ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಕನ್ನಡಕ್ಕೊಬ್ಬರೇ ಬಾಲಣ್ಣ

ಪೋಸ್ಟ್ ಶೇರ್ ಮಾಡಿ
ಡಾ.ಶ್ರೀನಿವಾಸ ಪ್ರಸಾದ್
ಡಿ.ಎಸ್‌.,
ಲೇಖಕ

ಬಾಲಣ್ಣ ತೀರಿಹೋಗಿ 26 ವರ್ಷ ಆಗಿದ್ದರೂ ಅವರಿಗೆ ಅವರ ಪಾತ್ರಗಳಿಗೆ ಸರಿಸಾಟಿ ಯಾರಿದ್ದಾರೆ? ಬಾಲಣ್ಣನವರಿಗೆ ಸರಿಸಾಟಿಯಾಗಿ ನಿಲ್ಲುವವರು ಬಾಲಣ್ಣನವರು ಮಾತ್ರ. ನಿಸ್ಸಂದೇಹವಾಗಿ ಬಾಲಣ್ಣ ಕನ್ನಡ ಮಾತ್ರವಲ್ಲದೆ, ಭಾರತೀಯ ಚಿತ್ರರಂಗದ ಚಿರಸ್ಥಾಯೀ ಕಲಾವಿದ.

“ಆಂ, ಏನ್ ಸರಸ್ವತಮ್ನೋರೇ, ಜ್ಞಾಪಕ ಇದ್ಯೇ, ಆ ಹಾವಿಗೆ ಹನ್ನೆರೆಡು ವರ್ಷ ದ್ವೇಷವಾದರೆ, ಈ ವೆಂಕಟಪ್ಪನಾಯಕನಿಗೆ ಇಪ್ಪತ್ನಾಲ್ಕು ವರ್ಷ, ಇಪ್ಪತ್ನಾಲ್ಕು ವರ್ಷ ದ್ವೇಷ… ಏನ್ ರೇಂಜರ್‌ ಸಾಹೇಬ್ರೇ, ಇದುವರ್ಗೂ ನಡೆದ ಗಂಡಾಂತರದಿಂದ ನೀವು ತಪ್ಪಿಸ್ಕೊಂಡುಬಿಟ್ರಿ, ಆದರೆ ಈಗ..”

