾರರಿಗೂ ಅಷ್ಟೇ… ಏನೇ ಬರೆದರೂ ವಿಷುಯಲ್ ಫೀಲ್ ಇಟ್ಟುಕೊಂಡು ಬರೆಯಬೇಕು, ಪಾತ್ರಗಳ ನಡುವೆ ಬರೀ ಮಾತುಗಳು ಇರಬಾರದು ಎಂಬುದಾಗಿ ಸ್ಟ್ರಿಕ್ಟಾಗಿ ಹೇಳುತ್ತಿದ್ದ, ಆ ಮೂಲಕ ತನ್ನ ಚಿತ್ರಗಳ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತಿದ್ದ.

ಇಷ್ಟಕ್ಕೂ ಎರಡು ದಶಕಗಳ ಕಾಲ ಅತ್ಯುತ್ತಮ ಸಿನಿಮಾಗಳನ್ನು ನಿರ್ದೇಶಿಸುತ್ತಾ ಜನರನ್ನು ರಂಜಿಸಿದ ಹಿಚ್ಕಾಕ್‌ಗೆ ಕಡೆಗೂ ಅತ್ಯುತ್ತಮ ನಿರ್ದೇಶಕ ಕೆಟಗರಿಯಲ್ಲಿ ಆಸ್ಕರ್ ಪ್ರಶಸ್ತಿ ಬರಲೇ ಇಲ್ಲ. ಬದಲಿಗೆ ಈ ಕೊರತೆಯನ್ನು ತುಂಬಲು ಅಂದರೆ ತನ್ನ ತಪ್ಪನ್ನು ಸರಿಮಾಡಿಕೊಳ್ಳಲು ಇದೇ ಅಕಾಡೆಮಿ 1968ರಲ್ಲಿ ಈತನಿಗೆ ಲೈಫ್ ಟೈಮ್ ಅಚೀವ್ ಮೆಂಟ್ ಅವಾರ್ಡ್ ನೀಡಲು ತೀರ್ಮಾನಿಸಿತು. ಅದನ್ನು ಸ್ವೀಕರಿಸಿದ ನಂತರ ಹಿಚ್ಕಾಕ್ ಹೇಳಿದ್ದು “ಥ್ಯಾಂಕ್ ಯೂ… ವೆರಿಮಚ್ ಇನ್ ಡೀಡ್” ಎಂಬ ಐದು ಪದಗಳನ್ನು ಮಾತ್ರ. ಆ ಮೂಲಕ ಅಕಾಡೆಮಿ ಮೇಲಿನ ತನ್ನೊಳಗಿನ ಸಿಟ್ಟು ಹೊರಹಾಕಿದ್ದ ಎನ್ನಬಹುದು. ಇಷ್ಟಕ್ಕೂ ಈತನ ಅದ್ಭುತ ಚಿತ್ರಗಳು ಯಾವುದೇ ಪ್ರತಿಷ್ಟಿತ ಪ್ರಶಸ್ತಿಗೂ ಮೀರಿದವೆಂಬುದು ಬೇರೆ ಮಾತು.

