ಮೈಸೂರಿನ ಶ್ರೀನಿವಾಸ್ ಚಿತ್ರರಂಗದಲ್ಲಿ ‘ತೂಗುದೀಪ ಶ್ರೀನಿವಾಸ್’ ಎಂದೇ ಜನಪ್ರಿಯರಾದವರು. ಶ್ರೀನಿವಾಸ್ ಅವರ ತಂದೆ ಮುನಿಸ್ವಾಮಿನಾಯ್ಡು ರಂಗಭೂಮಿ ಕಲಾವಿದರು. ತಂದೆಯ ನಾಟಕಗಳನ್ನು ನೋಡಿಕೊಂಡು ಬೆಳೆದ ಶ್ರೀನಿವಾಸ್ ಅವರಲ್ಲಿಯೂ ನಟನೆಯ ಬೀಜ ಮೊಳಕೆಯೊಡಿದಿತ್ತು. ಪಿಯುಸಿ ಓದುವಾಗ ಕಾಲೇಜಿನ ‘ಕಾಶಿಯಾತ್ರೆ’ ನಾಟಕದಲ್ಲಿ ಅಭಿನಯಿಸಿದರು. ಈ ನಾಟಕದಲ್ಲಿನ ಅವರ ಪಾತ್ರಕ್ಕೆ ಬಹುಮಾನ ಬಂದಿತು. ಇದು ಅವರ ನಟನೆಯ ಆಸೆಗೆ ಇಂಬು ನೀಡಿತು.

ಮುಂದೆ ನಟ ಎಂ.ಪಿ.ಶಂಕರ್ ಅವರ ‘ಭರಣಿ ಕಲಾವಿದರು’ ರಂಗತಂಡದ ಸಕ್ರಿಯ ಸದಸ್ಯರಾದರು. ಅದೊಮ್ಮೆ ‘ಎಚ್ಚಮನಾಯಕ’ ನಾಟಕದಲ್ಲಿನ ಬಾದಷಾಹನ ಪಾತ್ರದಲ್ಲಿ ನಟಿಸುತ್ತಿದ್ದಾಗ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ ಅವರ ಕಣ್ಣಿಗೆ ಬಿದ್ದರು. ಕೆ.ಎಸ್.ಎಲ್.ಸ್ವಾಮಿ ತಮ್ಮ ‘ತೂಗುದೀಪ’ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ನೀಡಿದರು. ‘ತೂಗುದೀಪ’ ಸಿನಿಮಾ ಶ್ರೀನಿವಾಸ್ ಅವರಿಗೆ ಹೆಸರು ತಂದುಕೊಟ್ಟಿತು. ಈ ಸಿನಿಮಾ ತಂಡದಲ್ಲಿ ಮೂವರು ಶ್ರೀನಿವಾಸ್ ಇದ್ದರು. ಸಂಕಲನಕಾರ ಬಾಲ್.ಜಿ.ಯಾದವ್ ಅವರು ಶ್ರೀನಿವಾಸರಿಗೆ ತಮ್ಮ ಹೆಸರಿನ ಮುಂದೆ ‘ತೂಗುದೀಪ’ ಸೇರಿಸಿಕೊಳ್ಳುವಂತೆ ಸೂಚಿಸಿದರು. ಅಲ್ಲಿಂದ ಮುಂದೆ ‘ತೂಗುದೀಪ ಶ್ರೀನಿವಾಸ್’ ಎನ್ನುವ ಸುಂದರ ಹೆಸರು ಇವರದಾಯ್ತು.

‘ಸಿಪಾಯಿ ರಾಮು’ ಚಿತ್ರದ ಮಂಗಲ್‌ಸಿಂಗ್ ಪಾತ್ರ ಶ್ರೀನಿವಾಸ್ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಕನ್ನಡ ಚಿತ್ರರಂಗದ ಪ್ರಮುಖ ಖಳನಟ, ಪೋಷಕನಟನಾಗಿ ಗುರುತಿಸಿಕೊಂಡ ಅವರು 230ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸಿಪಾಯಿ ರಾಮು, ರಾಮಾಪುರದ ರಾವಣ, ಧ್ರುವತಾರೆ, ಅದೇ ಕಣ್ಣು, ಬೆಂಕಿಯಬಲೆ, ಶ್ರಾವಣ ಬಂತು, ಜೀವನಚೈತ್ರ ಅವರ ಕೆಲವು ಜನಪ್ರಿಯ ಸಿನಿಮಾಗಳು. ಸಿನಿಮಾ ನಟನೆಯ ಬಿಡುವಿನ ದಿನಗಳಲ್ಲಿ ಅವರು ಉತ್ತರ ಕರ್ನಾಟಕದ ಕಂಪನಿ ನಾಟಕಗಳಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿದ್ದರು. ‘ಇಂಡಿಯನ್’, ‘ಮಾಮರವೆಲ್ಲೋ ಕೋಗಿಲೆಯೆಲ್ಲೋ’ ಅವರ ಕೊನೆಯ ಸಿನಿಮಾಗಳು. 1995ರ ಅಕ್ಟೋಬರ್ 14ರಂದು ತೂಗುದೀಪ ಶ್ರೀನಿವಾಸ್ ಇಹಲೋಕ ತ್ಯಜಿಸಿದರು. ಅವರ ಹಿರಿಯ ಪುತ್ರ ದರ್ಶನ್ ಪ್ರಸ್ತುತ ಕನ್ನಡದ ಜನಪ್ರಿಯ ನಟ. ಕಿರಿಯ ಪುತ್ರ ದಿನಕರ್ ಪ್ರತಿಭಾವಂತ ನಿರ್ದೇಶಕ.
ತೂಗುದೀಪ ಶ್ರೀನಿವಾಸ್ | ಜನನ: 17/04/1940 | ನಿಧನ: 16/10/1995
(ಪೂರಕ ಮಾಹಿತಿ ಕೃಪೆ: ರುಕ್ಕೋಜಿ ಅವರ ‘ಡಾ.ರಾಜಕುಮಾರ್ ಸಮಗ್ರ ಚರಿತ್ರೆ’ ಕೃತಿ)