ಹೀಗೆ ಖದರ್ ಆಗಿ ಗರ್ಜಿಸುವ ವೆಂಕಟಪ್ಪನಾಯಕ, ನಾಯಕನ ಕುರುಡುತನದ ಲಾಭ ಪಡೆದು ಮಜಾ ಉಡಾಯಿಸುವ ಮಸಾಲೆದೋಸೆ ದಾಸಣ್ಣ, ಮುರಿಯದ ಮನೆಯನ್ನು ಮುರಿಯುವ ಕುತಂತ್ರಿ ಬೊಂಬಾಯಿ ಬೋರ, ‘ಬಂಗಾರದ ಪಂಜರ’ ಚಿತ್ರದ ವಾತ್ಸಲ್ಯಮಯೀ ಹಿರಿಯ, ‘ನಮ್ಮ ಸಂಸಾರ’ದ ಕುಟುಂಬದ ಸಂಭಾವಿತ ಲಕ್ಷ್ಮೀಪತಿ, ‘ಸಂಪತ್ತಿಗೆ ಸವಾಲ್’ನ ಒಕ್ಕಣ್ಣಾವತಾರಿ ಪುಟ್ಟಯ್ಯ, ‘ಚಂದವಳ್ಳಿಯ ತೋಟ’ದ ಮನೆಮುರುಕ ಕರಿಯಣ್ಣ, ‘ಸಾಕ್ಷಾತ್ಕಾರ’ದ ವಕೀಲ ಲಟಾಪಟಿ ಲಕ್ಷ್ಮಯ್ಯ, ಮಗಳ ಪ್ರೀತಿಗೆ ಅಳಿಯ ಅಡ್ಡಬಂದನೆಂದು ಇಬ್ಬರ ಮೇಲೂ ಸಿಡುಕುತ್ತಾ ಕೊನೆಗೆ ಅಳಿಯನ ಒಳ್ಳೆಯ ಮನಸ್ಸು ಕಂಡು ಕೊರಗಿ, ಕರಗಿ ನೇಣು ಹಾಕಿಕೊಂಡು ಸಾಯುವ ಸ್ವಕೇಂದ್ರಿತ ವಾತ್ಸಲ್ಯದ ಅಪ್ಪ, ‘ಬಂಗಾರದ ಮನುಷ್ಯ’ದ ರಾಚೂಟಪ್ಪ, ‘ಕವಿರತ್ನ ಕಾಳಿದಾಸ’ದ ಸ್ವಾರ್ಥಲಾಲಸೆಯ ಮಂತ್ರಿ… ಎಲ್ಲವನ್ನೂ ತನ್ನೊಳಗಿನ ಕಲಾಶ್ರೀಮಂತಿಕೆಯಿಂದ, ಧೀಮಂತಿಕೆಯಿಂದ ಬೆಳಗಿದವರು ಟಿ.ಎನ್.ಬಾಲಕೃಷ್ಣ. “ಚಿತ್ರ ಕೆಟ್ಟಿದೆ ಎಂದು ಯಾರಾದರೂ ಹೇಳಬಹುದಿತ್ತು, ಆದರೆ ಬಾಲಣ್ಣನವರ ಪಾತ್ರ ಕೆಟ್ಟಿದೆ ಎಂದು ಹೇಳಲು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ” ಎನ್ನುವ ನಟ ಅನಂತನಾಗ್ ಅವರ ಮಾತುಗಳು ಬಾಲಕೃಷ್ಣರ ಪಾತ್ರಗಳ ಬ್ರಹ್ಮಾಂಡ ಸಾಮರ್ಥ್ಯಕ್ಕೆ ಸಾಕ್ಷಿ ಕನ್ನಡಿಯಾಗಬಲ್ಲದು.