“ಒಂದು ಚಲನಚಿತ್ರದ ಉದ್ದವು ಮನುಷ್ಯನೊಬ್ಬನ ಮೂತ್ರ ಚೀಲದ ಶಕ್ತಿಯನ್ನು ಪರೀಕ್ಷಿಸುವಷ್ಟು ಇರಕೂಡದು” ಎನ್ನುತ್ತಿದ್ದ ಹಿಚ್ಕಾಕ್ ತನ್ನ ಸಿನಿಮಾಗಳನ್ನು ತಾನೇ ನೋಡಲು ಹಿಂಜರಿಯುತ್ತಿದ್ದ ಅಂದರೆ ನಿಮಗೆ ಶಾಕ್ ಆಗಬಹುದು. ಯಾವತ್ತೂ ಪ್ರೇಕ್ಷಕರ ಜೊತೆ ಕೂತು ತನ್ನ ಚಿತ್ರಗಳನ್ನು ವೀಕ್ಷಿಸಿರದ ಈತ 1963ರ ಸಂದರ್ಶನವೊಂದರಲ್ಲಿ ತನ್ನ ಚಿತ್ರಗಳೆಂದರೆ ತನಗೆ ಭಯವೂ, ತಾನು ಅವುಗಳನ್ನು ನೋಡಲಿಚ್ಚಿಸದಿರುವುದಾಗಿಯೂ, ಜನ ಹೇಗೆ ತನ್ನ ಚಿತ್ರಗಳನ್ನು ಸಹಿಸಿಕೊಳ್ಳುತ್ತಾರೋ… ಎಂದೆಲ್ಲಾ ಹೇಳಿಕೊಂಡಿರುವ ಈ ವಿಶಿಷ್ಟ ನಿರ್ದೇಶಕನ ಆಸಕ್ತಿಗಳೂ ಅಷ್ಟೇ ತೀವ್ರವಾದ ವೈಚಿತ್ರ್ಯತೆಯಿಂದ ಕೂಡಿವೆ. ಯಾವಾಗಲೂ ಸೀರಿಯಸ್ಸಾಗಿ ಇರಲು ಇಷ್ಟ ಪಡದ ಈತನಿಗೆ ಜೋಕ್ಸ್‌ಗಳೆಂದರೆ ಇಷ್ಟ. “ನನಗೆ ಮೊಟ್ಟೆ ಎಂದರೆ ತೀವ್ರವಾದ ಭಯ. ಅವುಗಳೆಂದರೆ ನನಗೆ ಅಸಹ್ಯವಾಗುತ್ತದೆ. ತೂತೇ ಇಲ್ಲದ ಆ ಬಿಳಿಯ ಗುಂಡಿನಾಕಾರದ ವಸ್ತುವೇ ವಿಚಿತ್ರವಾಗಿದೆ. ಮೊಟ್ಟೆಯ ಲೋಳೆ ಒಡೆದು ಹಳದಿ ದ್ರವ್ಯ ಹರಿಯುವುದನ್ನು ನೋಡಿದರೆ ಹೇಸಿಗೆ ಆಗುತ್ತದೆ. ರಕ್ತವಾದರೋ ಕೆಂಪಗಿರುತ್ತದೆ. ಆದರೆ ಮೊಟ್ಟೆಯ ಲೋಳೆ ಹಳದಿಯಾಗಿರುತ್ತದೆ. ಅದನ್ನು ನಾನು ಎಂದೂ ತಿಂದಿಲ್ಲ” ಎನ್ನುತ್ತಿದ್ದ ಹಿಚ್ಕಾಕ್ ಊಟವನ್ನೂ, ಔತಣಕೂಟಗಳನ್ನೂ ಬಹಳವಾಗಿ ಇಷ್ಟಪಡುತ್ತಿದ್ದ ಎಂಬುದು ಮತ್ತೊಂದು ವಿಶೇಷ.

