ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

‘ಜ್ಯುಬಿಲಿ ಸ್ಟಾರ್’ ರಾಜೇಂದ್ರ ಕುಮಾರ್

ಪೋಸ್ಟ್ ಶೇರ್ ಮಾಡಿ

ಬೆಳ್ಳಿತೆರೆಗೆ ಪರಿಚಯವಾದ ಆರಂಭದ ದಿನಗಳಲ್ಲಿ ರಾಜೇಂದ್ರಕುಮಾರ್ ತೀವ್ರ ಹಿನ್ನೆಡೆ ಅನುಭವಿಸಿದ್ದರು. ಅನಿರೀಕ್ಷಿತ ಬೆಳವಣಿಗೆಯಲ್ಲಿ ಅವರ ಸಾಲು, ಸಾಲು ಚಿತ್ರಗಳು ಯಶಸ್ವಿಯಾದವು. ಒಮ್ಮೆಗೇ ಅವರು `ಜ್ಯುಬಿಲಿ ಕುಮಾರ್’ ಪಟ್ಟ ಅಲಂಕರಿಸಿದ್ದರು. ಹುಟ್ಟಿದ್ದು 1929, ಜುಲೈ 20ರಂದು. ಅವರ ಜನ್ಮಸ್ಥಳ ಪಂಜಾಬ್‌ನ ಸೇಲ್‌ಕೋಟ್ (ಇದೀಗ ಪಾಕಿಸ್ತಾನದಲ್ಲಿದೆ). `ಮೇಲಾ’ (1948) ಚಿತ್ರದ ಪುಟ್ಟ ಪಾತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ರಾಜೇಂದ್ರ ಕುಮಾರ್ ಅಂಥ ಚಿಕ್ಕ – ಪುಟ್ಟ ಪಾತ್ರಗಳಲ್ಲೇ ಏಳು ವರ್ಷಗಳನ್ನು ಕಳೆದರು. `ವಚನ್’ (1955) ಚಿತ್ರದಲ್ಲಿ ನಟಿ ಗೀತಾ ಬಾಲಿ ಸಹೋದರನಾಗಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ದಿಲೀಪ್ ಕುಮಾರ್ ಮತ್ತು ನರ್ಗಿಸ್ ಜೋಡಿಯ `ಜೋಗನ್’ (1950) ಚಿತ್ರ ರಾಜೇಂದ್ರಕುಮಾರ್‌ಗೆ ಉತ್ತಮ ವೇದಿಕೆ ಒದಗಿಸಿತು. ಆದರೆ ಅವರಿಗೆ ಬಹುದೊಡ್ಡ ತಿರುವು ನೀಡಿದ ಸಿನಿಮಾ `ಮದರ್ ಇಂಡಿಯಾ’ (1957). ಹಿಂದಿ ಚಿತ್ರರಂಗದ ಮಹತ್ವದ ಪ್ರಯೋಗಗಳಲ್ಲೊಂದಾದ ಈ ಚಿತ್ರದಲ್ಲಿ ಅವರು ನರ್ಗಿಸ್ ಪುತ್ರನಾಗಿ ನಟಿಸಿದ್ದರು.

1960ರ ದಶಕ ರಾಜೇಂದ್ರ ಕುಮಾರ್ ಪಾಲಿಗೆ ಸುವರ್ಣ ಕಾಲ. ಈ ಅವಧಿಯಲ್ಲಿ ಅವರು ನಟಿಸಿದ ಬಹುತೇಕ ಚಿತ್ರಗಳು ಬೆಳ್ಳಿ ಹಬ್ಬ ಆಚರಿಸಿಕೊಂಡದ್ದು ವಿಶೇಷ. `ಧೂಲ್ ಕಾ ಫೂಲ್’, `ಮೇರೆ ಮೆಹಬೂಬ್’, `ಸಂಗಂ’, `ಆರ್ಜೂ’, `ಸೂರಜ್’, `ಆಯೆ ಮಿಲನ್ ಕಿ ಬೇಲಾ’, `ದಿಲ್ ಏಕ್ ಮಂದಿರ್ ಪಲ್ಕಿ’, `ಕಾನೂನ್’, `ಧರ್ತಿ’, `ಗೋರಾ ಔರ್ ಕಾಲಾ’, `ಗಾನ್ವಾರ್’ ಅವರ ಕೆಲವು ಯಶಸ್ವೀ ಚಿತ್ರಗಳು. ಚಿತ್ರಕ್ಕೆ ತೊಡಗಿಸಿದ್ದ ಹಣವನ್ನು ಕೆಲವೇ ವಾರಗಳಲ್ಲಿ ಮರಳಿಸಿಕೊಡುವ ಸ್ಟಾರ್ ಎಂದೇ ಆಗ ರಾಜೇಂದ್ರ ಕುಮಾರ್ ಹೆಸರಾಗಿದ್ದರು. 70ರ ದಶಕದ ಮಧ್ಯದಲ್ಲಿ ರಾಜೇಂದ್ರಕುಮಾರ್ ತಾರಾ ಪಟ್ಟ ಕುಸಿಯಿತು. ಅವರು ಅಭಿನಯಿಸಿದ ಹಲವು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ವಿಫಲವಾದವು. ಹಲವು ಸೋಲುಗಳ ನಂತರ 1978ರಲ್ಲಿ ತೆರೆಕಂಡ `ಸಾಜನ್ ಬಿನಾ ಸುಹಾಗನ್’ ಚಿತ್ರದೊಂದಿಗೆ ರಾಜೇಂದ್ರ ಕುಮಾರ್ ಮತ್ತೆ ಗೆಲುವಿನ ಸವಿಯುಂಡರು. ನೂತನ್ ಚಿತ್ರದ ನಾಯಕಿ. ಈ ಚಿತ್ರದ ನಂತರ ಅವರು ಪೋಷಕ ಪಾತ್ರಗಳತ್ತ ಹೊರಳಿದರು.