‘ಪ್ರೀತಿ ಮಾಡು ತಮಾಷೆ ನೋಡು’ ಚಿತ್ರದಲ್ಲಿ ಬಾಲಣ್ಣ, ನರಸಿಮಹರಾಜು (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಗಂಡನ ಅನಾರೋಗ್ಯದ ಕಾರಣ – ತಾನೇ ಹೆತ್ತ ಮಗನನ್ನು ಬೇರೊಬ್ಬರಿಗೆ 8 ರೂಪಾಯಿಗೆ ಮಾರಿದ ತಾಯಿ, ಅವಳ ಮತ್ತು ಅಪ್ಪನ ಹೆಸರು ಗೊತ್ತಿಲ್ಲದೇ ಬೆಳೆದ ಬಾಲಕೃಷ್ಣ ಮುಂದೆ ಕಿವುಡುತನಕ್ಕೆ ಒಳಗಾಗಿ, ಕೇವಲ ಇತರ ಪಾತ್ರಧಾರಿಗಳ ತುಟಿಚಲನೆಯನ್ನು ಗಮನಿಸಿ 1943ರ ‘ರಾಧಾರಮಣ’ದಿಂದ ‘ಯಮಕಿಂಕರ’ ಚಿತ್ರದ ತನಕ 500ಕ್ಕೂ ಅಧಿಕ ಪಾತ್ರಗಳಲ್ಲಿ ಮಿನುಗಿದವರು ಟಿ.ಎನ್.ಬಾಲಕೃಷ್ಣ. ಕಿತ್ತು ತಿನ್ನುತ್ತಿದ್ದ ಕಡುಬಡತನದಲ್ಲೇ ಬದುಕು ಅರಸಿದ ಅರಸೀಕೆರೆಯ ಬಾಲಣ್ಣ ನಾಟಕ ಕಂಪನಿಗಳ ಗೇಟ್ ಕೀಪರ್, ಬೋರ್ಡ್ ಬರೆಯುವ ಕೆಲಸ, ಇವೆಲ್ಲವನ್ನೂ ಉದರಂಭರಣಕ್ಕಾಗಿ ಮಾಡುತ್ತಲೇ ಗುಬ್ಬಿವೀರಣ್ಣ, ಪಂತುಲು ಅವರ ಕಣ್ಣಿಗೆ ಬಿದ್ದರು. ‘ಕಾಲಚಕ್ರ’ ಎಂಬ ನಾಟಕದ ಸಾಹಿತ್ಯದಲ್ಲೂ ಕ್ಯೆಯಾಡಿಸಿದ್ದ ಬಾಲಣ್ಣನವರ ಶಾಲಾಜೀವನ, ಶಿಕ್ಷಣ ಅತಿ ಅಲ್ಪ. ಗುಬ್ಬಿವೀರಣ್ಣನವರ ಕಂಪೆನಿಯ ಸ್ವತ್ತಾದ ಬಾಲಣ್ಣ ಅವರ ಸಾಹಿತ್ಯ ಸೃಜನಶೀಲತೆ ಅನೇಕ ನಾಟಕದ ಪಾತ್ರಗಳನ್ನು ಮಾಡಿಸಿತ್ತು. ಚಿತ್ರರಂಗಕ್ಕೂ ಹೊನ್ನಪ್ಪ ಭಾಗವತರ್ ಅವರು ನಾಯಕರಾಗಿದ್ದ ‘ಪಂಚರತ್ನ’ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ, ಗೀತೆ ಬರೆದು ‘ಮಹಿರಾವಣ’ದಲ್ಲೂ ಅದನ್ನು ಮುಂದುವರೆಸಿದ್ದರು. ‘ಕಲಿತರೂ ಹೆಣ್ಣೇ’ ಚಿತ್ರ ನಿರ್ಮಾಪಕರಾಗಿದ್ದ ಬಾಲಣ್ಣ ಅವರು ಕಟ್ಟಿದ ಅಭಿಮಾನ್ ಸ್ಟುಡಿಯೊ ಇವೆಲ್ಲವೂ ಒಬ್ಬರ ಸಾಧನೆ ಎಂದರೆ ಅದೊಂದು ವಿಸ್ಮಯ. ಆದರೆ ಸತ್ಯಸ್ಯ ಸತ್ಯ. ಶಾಲೆಯಲ್ಲಿ ಹೆಚ್ಚು ಕಲಿಯದೆ ಹೋದ ಬಾಲಣ್ಣ ಬಾಲಕ ಮುತ್ತುರಾಜನಿಗೆ (ರಾಜಕುಮಾರ್) ಅಕ್ಷರ ಕಲಿಸಿದ ಗುರು.