ಹಾಲಿವುಡ್‌ನ ಗಣ್ಯರಲ್ಲಿ ಒಬ್ಬನಾಗಿದ್ದ ಹಿಚ್ಕಾಕ್‌ನ ಸುತ್ತ ವಿವಾದಗಳೂ ಇದ್ದವು. ಅದರಲ್ಲೂ ಆತ ಮತ್ತು ಆತನ ಚಿತ್ರಗಳಲ್ಲಿ ನಟಿಸಿದ ನಟಿಯರ ಸುತ್ತಲಿನ ವಿವಾದಗಳು ಪ್ರಮುಖವಾದುವು. ಹಿಚ್ಕಾಕ್ ನಿರ್ದೇಶನದ ‘ದಿ ಬರ್ಡ್ಸ್’ ಮತ್ತು ‘ಮಾರ್ನಿ’ ಚಿತ್ರಗಳಲ್ಲಿ ನಟಿಸಿದ್ದ ನಟಿ ಟಿಪ್ಪಿ ಹೆಡ್ರೆನ್ “ಆತ ನನ್ನ ವೃತ್ತಿಬದುಕನ್ನು ನಾಶ
ಮಾಡಿದ. ಆದರೆ ನನ್ನ ಜೀವನವನ್ನಲ್ಲ. ನನ್ನ ಬದುಕಿನ ಆ ಅಧ್ಯಾಯ ಮುಗಿದಿದೆ. ಆದರೂ ಆತನ ಸಾಧನೆ ಬಗ್ಗೆ ನನಗೆ ಅಭಿಮಾನವಿದೆ” ಎನ್ನುತ್ತಲೇ ಹಿಚ್ಕಾಕ್ ಕರೆದಿದ್ದ ಸ್ಕ್ರೀನ್ ಟೆಸ್ಟ್‌ನಲ್ಲಿ ತಾನು ಭಾಗವಹಿಸಿದ್ದು, ಸ್ಕ್ರೀನ್ ಟೆಸ್ಟ್‌ನ ನಂತರ ಹಿಚ್ಕಾಕ್ ಮತ್ತು ಆತನ ಮಡದಿಯೊಟ್ಟಿಗೆ ಊಟಕ್ಕೆ ಹೋಗಿದ್ದು, ಅಂದು ಆತ ಉಡುಗೊರೆಯಾಗಿ ತನಗೊಂದು ಬ್ಯೂಟಿಫುಲ್ ಬಾಕ್ಸ್ ನೀಡಿದ್ದು, ಅದರಲ್ಲಿ ಮೂರು ಬಂಗಾರದ ಹಕ್ಕಿಗಳಿದ್ದದ್ದು, ‘ದಿ ಬರ್ಡ್’ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿ ಬಾಷ್ಪಗರೆದದ್ದು, ತನ್ನೊಡನೆ ಸ್ವತಃ ಹಿಚ್ಕಾಕ್‌ನ ಹೆಂಡತಿ ಅಲ್ಮಾ ಕೂಡ ಸಂತಸದ ಕಂಬನಿ ತುಳುಕಿಸಿದ್ದು ಎಲ್ಲವನ್ನು ನೆನೆಯುತ್ತಲೇ, ಆತ ನಿಜಕ್ಕೂ ಪ್ರತಿಭಾವಂತ, ನಟನೆಗೆ ಸಂಬಂಧಿಸಿದಂತೆ ಆತನಿಂದ ನಾನು ಸಾಕಷ್ಟು ಕಲಿತೆ, ಆತ ಒಬ್ಬ ಅದ್ಭುತ ಸ್ಟೋರಿ ಟೆಲ್ಲರ್ ಅನ್ನುತ್ತಲೇ, ಹಿಚ್ಕಾಕ್ ತನ್ನ ಮೇಲೆ ಇಟ್ಟುಕೊಂಡಿದ್ದ ಅತೀವ ಮೋಹದ ಕುರಿತು, “ಹೆಂಗಸರು ಮೂರ್ಖರಲ್ಲ. ಅದೊಂದು ಅಸಹನೀಯ ಸಂಗತಿ. ಆತನ ಮೇಲೆ ಲೈಂಗಿಕವಾಗಿ ನನಗೆ ಯಾವುದೇ ಬಗೆಯ ಆಸೆಯಾಗಲೀ, ಆಸಕ್ತಿಯಾಗಲೀ ಇರಲಿಲ್ಲ. ಆತ ಯಾವಾಗಲೂ ನನ್ನೆಡೆಗೆ ನೋಟ ನೆಟ್ಟಿರುತ್ತಿದ್ದ. ನನ್ನೊಟ್ಟಿಗೆ ಏಕಾಂತದಲ್ಲಿ ಊಟ ಮಾಡಲು ಬಯಸುತ್ತಿದ್ದ. ನನ್ನ ಬದುಕನ್ನು ಸಂಪೂರ್ಣವಾಗಿ ತನ್ನ ಕಂಟ್ರೋಲಿಗೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದ” ಎನ್ನುತ್ತಾಳೆ.