1981ರಲ್ಲಿ ರಾಜೇಂದ್ರ ಕುಮಾರ್ ತಮ್ಮ ಪುತ್ರ ಕುಮಾರ್ ಗೌರವ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ರಾಜೇಂದ್ರ ಕುಮಾರ್ ನಿರ್ಮಿಸಿ, ನಿರ್ದೇಶಿಸಿ, ನಟಿಸಿದ್ದ ಈ ಸಿನಿಮಾ `ಲವ್ ಸ್ಟೋರಿ’ ಬ್ಲಾಕ್‌ಬಸ್ಟರ್ ಎನಿಸಿಕೊಂಡಿತು. ಸೋಜಿಗವೆಂದರೆ ಕುಮಾರ್ ಗೌರವ್‌ರ ನಂತರದ ಚಿತ್ರಗಳೆಲ್ಲಾ ವಿಫಲವಾದವು. ಮಿಂಚಿನಂತೆ ಬಂದ ಗೌರವ್ ಬಹುಬೇಗ ಮಾಯವಾದರು. ರಾಜೇಂದ್ರಕುಮಾರ್ ತೆರೆಮೇಲೆ ಕಾಣಿಸಿಕೊಂಡ ಕೊನೆಯ ಸಿನಿಮಾ `ಅರ್ಥ್’ (1998). ತಾವು ಸಿನಿಮಾ ರಂಗದಲ್ಲಿ ದುಡಿದ ಹಣವನ್ನು ಅವರು ಡಬ್ಬಿಂಗ್ ಸ್ಟುಡಿಯೋದಲ್ಲಿ ತೊಡಗಿಸಿದ್ದರು. ಶುಕ್ಲಾ, ರಾಜೇಂದ್ರಕುಮಾರ್ ಅವರ ಪತ್ನಿ. ಈ ದಂಪತಿಗೆ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರ. ನಟನಾಗಿ ಗುರುತಿಸಿಕೊಂಡಿದ್ದ ಕುಮಾರ್ ಗೌರವ್, ನಮ್ರತಾ ದತ್‌ಅವರನ್ನು ವರಿಸಿದರು. ಆಕೆ ಹಿಂದಿ ಚಿತ್ರರಂಗದ ಮೇರು ತಾರಾ ದಂಪತಿ ಸುನೀಲ್ ದತ್ ಮತ್ತು ನರ್ಗಿಸ್ ಪುತ್ರಿ. 1969ರಲ್ಲಿ ರಾಜೇಂದ್ರ ಕುಮಾರ್ `ಪದ್ಮಶ್ರೀ’ ಗೌರವದಿಂದ ಪುರಸ್ಕೃತರಾದರು. ರಾಷ್ಟ್ರೀಯ ಪುರಸ್ಕಾರ ಸೇರಿದಂತೆ ಹತ್ತಾರು ಪ್ರಮುಖ ಗೌರವಗಳು ಅವರಿಗೆ ಸಂದಿವೆ. 1999 ಜುಲೈ 12ರಂದು ಕ್ಯಾನ್ಸರ್‌ನಿಂದಾಗಿ ರಾಜೇಂದ್ರ ಕುಮಾರ್ ನಿಧನರಾದರು.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

‘ಅಂಕಲ್‌’ ಲೋಕನಾಥ್

ಸಿದ್ದಲಿಂಗಯ್ಯ ನಿರ್ದೇಶನದ ‘ಬೂತಯ್ಯನ ಮಗ ಅಯ್ಯು’ ಚಿತ್ರದ ಉಪ್ಪಿನಕಾಯಿ ಪ್ರಿಯ ಮಾಚ, ಪುಟ್ಟಣ್ಣರ ‘ನಾಗರಹಾವು’ ಚಿತ್ರದ ಖಡಕ್ ಪ್ರಿನ್ಸಿಪಾಲ್‌ ಶ್ಯಾಮರಾಯರ

ಸಾಮಾಜಿಕ ಕಳಕಳಿಯ ನಟ ವಿವೇಕ್

ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ವಿವೇಕ್‌. 220ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಅವರು ಸಾಮಾಜಿಕ ಕಳಕಳಿ ಹೊಂದಿದ್ದ ಕಲಾವಿದ. 40,50ರ

ಹಾಸ್ಯನಟ ರತ್ನಾಕರ್ ಚಿತ್ರನಿರ್ದೇಶಕರೂ ಹೌದು

ಕನ್ನಡ ಚಿತ್ರರಂಗ ಕಂಡ ಪ್ರಮುಖ ಹಾಸ್ಯಕಲಾವಿದರಲ್ಲೊಬ್ಬರು ರತ್ನಾಕರ್. ಅವರು ಜನಿಸಿದ್ದು ಕೊಲ್ಲೂರಿನಲ್ಲಿ. ಓದಿದ್ದು ನಾಲ್ಕನೇ ತರಗತಿಯಷ್ಟೆ. ಕಾರಣಾಂತರಗಳಿಂದ ಚಿಕ್ಕಂದಿನಲ್ಲೇ ಅವರು