ಗುಬ್ಬಿ ವೀರಣ್ಣ ಅವರು ತೀರಿಕೊಂಡಾಗ ಬರೆದ ತಿಂಗಳಾ ಬೆಳಕಾಗಿ, ದೇವಸುಂದರಿ ಚಿತ್ರಕ್ಕೆ ನರಸಿಂಹರಾಜು ಅವರ ಮೇಲೆ ಚಿತ್ರೀಕರಿಸಲಾದ ಕಾವಿತೊಟ್ಟವರೆಲ್ಲ ಅನ್ನುವ ರಾಜ್ ಗಾಯನತ್ವದ ಆರಂಭಿಕ ದಿನಗಳ ಗೀತೆ ಬರೆದಿದ್ದರು. ಕನ್ನಡದ ಐತಿಹಾಸಿಕ ಚಿತ್ರ ಮತ್ತು ಕನ್ನಡ ವಾಕ್ಚಿತ್ರ ಪ್ರಪಂಚದ 100ನೇ ಚಿತ್ರವಾದ ರಣಧೀರ ಕಂಠೀರವ ಚಿತ್ರವನ್ನು ಅಯ್ಯರ್, ರಾಜ್, ನರಸಿಂಹರಾಜು ಜೊತೆ ನಿರ್ಮಿಸಿದವರು. ಒಮ್ಮೆ ಅನಕೃ – ತರಾಸು ಅವರಲ್ಲಿ ಉಂಟಾಗಿದ್ದ ವ್ಯೆಮನಸ್ಸನ್ನು ಶಮನಗೊಳಿಸಿದ್ದವರು ಬಾಲಣ್ಣ. ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಬಾಲಣ್ಣ ಭಾಜನರಾದಾಗ ಅವರು ನಿರ್ದೇಶಕರಲ್ಲ, ಅವರಿಗೆ ಪ್ರಶಸ್ತಿ ನೀಡುವುದೆಷ್ಟು ಸರಿ ಎಂಬ ವಿವಾದವೂ ಇತ್ತು. ಇಮ್ಮಡಿ ಪುಲಿಕೇಶಿ ಬಾಲಣ್ಣರ 100ನೇ ಚಿತ್ರ. ಬಾಲಣ್ಣ – ನರಸಿಂಹರಾಜು ಕಾಲ್ ಶೀಟ್ ಪಡೆದ ನಿರ್ಮಾಪಕರು ಆಮೇಲೆ ರಾಜಕುಮಾರ್ ಕಾಲ್ ಶೀಟ್ ಪಡೆಯುತ್ತಿದ್ದರು. ಕಾಲು ಕಳೆದುಕೊಂಡಿದ್ದ ಅದ್ಭುತ ನೃತ್ಯಗಾತಿ ಸುಧಾಚಂದ್ರನ್ ನಿರ್ಮಿಸಿದ ಬಾಲಣ್ಣನವರ ಜೀವನಾಧಾರಿತ, ಚಿತ್ರಜೀವನಾಧಾರಿತ ಕಲಾಭಿಮಾನಿಯನ್ನು ಬಾಲಣ್ಣ ಅವರ ಮಗ ಶ್ರೀನಿವಾಸ ನಿರ್ದೇಶಿಸಿದರು. ಆದರೆ ಚಿತ್ರ- ಸಾಕ್ಷ್ಯಚಿತ್ರ ಆಗದೆ ಇದ್ದಿದ್ದರೆ ಅದು ಯಶ ಕಾಣುತ್ತಿತ್ತೇನೋ. ಇತ್ತೀಚೆಗೆ ಶ್ರೀನಿವಾಸ್ ತೀರಿಹೋದರು.

ಚಿಕ್ಕಬಳ್ಳಾಪುರದ ‘ಭವಾನಿ’ ಸ್ಟುಡಿಯೋದಲ್ಲಿ ಸ್ಥಿರಚಿತ್ರ ಛಾಯಾಗ್ರಾಹಕ ಲಕ್ಷ್ಮಿನಾರಾಯಣ ಅವರ ಕ್ಯಾಮೆರಾಗೆ ಬಾಲಣ್ಣ, ರಾಜಕುಮಾರ್ ಸೆರೆಯಾಗಿದ್ದು ಹೀಗೆ..