ಟಿಪ್ಪಿ ಹೆಡ್ರೆನ್ ರೀತಿಯಲ್ಲಿಯೇ ಹಿಚ್ಕಾಕ್‌ನ ‘ವರ್ಟಿಗೋ’ ಚಿತ್ರದಲ್ಲಿ ನಟಿಸಿದ್ದ ನಟಿ ಕಿಮ್ ನೋವಾಕ್, “ಹಿಚ್ಕಾಕ್ ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದ. ಆ ಪಾತ್ರಕ್ಕೆ ನನ್ನಿಂದ ಏನು ಸಲ್ಲಬೇಕಿತ್ತೋ ಅದು ಸಲ್ಲುವಲ್ಲಿ ಆತನೇ ಕಾರಣನಾಗಿದ್ದ. ಇಷ್ಟಕ್ಕೂ ಆತನೊಬ್ಬ ಜೆಂಟಲ್ ಮ್ಯಾನ್. ಆತ ಮೇಲುನೋಟಕ್ಕೆ ನಗುತ್ತಿದ್ದಾನೆ ಅಥವಾ ಉಗ್ರವಾಗಿದ್ದಾನೆ ಅಂತ ಅನ್ನಿಸಿದರೂ ಆತನ ತಲೆ ಮಾತ್ರ ಕ್ರಿಯಾಶೀಲವಾಗಿ ಎಲ್ಲೆಲ್ಲೋ ಓಡುತ್ತಿರುತ್ತಿದ್ದದ್ದು ಮಾತ್ರ ನಿಜ. ಅದನ್ನು ಯಾರಿಂದಲೂ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಇದರಿಂದ ನಾವು ಗ್ರಹಿಸಬೇಕಾದ್ದು ಹಿಚ್ಕಾಕ್ ಎಂಬ ಮನುಷ್ಯ ಹೇಗೆ ಬೇರೆ ಬೇರೆ ಸಂದರ್ಭಗಳಲ್ಲಿ, ಬೇರೆ ಬೇರೆ ರೀತಿಯಲ್ಲಿ, ಬೇರೆ ಬೇರೆ ವ್ಯಕ್ತಿಗಳ ಅದರಲ್ಲೂ ತನ್ನ ಚಿತ್ರಗಳಲ್ಲಿ ನಟಿಸಿದ್ದ ನಟಿಯರ ಗ್ರಹಿಕೆಗೆ ಸಿಗುತ್ತಾನೆ ಎಂಬ ಅಚ್ಚರಿ.

ಆದರೆ ಆಲ್ಫ್ರೆಡ್ ಹಿಚ್ಕಾಕ್‌ನ ಹಿರಿಮೆ ಇರುವುದು ತಾನು ಮಾಡಿದ ಸಿನಿಮಾಗಳಲ್ಲಿ, ತಾನು ಕತೆ ಹೇಳಿದ ವಿಧಾನದಲ್ಲಿ, ತನ್ನ ಸಿನಿಮಾಗಳನ್ನು ತಾನೇ ಗೇಲಿ ಮಾಡಿಕೊಳ್ಳುತ್ತಾ ಜಗತ್ತಿನ ಕೋಟ್ಯಂತರ ಸಿನಿಪ್ರಿಯರ ಹೃದಯಗಳನ್ನು ಗೆಲ್ಲುವಲ್ಲಿ. ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಚಿತ್ರಗಳಿಗೆ ಹೊಸ ವ್ಯಾಖ್ಯಾನ ಬರೆದ ಈತ ಇವತ್ತಿಗೂ ನಿಗೂಢವಾಗಿಯೇ ಉಳಿದುಹೋಗಿರುವ ವ್ಯಕ್ತಿತ್ವದವನು. ಪ್ರೇಕ್ಷಕರನ್ನು ಸರ್ಪ್ರೈಸ್ ಅಥವಾ ಸಸ್ಪೆನ್ಸ್ ಮೂಲಕ ಹಿಡಿದಿಟ್ಟುಕೊಳ್ಳಬೇಕೆಂದು ವಾದಿಸುವ ಹಿಚ್ಕಾಕ್ ಈ ವಾದಕ್ಕೆ ಪೂರಕವಾಗಿ ಒಂದು ಪುಟ್ಟ ಉದಾಹರಣೆ ಕೊಡುತ್ತಾನೆ. ಅದೇನೆಂದರೆ ಒಂದು ಟೇಬಲ್ಲಿನ ಕೆಳಗೆ ಯಾರಿಗೂ ಗೊತ್ತಿಲ್ಲದ ಹಾಗೆ ಒಂದು ಬಾಂಬ್ ಇರುತ್ತದೆ ಅಂತ ಭಾವಿಸಿ. ಅದು ಅನಿರೀಕ್ಷಿತವಾಗಿ ಒಮ್ಮೆಲೇ ಸಿಡಿದಾಗ ಅಲ್ಲಿದ್ದವರೆಲ್ಲ ಗಾಬರಿಗೊಳಗಾಗುತ್ತಾರೆ; ಅದು ‘ಸರ್ಪೈಸ್’. ಅದೇ
ಆ ಟೇಬಲ್ಲಿನ ಕೆಳಗೆ ಬಾಂಬ್ ಇರುವುದು ಮೊದಲೇ ಗೊತ್ತಿದ್ದು ಅದು ಇನ್ನೇನು ಸಿಡಿಯುತ್ತದೆ ಅಂತ ಕಾಯುವುದಿದೆಯಲ್ಲಾ ಅದು ‘ಸಸ್ಪೆನ್ಸ್’. ಈ ಎರಡರ ನಡುವಿನ ವ್ಯತ್ಯಾಸವನ್ನು, ಅವು ಮನುಷ್ಯನ ಮನಸ್ಸಿನ ಮೇಲೆ ಉಂಟು ಮಾಡುವ ಪರಿಣಾಮವನ್ನು ನಿರ್ದೇಶಕನೊಬ್ಬ ಸೂಕ್ಷ್ಮವಾಗಿ ಅರಿತಾಗ ಮಾತ್ರ ಈ ಪ್ರಯೋಗ ಫಲಪ್ರದವಾಗುತ್ತದೆ ಎಂಬುದು ಈತನ ವಾದ; ಈತ ಈ ನಿಟ್ಟಿನಲ್ಲಿ ಗೆದ್ದಿದ್ದಾನೆ ಎಂಬುದಕ್ಕೆ ‘ಸೈಕೋ’, ‘ಡಯಲ್ ಎಂ ಫಾರ್ ಮರ್ಡರ್’, ‘ರೇರ್ ವಿಂಡೋ’ ತರಹದ ಚಿತ್ರಗಳು ಸಾಕ್ಷಿಯಾಗಿ ನಿಲ್ಲಬಲ್ಲವು.

