ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸಾಮಾಜಿಕ ಕಳಕಳಿಯ ನಟ ವಿವೇಕ್

ಪೋಸ್ಟ್ ಶೇರ್ ಮಾಡಿ

ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ವಿವೇಕ್‌. 220ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಅವರು ಸಾಮಾಜಿಕ ಕಳಕಳಿ ಹೊಂದಿದ್ದ ಕಲಾವಿದ. 40,50ರ ದಶಕಗಳ ಜನಪ್ರಿಯ ತಮಿಳು ಹಾಸ್ಯನಟ ಎನ್‌.ಎಸ್‌.ಕೃಷ್ಣನ್‌ ಸಿನಿಮಾ ಸಂಭಾಷಣೆಗಳಲ್ಲಿ ಸಾಮಾಜಿಕ ಸಂದೇಶ ಇರಬೇಕೆಂದು ಬಯಸುತ್ತಿದ್ದರಂತೆ. ಕೃಷ್ಣನ್‌ ‘ಕಲೈವಾಣರ್‌’ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದರು. ಅವರಂತೆ ವಿವೇಕ್ ಕೂಡ ತಮ್ಮ ಸಿನಿಮಾ ಸಂಭಾಷಣೆಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸುವಂತಹ ಮಾತುಗಳಿರಬೇಕೆಂದು ಅಪೇಕ್ಷಿಸುತ್ತಿದ್ದರು. ಹಾಗಾಗಿ ವಿವೇಕ್‌ ಅವರನ್ನು ಸಿನಿಪ್ರೇಮಿಗಳು ‘ಚಿನ್ನ ಕಲೈವಾಣರ್‌’ ಎಂದೇ ಕರೆದಿದ್ದರು. ಉತ್ತಮ ಟೈಮಿಂಗ್ ಮತ್ತು ಮಿಮಿಕ್ರಿ ಅವರ ಅಭಿನಯದ ವೈಶಿಷ್ಟ್ಯತೆ. ನಟನೆ ಜೊತೆ ಪರಿಸರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕೆಲಸ ಮಾಡಿದ್ದಾರೆ.

ನಟ ರಜನೀಕಾಂತ್ ಜೊತೆ

ಕೋವಿಲ್‌ಪಟ್ಟಿ ಅವರ ಹುಟ್ಟೂರು. ಪೂರ್ಣ ಹೆಸರು ವಿವೇಕಾನಂದನ್‌. ಕಾಲೇಜು ದಿನಗಳಿಂದಲೇ ಅವರು ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಆಗಿ ಹೆಸರು ಮಾಡಿದ್ದರು. ಖ್ಯಾತ ಚಿತ್ರನಿರ್ದೇಶಕ ಕೆ.ಬಾಲಚಂದರ್ ಅವರು ವಿವೇಕ್‌ ಅವರನ್ನು ಸಿನಿಮಾಗೆ ಪರಿಚಯಿಸಿದ್ದು. ಬಾಲಚಂದರ್‌ ನಿರ್ದೇಶನದ ‘ಮನದಿಲ್‌ ಉರುಧಿ ವೇಂಡಂ’ (1987) ವಿವೇಕ್‌ರ ಚೊಚ್ಚಲ ಸಿನಿಮಾ.

ತಮಿಳು ಚಿತ್ರರಂಗದಲ್ಲಿ ಎರಡು ದಶಕಗಳ ಕಾಲ ಬೇಡಿಕೆಯ ಹಾಸ್ಯನಟನಾಗಿದ್ದರು ವಿವೇಕ್‌. 2000 – 2001ರ ಅವಧಿಯಲ್ಲಿ ಅವರು 50 ಚಿತ್ರಗಳಲ್ಲಿ ನಟಿಸಿದ್ದರು. ಚಿತ್ರದ ಹೀರೋ ಸ್ನೇಹಿತನ ಪಾತ್ರಗಳಲ್ಲೇ ವಿವೇಕ್‌ ಹೆಚ್ಚಾಗಿ ಕಾಣಿಸಿಕೊಂಡಿದ್ದು. ಖುಷಿ, ಮಿನ್ನಲೆ, ಅಲೈಪಾಯಿದೆ, ಮುಗವೀರೆ, ರನ್‌, ಧೂಲ್‌, ದಮ್‌ ದಮ್‌ ದಮ್‌, ಅನ್ನಿಯನ್‌, ಶಿವಾಜಿ… ಮುಂತಾದ ಚಿತ್ರಗಳಲ್ಲಿ ಥಟ್ಟನೆ ನೆನಪಾಗುವ ವಿವೇಕ್‌ ಎರಡು ತಲೆಮಾರಿನ ನಟರೊಂದಿಗೆ ಅಭಿನಯಿಸಿದ್ದಾರೆ.

ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಪದ್ಮಶ್ರೀ ಪ್ರಶಸ್ತಿ ಪಡೆಯುತ್ತಿರುವ ವಿವೇಕ್‌

ನಟನೆ ಒಂದೆಡೆಯಾದರೆ ವಿವೇಕ್‌ ಸಾಮಾಜಿಕ ಕೆಲಸಗಳು ಅವರಿಗೆ ವಿಶೇ‍ಷ ಮನ್ನಣೆ ತಂದುಕೊಟ್ಟಿದ್ದವು. ವಿಶೇಷವಾಗಿ ಪರಿಸರಕ್ಕೆ ಸಂಬಂಧಿಸಿದಂತೆ ತಂಡವೊಂದನ್ನು ಕಟ್ಟಿಕೊಂಡು ಕೆಲಸ ಮಾಡುತ್ತಿದ್ದರು. ವಿಜ್ಞಾನಿ, ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಕಟ್ಟಾ ಅನುಯಾಯಿ ವಿವೇಕ್‌. ‘ಗ್ರೀನ್ ಕಲಾಂ’ ಶೀರ್ಷಿಕೆಯಡಿ ತಂಡವೊಂದನ್ನು ರೂಪಿಸಿ ಪರಿಸರ ರಕ್ಷಣೆ, ಜಾಗತಿಕ ತಾಪಮಾನದ ಬಗ್ಗೆ ಮನವರಿಕೆ ಮಾಡಿಕೊಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅವರ ತಂಡ ತಮಿಳುನಾಡಿನ ಹಲವೆಡೆ ಮೂರು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದೆ. ನಟನೆಗೆ ಫಿಲ್ಮ್‌ಫೇರ್‌ ಸೇರಿದಂತೆ ಹತ್ತಾರು ಪ್ರಶಸ್ತಿ ಪಡೆದಿರುವ ವಿವೇಕ್‌ ಪದ್ಮಶ್ರೀ (2009) ಪುರಸ್ಕೃತರು.

ನಟ ಅಜಿತ್ ಜೊತೆ

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಚಿತ್ರರಂಗಕ್ಕೆ ಆಸರೆಯಾದ ಅರಸು

ಮೈಸೂರು ಅರಸು ಕುಟುಂಬದವರು ಕೆಂಪರಾಜ ಅರಸ್. ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು ಅವರ ಸಹೋದರ. ಗುಬ್ಬಿ ವೀರಣ್ಣನವರು ನಿರ್ಮಿಸಿದ  `ಜೀವನ

ನಟ, ನಿರ್ಮಾಪಕ ಬಿ.ಎಂ.ವೆಂಕಟೇಶ್

ಬೆಂಗಳೂರು ಸಮೀಪದ ಇಮ್ಮಡಿಹಳ್ಳಿಯ ವೆಂಕಟೇಶ್‌ ಅವರಿಗೆ ಶಾಲೆಯಲ್ಲಿ ಓದುತ್ತಿದ್ದಾಗ ಗಾಯಕನಾಗುವ ಉಮೇದು ಇತ್ತು. ಹಿನ್ನೆಲೆ ಗಾಯಕನಾಗುವ ಆಸೆಯಿದ್ದ ಅವರು ಕ್ರಮೇಣ

ಯಶಸ್ವೀ ಚಿತ್ರನಿರ್ದೇಶಕ ವಿಜಯ್

ತಾರಾವ್ಯವಸ್ಥೆಯ ಪರಿಣಾಮಗಳಿಂದ ತೆರೆಯ ಮರೆಯಲ್ಲಿಯೇ ಉಳಿದ  ವಿಜಯ್ ಅವರು ತಾರೆಗಳ ಹಂಗಿಲ್ಲದೆ ನಿರ್ದೇಶಿಸಿದ ‘ರಂಗಮಹಲ್ ರಹಸ್ಯ’ ಅಪೂರ್ವ ಸಸ್ಪೆನ್ಸ್ ಚಿತ್ರ.