ಜೀವನದ ಕೊನೆಯಲ್ಲಿ ಅಭಿಮಾನ್ ಸ್ಟುಡಿಯೊ ಸಾಲ ಮನ್ನಾ ಮಾಡಿ ಎಂದು ದಯನೀಯವಾಗಿ ಕೋರಿಕೊಂಡ ಬಾಲಣ್ಣ ಪಾತ್ರಗಳ ವರ್ಣರಂಜಿತ ಅಧ್ಯಾಯಕ್ಕೆ ಪುಟಗಳು ಸಾಲವು.. ‘ಅಪರಾಧಿ’ ಚಿತ್ರದ ಖಳ, ‘ಬ್ರಹ್ಮಾಸ್ತ್ರ’ ಸಿನಿಮಾದ ನಾಯಕನ ಬೆಂಬಲಿಗ ವಕೀಲ, ‘ಕಲಿಯುಗ’ ಚಿತ್ರದ ನಿಸ್ಸಹಾಯಕ ಮುದುಕ, ‘ಇಬ್ಬನಿ ಕರಗಿತು’ ಸಿನಿಮಾದ ಆರ್ದ್ರ ಮುದುಕ, ‘ಸ್ವಾಭಿಮಾನ’ದ ಹಿರಿಯ ಆಳು, ‘ನಾ ನಿನ್ನ ಮರೆಯಲಾರೆ’ ಚಿತ್ರದ ಸ್ವಾಭಿಮಾನಿ ಟೈಲರ್, ‘ಆಟೋರಾಜ’ದ ಖೂಳರ ಗುಂಪಿನ ಜೊತೆಯಲ್ಲಿದ್ದು ಮಸಲತ್ತು ಮಾಡುವ ವ್ಯೆದ್ಯ, ‘ಬೆಟ್ಟದ ಹೂವು’ ಚಿತ್ರದ ಪಟ್ಟೆ ಹುಲಿ ಬಲುಕೆಟ್ಟ ಹುಲಿ.. ಹಾಡಿನ ಅಜ್ಜ ‘ಮೂಗನ ಸೇಡಿ’ನ ನಾಯಕಿಯ ಅಪ್ಪ, ‘ಧ್ರುವತಾರೆ’ಯ ಕೆಡುಕ ಸೋದರಮಾವ ಕಾಳಿಂಗ, ‘ಪ್ರೀತಿ ಮಾಡು ತಮಾಷೆ ನೋಡು’ ಚಿತ್ರದ ಹಿರಿಯ… ಬಾಲಕೃಷ್ಣ ಅಭಿನಯದಲ್ಲಿ ವಿರಾಟ್ ಸ್ವರೂಪ ತೋರಿಸಿದವರು. ಬಾಲಣ್ಣ ಅವರಿಗೊಂದು ಪರಿಪೂರ್ಣವಾದ ಬಿರುದು, ಡಾಕ್ಟರೇಟ್ ಪದವಿಯೂ ಬರಲಿಲ್ಲ. ದಾದಾಸಾಹೇಬ್ ಫಾಲ್ಕೆ ಸಿಗಲಿಲ್ಲ, ಇವೆಲ್ಲ ಬಾಲಣ್ಣ ಅವರಿಗೆ ಸಂದಿದ್ದರೆ ಆ ಪ್ರಶಸ್ತಿಗಳು ಗೌರವಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದವು. ಆದರೆ ಬಾಲಣ್ಣ ತೀರಿಹೋಗಿ 26 ವರ್ಷ ಆಗಿದ್ದರೂ ಅವರಿಗೆ ಅವರ ಪಾತ್ರಗಳಿಗೆ ಸರಿಸಾಟಿ ಯಾರಿದ್ದಾರೆ? ಬಾಲಣ್ಣನವರಿಗೆ ಸರಿಸಾಟಿಯಾಗಿ ನಿಲ್ಲುವವರು ಬಾಲಣ್ಣನವರು ಮಾತ್ರ. ನಿಸ್ಸಂದೇಹವಾಗಿ ಬಾಲಣ್ಣ ಕನ್ನಡ ಮಾತ್ರವಲ್ಲದೆ, ಭಾರತೀಯ ಚಿತ್ರರಂಗದ ಚಿರಸ್ಥಾಯೀ ಕಲಾವಿದ.

‘ಪ್ರೊಪೆಸರ್ ಹುಚ್ಚೂರಾಯ’ ಚಿತ್ರದಲ್ಲಿ ಬಾಲಣ್ಣ (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ನೆಲದ ಸೊಗಡಿನ ನಿರ್ದೇಶಕ

ಕನ್ನಡ ಚಿತ್ರರಂಗ ಕಂಡ ಪ್ರಮುಖ ಚಿತ್ರಸಾಹಿತಿ ಮತ್ತು ಅಪ್ಪಟ ನೆಲದ ಸೊಗಡಿನ ನಿರ್ದೇಶಕ ಗೀತಪ್ರಿಯ. ನೂರಾರು ಮಧುರ ಗೀತೆಗಳ ಕತೃ.

ಚಿತ್ರಸಾಹಿತಿ ಗೋಪಾಲ ವಾಜಪೇಯಿ

ಕವಿ, ಪತ್ರಕರ್ತ, ನಾಟಕಕಾರ ಗೋಪಾಲ ವಾಜಪೇಯಿ (01/06/1951 – 20/09/2016) ಚಿತ್ರಸಾಹಿತ್ಯಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಇಂದು (ಸೆಪ್ಟೆಂಬರ್‌ 20)