ಹೀಗೆ ತನ್ನ ಬದುಕಿನುದ್ದಕ್ಕೂ ಪ್ರೇಕ್ಷಕರನ್ನು ಹೇಗೆಲ್ಲಾ ರಂಜಿಸಬಹುದು ಎಂಬುದರ ಬಗ್ಗೆ ಆಲೋಚಿಸುತ್ತ, ಆ ಆಲೋಚನೆಗಳನ್ನು ತನ್ನ ಚಿತ್ರಗಳ ಮೂಲಕ ಪ್ರಯೋಗಕ್ಕೆ ಒಡ್ಡುತ್ತಾ, ಚಿತ್ರದಿಂದ ಚಿತ್ರಕ್ಕೆ ಪಳಗುತ್ತಾ ಕಡೆಗೆ ಇಡೀ ಜಗತ್ತೇ ತನ್ನತ್ತ, ತನ್ನ ಚಿತ್ರಗಳತ್ತ ತಿರುಗಿ ನೋಡುವಂತೆ ಮಾಡಿದ ಈ ಮಹಾನ್ ನಿರ್ದೇಶಕ ಯಾವತ್ತಿಗೂ ಚಿತ್ರರಂಗದ ಮಾಸ್ಟರ್‌ಗಳಲ್ಲಿ ಒಬ್ಬ. ಇಷ್ಟಕ್ಕೂ ಪ್ರತಿಯೊಬ್ಬ ಸೆಲೆಬ್ರಿಟಿಯಂತೆ ಸಾಧನೆಯ ಜೊತೆಗೆ ವಿವಾದಗಳಿಗೂ ಗುರಿಯಾದ ಈತ ಹೇಳುವುದಿಷ್ಟು, “ನಾನು ನಾನಾಗಿರದಿದ್ದರೆ ಯಾರು ನಾನಾಗಲು ಸಾಧ್ಯ?”

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಚಿತ್ರಗೀತೆಗಳ ಹಿಂದಿನ ಕಣ್ಣು ‘ಚಿಟ್ಟಿಬಾಬು’

ಚಿತ್ರಗೀತೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಬೆಳ್ಳಿತೆರೆಯಲ್ಲಿ ಮೂಡಿಸಿದ ಚಿಟ್ಟಿ ಬಾಬು ಅವರಂತಹ ಛಾಯಾಗ್ರಾಹಕರು ಭಾರತೀಯ ಚಿತ್ರರಂಗದಲ್ಲಿಯೇ ಬೆರಳೆಣಿಕೆಯಷ್ಟು. ಇಂದು

ಶಶಿಕಪೂರ್

ಹಿಂದಿ ಚಿತ್ರರಂಗ ಮತ್ತು ರಂಗಭೂಮಿ ದಿಗ್ಗಜ ಪೃಥ್ವೀರಾಜ್ ಕಪೂರ್ ಅವರ ಮೂರನೇ ಪುತ್ರ ಶಶಿಕಪೂರ್. ಕಪೂರ್ ಸಹೋದರರ ಪೈಕಿ ಚಿಕ್ಕವರು.